ಯು.ಎಸ್ ಮಧ್ಯಂತರ ಚುನಾವಣೆಯ ಫಲಿತಾಂಶಗಳ ಬಗ್ಗೆ ಪ್ರಶ್ನೆಗಳು :  ಇರಾನ್ ಯುದ್ಧ ನಿಲ್ಲುತ್ತಾ? ಭಾರತದ ಮೇಲೆ ಪರಿಣಾಮವೇನು?

Please follow and like us:

ವಸಂತರಾಜ ಎನ್.ಕೆ

ಯು.ಎಸ್ 2026 ಮಧ್ಯಂತರ ಚುನಾವಣೆಯ ಫಲಿತಾಂಶಗಳು ಪ್ರಕಟವಾಗಿದ್ದು ಯು.ಎಸ್ ನಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲೆಡೆ ಅಚ್ಚರಿ. ಹರ್ಷ ಎರಡನ್ನೂ ತಂದಿವೆ. ಜಗತ್ತಿನ ಎಲ್ಲೆಡೆ ಉಗ್ರ ಬಲಪಂಥದ ಪ್ರಭಾವ ಹೆಚ್ಚುತ್ತಿದ್ದ ಹಿನ್ನೆಲಯಲ್ಲಿ ಬ್ರೆಜಿಲ್, ಇಸ್ರೇಲ್ ಚುನಾವಣಾ ಫಲಿತಾಂಶಗಳ ಬೆನ್ನಲ್ಲಿ ಬಂದ ಯು.ಎಸ್ ಫಲಿತಾಂಶಗಳು ಉಗ್ರ ಬಲಪಂಥವನ್ನು ಹಿಮ್ಮೆಟ್ಟಿಸಲು ಸಾಧ್ಯವಿದೆಯೆಂಬ ಆಶಾಭಾವನೆ ಮೂಡಿಸಿದೆ. ಈ ಫಲಿತಾಂಶಗಳ ಬಗ್ಗೆ ಎದ್ದಿರುವ ಕೆಲವು ಪ್ರಮುಖ ಪ್ರಶ್ನೆಗಳನ್ನು ಉತ್ತರಿಸುವುದು ಆ ಕುರಿತು ಹೆಚ್ಚಿನ ಮಾಹಿತಿ ತಿಳಿದಿಕೊಳ್ಳುವ ಮತ್ತು ವಿಶ್ಲೇಷಿಸುವ ನಿಟ್ಟಿನಲ್ಲಿ ನೆರವಾಗಲಿದೆ. ಇದನ್ನು ನೀಲೀ ಸುನಾಮಿ ಎನ್ನಬಹುದೇ? ಚಾರಿತ್ರಿಕ ಪ್ರಥಮಗಳು ಯಾವುವು? ಇದಕ್ಕೆ ಇರಾನ್ ಯುದ್ಧ ಕಾರಣವೇ? ಇತರ ಪ್ರಮುಖ ಕಾರಣಗಳಿವೆಯೇ? ಇದರಿಂದ ಇರಾನ್ ಯುದ್ಧ ನಿಲ್ಲುತ್ತಾ? ಟ್ರಂಪ್ ಸರಕಾರದ ಮೇಲೆ ಯಾವ ಪರಿಣಾಮ ಬೀರಲಿದೆ? ಟ್ರಂಪ್ ವಿದೇಶ ನೀತಿಯ ಮೇಲೆ, ಭಾರತದ ಮೇಲೆ ಪರಿಣಾಮಗಳೇನು? – ಇವು ಆ ಪ್ರಶ್ನೆಗಳು. ಮೊದಲ ಐದು ಪ್ರಶ್ನೆಗಳಿಗೆ ಈ ಲೇಖನಮಾಲೆಯ ಮೊದಲ ಎರಡು ಭಾಗಗಳಲ್ಲಿ ಉತ್ತರಿಸಲಾಗಿತ್ತು. ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ

6. ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ ಮುಖಭಂಗದಿಂದಾಗಿ ಇರಾನ್ ಯುದ್ಧ ನಿಲ್ಲುತ್ತಾ ?

ಮಧ್ಯಂತರ ಚುನಾವಣೆಯಲ್ಲಿ ಇರಾನ್ ಯುದ್ಧ ಮತ್ತು ಪ್ರಮುಖವಾಗಿ ಅದರ ಆರ್ಥಿಕ ಪರಿಣಾಮಗಳು ಮತದಾರರ ಆಯ್ಕೆ ಮೇಲೆ ದೊಡ್ಡ ಪರಿಣಾಮ ಬೀರಿದವು ಎಂದು ಹಿಂದಿನ ಪ್ರಶ್ನೆಯ ಉತ್ತರಗಳಲ್ಲಿ ನೋಡಿದೆವು. ಆದರೆ ಅದರ ಪರಿಣಾಮ ಇರಾನ್ ಯುದ್ಧ ನಿಲ್ಲಿಸುವಷ್ಟು ಇರುತ್ತಾ ಎಂಬುದು ಪ್ರಶ್ನೆ. ಇರಾನ್ ಯುದ್ಧಕ್ಕೆ ಮೊದಲಿಂದಲೂ, ಇತ್ತೀಚಿನ ತಿಂಗಳುಗಳಲ್ಲಿ ಅದರ ಆರ್ಥಿಕ ಪರಿಣಾಮಗಳು ವ್ಯಾಪಕವಾಗಿ ಕಾಣಿಸಿಕೊಂಡ ಮೇಲಂತೂ ಇನ್ನಷ್ಟು ತೀವ್ರವಾಗಿ, ಯು.ಎಸ್ ಜನತೆ ವಿರುದ್ಧವಾಗಿದ್ದರು. ಮತ್ತು ಅದು ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಮುಳುವಾಗಬಹುದು ಎಂಬುದು ಸ್ಪಷ್ಟವಿತ್ತು. ಆದರೂ ಈ ಯುದ್ಧವನ್ನು ಮುಂದುವರಿಸಿದ ಶಕ್ತಿಗಳು ಇದನ್ನು ನಿರ್ಲಕ್ಷಿಸಿದವು. ಈಗಲೂ ಅದನ್ನು ನಿರ್ಲಕ್ಷಿಸುವ ಸಾಧ್ಯತೆಯೇ ಹೆಚ್ಚು. ಯು.ಎಸ್ ನ ಶಸ್ತ್ರಾಸ್ತ್ರ ಮತ್ತು ಯುದ್ಧ ಉಪಕರಣದ ವಹಿವಾಟು ನಡೆಸುತ್ತಿರುವ ದೈತ್ಯ ಕಂಪನಿಗಳು ಭಾಗವಾಗಿರುವ   ಮಿಲಿಟರಿ-ಕೈಗಾರಿಕಾ ಸಂಕೀರ್ಣ ಯಾವಾಗಲೂ ತನ್ನ ವಹಿವಾಟು ವಿಸ್ತರಿಸಲು, ಸೂಪರ್ ಲಾಭ ಗಳಿಸಲು ಯುದ್ಧಗಳನ್ನು ಬಯಸುತ್ತದೆ. ಯುದ್ಧ ಉಂಟು ಮಾಡಲು ರಾಜಕೀಯ ನಾಯಕರ ಜತೆ ಲಾಬಿ ನಡೆಸುತ್ತಿರುತ್ತದೆ. ಚೀನಾದ ಜತೆ ಆರ್ಥಿಕ-ತಂತ್ರಜ್ಞಾನ ಪೈಪೋಟಿಯಲ್ಲಿ ಯು.ಎಸ್ ಹಿಂದೆ ಬೀಳುತ್ತಿದ್ದು, ತನ್ನ ಜಾಗತಿಕ ಅಧಿಪತ್ಯ ಉಳಿಸಿಕೊಳ್ಳಲು ಮಿಲಿಟರಿ ಬಲವನ್ನು ತೋರಿಸಬೇಕು ಎಂಬ ಸಿದ್ಧಾಂತದತ್ತ ಆಳುವ ವರ್ಗದ ರಾಜಕೀಯ, ಆಡಳಿತ ಮತ್ತು ಬಲಪಂಥೀಯ ಶಕ್ತಿಗಳು ಹೋಗುತ್ತಿವೆ. ಈ ಶಕ್ತಿಗಳ ಜತೆ ಇಸ್ರೇಲ್-ಪರ ಮತ್ತು ಝಿಯೊನಿಸ್ಟ್ (ಯಹೂದಿ-ಮೂಲಭೂತವಾದಿ) ಸೂಪರ್ ಶ್ರೀಮಂತ ಲಾಬಿ ಸಹ ಯುದ್ಧ ಆರಂಭಿಸಿ ಮುಂದುವರೆಯುವುದರಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಎಲ್ಲ ಶಕ್ತಿಗಳು ಇರಾನ್ ಯುದ್ಧವನ್ನು ನಿಲ್ಲಿಸಲು ಬಿಡುವುದಿಲ್ಲ.

ಡೆಮೊಕ್ರಾಟಿಕ್ ಪಕ್ಷ ಕಾಂಗ್ರೆಸ್ (ಯು.ಎಸ್ ಪಾರ್ಲಿಮೆಂಟ್) ನ ಎರಡೂ ಸದನಗಳಲ್ಲೂ (ಪ್ರತಿನಿಧಿ ಸಭೆ ಮತ್ತು ಸೆನೆಟ್ ಎರಡರಲ್ಲೂ) ಭಾರೀ ಬಹುಮತ ಪಡೆದಿದೆ. ಡೆಮೊಕ್ರಾಟಿಕ್ ಪಕ್ಷ ಇರಾನ್ ಯುದ್ಧ ನಿಲ್ಲಿಸಲು ಅಥವಾ  ಟ್ರಂಪ್ ಅವರ ಯುದ್ಧ ತೀವ್ರಗೊಳಿಸುವ ಪ್ರಯತ್ನಕ್ಕೆ ತೀವ್ರ ತಡೆ ಒಡ್ಡುತ್ತವೆ ಎಂಬುದು ಹಲವರ ನಿರೀಕ್ಷೆ. ಡಿ.ಎಸ್.ಎ ಎಂಬ ಎಡಪಂಥೀಯ ಗುಂಪು ಸೇರಿದಂತೆ ಹಲವು ಡೆಮೊಕ್ರಾಟಿಕ್ ಅಭ್ಯರ್ಥಿಗಳು ಚುನಾವಣೆಯಲ್ಲಿ ಇರಾನ್ ಯುದ್ಧವನ್ನು ದೃಢವಾಗಿ ವಿರೋಧಿಸಿದ್ದಾರೆ, ನಿಜ. ಆದರೆ  ಡೆಮೊಕ್ರಾಟಿಕ್ ಪಕ್ಷದ ಪ್ರಧಾನ ಅಥವಾ ಕೇಂದ್ರೀಯ ನಾಯಕತ್ವ ಯುದ್ಧ-ವಿರೋಧಿಯೇನಲ್ಲ. ಮೇಲೆ ಹೇಳಿದ ಶಕ್ತಿ/ಲಾಬಿಗಳು ಎರಡೂ ಪಕ್ಷದ ಬಹುಪಾಲು ಸದಸ್ಯರಿಗೆ ಕೊಟ್ಟ ಚುನಾವಣಾ ನಿಧಿಯ ಮೂಲಕ ಅವರನ್ನು ನಿಯಂತ್ರಿಸುತ್ತವೆ. ಇನ್ನಷ್ಟು ದೀರ್ಘ ಕಾಲದಿಂದ ನಡೆಯುತ್ತಿರುವ ಉಕ್ರೇನ್ ಯುದ್ಧವನ್ನು ಆರಂಭಿಸಿದ್ದು ಡೆಮೊಕ್ರಾಟಿಕ್ ಅಧ್ಯಕ್ಷ ಬಿಡೆನ್ ಮತ್ತು ಇಸ್ರೇಲಿನ ಗಾಜಾ ನರಮೇಧಕ್ಕೆ ಕುಮ್ಮಕ್ಕು ನೀಡಿದ್ದರು ಎಂದು ಗಮನಿಸಬೇಕು. ಅಲ್ಲದೆ ಎರಡೂ ಸದನಗಳ ಚುನಾಯಿತ ಡೆಮೊಕ್ರಾಟಿಕ್ ಪಕ್ಷದ ಹೊಸ ಸದಸ್ಯರ ನಾಯಕತ್ವವನ್ನು ವಹಿಸುವ ಸಾಧ್ಯತೆಯಿರುವ ನಾಯಕರು ಯುದ್ಧ-ವಿರೋಧಿಗಳಲ್ಲ. ಯುದ್ದದ ವಿಷಯದಲ್ಲಿ ಡಿ.ಎಸ್.ಎ ಗುಂಪು ಮತ್ತು ಪ್ರಗತಿಪರ ಡೆಮೊಕ್ರಾಟಿಕ್ ಅಭ್ಯರ್ಥಿಗಳು ಒತ್ತಡ ಹಾಕಿದರೂ ಪಕ್ಷದೊಳಗಿನ ಬಲಾಬಲ ಯುದ್ಧ-ಪರ ನಾಯಕತ್ವದ ಕಡೆಗೇ ಇದೆ.

ಇಸ್ರೇಲಿ ಪ್ರಧಾನಿ ನೇತನ್ಯಾಹು ಅವರು ಬಹುಮತ ಪಡೆಯಲು ವಿಫಲವಾಗಿರುವುದು ಸಹ, ಇರಾನ್ ಯುದ್ಧ ನಿಲುಗಡೆಗೆ ಸಹಾಯಕವಾಗುತ್ತದೆ ಎಂದೂ ಹಲವರ ನಿರೀಕ್ಷೆ. ಆದರೆ ಸರಕಾರ ರಚಿಸುವ ಸಾಧ್ಯತೆಯಿರುವ ವಿರೋಧಿ ಬಣದ ನಾಯಕ ಐಸೆನ್-ಕೋಟ್ ಗಾಜಾ ನರಮೇಧ ಮತ್ತು ನಂತರದ ಯುದ್ಧದ ಸಮಯದಲ್ಲಿ ಇಸ್ರೇಲಿ ಮಿಲಿಟರಿ ಮುಖ್ಯಸ್ಥರಾಗಿದ್ದವರು. ಪ್ಯಾಲೆಸ್ಟೈನ್ನರ ದೇಶದ ಹಕ್ಕನ್ನು ನಿರಾಕರಿಸುವ, ಹಾಮಾಸ್ ಭಯೋತ್ಪಾದಕ ಪಡೆಯೆನ್ನುವ, ಇರಾನ್ ‘ಅಣ್ವಸ್ತ್ರ’ ಇಸ್ರೇಲಿನ ಅಸ್ತಿತ್ವಕ್ಕೆ ಅಪಾಯಕರವೆನ್ನುವ ಮತ್ತು ಯಹೂದಿ-ಮೂಲಭೂತವಾದಿ ಸಿದ್ಧಾಂತದ ಪ್ರತಿಪಾದಕರು. ಪ್ಯಾಲೆಸ್ಟೈನ್-ಎಡಪಂಥೀಯ ಕೂಟದ (ಜಾಗತಿಕ ಮಾಧ್ಯಮಗಳ ಪ್ರಕಾರ ‘ಅರಬ್ ಕೂಟ’) ಬೆಂಬಲವಿಲ್ಲದೆ ಅವರು ಸರಕಾರ ರಚಿಸಲು ಸಾಧ್ಯವಿಲ್ಲ. ಹಾಗೆ ಸರಕಾರ ರಚಿಸಿದರೂ, ಅವರ ಯುದ್ಧ ಹೂಡುವ ಯೋಜನೆಗೆ ತಡೆ ಬೀಳುತ್ತದೆಯೆಂಬುದೂ ಖಚಿತವಿಲ್ಲ. ಈಗಲೂ ಪ್ಯಾಲೆಸ್ಟೈನ್-ಎಡಪಂಥೀಯ ಕೂಟವನ್ನು ಹೊರತು ಪಡಿಸಿ ‘ರಾಷ್ಟ್ರೀಯ ಐಕ್ಯತೆಯ ಸರಕಾರ’ ರಚಿಸುವ ಯೋಚನೆಯನ್ನು ಎರಡೂ ಕೂಟಗಳು ಬಿಟ್ಟುಕೊಟ್ಟಿಲ್ಲ. ಯಾರು ಪ್ರಧಾನಿಯಾಗಬೇಕು ಎಂಬುದರ ಬಗ್ಗೆ ಅಷ್ಟೇ ವಿವಾದವಿರುವುದು.  ಐಸೆನ್-ಕೋಟ್ ಪ್ಯಾಲೆಸ್ಟೈನ್-ಎಡಪಂಥೀಯ ಕೂಟದ ಬೆಂಬಲದಿಂದ ಸರಕಾರ ರಚಿಸಲು ದೃಢ ನಿರ್ಧಾರ ಮಾಡುವವರೆಗೆ, ನೇತನ್ಯಾಹು ಹಂಗಾಮಿ ಪ್ರಧಾನಿಯಾಗಿ ಮುಂದುವರೆಯುತ್ತಾರೆ. ಹೊಸ ಡೆಮೊಕ್ರಾಟಿಕ್ ಕಾಂಗ್ರೆಸ್ ಸಹ ಜನವರಿ 2027ರಲ್ಲಷ್ಟೇ ಅಸ್ತಿತ್ವಕ್ಕೆ ಬರಲಿದ್ದು, ಆವರೆಗೆ ಅಧ್ಯಕ್ಷ ಟ್ರಂಪ್ ಅವರಿಗೂ ಯಾವುದೇ ಅಡೆತಡೆಗಳಿರುವುದಿಲ್ಲ. ಜನವರಿ 2027ರೊಳಗೆ ಇಬ್ಬರೂ ಇರಾನ್ ಮೇಲೆ ಮತ್ತೆ ಯುದ್ಧ ಹೂಡುವ ಸಾಧ್ಯತೆಯಂತೂ ಇದ್ದೇ ಇದೆ. ಇತ್ತೀಚೆಗೆ ಇಸ್ರೇಲಿ ಗೂಢಚಾರ ಸಂಸ್ಥೆ ಮೊಸಾದ್ ಮುಖ್ಯಸ್ಥ ಯು.ಎಸ್ ಭೇಟಿ ನೀಡಿ ಸಿ.ಐ.ಎ ಮುಖ್ಯಸ್ಥರನ್ನು ಭೇಟಿ ಮಾಡಿರುವುದು ಇದರತ್ತ ಬೊಟ್ಟು ಮಾಡುತ್ತಿದೆ.

ಯು.ಎಸ್ ದಾಳಿಗೆ ಪ್ರತಿಯಾಗಿ ಬಹ್ರೈನ್, ಕುವೈಟ್ ಮೇಲೆ ಇರಾನ್ ದಾಳಿ
ಯು.ಎಸ್ ದಾಳಿಗೆ ಪ್ರತಿಯಾಗಿ ಬಹ್ರೈನ್, ಕುವೈಟ್ ಮೇಲೆ ಇರಾನ್ ದಾಳಿ

ಇದನ್ನೂ ಓದಿ : ಬಿಲ್ಕಿಸ್ ಬಾನು ಪ್ರಕರಣದ ಜಾಮೀನು ಆದೇಶ ಆತಂಕಕಾರಿ: ಪಿಣರಾಯಿ ವಿಜಯನ್

ಮತ್ತೆ ಯು.ಎಸ್-ಇಸ್ರೇಲ್ ಯುದ್ಧ ಹೂಡಿದರೆ ಯು.ಎಸ್ ನ ಸಹಚರರಾಗಿರುವ, ಅದರ ಮಿಲಿಟರಿ ನೆಲೆಗಳನ್ನು ಹೊಂದಿರುವ ಈ ಪ್ರದೇಶದ ದೇಶಗಳ ಮೇಲೆ ತೀವ್ರದಾಳಿ ಮಾಡುವುದಾಗಿ ಇರಾನ್ ಎಚ್ಚರಿಸಿದೆ.  ಪಶ್ಚಿಮ ಏಶ್ಯಾದ ಅರಬ್ ಸರಕಾರಗಳು ಮತ್ತೆ ಇರಾನ್ ಮೇಲೆ ದಾಳಿ ಮಾಡದಂತೆ ಟ್ರಂಪ್ ಮೇಲೆ ತೀವ್ರ ಒತ್ತಡ ಹಾಕುತ್ತವೆ ಎಂಬುದು ಇನ್ನೂ ಹಲವರ ನಿರೀಕ್ಷೆ. ಎರಡನೇ ಸುತ್ತಿನ ದಾಳಿ ಆರಂಭಿಸಿದಾಗಲೂ ಅವು ಒತ್ತಡ ಹಾಕಿದ್ದವು. ಅದನ್ನು ಯು.ಎಸ್-ಇಸ್ರೇಲ್ ನಿರ್ಲಕ್ಷಿಸಿದ್ದವು. ಈ ಬಾರಿ ಇನ್ನೂ ವ್ಯಾಪಕ ನಾಶದ ಭೀತಿಯಿದ್ದರೂ, ಅದನ್ನು ಎಷ್ಟು ಮಟ್ಟಿಗೆ ಯು.ಎಸ್-ಇಸ್ರೇಲ್ ಲೆಕ್ಕಿಸುತ್ತವೆ ಎಂಬುದರ ಬಗ್ಗೆ ಖಚಿತವಿಲ್ಲ. ಈ ನಡುವೆ ಸೌದಿ ಅರೇಬಿಯ ಯೆಮೆನ್ ಮೇಲೆ ಮತ್ತೆ ಯುದ್ಧ ಆರಂಭಿಸಿ ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಯೆಮೆನಿ ‘ಅನ್ಸರ್ ಅಲ್ಲಾ’ (ಹೂತಿ) ಪಡೆಗಳು, ರಾಜಧಾನಿ ರಿಯಾದ್, ತೈಲ ಸ್ಥಾವರಗಳ ಮೇಲೆ ತೀವ್ರ ಪ್ರತಿದಾಳಿ ಮಾಡಿ ಸೌದಿ ಪಡೆಗಳನ್ನು ಹಿಮ್ಮೆಟ್ಟಿಸಿರುವುದು, ಕೆಂಪು ಸಮುದ್ರದ ಬಬ್-ಅಲ್-ಮಂಡದ್ ಜಲಸಂಧಿ ವಶಪಡಿಸಿಕೊಂಡಿರುವುದು ಮಿಲಿಟರಿ ಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ.

ಪಶ್ಚಿಮ ಏಶ್ಯಾದಲ್ಲಿನ ಹಲವು ಯು.ಎಸ್ ಮಿಲಿಟರಿ ನೆಲೆಗಳ ನಾಶ, ನೆಲೆಗಳ ಮತ್ತು ಅಲ್ಲಿನ ಪಡೆಗಳ ಭದ್ರತೆಗೆ ತೀವ್ರ ಅಪಾಯದಿಂದಾಗಿ ಇಸ್ರೇಲ್, ಜೋರ್ಡಾನ್ ಗಳಿಗೆ ಪಡೆಗಳ ಸ್ಥಳಾಂತರ, ಕ್ಷಿಪಣಿ ನಿರೋಧಕ ಕ್ಷಿಪಣಿಗಳ ಕೊರತೆ, ವಾಯುದಾಳಿ ಸೂಚಕ ರಾಡಾರ್ ವ್ಯವಸ್ಥೆಗಳ ನಾಶ, ದೀರ್ಘಕಾಲದ ಯುದ್ಧ ಸನ್ನದ್ಧ ಬಳಕೆಯಿಂದ ಹಲವು ವಿಮಾನ-ವಾಹಕ ಯುದ್ಧ ಹಡಗುಗಳನ್ನು ಬದಲಿಸಬೇಕಾಗಿ ಬಂದಿರುವುದು – ಇವೆಲ್ಲವುಗಳ ಮೊತ್ತವಾಗಿರುವ  ಪ್ರತಿಕೂಲ ಮಿಲಿಟರಿ ಪರಿಸ್ಥಿತಿ ಸಹ ಇರಾನ್ ಮೇಲೆ ದಾಳಿಯನ್ನು ಕಷ್ಟಕರವಾಗಿಸುತ್ತದೆ ಎಂಬುದೂ ಕೆಲವರ ನಿರೀಕ್ಷೆ. ಇಂತಹ ಪರಿಸ್ಥಿತಿಯಿಂದಾಗಿ ಜೂನ್ ನಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಆದರೆ ಅದರ ನಂತರ ಒಪ್ಪಂದವನ್ನು ಜಾರಿಗೆ ತರದಿರುವುದು, ಹೊರ್ಮುಝ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನವನ್ನು ಮುಂದುವರೆಸಿರುವುದು, ಇರಾನ್ ದ್ವೀಪವೊಂದರ ಮೇಲೆ ದಾಳಿ ಮಾಡಿರುವುದು, ಇರಾನ್ ಭೂಪ್ರದೇಶದ ಮೇಲೆ ಕಣ್ಗಾವಲು ವಿಮಾನಯಾನ, ಇರಾನ್ ನ ಉತ್ತರಕ್ಕೆ ಭೂ-ದಿಗ್ಬಂಧನ ಹಾಕುವ ಪ್ರಯತ್ನ – ಇವೆಲ್ಲ ‘ಯುದ್ಧ ಅಲ್ಲ, ಶಾಂತಿಯಿಲ್ಲ’ ಎಂಬ ಸಂದಿಗ್ಧ ಪರಿಸ್ಥಿತಿಯನ್ನು ಮುಂದುವರೆಸಿದೆ. ಯು,ಎಸ್ ಮತ್ತು ನಾಟೋ ಪಡೆಗಳ ಚಲನವಲನಗಳು ದೊಡ್ಡ ದಾಳಿಯ ಸೂಚನೆ ನೀಡುತ್ತದೆಯೆಂದು ಇರಾನ್ ಮತ್ತು ಹಲವು ಸ್ವತಂತ್ರ ವಿಶ್ಲೇಷಕರ ಅಂದಾಜು.

ಟ್ರಂಪ್ ಮಧ್ಯಂತರ ಚುನಾವಣೆಗಳ ನಂತರ, ಫಲಿತಾಂಶ ಏನಿದ್ದರೂ (ವಿಶೇಷವಾಗಿ ರಿಪಬ್ಲಿಕನ್ ಪಕ್ಷ ಸೋತರೆ) ಭಾರೀ ದಾಳಿ ನಡೆಸುತ್ತಾರೆ. ಇದಕ್ಕಾಗಿ ತಯಾರಿ ನಡೆದಿತ್ತು ಎಂದು ವದಂತಿಯಿತ್ತು. ಆದರೆ ಟ್ರಂಪ್ ಯಥಾಪ್ರಕಾರ, ‘ಟ್ರಂಪ್ ಏನು ಮಾಡಲಿದ್ದಾರೆ ಎಂಬುದು ಟ್ರಂಪ್ ಗೂ ಗೊತ್ತಿಲ್ಲ’ ಎಂಬ, ಅವರ ಬಗೆಗಿನ ಬಹುತೇಕ ಜನರ ಅಂದಾಜಿನಂತೆ ನಡೆದುಕೊಂಡಿದ್ದಾರೆ. ಒಂದು ಕಡೆ ಉಪಾಧ್ಯಕ್ಷ ವಾನ್ಸ್ ಅವರನ್ನು ಒಂದು ತಂಡದ ಜತೆ ಇರಾನ್ ಜತೆ ಶಾಂತಿ ಮಾತುಕತೆಗೆ ದೋಹಾ (ಕಟಾರ್) ಗೆ ಕಳಿಸುತ್ತಾರೆ. ಒಂದು ದಿನ ಶಾಂತಿ ಒಪ್ಪಂದ ಸನ್ನಿಹಿತ. ಯುದ್ಧ ಹೂಡಲು ಇಸ್ರೇಲ್ ಒತ್ತಡಕ್ಕೆ ಮಣಿಯುವುದಿಲ್ಲ. ಬೇಕಾಧರೆ ಅವರೇ ದಾಳಿ ಮಾಡಲಿ ಅಂತಾರೆ. ಕೆಲವೇ ದಿನಗಳಲ್ಲಿ ಮಾತುಕತೆಗಳ ಅಗತ್ಯವಿಲ್ಲವೆನ್ನುತ್ತಾರೆ. ಈ ನಡುವೆ ಯುದ್ಧಭೂಮಿ ‘ಸೀಮಿತ’ ಅಣ್ವಸ್ತ್ರ ಬಳಸಿ ಇರಾನ್ ಮೇಲೆ ‘ಸರ್ಜಿಕಲ್ ದಾಳಿ’ ನಡೆಯುತ್ತದೆ. ಮೂಲ ಸೌಕರ್ಯ (ಸೇತುವೆ ಇತ್ಯಾದಿ) ಗಳನ್ನು ನಾಶ ಮಾಡಲಾಗುತ್ತದೆ ಎಂಬ ವದಂತಿ ಹರಡಿದೆ.

ವೈಯಕ್ತಿಕವಾಗಿ ಟ್ರಂಪ್ ಅವರಿಗೆ ಮಾತ್ರವಲ್ಲ, ಯು.ಎಸ್ ಆಳುವ ವರ್ಗಗಳು, ಮಿಲಿಟರಿ ನಾಯಕತ್ವ ಮತ್ತು ಸಾಮ್ರಾಜ್ಯಶಾಹಿ ತಮ್ಮ ಅಹಂಕಾರಕ್ಕೆ, ಇರಾನ್ ಕಳೆದ ಹಲವು ತಿಂಗಳುಗಳಲ್ಲಿ ಮತ್ತು ಯು,ಎಸ್ ಮತದಾರ ಮಧ್ಯಂತರ ಚುನಾವಣೆಯಲ್ಲಿ ಮಾಡಿರುವ ಭಾರೀ ಘಾಸಿ ತಡೆದುಕೊಳ್ಳಲಾಗದೆ, ತಮ್ಮ ಅಧಿಪತ್ಯವನ್ನು ಯು.ಎಸ್ ಮತ್ತು ಜಗತ್ತಿನ ಮೇಲೆ ಮರುಸ್ಥಾಪಿಸಲು ಇರಾನ್ ಮೇಲೆ ಮತ್ತೆ ಯುದ್ಧ ಹೂಡುವ ಸಾಧ್ಯತೆಯೇ ಹೆಚ್ಚು.  ಯುದ್ಧ ಹೂಡದಿದ್ದರೂ ‘ಯುದ್ಧ ಅಲ್ಲ, ಶಾಂತಿಯಿಲ್ಲ’ ಎಂಬ ಪರಿಸ್ಥಿತಿ ಮುಂದುವರಿಯುತ್ತದೆ.

ಮತ್ತೆ ಯೆಮೆನ್ – ಸೌದಿ ಸಂಘರ್ಷ, ಹೂಥಿ ಮೇಲುಗೈ, ಪಶ್ಚಿಮ ಏಶ್ಯಾದಲ್ಲಿ ಮಹತ್ವದ ತಿರುವು
ಮತ್ತೆ ಯೆಮೆನ್ – ಸೌದಿ ಸಂಘರ್ಷ, ಹೂಥಿ ಮೇಲುಗೈ, ಪಶ್ಚಿಮ ಏಶ್ಯಾದಲ್ಲಿ ಮಹತ್ವದ ತಿರುವು

7. ಚುನಾವಣೆಗಳ ಫಲಿತಾಂಶಗಳ ಟ್ರಂಪ್ ವಿದೇಶ ನೀತಿಯ ಮೇಲೆ ಪರಿಣಾಮವೇನು?

ಯು.ಎಸ್ ಮತದಾರ ಟ್ರಂಪ್ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಇರಾನ್ ಯುದ್ಧದ ಕುರಿತು ಮಾತ್ರವಲ್ಲ. ಅದು ಈಗಾಗಲೇ ದುರ್ಭರವಾಗಿದ್ದ ದೇಶದ ಆರ್ಥಿಕ ಮತ್ತು ಜೀವನ ವೆಚ್ಚದ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದ ಎಲ್ಲ ನೀತಿಗಳ ವಿರುದ್ಧದ ಆಕ್ರೋಶವಾಗಿತ್ತು. ಉಕ್ರೇನ್ ಯುದ್ಧ ಮತ್ತು ಸುಂಕ ಯುದ್ಧ ಸೇರಿದಂತೆ ಟ್ರಂಪ್ ಅವರ ಇಡೀ ವಿದೇಶ ನೀತಿ ಅದರಲ್ಲಿ ಸೇರಿತ್ತು. ಉಕ್ರೇನ್ ಯುದ್ಧವನ್ನು 24 ಗಂಟೆಗಳಲ್ಲಿ ನಿಲ್ಲಿಸುತ್ತೇನೆ ಎಂದು ಚುನಾವಣೆ ಸಮಯದಲ್ಲಿ ಕೊಚ್ಚಿಕೊಂಡಿದ್ದ ಟ್ರಂಪ್ ಅದಕ್ಕಾಗಿ ಪ್ರಯತ್ನಿಸುವಂತೆ ಕಂಡರೂ ಅದನ್ನು ಸಾಧಿಸಲು ವಿಫಲವಾದ್ದು ಅವರ ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡಿದೆ.  ಸೂಪರ್ ಪವರ್ ನ ಪ್ರಬಲ ಅಧ್ಯಕ್ಷರಾಗಿ ಉಕ್ರೇನ್ ನ ಅಧ್ಯಕ್ಷ ಝೆಲೆನ್ಸ್ಕಿ ಯನ್ನು ಮತ್ತು ಯುರೋ ಕೂಟದ ನಾಯಕರನ್ನು ಶಾಂತಿ ಒಪ್ಪಂದಕ್ಕೆ ಅಣಿ ನೆರೆಸಲು ಅವರಿಗೆ ಸಾಧ್ಯವಾಗಲಿಲ್ಲ. ಅವರನ್ನು ಸಾರ್ವಜನಿಕವಾಗಿ ಹಳಿಯುವುದು ಅವರ   ವಿಶ್ವಾಸಾರ್ಹತೆಯನ್ನು ಪಾತಾಳಕ್ಕಿಳಿಸಿದೆ. ಚುನಾವಣೆಯ ಫಲಿತಾಂಶ ಇದರಲ್ಲಿ ಯಾವ ಬದಲಾವಣೆಯನ್ನು ತರಬಹುದು ಎಂಬ ಯಾವುದೇ ನಿರೀಕ್ಷೆಗಳಿಲ್ಲ. ರಶ್ಯಾದ ಜತೆ ಯಾವುದೇ ಶಾಂತಿ ಒಪ್ಪಂದಕ್ಕೆ ತಯಾರಿಲ್ಲದಿರುವ ಉಕ್ರೇನ್ ಮತ್ತು ಯುರೋ ನಾಯಕರನ್ನು ಮಣಿಸುವುದು ಟ್ರಂಪ್ ಗೆ ಕಷ್ಟವಲ್ಲ. ಆದರೆ ಯುದ್ಧ-ಪರ ಶಕ್ತಿಗಳ ಎದುರು ಬಹುಶಃ ಅವರು ಅಸಹಾಯಕರು.

ಟ್ರಂಪ್ ಅವರ ಸುಂಕ ಯುದ್ಧದ ನೀತಿಗಳನ್ನು ಬದಲಾಯಿಸಲು ಬಹುಶಃ ಅಂತಹ ಯಾವುದೇ ಆಂತರಿಕ ಶಕ್ತಿಗಳ ವಿರೋಧವಿಲ್ಲ.  ಆದರೆ ಯುದ್ಧಗಳಲ್ಲಿ ಮೇಲುಗೈ ಅಥವಾ ಗೆಲುವು ಸಾಧಿಸಲಾಗದ ಟ್ರಂಪ್ ಬಹುಶಃ ವಿವಿಧ ದೇಶಗಳ (ಚೀನಾ, ಕೆನಡಾ ಬಿಟ್ಟು) ಮೇಲೆ, ಸುಂಕ ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸಿ, ಯು.ಎಸ್ ಗೆ ಇನ್ನಷ್ಟು ಅನುಕೂಲಕರವಾದ ವಾಣಿಜ್ಯ ಒಪ್ಪಂದವನ್ನು ಹೊರಿಸಿ ‘ನಾನು ಗೆದ್ದೆ’ ಎಂದು ಬೀಗಲು ತಯಾರಿ ಮಾಡುವ ಸಾಧ್ಯತೆಯಿದೆ.

ರಶ್ಯಾ ಮತ್ತು ಚೀನಾ ಜತೆ ಒಂದು ಕಡೆ ಪ್ರಾಕ್ಸಿ ಸಂಘರ್ಷ ಮುಂದುವರೆಸುತ್ತಾ, ಅದರ ಜತೆ ರಾಜತಾಂತ್ರಿಕ ಪ್ರತಿಕ್ರಿಯೆಯನ್ನೂ ಮುಂದುವರೆಸುವುದರ ಮೇಲೆ ಚುನಾವಣಾ ಫಲಿತಾಂಶ ಯಾವುದೇ ಪರಿಣಾಮ ಬೀರದು. ಯಾಕೆಂದರೆ ಅದು ಚುನಾವಣಾ ವಿಷಯವಾಗಿರಲಿಲ್ಲ.

ಆದರೆ ‘ಮಿಲಿಟರಿಯಾಗಿ ‘ಬಿದ್ದರೂ ಮೀಸೆ ಮಣ್ಣಾಗಿಲ್ಲ’ ಎಂದು ತೋರಿಸಲು, ವಿಶೇಷವಾಗಿ ಇರಾನ್ ಮೇಲೆ ದಾಳಿ ಮಾಡದಿದ್ದರೆ,  ಕ್ಯೂಬಾ ಅಥವಾ ಯಾವುದೇ ಲ್ಯಾಟಿನ್ ಅಮೆರಿಕದ ದೇಶದ ಮೇಲೆ ಮಿಲಿಟರಿ ದಾಳಿ ಮಾಡುವ ಸಾಧ್ಯತೆಯಿದೆ.

ನಾಟೋ ದೇಶಗಳ ಮೇಲೆ ತಮ್ಮ ಮಿಲಿಟರಿ ಖರ್ಚು ತಾವೇ ಹೊರಲು ಒತ್ತಡ, ಕ್ವಾಡ್ ಮುಂತಾದ ಇತರ ವಿದೇಶ ನೀತಿಯ ಅಂಶಗಳ ಮೇಲೂ ಏನೂ ಪರಿಣಾಮವಾಗಲಿಕ್ಕಿಲ್ಲ.

ಟ್ರಂಪ್ ‘ತಾರೀಫ್’ ಗೆ ಖುಷಿಯಾದ ಮೋದಿ
ಟ್ರಂಪ್ ‘ತಾರೀಫ್’ ಗೆ ಖುಷಿಯಾದ ಮೋದಿ ಕೃಪೆ: ಸತೀಶ್ ಆಚಾರ್ಯ)

8. ಮಧ್ಯಂತರ ಚುನಾವಣೆಗಳಲ್ಲಿ ರಿಪಬ್ಲಿಕನ್ ಸೋಲು, ಟ್ರಂಪ್ ದುರ್ಬಲ ಅಧ್ಯಕ್ಷರಾಗುವುದು – ಭಾರತದ ಮೇಲೆ ಇವೆಲ್ಲದರ ಪರಿಣಾಮವೇನು?

ಟ್ರಂಪ್ ಅವರ ಮೊದಲ ಮತ್ತು ಎರಡನೇ ಅವಧಿಯಲ್ಲಿಯೂ, ಪ್ರಧಾನಿ ಮೋದಿ ಅತಿಯಾಗಿ ಅವರ ಜತೆ ಅತಿಯಾದ ಮತ್ತು ಅನವಶ್ಯಕ ‘ಸ್ನೇಹ’, ಓಲೈಕೆ, ‘ನಿಕಟತೆ’ಯನ್ನು ಪ್ರದರ್ಶಿಸಿದ್ದು, ಭಾರತಕ್ಕೆ ಯಾವುದೇ ಅನುಕೂಲ ಅಥವಾ ಪ್ರಯೋಜನ ಕೊಟ್ಟಿರಲಿಲ್ಲ. ಬಹುಶಃ ಅದರ ಉದ್ದೇಶವೂ ಅದಾಗಿರಲಿಲ್ಲ. ಇಬ್ಬರಿಗೂ (ಟ್ರಂಪ್ ಗೆ ಭಾರತೀಯ ಅಮೆರಿಕನ್ನರ ಮತ, ಮೋದಿ ಅವರ ‘ವಿಶ್ವಗುರು’ ಸ್ಥಾನಕ್ಕೆ ಪುರಾವೆಯಾಗಿ) ರಾಜಕೀಯ ಲಾಭವೇ ಅದರ ಉದ್ದೇಶವಾಗಿತ್ತು. ಆ ಉದ್ದೇಶವೂ ಬಹುಶಃ ಪೂರ್ಣವಾಗಿ ಸಾಧಿತವಾಗಲಿಲ್ಲ. ಟ್ರಂಪ್ ಎರಡನೇ ಅವಧಿಯಲ್ಲಂತೂ ಮೋದಿ ಮತ್ತು ಭಾರತಕ್ಕಂತೂ ಅವಮಾನ, ಅನ್ಯಾಯಗಳ ಸರಣಿಯನ್ನೇ ಹರಿಯಬಿಟ್ಟರು. ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಕದನವಿರಾಮಕ್ಕೆ ಬೆದರಿಕೆ ಹಾಕಿದೆ ಎಂಬ ಹೇಳಿಕೆ, ಭಾರೀ ಸುಂಕ ಹೇರಿಕೆ, ವಾಣಿಜ್ಯ ಒಪ್ಪಂದ, ಕ್ವಾಡ್ ಗೆ ನಿರ್ಲಕ್ಷ – ಇತ್ಯಾದಿ ಹಲವು ಉದಾಹರಣೆ ಕೊಡಬಹುದು.

ಈ ಚುನಾವಣೆಯಲ್ಲಿ ಭಾರತೀಯ ಅಮೆರಿಕನ್ನರು ಮುಕ್ಕಾಲು ಪಾಲು ಡೆಮೊಕ್ರಾಟಿಕ್ ಪಕ್ಷಕ್ಕೆ ಮತಹಾಕಿದ್ದು ಟ್ರಂಪ್ ನ್ನು ಇನ್ನಷ್ಟು ಕೆರಳಿಸಿ, ಟ್ರಂಪ್ ಭಾರತಕ್ಕೆ ಇನ್ನಷ್ಟು ಅವಮಾನ, ಅನ್ಯಾಯಗಳನ್ನು ಹರಿಯಬಿಡುವ ಸಾಧ್ಯತೆಯೇ ಹೆಚ್ಚು. ಇಷ್ಟು ಸಾಲದೆಂಬಂತೆ ಟ್ರಂಪ್ ಅವರನ್ನು ಓಲೈಸುವ ಭರದಲ್ಲಿ ಮೋದಿ ಮತ್ತು ಅವರ ಸರಕಾರದ ಸಚಿವರು, ಅಧಿಕಾರಿಗಳು ಕೆಲವು ಡೆಮೊಕ್ರಾಟಿಕ್ ರಾಜಕಾರಣಿ, ಅಧಿಕಾರಿಗಳ ಜತೆ ಅನಗತ್ಯ ಘರ್ಷಣೆ ಮಾಡಿದ್ದರು. ಡೆಮೊಕ್ರಾಟಿಕ್ ಪಕ್ಷ ಯು.ಎಸ್ ಕಾಂಗ್ರೆಸ್ ನ ಎರಡೂ ಸದನಗಳಲ್ಲಿ ಭಾರೀ ಬಹುಮತ ಸಾಧಿಸಿದ್ದು, ಆ ಪಕ್ಷ ಸಹ ಭಾರತದ ಸರಕಾರಕ್ಕೆ ‘ಬುದ್ಧಿ ಕಲಿಸುವ’ ಕ್ರಮ ಕೈಗೊಳ್ಳುವ ಸಾಧ್ಯತೆಯೇ ಹೆಚ್ಚು. ಉದಾಹರಣೆಗೆ ರಶ್ಯಾದ ತೈಲ ಖರೀದಿ ಮಾಡುವ ದೇಶಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವ ಕಾಯಿದೆ ಕಾಂಗ್ರೆಸ್ ನಲ್ಲಿ ಮಂಜೂರು ಆಗಿದ್ದು, ಅಧ್ಯಕ್ಷ ಟ್ರಂಪ್ ತಾತ್ಕಾಲಿಕವಾಗಿ ಅದರ ಜಾರಿ ತಡೆ ಹಿಡಿದಿದ್ದಾರೆ. ಡೆಮೊಕ್ರಾಟಿಕ್ ಬಹುಮತದ ಕಾಂಗ್ರೆಸ್ ಅದರ ಜಾರಿಗೆ ಪಟ್ಟು ಹಿಡಿಯಬಹುದು.

ಈಗಾಗಲೇ ಹೇಳಿದ ಹಾಗೆ ವಾಣಿಜ್ಯ ಒಪ್ಪಂದದಲ್ಲಿ ಯು.ಎಸ್ ಎಲ್ಲ ದೇಶಗಳೊಂದಿಗೆ ಕಟು ನೀತಿ ಮತ್ತು ತನ್ನ ಷರತ್ತುಗಳನ್ನು ಹೊರಿಸುವ ಸಾಧ್ಯತೆಯೇ ಹೆಚ್ಚು. ರಶ್ಯಾದಿಂದ ತೈಲ, ಅತ್ಯಾಧುನಿಕ ಶಸ್ತ್ರಾಸ್ತ್ರ, ಯುದ್ಧ ಉಪಕರಣಗಳ ಖರೀದಿಯ ಬಗ್ಗೆ ವಿವಾದವಿರುವುದರಿಂದ ಮತ್ತು ಬ್ರಿಕ್ಸ್ ನಲ್ಲಿ ಭಾರತದ ನಾಯಕತ್ವಗಳಿಂದಾಗಿ ಇದು ಇನ್ನಷ್ಟು ಕಗ್ಗಂಟಾಗುವ ಸಾಧ್ಯತೆಯೇ ಹೆಚ್ಚು.

ಇರಾನ್ ಮೇಲಿನ ಯುದ್ಧದಲ್ಲಿ, ಗಾಜಾ ನರಮೇಧದಲ್ಲಿ ಯು.ಎಸ್-ಇಸ್ರೇಲ್ ಎರಡಕ್ಕೂ ಕೆಲವೊಮ್ಮೆ ಮೌನದ ಮೂಲಕ, ಕೆಲವೊಮ್ಮೆ ನೇರವಾಗಿ ಬೆಂಬಲದ ಭಾರತದ ವಿದೇಶ ನೀತಿಯಿಂದ ಯಾವುದೇ ಪ್ರಯೋಜನವಾಗಿಲ್ಲ. ಬದಲಿಗೆ ಮೂರನೇ ಜಗತ್ತಿನ ಮತ್ತು ಮುಸ್ಲಿಂ ದೇಶಗಳಲ್ಲಿ ಭಾರತದ ಪ್ರಭಾವ ಕುಗ್ಗಿಸಿದೆ. ಅದರ ಪ್ರತಿಷ್ಟೆ ಕುಂದಿಸಿದೆ.

ರಶ್ಯಾದ ವಿರುದ್ಧ ಉಕ್ರೇನ್ ಬಳಸಿದಂತೆ, ಚೀನಾದ ವಿರುದ್ಧ ಭಾರತವನ್ನು ಪ್ರಾಕ್ಸಿ ಯುದ್ಧದಲ್ಲಿ ಬಳಸುವ ಯು.ಎಸ್ ಹಂಚಿಕೆಗೆ ನೆರವಾಗುವಂತೆ ಭಾರತದ ವಿದೇಶ ನೀತಿಯನ್ನು ನಿರ್ದೇಶಿಸಲಾಗಿದೆ. ಚೀನಾದ ಜತೆ ಸದ್ಯಕ್ಕೆ ಮಿಲಿಟರಿ ಸಂಘರ್ಷದ ಸಾಧ್ಯತೆ ಇರದಿರುವುದರಿಂದ, ಯು.ಎಸ್ ಗೆ ಭಾರತದ ವ್ಯೂಹಾತ್ಮಕ ಪ್ರಾಮುಖ್ಯತೆ ಕಡಿಮೆಯಾಗಿದೆ. ಭಾರತ, 1990ರ ದಶಕದಿಂದ ಬದಲಾದ ವಿದೇಶ ನೀತಿಯ ಫಲವಾಗಿ, ಮೂರನೇ ಜಗತ್ತಿನ ನಾಯಕನಾಗಿ ಸ್ವತಂತ್ರ ಸಾರ್ವಭೌಮ ದೇಶವಾಗಿ ಉಳಿಯದೆ ಇರುವುದರಿಂದ ಭಾರತದ ವಿದೇಶ ನೀತಿಯನ್ನು ಯು.ಎಸ್ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಲು ಒತ್ತಡ ಹಾಕಲಾಗುತ್ತಿದೆ.

ಇರಾನ್ ಯುದ್ಧ ಮತ್ತು ಮಧ್ಯಂತರ ಚುನಾವಣೆಗಳ ನಂತರ,  ಯು.ಎಸ್ ಮತ್ತು ಅಧ್ಯಕ್ಷ ಟ್ರಂಪ್ ದುರ್ಬಲವಾಗಿರುವುದು ನಿಜವಾದರೂ, ಭಾರತ ಸ್ವತಂತ್ರ ಸಾರ್ವಭೌಮ ಮತ್ತು ಮೂರನೇ ಜಗತ್ತಿನ ನಾಯಕತ್ವ ಮತ್ತೆ ಪಡೆಯುವ ವಿದೇಶ ನೀತಿ ಅಂಗೀಕರಿಸದೆ, ಅದರ ಪ್ರಯೋಜನ ಪಡೆಯಲು ಸಾಧ್ಯವಿಲ್ಲ.

*******************************************************

ಇದನ್ನೂ ನೋಡಿ : SIR vs SSR: ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಫಲಿತಾಂಶ ಬದಲಿಸುತ್ತಾ? ಅಕ್ರಮಗಳಿಗೆ ಬ್ರೇಕ್ ಹಾಕುತ್ತಾ

Please follow and like us:
Donate Janashakthi Media

Leave a Reply

Your email address will not be published. Required fields are marked *