ಮಧ್ಯರಾತ್ರಿ ಪುಣೆಯಲ್ಲಿ ಭಾರೀ ಅಗ್ನಿ ದುರಂತ: ಧಗಧಗನೆ ಹೊತ್ತಿ ಉರಿದ ಟಿಂಬರ್ ಮಾರ್ಕೆಟ್! | Pune Fire Accident

Please follow and like us:
ಪುಣೆ: ಮಹಾರಾಷ್ಟ್ರದ ಪುಣೆಯ ಟಿಂಬರ್ ಮಾರ್ಕೆಟ್‌ನಲ್ಲಿ ನಸುಕಿನ ಜಾವ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬೆಳಗಿನ ಜಾವ ಸುಮಾರು 2.05ಕ್ಕೆ ಜೈ ವಲ್ಲಭ್ ಶಾಲೆಯ ಸಮೀಪ ಮರದ ಸಾಮಗ್ರಿಗಳ ವ್ಯಾಪಾರ ನಡೆಸುವ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್, ಈವರೆಗೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.

ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಅಗ್ನಿಶಾಮಕ ದಳದ 27 ವಾಹನಗಳನ್ನು ಸ್ಥಳಕ್ಕೆ ಕರೆಸಲಾಗಿತ್ತು. ಪುಣೆ ಅಗ್ನಿಶಾಮಕ ದಳದ 24, ಪುಣೆ ಕಂಟೋನ್ಮೆಂಟ್‌ನ ಒಂದು ಹಾಗೂ ಪುಣೆ ಮೆಟ್ರೋಪಾಲಿಟನ್ ರೀಜನ್ ಡೆವಲಪ್‌ಮೆಂಟ್ ಅಥಾರಿಟಿ (PMRDA)ಯ ಎರಡು ವಾಹನಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಸುಮಾರು 150 ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.

ಸುತ್ತಮುತ್ತಲಿನ ವಸತಿ ಪ್ರದೇಶಗಳಿಗೆ ಬೆಂಕಿ ಹರಡುವುದನ್ನು ತಡೆಯಲು ನಾಲ್ಕೂ ದಿಕ್ಕುಗಳಿಂದ ಕಾರ್ಯಾಚರಣೆ ನಡೆಸಲಾಯಿತು. ಸತತ ಎರಡು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಸದ್ಯ ಸ್ಥಳದಲ್ಲಿ ತಂಪುಗೊಳಿಸುವ ಕಾರ್ಯ (Cooling Operation) ಮುಂದುವರಿದಿದೆ. ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ: ಐಟಿ ಕಂಪನಿಗಳೇ ಎಚ್ಚರ! ಕನ್ನಡಿಗರಿಗೆ ಎಷ್ಟು ಉದ್ಯೋಗ ಕೊಟ್ಟಿದ್ದೀರಿ? ರಾಜ್ಯಾದ್ಯಂತ ಕರವೇ ಅಭಿಯಾನ | Karave Jobs Campaign

ಕಲಂಬೋಲಿಯಲ್ಲಿ ಸ್ಫೋಟ

ಇದೇ ವೇಳೆ, ಇತ್ತೀಚೆಗೆ ನವಿ ಮುಂಬೈನ ಕಲಂಬೋಲಿ ಸ್ಟೀಲ್ ಮಾರ್ಕೆಟ್‌ನಲ್ಲಿರುವ ಗ್ಯಾರೇಜ್‌ ಕಮ್‌ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡವೂ ಆತಂಕ ಮೂಡಿಸಿತ್ತು. ಶನಿವಾರ ರಾತ್ರಿ ಸುಮಾರು 10.30ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಥಿನ್ನರ್ ತುಂಬಿದ ಹಲವು ಡ್ರಮ್‌ಗಳು ಸ್ಫೋಟಗೊಂಡಿದ್ದರಿಂದ ಭಾರೀ ಅವಘಡ ಸಂಭವಿಸಿತ್ತು ಎಂದು ಉಪ ಅಗ್ನಿಶಾಮಕ ಅಧಿಕಾರಿ ಮನೀಶ್ ಬ್ರಹ್ಮಣ್ಕರ್ ತಿಳಿಸಿದ್ದಾರೆ.

ಸ್ಫೋಟದ ವೇಳೆ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದ ಅಗ್ನಿಶಾಮಕ ಸಿಬ್ಬಂದಿಯೊಬ್ಬರಿಗೆ ಶೇ.5ರಿಂದ 6ರಷ್ಟು ಸುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಗೋದಾಮಿನ ಮಾಲೀಕರು ನಾಪತ್ತೆಯಾಗಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಾಥಮಿಕ ಪರಿಶೀಲನೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ನೋಡಿ: ಅರಣ್ಯ, ಭೂಮಿ, ಹಕ್ಕುಗಳಿಗಾಗಿ ಆದಿವಾಸಿಗಳ ರಾಜ್ಯ ಸಮ್ಮೇಳನ | ಅಕ್ಟೋಬರ್‌ 25, 26 Janashakthi Media

 

 

Please follow and like us:
Donate Janashakthi Media

Leave a Reply

Your email address will not be published. Required fields are marked *