ರಾಣಿಬೆನ್ನೂರು ಮೊರಾರ್ಜಿ ಶಾಲೆಯಲ್ಲಿ ಅವ್ಯವಸ್ಥೆ ಆರೋಪ: ಪ್ರಾಂಶುಪಾಲರ ಅಮಾನತಿಗೆ SFI ಪಟ್ಟು

Please follow and like us:

ರಾಣಿಬೆನ್ನೂರು: ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಸುನಕಲ್ಬಿದರಿ ಗ್ರಾಮದ ಸಮೀಪದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ಪ್ರಾಂಶುಪಾಲರನ್ನು ಅಮಾನತುಗೊಳಿಸಿ ತನಿಖೆ ನಡೆಸುವಂತೆ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ತಾಲೂಕು ಸಮಿತಿ ಆಗ್ರಹಿಸಿದೆ. ರಾಣಿಬೆನ್ನೂರು

ಈ ಸಂಬಂಧ ಎಸ್‌ಎಫ್‌ಐ ತಾಲೂಕು ಸಮಿತಿ ವತಿಯಿಂದ ಪ್ರಾಂಶುಪಾಲ ನಾಗರಾಜ ಅವರಿಗೆ ಮನವಿ ಸಲ್ಲಿಸಲಾಯಿತು. ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುತ್ತಿಲ್ಲ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೆ ಪರಿಹರಿಸುವ ಬದಲು ಅವರನ್ನೇ ಗುರಿಯಾಗಿಸಿಕೊಂಡು ಪ್ರಾಂಶುಪಾಲರು ದೌರ್ಜನ್ಯ ಹಾಗೂ ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳನ್ನು ವಿದ್ಯಾರ್ಥಿಗಳು ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಅರುಣ್ ಕುಮಾರ್ ನಗವತ್, “ವಸತಿ ನಿಲಯಗಳು ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆಸರೆಯಾಗಬೇಕೇ ಹೊರತು, ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವ ಕೇಂದ್ರಗಳಾಗಬಾರದು. ಸರ್ಕಾರ ವಿದ್ಯಾರ್ಥಿಗಳ ಶಿಕ್ಷಣ, ಊಟ, ವಸತಿ ಮತ್ತು ಸುರಕ್ಷತೆಗಾಗಿ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದೆ. ಆದರೂ ವಿದ್ಯಾರ್ಥಿಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸದಿರುವುದು ಖಂಡನೀಯ” ಎಂದು ಹೇಳಿದರು.

ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಲು ವಸತಿ ನಿಲಯಕ್ಕೆ ಭೇಟಿ ನೀಡುವ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸುವ ಪ್ರಯತ್ನ ನಡೆಯುತ್ತಿದೆ. ಸಂಘಟನೆಗಳಿಗೆ ಇಲ್ಲಿ ಬರಲು ಯಾವುದೇ ಹಕ್ಕಿಲ್ಲ ಎಂದು ಹೇಳುತ್ತಿರುವುದು ಪ್ರಜಾಪ್ರಭುತ್ವದ ಹಕ್ಕುಗಳಿಗೆ ವಿರುದ್ಧವಾದ ನಡೆ ಎಂದು ಅವರು ಆಕ್ಷೇಪಿಸಿದರು.

ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಆರೋಪಗಳ ಕುರಿತು ತನಿಖೆ ನಡೆಸಿ, ಪ್ರಾಂಶುಪಾಲರನ್ನು ಅಮಾನತುಗೊಳಿಸದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ SFI ಎಚ್ಚರಿಸಿದ್ದು, ಶುದ್ಧ ಕುಡಿಯುವ ನೀರು, ಲೋಟ ಹಾಗೂ ಉತ್ತಮ ಆಹಾರ ಸೇರಿದಂತೆ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಂತೆ ವಿದ್ಯಾರ್ಥಿ ನದಾಫ್ ಆಗ್ರಹಿಸಿದರು.

ವಿದ್ಯಾರ್ಥಿಗಳಿಗೆ ಉತ್ತಮ ವಸತಿ ವ್ಯವಸ್ಥೆ, ಆಹಾರ, ಶುದ್ಧ ಕುಡಿಯುವ ನೀರು ಹಾಗೂ ಭಯವಿಲ್ಲದೆ ಶಿಕ್ಷಣ ಪಡೆಯುವ ವಾತಾವರಣ ಕಲ್ಪಿಸಬೇಕು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕೂಡಲೇ ಪರಿಹರಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

SFI ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು

ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ SFI ಮತ್ತು ವಿದ್ಯಾರ್ಥಿಗಳು ಒಟ್ಟು 15 ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

  1. ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು.
  2. ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು.
  3. ತನಿಖೆ ಪೂರ್ಣಗೊಳ್ಳುವವರೆಗೆ ಸಂಬಂಧಪಟ್ಟ ಪ್ರಾಂಶುಪಾಲರನ್ನು ಅಮಾನತುಗೊಳಿಸಬೇಕು.
  4. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಭಯಮುಕ್ತ ವಾತಾವರಣ ನಿರ್ಮಿಸಬೇಕು.
  5. ಬಕೆಟ್, ಜಗ್ ಮತ್ತು ಲೋಟಗಳ ವ್ಯವಸ್ಥೆಯನ್ನು ತಕ್ಷಣ ಕಲ್ಪಿಸಬೇಕು.
  6. ಕುಡಿಯುವ ನೀರಿನ ವ್ಯವಸ್ಥೆಯನ್ನು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು.
  7. ಕಳೆದ ಆರು ತಿಂಗಳಿನಿಂದ ಬಾಕಿ ಇರುವ ಕಿಟ್‌ಗಳನ್ನು ವಿತರಿಸಬೇಕು.
  8. ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಒದಗಿಸಬೇಕು.
  9. ಆಟವಾಡಲು ಕ್ರೀಡಾಂಗಣ ನಿರ್ಮಿಸಬೇಕು.
  10. ನಿಗದಿತ ಮೆನು ಪ್ರಕಾರ ಉಪಾಹಾರ ನೀಡಬೇಕು.
  11. ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು.
  12. ರುಚಿಕರವಾದ ಮತ್ತು ಗುಣಮಟ್ಟದ ಊಟ ನೀಡಬೇಕು.
  13. ಗ್ರಂಥಾಲಯದ ವ್ಯವಸ್ಥೆ ಮಾಡಬೇಕು.
  14. ಕಂಪ್ಯೂಟರ್ ಲ್ಯಾಬ್ ಕಲ್ಪಿಸಬೇಕು.
  15. ಕುಡಿಯುವ ನೀರಿಗೆ ಅಗತ್ಯ ಲೋಟಗಳನ್ನು ಒದಗಿಸಬೇಕು.

ಇದನ್ನೂ ಓದಿ: ಸರ್ಕಾರಿ ಶಾಲೆಗಳ ಖಾಸಗೀಕರಣ, 45,000 ಶಾಲೆ ಬಂದ್‌ಗೆ ಮಾಸ್ಟರ್ ಪ್ಲಾನ್?; ಸರ್ಕಾರದ ವಿರುದ್ಧ ಸಿಡಿದೆದ್ದ AIDSO

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಮೆಹಬೂಬ್ ಅಲಿ, ಅಹಮದ್ ರಾಜ್, ಇರ್ಷಾದ್ ಅಲಿ, ಶಗುಫ್ತ ಅಮ್ಮಜನ, ಸೀಮಾ, ಇಸ್ಮಾಯಿಲ್ ಶೇಕ್, ಸುನೈನಾ ಫಿರ್ಜಾಧಿ, ರೋಶಿನಿ ಮುಲ್ಲಾ, ಯಾಸಿನ್ ಭದ್ರಾವತಿ, ಅಬ್ದುಲ್ ಖಾದರ್, ಜಮಾಲುದ್ದೀನ್, ಸಯ್ಯದ್ ಮುಲ್ಲಾ, ಅಹಮದ್ ಮುಳುಗುಂಡಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ  ನೋಡಿ: ಫ್ರಾನ್ಸ್‌ನಲ್ಲಿ ವಿದ್ಯಾರ್ಥಿ ಕ್ರಾಂತಿ! ಸರ್ಕಾರಕ್ಕೆ ಸವಾಲಾದ ಐತಿಹಾಸಿಕ ಹೋರಾಟ | ಗುರುರಾಜ ದೇಸಾಯಿ

Please follow and like us:
Donate Janashakthi Media

Leave a Reply

Your email address will not be published. Required fields are marked *