ಬಿಲ್ಕಿಸ್ ಬಾನು ಪ್ರಕರಣ: ಇಬ್ಬರು ಅಪರಾಧಿಗಳಿಗೆ ಜಾಮೀನು ನೀಡಿದ್ದಕ್ಕೆ ಜನವಾದಿ ಮಹಿಳಾ ಸಂಘಟನೆ ಖಂಡನೆ

Please follow and like us:
ಶಿಕ್ಷೆ ಅಮಾನತು ನಿರ್ಧಾರ ನ್ಯಾಯದ ಹಾದಿಗೆ ಹಿನ್ನಡೆ | ಆದೇಶ ಪ್ರಶ್ನಿಸಿ ಕಾನೂನು ಹೋರಾಟ ಮುಂದುವರಿಸುವ ಬಿಲ್ಕಿಸ್ ಬಾನು ಅವರಿಗೆ ಬೆಂಬಲ
ಬೆಂಗಳೂರು: 2002ರ ಗುಜರಾತ್ ಕೋಮು ಹಿಂಸಾಚಾರದ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಅವರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದ ಸದಸ್ಯರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್‌ನ ಆದೇಶವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸಿದೆ. ಈ ನಿರ್ಧಾರವು ನ್ಯಾಯದ ಹಾದಿಗೆ ಗಂಭೀರ ಹಿನ್ನಡೆಯಾಗಿದ್ದು, ಮಹಿಳೆಯರ ಸುರಕ್ಷತೆ ಮತ್ತು ನ್ಯಾಯದ ಮೇಲಿನ ನಂಬಿಕೆಗೆ ಧಕ್ಕೆ ಉಂಟುಮಾಡುತ್ತದೆ ಎಂದು ಸಂಘಟನೆ ಆಕ್ಷೇಪಿಸಿದೆ.

ಬಿಪಿನ್ ಚಂದ್ರ ಕನೈಯಾಲಾಲ್ ಜೋಶಿ ಮತ್ತು ಪ್ರದೀಪ್ ರಾಮನ್‌ಲಾಲ್ ಮೋಧಿಯಾ ಎಂಬ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಅಕ್ಟೋಬರ್ 28ರಂದು ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ಪೀಠವು, ಇಬ್ಬರೂ 17 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿರುವುದು, ಅವರಲ್ಲಿ ಒಬ್ಬರಿಗೆ ತೀವ್ರ ದೈಹಿಕ ಅಂಗವೈಕಲ್ಯ ಇರುವುದು ಹಾಗೂ ಮೇಲ್ಮನವಿಯಲ್ಲಿ ಪರಿಶೀಲಿಸಬೇಕಾದ ಕಾನೂನು ಮತ್ತು ವಾಸ್ತವಿಕ ಅಂಶಗಳಿರುವುದನ್ನು ಪರಿಗಣಿಸಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದೆ. ವಿಚಾರಣಾ ನ್ಯಾಯಾಲಯ ವಿಧಿಸುವ ಷರತ್ತುಗಳಿಗೆ ಒಳಪಟ್ಟು ಬಿಡುಗಡೆ ಮಾಡುವಂತೆ ನ್ಯಾಯಾಲಯ ಸೂಚಿಸಿದೆ.

ಈ ಆದೇಶದ ಕುರಿತು ಪ್ರತಿಕ್ರಿಯಿಸಿರುವ ಜನವಾದಿ ಮಹಿಳಾ ಸಂಘಟನೆ, ಇಂತಹ ಗಂಭೀರ ಅಪರಾಧಗಳಲ್ಲಿ ಶಿಕ್ಷೆಗೊಳಗಾದವರಿಗೆ ದೀರ್ಘಕಾಲದ ಜೈಲು ವಾಸದ ಕಾರಣ ನೀಡಿ ಜಾಮೀನು ನೀಡಿರುವುದು ಆಘಾತಕಾರಿ ಎಂದು ಹೇಳಿದೆ. ಇಬ್ಬರೂ ಅಪರಾಧಿಗಳು ಪೆರೋಲ್ ಮತ್ತು ಫರ್ಲೋ ಮೂಲಕ ಈಗಾಗಲೇ 17 ತಿಂಗಳಿಗಿಂತ ಹೆಚ್ಚು ಕಾಲ ಜೈಲಿನಿಂದ ಹೊರಗಿದ್ದರು ಎಂಬುದನ್ನೂ ಸಂಘಟನೆ ಉಲ್ಲೇಖಿಸಿದೆ. ಬಿಲ್ಕಿಸ್ ಬಾನು ಅವರ ಅಭಿಪ್ರಾಯವನ್ನು ಆಲಿಸದೆ ಅಥವಾ ಅವರ ಪ್ರತಿಕ್ರಿಯೆ ಪಡೆಯದೆ ಆದೇಶ ನೀಡಿರುವುದು ಅವರಲ್ಲಿ ಮತ್ತಷ್ಟು ನೋವು, ಭಯ ಮತ್ತು ಅಭದ್ರತೆಯನ್ನು ಉಂಟುಮಾಡಿದೆ ಎಂದು ಹೇಳಿದೆ.

ನ್ಯಾಯಾಲಯ ಉಲ್ಲೇಖಿಸಿರುವ ಕಾರಣಗಳೂ ಸಮರ್ಪಕ ವಿವರಣೆಯನ್ನು ಹೊಂದಿಲ್ಲ ಎಂಬುದು ಸಂಘಟನೆಯ ಆಕ್ಷೇಪ. ಒಬ್ಬ ಅಪರಾಧಿಯ ದೈಹಿಕ ಅಂಗವೈಕಲ್ಯವು ಇಂತಹ ಪ್ರಕರಣದಲ್ಲಿ ಶಿಕ್ಷೆ ಅಮಾನತುಗೊಳಿಸಲು ಎಷ್ಟರಮಟ್ಟಿಗೆ ಆಧಾರವಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕಿತ್ತು. ಮತ್ತೊಬ್ಬ ಅಪರಾಧಿಯನ್ನು ಎಫ್‌ಐಆರ್‌ನಲ್ಲಿ ತಡವಾಗಿ ಸೇರಿಸಿದ್ದಕ್ಕೆ ಸಂಬಂಧಿಸಿದ ಅಂಶಗಳೂ ಶಿಕ್ಷೆ ಅಮಾನತಿಗೆ ಸಮರ್ಪಕ ಸಮರ್ಥನೆಯಾಗುವುದಿಲ್ಲ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ :‘ನನ್ನನ್ನು ವಿಚಾರಣೆಗೆ ಕರೆಯದೆ ಅತ್ಯಾಚಾರಿಗಳಿಗೆ ಜಾಮೀನು ಹೇಗೆ ಕೊಟ್ರಿ?’: ಸುಪ್ರೀಂ ವಿರುದ್ಧ ಬಿಲ್ಕಿಸ್ ಬಾನೊ ಆಕ್ರೋಶ! | Bilkis Bano Case

ಈ ಆದೇಶದಿಂದ ತಮಗೆ ನೋವು, ಆಘಾತ ಮತ್ತು ನಂಬಲಾಗದಂತಹ ಸ್ಥಿತಿ ಉಂಟಾಗಿದೆ ಎಂದು ಬಿಲ್ಕಿಸ್ ಬಾನು ಅವರು ವ್ಯಕ್ತಪಡಿಸಿರುವುದನ್ನು ಸಂಘಟನೆ ಸ್ಮರಿಸಿದೆ. ಈ ಹಿಂದೆ ಇದೇ ಸುಪ್ರೀಂ ಕೋರ್ಟ್, 11 ಅಪರಾಧಿಗಳಿಗೆ ಗುಜರಾತ್ ಸರ್ಕಾರ ನೀಡಿದ್ದ ಶಿಕ್ಷೆ ಮನ್ನಾ ನಿರ್ಧಾರವನ್ನು 2024ರ ಜನವರಿ 8ರಂದು ರದ್ದುಗೊಳಿಸಿತ್ತು. ಆ ಶಿಕ್ಷೆ ಮನ್ನಾ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವರಲ್ಲಿ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಸುಭಾಷಿಣಿ ಅಲಿ ಅವರೂ ಒಬ್ಬರಾಗಿದ್ದರು.

ಇಂತಹ ಕ್ರೂರ ಅಪರಾಧದಲ್ಲಿ ಶಿಕ್ಷೆಯನ್ನು ಅಮಾನತುಗೊಳಿಸಿರುವುದು ಅಪಾಯಕಾರಿ ಸಂದೇಶವನ್ನು ರವಾನಿಸುತ್ತದೆ. ಮಹಿಳೆಯರ ವಿರುದ್ಧ, ಅದರಲ್ಲೂ ಮುಸ್ಲಿಂ ಮಹಿಳೆಯರ ವಿರುದ್ಧ ಅಪರಾಧ ಎಸಗಿದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಭಾವನೆಗೆ ಇದು ಬಲ ನೀಡುವ ಅಪಾಯವಿದೆ ಎಂದು ಸಂಘಟನೆ ಆತಂಕ ವ್ಯಕ್ತಪಡಿಸಿದೆ. ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಮರ ವಿರುದ್ಧ ದ್ವೇಷ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಸಂಘಪರಿವಾರದ ಶಕ್ತಿಗಳಿಗೆ ಇಂತಹ ಬೆಳವಣಿಗೆಗಳು ಮತ್ತಷ್ಟು ಧೈರ್ಯ ತುಂಬಬಹುದು ಎಂದೂ ಹೇಳಿದೆ.

ಮಹಿಳೆಯರ ಮೇಲಿನ ಹಿಂಸಾಚಾರ ಮುಂದುವರಿದಿರುವ ಸಂದರ್ಭದಲ್ಲಿ, ಅತ್ಯಂತ ಕ್ರೂರ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿಯೂ ನ್ಯಾಯ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಸಂಘಟನೆ ಟೀಕಿಸಿದೆ. ಬಿಲ್ಕಿಸ್ ಬಾನು ಅವರಿಗೆ ನ್ಯಾಯ ದೊರಕಿಸುವುದು ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ವಿಷಯವಲ್ಲ; ಅದು ಎಲ್ಲ ಮಹಿಳೆಯರು ಮತ್ತು ನಾಗರಿಕರ ನ್ಯಾಯ, ಗೌರವ ಹಾಗೂ ಸುರಕ್ಷತೆಯ ಪ್ರಶ್ನೆಯಾಗಿದೆ ಎಂದು ಪ್ರತಿಪಾದಿಸಿದೆ.

ಸುಪ್ರೀಂ ಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಕಾನೂನು ಹೋರಾಟ ಮುಂದುವರಿಸುವ ಬಿಲ್ಕಿಸ್ ಬಾನು ಅವರ ನಿಲುವಿಗೆ ಸಂಪೂರ್ಣ ಬೆಂಬಲ ಮತ್ತು ಐಕ್ಯತೆಯನ್ನು ವ್ಯಕ್ತಪಡಿಸಿರುವ ಸಂಘಟನೆ, ನ್ಯಾಯಕ್ಕಾಗಿ ಅವರ ಹೋರಾಟದೊಂದಿಗೆ ನಿಲ್ಲುವುದಾಗಿ ತಿಳಿಸಿದೆ.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಚಂದ್ರಕುಮಾರಿ ಮತ್ತು ಪ್ರಧಾನ ಕಾರ್ಯದರ್ಶಿ ದೇವಿ ಅವರು ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ನೋಡಿ : SIR vs SSR: ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಫಲಿತಾಂಶ ಬದಲಿಸುತ್ತಾ? ಅಕ್ರಮಗಳಿಗೆ ಬ್ರೇಕ್ ಹಾಕುತ್ತಾ

Please follow and like us:
Donate Janashakthi Media

Leave a Reply

Your email address will not be published. Required fields are marked *