ಕ್ಷಮೆ ಕೇಳುವುದಿಲ್ಲ, ಯಾವ ಮನವಿಯನ್ನೂ ಮಾಡುವುದಿಲ್ಲ: ಪ್ರಶಾಂತ್ ಭೂಷಣ್

  • ನ್ಯಾಯಾಲಯವು ನೀಡುವ ಯಾವುದೇ ಶಿಕ್ಷೆಯನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ

ನವ ದೆಹಲಿ:  ವಕೀಲ ಪ್ರಶಾಂತ್ ಭೂಷಣ್ ವಿರುದ್ಧದ ನ್ಯಾಯಾಂಗ ನಿಂಧನೆ ಪ್ರಕರಣದಲ್ಲಿ ಅವರನ್ನು ಆರೋಪಿ ಎಂದು ಘೋಷಿಸಿರುವ ಸುಪ್ರೀಂ ಕೋರ್ಟ್, “ಒಬ್ಬ ವ್ಯಕ್ತಿ ನೂರು ಒಳ್ಳೆಯ ಕೆಲಸ ಮಾಡಿದ ಮಾತ್ರಕ್ಕೆ ಆತನಿಗೆ ಹತ್ತು ಅಪರಾಧಗಳನ್ನು ಮಾಡಲು ಪರವಾನಗಿ ನೀಡಲಾಗದು. ಹೀಗಾಗಿ ಪ್ರಶಾಂತ್ ಭೂಷಣ್ ಕ್ಷಮೆ ಕೇಳಬೇಕುಎಂದು ಒತ್ತಾಯಿಸಿದೆ. ಆದರೆ, ಪ್ರಶಾಂತ್ ಭೂಷಣ್ತಾನು ಕ್ಷಮೆ ಕೇಳುವುದಿಲ್ಲ. ಅಲ್ಲದೆ, ಯಾವುದೇ ಶಿಕ್ಷೆಗೊಳಗಾಗಲು ಸಿದ್ದನಿದ್ದೇನೆಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್. ಗವಾಯಿ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡಿದ್ದ ತ್ರಿಸದಸ್ಯ ನ್ಯಾಯಪೀಠವು ಭೂಷಣ್ ಮತ್ತು ಅವರ ವಕೀಲ ರಾಜೀವ್ ಧವನ್ ಅವರನ್ನು ಶಿಕ್ಷೆಯ ಹಂತದಲ್ಲಿ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ವಕೀಲ ಪ್ರಶಾಂತ್ ಭೂಷಣ್ ತಮ್ಮ ಹೇಳಿಕೆಯನ್ನು ನ್ಯಾಯಾಲಯದ ಎದುರು ಓದಿದ್ದಾರೆ.

ಸುಪ್ರೀಂಕೋರ್ಟ್‌

ಈ ಹೇಳಿಕೆಯಲ್ಲಿ, “ನನ್ನ ಉದ್ದೇಶವನ್ನು ಅರಿಯದೇ, ಸ್ವಷ್ಟ ವಿಚಾರಣೆ ನಡೆಸದೆ ನ್ಯಾಯಾಲಯವು ಈ ತೀರ್ಮಾನಕ್ಕೆ ಬಂದು ತಲುಪಿದ ಬಗ್ಗೆ ನನಗೆ ಆಘಾತವಾಗಿದೆ. ನನ್ನ ಟ್ವೀಟ್‌ಗಳು ನಾಗರಿಕನಾಗಿ ನನ್ನ ಕರ್ತವ್ಯವನ್ನು ನಿಭಾಯಿಸುವ ಉತ್ತಮ ಪ್ರಯತ್ನದ ಭಾಗವಾಗಿವೆ. ಇತಿಹಾಸದ ಈ ಹಂತದಲ್ಲಿ ನಾನು ಮಾತನಾಡದಿದ್ದರೆ ನಾನು ನನ್ನ ಕರ್ತವ್ಯದಲ್ಲಿ ವಿಫಲವಾಗುತ್ತಿದ್ದೆ. ನ್ಯಾಯಾಲಯವು ವಿಧಿಸಬಹುದಾದ ಯಾವುದೇ ದಂಡವನ್ನು ನಾನು ಸಲ್ಲಿಸುತ್ತೇನೆ. ಆದರೆ, ಕ್ಷಮೆಯಾಚಿಸುವುದಿಲ್ಲ. ಯಾವ ಮನವಿಯನ್ನೂ ಮಾಡುವುದಿಲ್ಲ. ನ್ಯಾಯಾಲಯವು ನೀಡುವ ಯಾವುದೇ ಶಿಕ್ಷೆಯನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ. ಸಾಂವಿಧಾನಿಕ ಕ್ರಮವನ್ನು ಕಾಪಾಡಲು ಯಾವುದೇ ಪ್ರಜಾಪ್ರಭುತ್ವದಲ್ಲಿ ಮುಕ್ತ ಟೀಕೆ ಅಗತ್ಯ ಎಂದು ನಾನು ನಂಬುತ್ತೇನೆ. ಸಂವಿಧಾನದ ರಕ್ಷಣೆ ಎನ್ನುವುದು ವ್ಯಕ್ತಿಗತವಾಗಿ ಹಾಗೂ ವೃತ್ತಿಯಿಂದ ಬರಬೇಕು. ಈ ದಿಸೆಯಲ್ಲಿ ಯಾವುದು ನನ್ನ ಆದ್ಯ ಕರ್ತವ್ಯ ಎಂದು ಭಾವಿಸಿದ್ದೇನೆಯೋ ಅದರ ಒಂದು ಸಣ್ಣ ಪ್ರಯತ್ನ ನನ್ನ ಟ್ವೀಟ್‌ಗಳಾಗಿವೆ. ಹೀಗಾಗಿ ಕ್ಷಮೆ ಕೇಳುವುದಿಲ್ಲ. ಯಾವುದೇ ಶಿಕ್ಷೆಯನ್ನು ಸ್ವೀಕರಿಸುತ್ತೇನೆ” ಎಂದು ಅವರು ಸ್ಪಷ್ಟಪಡಿಸಿದ್ದರು.

 ಇದ್ನನ್ನೂ ಓದಿ ವಿಚಾರಣೆ ಮುಂದೂಡುವಂತೆ ಭೂಷಣ್‌ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಈ ವೇಳೆ ಪ್ರಶಾಂತ್ ಭೂಷಣ್ ವಕೀಲ ರಾಜೀವ್ ಧವನ್ ನ್ಯಾಯಾಲಯದ ಎದುರು ವಾದ ಮಂಡಿಸಿ, “ಪ್ರಶಾಂತ್‌ ಭೂಷಣ್ ಸಾರ್ವಜನಿಕ ಹಿತದೃಷ್ಟಿಯಿಂದ ಹಲವಾರು ಪ್ರಕರಣಗಳನ್ನು ದಾಖಲಿಸಿ ಹೋರಾಡಿದ್ದ ವ್ಯಕ್ತಿ ಎಂಬುದನ್ನು ನ್ಯಾಯಾಲಯ ಗಮನದಲ್ಲಿರಿಸಿಕೊಳ್ಳಬೇಕು” ಎಂದು ಮನವಿ ಮಾಡಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ನ್ಯಾಯಾಲಯ, “ನೀವು ನೂರಾರು ಒಳ್ಳೆಯ ಕೆಲಸಗಳನ್ನು ಮಾಡಿರಬಹುದು. ಹಾಗೆಂದು ಹತ್ತು ಅಪರಾಧಗಳನ್ನು ಮಾಡಲು ನ್ಯಾಯಾಲಯ ಅನುಮತಿ ನೀಡುವುದು ಸಾಧ್ಯವಿಲ್ಲ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಲು ಪ್ರಶಾಂತ್ ಭೂಷಣ್ ಅವರಿಗೆ ಎರಡು ದಿನಗಳ ಕಾಲಾವಕಾಶ ನೀಡಲಾಗುವುದು” ಎಂದು ತಿಳಿಸಿದೆ.

ಪ್ರಶಾಂತ್ ಭೂಷಣ್ ತಾವು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಭೂಷಣ್ ಅವರನ್ನು ಶಿಕ್ಷಿಸದಂತೆ ನ್ಯಾಯಪೀಠಕ್ಕೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Donate Janashakthi Media

Leave a Reply

Your email address will not be published. Required fields are marked *