“ನಿರಂಕುಶ ಪ್ರಭುತ್ವವು ಈ ಕೋವಿಡ್ ಕಾಯಿಲೆಯ ನೆಪ ಮಾಡಿಕೊಂಡು ಪ್ರಜಾಪ್ರಭುತ್ವವನ್ನೇ ಹತ್ತಿಕ್ಕುತ್ತಿದೆ” : ಬಿ.ಶ್ರೀಪಾದ ಭಟ್

“ಕರ್ನಾಟಕ 2020 : ಕೊರೋನಾ ಕಾಲದಲ್ಲಿ ಮತ್ತು ನಂತರ” ಥೀಮ್ ಸುತ್ತ ಜನಶಕ್ತಿ ಮೀಡಿಯಾ ಕೆಲವು ಪ್ರಶ್ನೆಗಳನ್ನು ಕೇಳಿತ್ತು. ಇದಕ್ಕೆ ಚಿಂತಕ ಲೇಖಕ ಬಿ.ಶ್ರೀಪಾದ ಭಟ್ ಹೀಗೆ ಉತ್ತರಿಸಿದ್ದಾರೆ.

ನಿರಂಕುಶ ಪ್ರಭುತ್ವವು ಈ ಕೋವಿಡ್ ಕಾಯಿಲೆಯ ನೆಪ ಮಾಡಿಕೊಂಡು ಪ್ರಜಾಪ್ರಭುತ್ವವನ್ನೇ ಹತ್ತಿಕ್ಕುತ್ತಿದೆ.. .. ಜನಪರ ಸಂಘಟನೆಗಳ ಮೇಲಿನ ಜವಾಬ್ದಾರಿ ಇನ್ನೂ ದುಪ್ಪಟ್ಟಾಗಲಿದೆ. ಈಗ ನಮ್ಮೆಲ್ಲರ ಮುಂದಿರುವ ಪ್ರಶ್ನೆ ಈ ಸರ್ವಾಧಿಕಾರದ ವಿರುದ್ದ ಜನಾಂದೋಲನ ರೂಪಿಸುವುದು ಹೇಗೆ? ಪ್ರಭುತ್ವದ ಸುಳ್ಳುಗಳನ್ನು ನಂಬುತ್ತಿರುವ, ಸ್ವತಃ ದಾಳಿಕೋರ ಮನಸ್ಥಿತಿಯನ್ನು ಮೈಗೂಡಿಸಿಕೊಂಡಿರುವ ಬಹುಸಂಖ್ಯಾತರ ಮನಪರಿವರ್ತನೆಗೆ ಯಾವ ಕಾರ್ಯಯೋಜನೆಗಳಿವೆ? ಬದಲಾದ ಕಾಲಘಟ್ಟದಲ್ಲಿ ಸಂಘಟನೆ ಮತ್ತು ಚಳುವಳಿಯ ಸ್ವರೂಪವೂ ಬದಲಾಗಬೇಕು. ಹಾಗಿದ್ದಲ್ಲಿ ಆ ಬದಲಾವಣೆ ಯಾವ ಬಗೆಯದಾಗಿರುತ್ತದೆ? 

– ಬಿ.ಶ್ರೀಪಾದ ಭಟ್

  1. ನಿಮ್ಮ ಪ್ರಕಾರ ಕೊರೊನಾ ಕಾಲದಲ್ಲಿ ಕರ್ನಾಟಕದಲ್ಲಿ ಆದ ಮುಖ್ಯ ಪಲ್ಲಟಗಳು ಅಥವಾ ಮುನ್ನೆಲೆಗೆ ಬಂದ ಮುಖ್ಯ ಪ್ರಶ್ನೆಗಳು ಯಾವುವು? ಇವುಗಳಿಗೆ ಕೊರೊನಾ ಮಾತ್ರ ಕಾರಣವೇ ಅಥವಾ ಕೊರೊನಾ-ಪೂರ್ವ ಪರಿಸ್ಥಿತಿಯ ಪ್ರಭಾವವೂ ಇದೆಯೇ?

ಕೊರೋನಾ ಕಾಲದಲ್ಲಿ ಕರ್ನಾಟಕದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಹೆಚ್ಚಿನ ಪರೀಕ್ಷೆಗೆ ಒಳಪಟ್ಟವು ಮತ್ತು ಈ ಎರಡೂ ಕ್ಷೇತ್ರಗಳು ತುಂಬಾ ದುರ್ಬಲ ಎನ್ನುವ ಸತ್ಯವೂ ಬಹಿರಂಗವಾಯಿತು. ಕೋವಿಡ್ ಕಾಯಿಲೆಗೂ ಮುಂಚೆಯೆ ಈ ವಲಯಗಳಲ್ಲಿ ಸರಕಾರದ ಪಾತ್ರ ಕುಂಠಿತವಾಗಿತ್ತು.  ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಖಾಸಗೀ ಸಂಸ್ಥೆಗಳ ಪ್ರಾಬಲ್ಯವು ಅಧಿಕವಾಗಿತ್ತು. ಶಾಸಕರೂ, ಮಂತ್ರಿಗಳ ಒಡೆತನದ, ಸಹಬಾಗಿತ್ವದ ಆಸ್ಪತ್ರೆಗಳು,ಕಾರ್ಪೋರೇಟ್ ಆಸ್ಪತ್ರೆಗಳು, ಶಾಲಾ, ಕಾಲೇಜುಗಳು ಪಾರ್ಥೇನಿಯಂನಂತೆ ಹಬ್ಬಿಕೊಂಡಿದ್ದವು.

ಆರೋಗ್ಯ ಇಲಾಖೆಯ ಭ್ರಷ್ಟಾಚಾರ, ನಿರ್ಲಕ್ಷ್ಯ ಮತ್ತು ಖಾಸಗೀ ವೈದ್ಯಕೀಯ ಸಂಸ್ಥೆಗಳ, ಕಾರ್ಪೋರೇಟ್ ಗಳ ಲಾಬಿ ಮತ್ತು ದಬ್ಬಾಳಿಕೆಯ ಕಾರಣದಿಂದ ಮೊದಲೇ ಏದುಸಿರು ಬಿಡುತ್ತಿದ್ದ ಸರಕಾರಿ ಆಸ್ಪತ್ರೆಗಳು ಕೋವಿಡ್ ಕಾಲದಲ್ಲಿ ಏಕಾಂಗಿಯಾಗಿ ಸೇವೆ ಮಾಡಬೇಕಾದ ಒತ್ತಡಕ್ಕೆ ಒಳಗಾದವು. ಅದರ ಪರಿಣಾಮಗಳನ್ನು ನಾವೆಲ್ಲವೂ ಕಂಡಿದ್ದೇವೆ ಮತ್ತು ಕಳೆದ ಆರು ತಿಂಗಳಿಂದ ಅನುಭವಿಸಿದ್ದೇವೆ. ಖಾಸಗೀ ಆಸ್ಪತ್ರೆಗಳು ಕೋವಿಡ್ ಪೀಡಿತರಿಗೆ ಚಿಕಿತ್ಸೆ ಕೊಡಲು ನಿರಾಕರಿಸಿದ್ದು, ಸರಕಾರ ತನ್ನ ಪ್ರಜಾತಾಂತ್ರಿಕ ಅದಿಕಾರ ಬಳಸಿ ಇವರ ಮೇಲೆ ಕ್ರಮ ತೆಗೆದುಕೊಳ್ಳಲು ವಿಫಲರಾಗಿದ್ದು ಇವೆಲ್ಲವೂ ಇಲ್ಲಿನ ಆಡಳಿತ ವ್ಯವಸ್ಥೆ ಮತ್ತು ಆರೋಗ್ಯ ವ್ಯವಸ್ಥೆಯ ಮೇಲಿನ ವಿಶ್ವಾಸಾರ್ಹತೆಯನ್ನು ನಾಶ ಮಾಡಿತು. ಆದರೆ ಇದು ದಿಡೀರನೆ ಆದ ಬೆಳವಣಿಗೆಯಲ್ಲ. ಕೋವಿಡ್ ಪೂರ್ವದಲ್ಲಿಯೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಮತ್ತು ಬಿಕ್ಕಟ್ಟಿನ ಸಂದರ್ಭದಲ್ಲಿ ಬಯಲಿನಲ್ಲಿ ಎಲ್ಲರೂ ಬೆತ್ತಲಾದರು.

ಶಿಕ್ಷಣ ಕ್ಷೇತ್ರಗಳಲ್ಲಿ ಖಾಸಗಿ ಸಂಸ್ಥೆಗಳ ಲಾಬಿ ಪ್ರಬಲವಾಗಿದೆ. ಇದು ಕೋವಿಡ್ ಪೂರ್ವದಲ್ಲಿಯೂ ಇತ್ತು, ಕೋವಿಡ್ ಸಂದರ್ಭದಲ್ಲಿಯೂ ಮುಂದುವರೆದಿದೆ. ಆನ್ ಲೈನ್ ಶಿಕ್ಷಣ ಕುರಿತಂತೆ, ಶುಲ್ಕ ವಸೂಲಿ ಕುರಿತಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮದೇ ನೀತಿಯನ್ನು ಅನುಸರಿಸಿದವು ಮತ್ತು ಸರಕಾರದ ಆದೇಶಕ್ಕೆ ಮಾನ್ಯ ಮಾಡಲಿಲ್ಲ.ಇನ್ನು ಆರ್ಥಿಕ ಪರಿಸ್ಥಿತಿಯೂ ಸಹ ಕೋವಿಡ್ ಪೂರ್ವದಲ್ಲಿ ಉತ್ತಮವಾಗಿರಲಿಲ್ಲ. ಯಾವುದೇ ಕಾರ್ಯಯೋಜನೆಗಳನ್ನು, ನೀಲಿನಕ್ಷೆಯನ್ನು ತಯಾರಿಸದ ಸರಕಾರದ ಈ ಬೇಜವಬ್ದಾರಿತನದಿಂದ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿತ್ತು. ಕೋವಿಡ್ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ವಲಸೆ ಕಾರ್ಮಿಕರ ವಿಷಯದಲ್ಲಿ ಸರಕಾರ ಅಮಾನವಿಯವಾಗಿ ನಡೆದುಕೊಂಡಿತು. ಲಕ್ಷಾಂತರ ಕುಟುಂಬಗಳು ಬೀದಿಗೆ ಬರುವಂತಾಯಿತು. ಪಡಿತರ ವಿತರಣೆ ಎಪ್ರಿಲ್ ತಿಂಗಳಲ್ಲಿ ಅವ್ಯವಸ್ಥೆಯ ಗೂಡಾಗಿತ್ತು. ಮೇ ತಿಂಗಳಲ್ಲಿ ಸ್ವಲ್ಪ ಸುದಾರಿಸಿತು. ಆದರೆ ಬಿಲ್ಡರ ಗಳ ಲಾಬಿಗೆ ಮಣಿದ ಸರಕಾರ ವಲಸೆ ಕಾರ್ಮಿಕರ ವಿರುದ್ದ ತುಂಬಾ ಅಮಾನವೀಯವಾಗಿ ನಡೆದುಕೊಂಡಿತು.

ಇಲ್ಲಿನ ಕೈಗಾರಿಕಾ ವಲಯ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಕೋವಿಡ್ ಕಾಯಿಲೆ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತು. ಮುಂದಿನ ದಿನಗಳಲ್ಲಿ ಸರಕಾರಕ್ಕೆ ತನ್ನ ಉದ್ಯೋಗಿಗಳಿಗೆ ಸಂಬಳ ಕೊಡಲೂ ಹಣವಿಲ್ಲ. ಜಿಎಸ್ ಟಿ ವಿಷಯದಲ್ಲಿ ಕೇಂದ್ರ ಸರಕಾರ ಮಾಡಿದ ಮೋಸದಿಂದಲು ರಾಜ್ಯವು ಸಂಕಷ್ಟಕ್ಕೆ ಗುರಿಯಾಗಲಿದೆ. ಆದರೆ ಸರಕಾರದ ಬಳಿ ಯಾವುದೇ ಕಾರ್ಯಯೋಜನೆಗಳಿಲ್ಲ.

ಮತ್ತೊಂದು ಆತಂಕಕಾರಿ ಬೆಳವಣಿಗೆಯೆಂದರೆ ಬಹುಸಂಖ್ಯಾತರ ಮತಾಂಧತೆಯಿಂದ ಮುಸ್ಲಿಂ ಸಮುದಾಯ ತೀವ್ರ ಅವಮಾನ ಮತ್ತು ದೌರ್ಜನ್ಯಕ್ಕೆ ಒಳಗಾದರು. ಕೋವಿಡ್ ಪೂರ್ವದಲ್ಲಿಯೇ ಮಡುಗಟ್ಟಿದ್ದ ಮುಸ್ಲಿಂ ವಿರೋಧಿ ಮನಸ್ಥಿತಿ ಕೋವಿಡ್ ಕಾಲದಲ್ಲಿ ಮತ್ತಷ್ಟು ಉಲ್ಬಣಗೊಂಡಿತು ಮತ್ತು ಇಡೀ ಸಮುದಾಯವೇ ಇಂದು ಅತಂತ್ರವಾಗಿದೆ.

ಇನ್ನು ಕೋವಿಡ್ ಕಾಲದಲ್ಲಿ ಬಹುಪಾಲು  ಮಾಧ್ಯಮಗಳು ಅತ್ಯಂತ ಬೇಜವಬ್ದಾರಿ, ಸಂವಿಧಾನಬಾಹಿರವಾಗಿ, ಅಮಾನವೀಯವಾಗಿ ವರ್ತಿಸಿದವು. ಕಾಯಿಲೆ ಕುರಿತು ಭೀತಿ ಸೃಷ್ಟಿಸಿದವು, ಮುಸ್ಲಿಂರ ವಿರುದ್ದ ದ್ವೇಷ ಭಾವನೆಯನ್ನು ಬಿತ್ತಿದವು. ಪ್ರಭುತ್ವಕ್ಕೆ ಅಡಿಯಾಳಾಗಿ ನಡೆದುಕೊಂಡವು. ಮತ್ತು ಈ ಧೋರಣೆ ಕೋವಿಡ್ ಪೂರ್ವದಲ್ಲಿಯೂ ಇತ್ತು, ಕೋವಿಡ್ ಕಾಲದಲ್ಲಿಯೂ ಇದೆ, ಮುಂದೆಯೂ ಇರುತ್ತದೆ

  1. ಈ ಪಲ್ಲಟಗಳು ಅಥವಾ ಪ್ರಶ್ನೆಗಳು ಕರ್ನಾಟಕದ ಸರ್ವಾಂಗೀಣ ಬೆಳವಣಿಗೆಗೆ ತೊಡಕುಗಳೇ ಅಥವಾ ಹೊಸ ಅವಕಾಶಗಳೇ? ಹೇಗೆ ಎಂದು ವಿವರಿಸಿ.

ಈ ಪಲ್ಲಟಗಳು,  ಕರ್ನಾಟಕದ ಸರ್ವಾಂಗೀಣ ಬೆಳವಣಿಗೆಗೆ ತುಂಬಾ ತೊಡಕುಂಟು ಮಾಡುತ್ತವೆ ಎನ್ನುವುದರಲ್ಲಿ ಅನುಮಾನವಿಲ್ಲ. ಇದರ ಪರಿಣಾಮವನ್ನು ಇಲ್ಲಿನ ಕೃಷಿಕರು, ಕೂಲಿ ಕಾರ್ಮಿಕರು, ಅಂಚಿನಲ್ಲಿರುವ ಸಮುದಾಯಗಳು ಅನುಭವಿಸುತ್ತಿದ್ದಾರೆ. ಹೊಸ ಅವಕಾಶಗಳೆಂದು ನಾನು ಬಾವಿಸುವುದಿಲ್ಲ. ಏಕೆಂದರೆ ಕೋವಿಡ್ ಪೂರ್ವದಲ್ಲಿಯೇ ಪರಿಸ್ಥಿತಿ ಬಿಗಡಾಯಿಸಿತ್ತು.

  1. ಕೊರೊನಾ ಕಾಲದ ಪಲ್ಲಟಗಳು ಅಥವಾ ಪ್ರಶ್ನೆಗಳು ವೈಯಕ್ತಿಕವಾಗಿ ನಿಮ್ಮ ಮೇಲೆ ಮತ್ತು ನಿಮ್ಮ ಕಾರ್ಯಕ್ಷೇತ್ರದ ಮೇಲೆ ಹೇಗೆ ಪ್ರಭಾವ ಬೀರಿವೆ?

ವೈಯುಕ್ತಿಕವಾಗಿ ಅಂಥದ್ದೇನು ಇಲ್ಲ. ಆದರೆ ಎಲ್ಲಾ ಸಾಮಾಜಿಕ ಸಂಘಟನೆಗಳ ಮೇಲೆ ಸಾಂಕ್ರಾಮಿಕ ಕಾಯಿಲೆಯಿಂದುಂಟಾದ ಸ್ಥಗಿತತೆ, ನಿರ್ಬಂದಗಳು ತನ್ನ ಪರಿಣಾಮ ಬೀರಿದೆ. ಇದು ರಚನಾತ್ಮಕ ಕಾರ್ಯಗಳಿಗೆ ತೊಡಕುಂಟಾಗಿದೆ. ಪ್ರತಿಭಟನೆಗಳು ಸ್ಥಗಿತಗೊಂಡಿವೆ. ಜನಾಂದೋಲನ ಸ್ಥಗಿತಗೊಂಡಿದೆ

  1. ಈ ಪ್ರಭಾವ ಕೊರೊನಾ ಕಾಲಕ್ಕೆ ಸೀಮಿತವಾದದ್ದೇ? ಅಥವಾ ಕೊರೊನೋತ್ತರ ಕಾಲದಲ್ಲೂ ಶಾಶ್ವತ ಪರಿಣಾಮ ಬೀರುವಂಥದ್ದೆ? ಅದನ್ನು ವೈಯಕ್ತಿಕವಾಗಿ ಮತ್ತು ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೇಗೆ ನಿಭಾಯಿಸಬಹುದು ?

ಈ ಪ್ರಭಾವ ಕೊರೋನ ಕಾಲಕ್ಕೆ ಮಾತ್ರವಲ್ಲ, ಕೊರೋನೋತ್ತರ ಕಾಲದಲ್ಲಿಯೂ ಅದರ ದುಷ್ಪರಿಣಾಮ ಬೀರುತ್ತದೆ. ಏಕೆಂದರೆ ನಿರಂಕುಶ ಪ್ರಭುತ್ವವು ಈ ಕೋವಿಡ್ ಕಾಯಿಲೆಯ ನೆಪ ಮಾಡಿಕೊಂಡು ಪ್ರಜಾಪ್ರಭುತ್ವವನ್ನೇ ಹತ್ತಿಕ್ಕುತ್ತಿದೆ, ಸಂವಿದಾನದ ಆಶಯಗಳನ್ನೇ ನಾಶ ಮಾಡುತ್ತಿದೆ. ಸರಕಾರದ ನೀತಿಗಳನ್ನು ವಿಮರ್ಶೆ ಮಾಡಿದವರು, ಟೀಕಿಸಿದವರನ್ನು ರಾಷ್ಟ್ರೀಯ ಭದ್ರತೆ ಕಾಯಿದೆ ಅಡಿಯಲ್ಲಿ ಅಕ್ರಮವಾಗಿ ಬಂಧಿಸುತ್ತಿದೆ. ಒಂದು ಬಗೆಯ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ. ಸರ್ವಾಧಿಕಾರ ವ್ಯವಸ್ಥೆ ಕೋವಿಡ್ ಪೂರ್ವದಲ್ಲಿಯೇ ಜಾರಿಯಲ್ಲಿತ್ತು. ಭವಿಷ್ಯದಲ್ಲಿಯೂ ಮುಂದುವರೆಯಲಿದೆ. ಏಕೆಂದರೆ ಪ್ರಭುತ್ವವು ಅದರಲ್ಲಿಯೂ ನಿರಂಕುಶ ಆಡಳಿತವು ತನ್ನ status quoಗೆ ಧಕ್ಕೆ ಉಂಟಾದರೆ, ಪಲ್ಲಟಗೊಂಡರೆ ಸಹಿಸುವುದಿಲ್ಲ. ಮತ್ತಷ್ಟು ಕ್ರೌರ್ಯದಿಂದ ವರ್ತಿಸುತ್ತದೆ.  ನಮ್ಮೆಲ್ಲರ ಮೇಲೆ ಬೃಹತ್ತಾದ ಜವಾಬ್ದಾರಿ ಇದೆ

  1. ಕೊರೊನೋತ್ತರ ಕರ್ನಾಟಕ ಹೇಗಿರುತ್ತದೆ? ಹೇಗಿರಬೇಕು?

ಇದಕ್ಕೆ ಇಂತಹದೇ ಅಂತ ಉತ್ತರವಿಲ್ಲ. ಸಮಾನತೆ, ಬಹುತ್ವ ಮತ್ತು ಸೌಹಾರ್ದತೆ ವಾತಾವರಣವನ್ನು ನಿರ್ಮಿಸಬೇಕು. ಇದು ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳ ಹೊಣೆಗಾರಿಕೆ. ಆದರೆ ಇಡೀ ರಾಜಕಾರಣವೇ ಅನೈತಿಕವಾಗಿದೆ, ರೋಗಗ್ರಸ್ಥವಾಗಿದೆ. ಹೀಗಾಗಿ ಜನಪರ ಸಂಘಟನೆಗಳ ಮೇಲಿನ ಜವಾಬ್ದಾರಿ ಇನ್ನೂ ದುಪ್ಪಟ್ಟಾಗಲಿದೆ. ಈಗ ನಮ್ಮೆಲ್ಲರ ಮುಂದಿರುವ ಪ್ರಶ್ನೆ ಈ ಸರ್ವಾಧಿಕಾರದ ವಿರುದ್ದ ಜನಾಂದೋಲನ ರೂಪಿಸುವುದು ಹೇಗೆ? ಪ್ರಭುತ್ವದ ಸುಳ್ಳುಗಳನ್ನು ನಂಬುತ್ತಿರುವ, ಸ್ವತಃ ದಾಳಿಕೋರ ಮನಸ್ಥಿತಿಯನ್ನು ಮೈಗೂಡಿಸಿಕೊಂಡಿರುವ ಬಹುಸಂಖ್ಯಾತರ ಮನಪರಿವರ್ತನೆಗೆ ಯಾವ ಕಾರ್ಯಯೋಜನೆಗಳಿವೆ? ಬದಲಾದ ಕಾಲಘಟ್ಟದಲ್ಲಿ ಸಂಘಟನೆ ಮತ್ತು ಚಳುವಳಿಯ ಸ್ವರೂಪವೂ ಬದಲಾಗಬೇಕು. ಹಾಗಿದ್ದಲ್ಲಿ ಆ ಬದಲಾವಣೆ ಯಾವ ಬಗೆಯದಾಗಿರುತ್ತದೆ?  ಸರಕಾರ ಜನವಿರೋದಿ ಶಾಸನಗಳನ್ನು ಏಕಪಕ್ಷೀಯವಾಗಿ ಜಾರಿಗೊಳಿಸುತ್ತಿದೆ. ಆದರೆ ಇದರ ದುಷ್ಪರಿಣಾಮಗಳಿಗೆ ಬಲಿಯಾಗುವವರು ಮೌನವಾಗಿದ್ದಾರೆ. ಅವರಿಗೆ ಸಂಘಟನೆಗಳ ಬೆಂಬಲದ ಅವಶ್ಯಕತೆ ಇದೆ. ಆದರೆ ಸಂಘಟನೆಗಳೇ ನಿಷ್ಕ್ರಿಯೆಗೊಂಡಿವೆ.  ಈ ಎಲ್ಲಾ ಪ್ರಶ್ನೆಗಳಿವೆ. ಉತ್ತರ ಕಂಡುಕೊಳ್ಳಬೇಕಾಗಿದೆ.

 

Donate Janashakthi Media

Leave a Reply

Your email address will not be published. Required fields are marked *