- ಕಾಮತೃಷೆಗೆ ಒಪ್ಪದ ಹಿನ್ನೆಲೆಯಲ್ಲಿ ಕೊಲೆ
ಹಾಸನ: ನಗರದ ಹೃದಯ ಭಾಗದಲ್ಲಿರುವ ಎನ್.ಆರ್.ವೃತ್ತದಲ್ಲಿ ಅಪರಿಚಿತ ಮಹಿಳೆ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ನಿರ್ಗತಿಕ ಮಹಿಳೆಯನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳುವ ಉದ್ದೇಶದಿಂದಲೇ ಹಾಲೋಬ್ರಿಕ್ಸ್ ಸಿಮೆಂಟ್ ಇಟ್ಟಿಗೆಯನ್ನು ತಲೆ ಮೇಲೆ ಎತ್ತಿಹಾಕಿ ಕೊಲೆ ಮಾಡಿರುವ ಪಾಪಿ ನಂತರ ತನ್ನ ಚಪಲ ಈಡೇರಿಕೆಗೆ ಬಳಸಿಕೊಂಡಿರುವುದು ಬಯಲಾಗಿದೆ.
ತನ್ನ ಕಾಮದಾಹ ತೀರಿಸಲು ಒಪ್ಪದ ಮಹಿಳೆಯನ್ನು ಮೊದಲು ಕೊಲೆ ಮಾಡುವ ಕೀಚಕ ನಂತರ ತನ್ನ ದುರುದ್ದೇಶ ಈಡೇರಿಸಿಕೊಂಡಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ತಡರಾತ್ರಿ ನಂತರ ಎಂದಿನಂತೆ ಅಂಗಡಿ ಮುಂದೆ ಕುಳಿತಿದ್ದ ಮಹಿಳೆ ಬಳಿಗೆ ಹೋಗುವ ಪಾಪಿ, ತಾನು ಕರೆದಲ್ಲಿಗೆ ಬರುವಂತೆ ಸತಾಯಿಸುತ್ತಾನೆ. ಆದರೆ ಆಕೆ ಇದಕ್ಕೆ ಒಪ್ಪುವುದಿಲ್ಲ. ನೀನು ಬಂದರೆ ಹಣ ಕೊಡುವೆ ಎಂದೂ ಪುಸಲಾಯಿಸುತ್ತಾನೆ. ಇಷ್ಟಾದರೂ ಆಕೆ ಒಪ್ಪದೇ ಇದ್ದಾಗ ಅಲ್ಲಿಂದ ಹೋಗುತ್ತಾನೆ.
ಆದರೆ ಭಿಕ್ಷೆ ಬೇಡಿ ಬದುಕುತ್ತಿದ್ದ ನಿರ್ಗತಿಕ ಮಹಿಳೆ ಮಲಗುವವರೆಗೂ ಕಾದು ಕುಳಿತ ಪಾಪಿ, ಆಕೆ ನಿದ್ರೆಗೆ ಜಾರಿದ್ದನ್ನು ಖಾತ್ರಿ ಪಡಿಸಿಕೊಂಡು ದೊಡ್ಡ ಗಾತ್ರದ ಸಿಮೆಂಟ್ ಇಟ್ಟಿಗೆಯನ್ನು ತಂದು ಆಕೆಯ ತಲೆ ಮೇಲೆ ಎತ್ತಿಹಾಕಿ ಪರಾರಿಯಾಗುತ್ತಾನೆ.
ಅದಾದ ಬಳಿಕ ಆಕೆ ಸತ್ತಳು ಎಂಬುದನ್ನು ಖಾತ್ರಿ ಪಡಿಸಿಕೊಂಡು ಘಟನಾ ಸ್ಥಳಕ್ಕೆ ಎಂಟ್ರಿಕೊಡುವ ಉಮೇಶ್ ರೆಡ್ಡಿ ಮಾದರಿಯ ದುರುಳ, ಸತ್ತು ಬಿದ್ದಿರುವ ಶವದ ಮೇಲೆ ತನ್ನ ನೀಚ ಕೃತ್ಯ ಎಸಗುತ್ತಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವದ ಮೇಲೆ ಮೃಗೀಯ ವರ್ತನೆ ಮೆರೆದಿದ್ದಾನೆ. ತನ್ನ ದುರಾಸೆ ಈಡೇರಿದ ನಂತರ ಅರೆಬೆತ್ತಲೆಯಾಗಿ ಬಿದ್ದಿದ್ದ ಮೃತದೇಹದ ಮೇಲೆ ಬಟ್ಟೆ ಹಾಕಿ, ತನ್ನ ಚಪ್ಪಲಿ ಧರಿಸಿದ ನಂತರ ಅಲ್ಲಿಂದ ಪರಾರಿಯಾಗುತ್ತಾನೆ. ಕಾಮುಕನ ರಾಕ್ಷಸೀ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಇಡಿಯಾಗಿ ಸೆರೆಯಾಗಿದೆ. ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ನಿಜ ಸಂಗತಿಗೂ ಮುನ್ನ:
ಸೋಮವಾರ ತಡರಾತ್ರಿ ಅಪರಿಚಿತ ಮಹಿಳೆ ಹತ್ಯೆ ಮಾಡಲಾಗಿದೆ ಎಂಬ ಸುದ್ದಿಯಷ್ಟೇ ಹೊರ ಬಿದ್ದಿತ್ತು. 40 ರಿಂದ 45 ವರ್ಷದ ಮಹಿಳೆಯೊಬ್ಬಳನ್ನು ತಲೆಯ ಮೇಲೆ ಹಾಲೋಬ್ರಿಕ್ಸ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಲಾಗಿದೆ. ಆದರೆ ಮಹಿಳೆ ಯಾರೆಂಬುದು ತಿಳಿದು ಬಂದಿಲ್ಲ. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದೂ ನಿಗೂಢವಾಗಿತ್ತು. ಸುದ್ದಿ ತಿಳಿದ ಕೂಡಲೇ ಬೆಳಗ್ಗೆ ನಗರ ವೃತ್ತದ ಸಿಪಿಐ ಕೃಷ್ಣರಾಜು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಪ್ರತಿನಿತ್ಯ ಭಿಕ್ಷೆ ಬೇಡಿ ಜೀವನ ಮಾಡುತ್ತಿದ್ದ ಮತ್ತು ವಾಸಿಸಲು ಮನೆಯೂ ಇಲ್ಲದೆ ಬೀದಿ ಬದಿಯಲ್ಲೇ ಮಲಗುತ್ತಿದ್ದ ಮಹಿಳೆಯನ್ನು ಪಾಪಿಗಳು ಕೊಂದು ಹಾಕಿದ್ದಾರೆ ಎಂದು ಅನೇಕರು ಮಮ್ಮಲ ಮರುಗಿದ್ದರು.
ಆದರೆ ಅಲ್ಲೇ ಇದ್ದ ಸಿಸಿ ಟಿವಿಯಲ್ಲಿ ಕಾಮಾಂಧನ ಎಲ್ಲಾ ಚಟುವಟಿಕೆ ಸೆರೆಯಾಗಿದ್ದು, ಯಾವ ಕಾರಣಕ್ಕೆ ಅಮಾಯಕ ಮಹಿಳೆ ಕೊಲೆ ನಡೆದಿದೆ ಎಂಬುದು ಖಾತ್ರಿಯಾಗಿದ್ದು, ಕೂಡಲೇ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.