ಸಾರ್ವಜನಿಕ ಸಾರಿಗೆಯು ಸರ್ಕಾರದ ಮೂಲಭೂತ ಸೇವಾ ಕರ್ತವ್ಯವಾಗಿದೆ. ಮೆಟ್ರೋ ರೈಲನ್ನು ಕೇವಲ ವಾಣಿಜ್ಯ ಲಾಭ-ನಷ್ಟದ ದೃಷ್ಟಿಕೋನದಿಂದ ನೋಡಬಾರದು. ಮೆಟ್ರೋ ರೈಲು ವ್ಯವಸ್ಥೆಯನ್ನು ಸರ್ಕಾರವೇ ತನ್ನ ಸಂಪೂರ್ಣ ಬಂಡವಾಳದೊಂದಿಗೆ ನಿರ್ಮಾಣ ಮಾಡಬೇಕಿತ್ತು. ಸರ್ಕಾರಗಳು ತನ್ನ ಬಜೆಟ್ ನಲ್ಲಿ ಇದಕ್ಕಾಗಿ ಸಂಪೂರ್ಣ ಹಣ ಒದಗಿಸಬೇಕಿತ್ತು. ಇದನ್ನು ಮಾಡಿದ್ದರೆ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ಮೆಟ್ರೋ ಪ್ರಯಾಣ ಸೌಲಭ್ಯ ದೊರಕುತ್ತಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನವ-ಉದಾರೀಕರಣ ನೀತಿಗಳ ಪರಿಣಾಮವಾಗಿ, ಈ ಪಕ್ಷಗಳ ನೇತೃತ್ವದ ಸರ್ಕಾರಗಳು ತನ್ನ ಈ ಜವಾಬ್ಧಾರಿಯಿಂದ ನುಣುಚಿಕೊಳ್ಳುತಿವೆ. BMRCL ಗೆ ಎರಡೂ ಸರ್ಕಾರಗಳು ತಲಾ ಶೇ 20 ರಷ್ಟು ಹಣದ ನೆರವು ನೀಡಿವೆ. ಇದನ್ನೇ ಒಂದು ʼಯಶಸ್ಸುʼ ಎನ್ನುತ್ತಾ, ಅದರ ಶ್ರೇಯಸ್ಸು ತಮಗೇ ಸೇರಬೇಕು ಎನ್ನುತ್ತ, ಅದಕ್ಕಾಗಿ ಪೈಪೋಟಿ ನಡೆಸುತ್ತಿವೆ. ಕ್ರೆಡಿಟ್ʼ ವಾರ್
-ಸಿ.ಸಿದ್ದಯ್ಯ
ಬೆಂಗಳೂರು ನಗರದ ನಮ್ಮ ಮೆಟ್ರೋ (Namma Metro) ರೈಲು ಯೋಜನೆಯ (BMRCL) ʼಕ್ರೆಡಿಟ್ʼ (ಯಶಸ್ಸಿನ ಶ್ರೇಯಸ್ಸು) ಅನ್ನು ತಾವೇ ಪಡೆಯಲು ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಮತ್ತು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಗಳು ಮತ್ತು ಈ ಪಕ್ಷಗಲ ನಾಯಕರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಬೆಂಗಳೂರು ಮೆಟ್ರೋ ಯೋಜನೆಯ ವೆಚ್ಚದ ಶೇ. 84ರಷ್ಟನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ ಮತ್ತು ಕೇಂದ್ರ ಸರ್ಕಾರ ಕೇವಲ ಶೇ. 16ರಷ್ಟು ಮಾತ್ರ ನೀಡುತ್ತಿದೆ, ಒಟ್ಟು 77,000 ಕೋಟಿ ರೂ. ವೆಚ್ಚದಲ್ಲಿ ಸುಮಾರು 65,000 ಕೋಟಿ ರೂಪಾಯಿಯನ್ನು ಕರ್ನಾಟಕ ಸರ್ಕಾರವೇ ಭರಿಸುತ್ತಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ.
ನವೆಂಬರ್ 12ರಂದು ಪತ್ರಿಕಾಗೋಷ್ಠಿಯೊಂದರಲ್ಲಿ ರಾಜ್ಯ ಸರ್ಕಾರದ ಈ ವಾದವನ್ನು ತಳ್ಳಿಹಾಕಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು, ಕೇಂದ್ರ ಸರ್ಕಾರದ ಸಾರ್ವಭೌಮ ಖಾತರಿಯೊಂದಿಗೆ (sovereign guarantee) BMRCLಗೆ ನೀಡಲಾದ 28,000 ಕೋಟಿ ರೂ. ಸಾಲವನ್ನು, ರಾಜ್ಯ ಸರ್ಕಾರವು ತನ್ನದೇ ಕೊಡುಗೆ ಎಂದು ಹೇಳಿಕೊಂಡಿದೆ. ಆದರೆ, ವಾಸ್ತವವಾಗಿ ಇದನ್ನು ಕೇಂದ್ರ ಸರ್ಕಾರದ ಕೊಡುಗೆಯಲ್ಲಿ ತೋರಿಸಬೇಕಿತ್ತು ಎಂದಿದ್ದಾರೆ. (ಸಾಲಕ್ಕೆ ಖಾತರಿ (ಶ್ಯೂರಿಟಿ) ನೀಡುವುದೂ ಕೇಂದ್ರ ಸರ್ಕಾರದ ಕೊಡುಗೆ!!)
ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಸ್ಥೆಯ ಕಾರ್ಪೊರೇಟ್ ಮತ್ತು ಹಣಕಾಸು ರಚನೆಯ ಬಗ್ಗೆ ವಿವರಿಸಿದ ಬಿಜೆಪಿ ಸಂಸದ, BMRCL ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮಾನ ಜಂಟಿ ಉದ್ಯಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಎರಡೂ ಸರ್ಕಾರಗಳು ತಲಾ ಶೇ. 50ರಷ್ಟು ಪಾಲುದಾರಿಕೆಯನ್ನು ಹೊಂದಿವೆ. ಇದೇ ಕಂಪನಿಯ ಷೇರು ಹಂಚಿಕೆಯ ಮಾದರಿಯಾಗಿದೆ. ಕೇಂದ್ರ ಸರ್ಕಾರವು ಈಕ್ವಿಟಿ (ಬಂಡವಾಳ) ರೂಪದಲ್ಲಿ 9,164 ಕೋಟಿ ರೂಪಾಯಿಗಳನ್ನು ನೀಡಿದ್ದು, ರಾಜ್ಯ ಸರ್ಕಾರವೂ ಅಷ್ಟೇ ಮೊತ್ತವನ್ನು (9,164 ಕೋಟಿ ರೂ.) ಈಕ್ವಿಟಿಯಾಗಿ ನೀಡಿದೆ, ಇದಲ್ಲದೆ, ಹೊಸ ಯೋಜನೆಗಳಿಗೆ ಹಣಕಾಸು ಒದಗಿಸುವ ಪ್ರಮುಖ ಮೂಲವೆಂದರೆ ಅಂತರರಾಷ್ಟ್ರೀಯ ಸಾಲಗಳು” ಎಂದು ಹೇಳಿದರು.
ಎರಡೂ ಪಕ್ಷಗಳ ಜನವಿರೋಧಿ ನೀತಿಗಳು ಮತ್ತಷ್ಟು ಬಯಲು
ಈ ಕ್ರೆಡಿಟ್ ವಾರ್ ಮೂಲಕ, ಜನವಿರೋಧಿ ನವ-ಉದಾರೀಕರಣ ನೀತಿಗಳನ್ನು ಜಾರಿಗೆ ತರುವಲ್ಲಿ ಈ ಎರಡೂ ಪಕ್ಷಗಳು ಪೈಪೋಟಿ ನಡೆಸುತ್ತಿವೆ ಎಂಬುದನ್ನು ಈ ಪಕ್ಷಗಳ ನಾಯಕರು ಮತ್ತೊಮ್ಮೆ ಜನರ ಮುಂದೆ ತೆರೆದಿಡುತ್ತಿದ್ದಾರೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಮೆಟ್ರೋ ರೈಲನ್ನು ಕೇವಲ ವಾಣಿಜ್ಯ ಲಾಭ-ನಷ್ಟದ ದೃಷ್ಟಿಕೋನದಿಂದ ನೋಡಬಾರದು. ಸಾರ್ವಜನಿಕ ಸಾರಿಗೆಯು ಸರ್ಕಾರದ ಮೂಲಭೂತ ಸೇವಾ ಕರ್ತವ್ಯವಾಗಿದೆ. ಮೆಟ್ರೋ ರೈಲು ವ್ಯವಸ್ಥೆಯನ್ನು ಸರ್ಕಾರವೇ ತನ್ನ ಸಂಪೂರ್ಣ ಬಂಡವಾಳದೊಂದಿಗೆ ನಿರ್ಮಾಣ ಮಾಡಬೇಕಿತ್ತು. ಸರ್ಕಾರಗಳು ತನ್ನ ಬಜೆಟ್ ನಲ್ಲಿ ಇದಕ್ಕಾಗಿ ಸಂಪೂರ್ಣ ಹಣ ಮೀಸಲಿಡಬೇಕಿತ್ತು. ಇದನ್ನು ಮಾಡಿದ್ದರೆ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ಮೆಟ್ರೋ ಪ್ರಯಾಣ ಮಾಡಬಹುದಿತ್ತು.
ಆದರೆ, ಸರ್ಕಾರ ಮಾಡಬೇಕಾದ ಸಾರಿಗೆ ವ್ಯವಸ್ಥೆಯನ್ನು ವಾಣಿಜ್ಯ ಲಾಭ-ನಷ್ಟದ ದೃಷ್ಟಿಕೋನದಿಂದ ಮಾಡಿರುವುದನ್ನೇ ಜನರಿಗಾಗಿ ತಾವೇ ಮಾಡಿದ ದೊಡ್ಡ ಸಾಧನೆ ಎಂಬಂತೆ ಈ ಎರಡೂ ಪಕ್ಷಗಳ ನಾಯಕರು ಹೆಮ್ಮೆಯಿಂದ ಹೇಳಿಕೊಳ್ಳತೊಡಗಿದ್ದಾರೆ. ಜಗತ್ತಿನ ಬಹುತೇಕ ದೊಡ್ಡ ನಗರಗಳ ಮೆಟ್ರೋ ವ್ಯವಸ್ಥೆಗಳು ಸರ್ಕಾರದ ಅನುದಾನ ಅಥವಾ ಸಬ್ಸಿಡಿಯಿಂದಲೇ ನಡೆಯುತ್ತವೆ.
ನಿಗಮಗಳ ರಚನೆ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದು
ನಿಗಮಗಳನ್ನು ರಚಿಸುವುದು, ಯೋಜನೆಗಳಿಗೆ ಅವಶ್ಯಕವಾದ ಬಂಡವಾಳಕ್ಕೆ ಸರ್ಕಾರಗಳೇ ಒಂದಷ್ಟು ಹಣಕಾಸಿನ ನೆರವು ನೀಡಿ, ಇನ್ನೂ ಅವಶ್ಯಕವಾದ ಬಂಡವಾಳವನ್ನು ಸ್ವದೇಶಿ ಮತ್ತು ವಿದೇಶಿ ಬ್ಯಾಂಕುಗಳ ಮೂಲಕ ಸಾಲದ ರೂಪದಲ್ಲಿ ಹಣ ಪಡೆದು ಮೂಲಭೂತ ಸೌಕರ್ಯಗಳ ನಿರ್ಮಾಣ ಮಾಡುವಂತೆ ನೋಡಿಕೊಳ್ಳುವುದು, ಇದರ ಜವಾಬ್ದಾರಿಯನ್ನು ನಿಗಮಗಳಿಗೆ ವಹಿಸಿ, ಅದು ನಿಗದಿಪಡಿಸುವ ಪ್ರಯಾಣ ದರ ಹೆಚ್ಚಳ ಮತ್ತು ಅದರ ವೈಫಲ್ಯಗಳಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ ಎಂದು ನುಣುಚಿಕೊಳ್ಳುವುದು. ಇದು ಇಂದು ನಮ್ಮನ್ನು ಆಳುವವರು ಅನುಸರಿಸುತ್ತಿರುವ ನವ-ಉದಾರೀಕರಣ ನೀತಿಗಳಾಗಿವೆ.
ಮೆಟ್ರೋ ಸೇವೆಗಳು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (MoHUA) ವ್ಯಾಪ್ತಿಗೆ ಬರುತ್ತವೆ. 2014ರಲ್ಲಿ ದೇಶದ ಐದು ನಗರಗಳಲ್ಲಿ ಕೇವಲ 248 ಕಿ.ಮೀ. ಉದ್ದದ ಮೆಟ್ರೋ ಮಾರ್ಗಗಳಿದ್ದವು; ಆದರೆ ನವೆಂಬರ್ 5, 2026ರ ವೇಳೆಗೆ 26 ನಗರಗಳಲ್ಲಿ ಸುಮಾರು 1,127.8 ಕಿ.ಮೀ. ಉದ್ದದ ಮೆಟ್ರೋ ಮಾರ್ಗಗಳಿವೆ. ಸುಮಾರು 1000 ಕಿಮೀ ನಿರ್ಮಾಣದ ಹಂತದಲ್ಲಿದೆ.
21 ನಗರಗಳು ತಮ್ಮದೇ ಆದ ಮೆಟ್ರೋ ವ್ಯವಸ್ಥೆಯನ್ನು ಹೊಂದಿವೆ: ದೆಹಲಿ, ನೋಯ್ಡಾ, ಗುರುಗ್ರಾಮ್, ಮುಂಬೈ, ನವಿ ಮುಂಬೈ, ಬೆಂಗಳೂರು, ಕೋಲ್ಕತ್ತಾ, ಹೈದರಾಬಾದ್, ಅಹಮದಾಬಾದ್, ಚೆನ್ನೈ, ನಾಗ್ಪುರ, ಪುಣೆ, ಕೊಚ್ಚಿ, ಮೀರತ್, ಲಕ್ನೋ, ಇಂದೋರ್, ಕಾನ್ಪುರ, ಜೈಪುರ, ಭೋಪಾಲ್, ಪಾಟ್ನಾ ಮತ್ತು ಆಗ್ರಾ.
ಬೆಂಗಳೂರು ಮೆಟ್ರೋ 2011ರಿಂದ ಕಾರ್ಯಾಚರಣೆ ನಡೆಸುತ್ತಿದೆ. ಪೂರ್ವ-ಪಶ್ಚಿಮ ಕಾರಿಡಾರ್ 43.49 ಕಿಮೀ: ಪೂರ್ವದಲ್ಲಿ ವೈಟ್ಫೀಲ್ಡ್ ಮೆಟ್ರೋ ನಿಲ್ದಾಣದಿಂದ ಪ್ರಾರಂಭವಾಗಿ ಪಶ್ಚಿಮದಲ್ಲಿ ಚಲ್ಲಘಟ್ಟ ಟರ್ಮಿನಲ್ನಲ್ಲಿ ಕೊನೆಗೊಳ್ಳುತ್ತದೆ. ಉತ್ತರ-ದಕ್ಷಿಣ ಕಾರಿಡಾರ್ 33.5 ಕಿಮೀ ಉತ್ತರದಲ್ಲಿ ಮಾದಾವರದಲ್ಲಿ ಪ್ರಾರಂಭವಾಗಿ ದಕ್ಷಿಣದಲ್ಲಿ ಸಿಲ್ಕ್ ಇನ್ಸ್ಟಿಟ್ಯೂಟ್ ನಲ್ಲಿ ಕೊನೆಗೊಳ್ಳುತ್ತದೆ. ಹಳದಿ ಮಾರ್ಗ, 19.75 ಕಿ.ಮೀ. ಹೊಸ ಮಾರ್ಗವು ಆರ್ವಿ ರಸ್ತೆಯಲ್ಲಿ ಪ್ರಾರಂಭವಾಗಿ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಲ್ಲಿ ಕೊನೆಗೊಳ್ಳುತ್ತದೆ. ಹಳದಿ ಮಾರ್ಗವು ಸ್ಟ್ಯಾಂಡರ್ಡ್ ಗೇಜ್ ನಲ್ಲಿ 750V DC ಥರ್ಡ್ ರೈಲ್ ಟ್ರಾಕ್ಷನ್ ನೊಂದಿಗೆ ಕಾರ್ಯಾರಂಭ ಮಾಡಿದ ಭಾರತದ ಮೊದಲ ಮೆಟ್ರೋ ರೈಲು ಯೋಜನೆಯಾಗಿದೆ. ‘ಪಿಂಕ್ ಲೈನ್’ ನ ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ ಮಾರ್ಗ 2026ರ ನವೆಂಬರ್ 13ರಂದು ಉದ್ಘಾಟನೆಯಾಗಲಿದೆ. ಇದೂ ಸೇರಿದಂತೆ ಪ್ರಸ್ತುತ (ನವೆಂಬರ್ 2026) 104 ಕಿ.ಮೀ. ಮಾರ್ಗದಲ್ಲಿ ಮೆಟ್ರೋ ರೈಲುಗಳು ಕಾರ್ಯನಿರ್ವಹಿಸುತ್ತದೆ.
ಸಾಲದ ಮೇಲಿನ ಬಡ್ಡಿಯ ಹೊರೆಯೂ ಪ್ರಯಾಣಿಕರ ಮೇಲೆ
ಬೆಂಗಳೂರು ನಗರದಲ್ಲಿ ಮೆಟ್ರೋ ರೈಲು ಯೋಜನೆಯ ಅನುಷ್ಠಾನ ಮತ್ತು ಕಾರ್ಯಾಚರಣೆಯ ಜವಾಬ್ದಾರಿಯನ್ನು ಬಿಎಂಆರ್ಸಿಎಲ್ ಗೆ ವಹಿಸಲಾಗಿದೆ. ಈ ನಿಗಮಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರಿಸುಮಾರು ತಲಾ ಶೇ. 20ರಷ್ಟು ಅನುದಾನ ಕೊಡುತ್ತವೆ. ಉಳಿದ ಶೇ. 60ರಷ್ಟು ಹಣವನ್ನು ಸಾಲದ ರೂಪದಲ್ಲಿ ಪಡೆಯಲಾಗುತ್ತದೆ. ಈ ಯೋಜನೆಯ ಮೊದಲ ಹಂತದ ವೆಚ್ಚ 11,609 ಕೋಟಿ ರೂಗಳು. ಹಂತ 2 ರ ಅಂದಾಜು ವೆಚ್ಚವನ್ನು ಈ ಹಿಂದೆ 30,695 ಕೋಟಿ ರೂ. ಎಂದು ನಿಗದಿಪಡಿಸಲಾಗಿತ್ತು, ನಂತರ ಅದನ್ನು 40,614 ಕೋಟಿ ರೂ.ಗೆ ಪರಿಷ್ಕರಿಸಲಾಯಿತು. 3ನೇ ಹಂತದ 44.65 ಕಿಮೀ ಉದ್ದದ ಯೋಜನೆಯ ಪೂರ್ಣಗೊಳಿಸುವ ಒಟ್ಟು ವೆಚ್ಚ ರೂ.15,611 ಕೋಟಿ ಎಂದು ಅಂದಾಜಿಸಲಾಗಿತ್ತು.
ಮೆಟ್ರೋ ಕಾರ್ಯಾಚರಣೆಯ ದೈನಂದಿನ ವೆಚ್ಚ, ಸಿಬ್ಬಂದಿಗಳು ಮತ್ತು ಅಧಿಕಾರಿಗಳ ವೇತನಗಳ ವೆಚ್ಚಗಳ ಜೊತೆಗೆ, ಈ ಸಾಲದ ಮೇಲಿನ ಬಡ್ಡಿ, ಸಾಲದ ಕಂತು ಎಲ್ಲವನ್ನು ಪ್ರಯಾಣಿಕರ ಟಿಕೆಟ್ ದರದ ಮೇಲೆ ಹಾಕಲಾಗುತ್ತದೆ. ಯೋಜನೆಗೆ ಮಾಡಿದ ಸಾಲ ತೀರಿದ ನಂತರ ಮೆಟ್ರೋ ಪ್ರಯಾಣ ದರ ಕಡಿಮೆಯಾಗುತ್ತದೆಯೇ ಎಂದರೆ, ಖಂಡಿತಾ ಹಾಗೆ ಮಾಡುವುದಿಲ್ಲ. ಟೋಲ್ ರಸ್ತೆಗಳಲ್ಲಿ ಇದನ್ನು ಈಗಾಗಲೇ ಕಂಡಿದ್ದೇವೆ. Build, operate, transfer (BOT)) ಆಧಾರದ ಮೇಲೆ ನಿರ್ಮಾಣಗೊಂಡು, ನಿಗದಿತ ಅವಧಿ ಮುಗಿದು ವರ್ಷಗಳೇ ಕಳೆದರೂ ಟೋಲ್ ಸಂಗ್ರಹ ಯಾವ ಹೆದ್ದಾರಿಯಲ್ಲೂ ನಿಂತಿಲ್ಲ. ಕ್ರೆಡಿಟ್ʼ ವಾರ್
ಇದನ್ನೂ ಓದಿ : ಬಿಜೆಪಿ, RSS ಬೆಂಬಲಿಗರ ಮನಸ್ಸಲ್ಲಿ ಭಯ, ದ್ವೇಷ ತುಂಬಿದೆ: ಪ್ರೀತಿಸಲು ಕಲಿಯಿರಿ ಎಂದು ರಾಹುಲ್ ಟಾಂಗ್ | Rahul Shiva Parvati Post
ಸರ್ಕಾರವೇ ಸಂಪೂರ್ಣ ಹೂಡಿಕೆ ಮಾಡಬೇಕಿತ್ತು
ಬೆಂಗಳೂರು ಸೇರಿದಂತೆ ದೊಡ್ಡ ನಗರಗಳ ಸಾರಿಗೆ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗೆ ಅನುಗುಣವಾಗಿ ರಸ್ತೆಗಳು ವಿಸ್ತಾರ ಗೊಳ್ಳುತ್ತಿಲ್ಲ. ರಸ್ತೆಗಳು ವಾಹನಗಳಿಂದ ಕಿಕ್ಕಿರಿದು ತುಂಬಿರುತ್ತವೆ. ವಿಪರೀತ ಸಂಚಾರ ದಟ್ಟಣೆಯಿಂದ ನಗರದ ನಿವಾಸಿಗಳು ಹೈರಾಣಾಗಿದ್ದಾರೆ. ತಮ್ಮ ಮನೆಯಿಂದ ಕೆಲಸದ ನಿಗದಿತ ಸ್ಥಳಕೆ ಹೋಗಿ ಬರಲು ದಿನದ ಬಹಳಷ್ಟು ಸಮಯ ರಸ್ತೆ ಸಂಚಾರದಲ್ಲೇ ಕಳೆಯಬೇಕಾದ ಅನಿವಾರ್ಯತೆ ಉಂಟಾಗಿದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೊಸದಾಗಿ ಮೇಲ್ಸೇತುವೆಗಳ ನಿರ್ಮಾಣ, ಈಗಿರುವ ರಸ್ತೆಗಳನ್ನು ಒಂದಷ್ಟು ವಿಸ್ತರಿಸುವ ಪ್ರಯತ್ನದಿಂದ ಸಂಚಾರ ದಟ್ಟಣೆ ನಿವಾರಣೆ ಆಗುತ್ತಿಲ್ಲ.
ಇದಕ್ಕೆ ಪರ್ಯಾಯ ಸಾರಿಗೆ ವ್ಯವಸ್ಥೆಯಾಗಿ ಬಂದದ್ದೇ ಮೆಟ್ರೋ ರೈಲು. ಇದು ಬೆಂಗಳೂರಿಗರಿಗೆ ಕೈಗೆಟಕುವ ವೆಚ್ಚದಲ್ಲಿ ಅನುಕೂಲಕರ ಪ್ರಯಾಣ ಸೌಲಭ್ಯ ಒದಗಿಸುವ ಉದ್ದೇಶ ಹೊಂದಿದೆ. ಇದರಿಂದ ಲಕ್ಷಾಂತರ ಜನರ ಪ್ರಯಾಣಕ್ಕೆ ಅನುಕೂಲಕರವಾಗಿದೆ. ದಿನವೊಂದಕ್ಕೆ ಸರಾಸರಿ 7.5 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸುತ್ತಿದ್ದಾರೆ. 2024-25ರಲ್ಲಿ ಒಟ್ಟು ಆದಾಯವು ₹1,190 ಕೋಟಿ ದಾಟಿದೆ.
ಈ ರೈಲು ವ್ಯವಸ್ಥೆಯನ್ನು ಸರ್ಕಾರವೇ ತನ್ನ ಸಂಪೂರ್ಣ ಬಂಡವಾಳದೊಂದಿಗೆ ನಿರ್ಮಾಣ ಮಾಡಬೇಕಿತ್ತು. ಸರ್ಕಾರಗಳು ತನ್ನ ಬಜೆಟ್ ನಲ್ಲಿ ಇದಕ್ಕಾಗಿ ಹಣ ಮೀಸಲಿಡಬೇಕಿತ್ತು. ಬೆಟ್ಟ ಗುಡ್ಡಗಳ ನಡುವೆಯೂ, ಸಮುದ್ರದ ನಡುವೆಯೂ ರೈಲು ಮಾರ್ಗಗಳನ್ನು ನಿರ್ಮಿಸಿ, ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಪ್ರಯಾಣ ಸೌಲಭ್ಯ ನೀಡಬಹುದಾದರೆ, ನಗರದ ಮೆಟ್ರೋ ರೈಲು ಯೋಜನೆಯಲ್ಲಿ ಇದು ಏಕೆ ಸಾಧ್ಯವಿಲ್ಲ? ಸಾರ್ವಜನಿಕರಿಗೆ ಸುಲಭ ದರದಲ್ಲಿ, ಸುರಕ್ಷಿತವಾದ ಮತ್ತು ಸುಖಕರ ಪ್ರಯಾಣಕ್ಕೆ ಪೂರಕವಾಗಿ ಸಾರಿಗೆ ಸೌಲಭ್ಯ ಒದಗಿಸುವುದು ಸರ್ಕಾರದ ಜವಾಬ್ಧಾರಿ ಅಲ್ಲವೇ? ಇಂತಹ ಪ್ರಶ್ನೆಗಳನ್ನು ಪ್ರಜೆಗಳಾದ ನಾವು ಆಳುವವರಿಗೆ ಕೇಳಬೇಕಿದೆ.
ಸರ್ಕಾರಕ್ಕೆ ಬಂಡವಾಳದ ಕೊರತೆಯೇ?
ಸರ್ಕಾರಗಳು ತನ್ನ ಬಜೆಟ್ ನಲ್ಲಿ ಇದಕ್ಕಾಗಿ ಸಂಪೂರ್ಣ ಹಣ ಒದಗಿಸಬೇಕಿತ್ತು ಮತ್ತು ಅದು ಸಾರ್ವಜನಿಕ ಕ್ಷೇತ್ರದಲ್ಲಿ ಇರಬೇಕಿತ್ತು ಎಂದು ಹೇಳಿದರೆ, ಇಷ್ಟೊಂದು ಹಣ ಸರ್ಕಾರದ ಬಳಿ ಇದೆಯೇ? ಎಂಬ ಪ್ರಶ್ನೆ ಕೇಳುವವರೂ ಇದ್ದಾರೆ. 2014-15ನೇ ಹಣಕಾಸು ವರ್ಷದಿಂದ 2025-26ರವರೆಗೆ ಅಂದರೆ, ಕಳೆದ 12 ವರ್ಷಗಳಲ್ಲಿ ಭಾರತದ ಬ್ಯಾಂಕ್ಗಳು ಒಟ್ಟು ಸುಮಾರು ರೂ. 17.63 ಲಕ್ಷ ಕೋಟಿಗೂ ಅಧಿಕ ಮೌಲ್ಯದ ವಸೂಲಾಗದ ಸಾಲಗಳನ್ನು (NPA) ರೈಟ್-ಆಫ್ (Write-off) ಮಾಡಿವೆ. ಇದರಲ್ಲಿ ದೊಡ್ಡ ಕಾರ್ಪೊರೇಟ್ ಮತ್ತು ಸೇವಾ ವಲಯದ ಸಾಲಗಳ ಪಾಲು ರೂ. 9.95 ಲಕ್ಷ ಕೋಟಿ ಆಗಿದೆ ಎಂದು ಸಂಸತ್ತಿನಲ್ಲಿ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ಸೆಪ್ಟೆಂಬರ್ 2019 ರಲ್ಲಿ, ಮೋದಿ ಸರ್ಕಾರವು ಆಗಿನ ಅಸ್ತಿತ್ವದಲ್ಲಿರುವ ಕಂಪನಿಗಳಿಗೆ ಮೂಲ ಕಾರ್ಪೊರೇಟ್ ತೆರಿಗೆಯನ್ನು ಶೇ. 30 ರಿಂದ 22 ಕ್ಕೆ ಮತ್ತು ಅಕ್ಟೋಬರ್ 1, 2019 ರ ನಂತರ ಸಂಘಟಿತವಾದ ಹೊಸ ಉತ್ಪಾದನಾ ಸಂಸ್ಥೆಗಳಿಗೆ ಶೇ. 25ರಿಂದ 15ಕ್ಕೆ ಕಡಿತಗೊಳಿಸಿತು. ಇದರಿಂದಾಗಿ ಸರ್ಕಾರಕ್ಕೆ ಬರುವ ಆದಾಯದಲ್ಲಿ ಪ್ರತಿ ವರ್ಷವೂ ಒಂದು ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಕಡಿತವಾಗುತ್ತಿದೆ. ನವೋದ್ಯಮ ಹೆಸರಿನಲ್ಲಿ, ಉದ್ಯಮಗಳಿಗೆ ಪ್ರೋತ್ಸಾಹದ ಹೆಸರಿನಲ್ಲಿ ಪ್ರತಿ ವರ್ಷವೂ ಲಕ್ಷಾಂತರ ಕೋಟಿ ಅನುದಾನ ನೀಡಲಾಗುತ್ತಿದೆ. ಮತ್ತೊಂದಡೆ, ಆದಾಯದ ಕೊರತೆ ತುಂಬಿಸಿಕೊಳ್ಳಲು ಸರ್ಕಾರವು ಜನಸಾಮಾನ್ಯರ ಮೇಲೆ ಪರೋಕ್ಷ ತೆರಿಗೆ ಹೆಚ್ಚಳ ಮಾಡುತ್ತಿದೆ.
ಈ ರೀತಿ ಉದ್ಯಮಿಗಳಿಗೆ ಲಕ್ಷಾಂತರ ಕೋಟಿ ಕೊಡುಗೆ ನೀಡುವ ಹಣವನ್ನೇ ಮೂಲಭೂತ ಸೌಲಭ್ಯಗಳ ನಿರ್ಮಾಣಕ್ಕೆ, ದೇಶದ ಅಭಿವೃದ್ದಿಗೆ ಬಳಸಿಕೊಳ್ಳಬಹುದು. ಆದರೆ, ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಎಂಬ ಎಲ್ ಪಿ ಜಿ ನೀತಿಗಳನ್ನು ಒಪ್ಪಿಕೊಂಡಿರುವ ಆಳುವ ಪಕ್ಷಗಳಿಗೆ ಇದೆಲ್ಲವೂ ಬೇಡವಾಗಿದೆ. ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಮುಕ್ತ ಆರ್ಥಿಕ ನೀತಿಗಳೇ ಇದಕ್ಕೆ ಕಾರಣ. ದೇಶದ ಪ್ರಜೆಗಳಿಗೆ ಉಚಿತವಾಗಿ ಅಥವಾ ಜನಸಾಮಾನ್ಯರ ಕೈಗೆಟುವಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಪ್ರಭುತ್ವದ ಕರ್ತವ್ಯ. ಸಾರ್ವಜನಿಕರಿಗೆ ಸುಲಭ ದರದಲ್ಲಿ, ಸುರಕ್ಷಿತವಾದ ಮತ್ತು ಸುಖಕರ ಪ್ರಯಾಣಕ್ಕೆ ಪೂರಕವಾಗಿ ಸಾರಿಗೆ ಸೌಲಭ್ಯ ಒದಗಿಸುವುದು ಸರ್ಕಾರದ ಜವಾಬ್ಧಾರಿ ಅಲ್ಲವೇ? ಆಳುವವರು ಇಂತಹ ಜವಾಬ್ಧಾರಿಯಿಂದ ಪ್ರಭುತ್ವ ನುಣಿಚಿಕೊಳ್ಳಲು ಹೊರಟಿದ್ದಾರೆ. ನವ ಉದಾರವಾದಿ ನೀತಿಗಳ ವಿರುದ್ದ ದ್ವನಿ ಎತ್ತದೆ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲಾರದು. ಕ್ರೆಡಿಟ್ʼ ವಾರ್
ಇದನ್ನೂ ನೋಡಿ: ಋತ್ವಿಕ್ ಘಟಕ್ ಉಪನ್ಯಾಸ -5 | ಮೇಘೆ ಡಾಕಾ ತಾರಾ – ಮುರಳಿ ಕೃಷ್ಣ ಎಂ.ಎಸ್
