ಕೇರಳದ ವೈದ್ಯಕೀಯ ತ್ಯಾಜ್ಯ ಮತ್ತೆ ತಮಿಳುನಾಡಿನಲ್ಲಿ ಪತ್ತೆ: ಕೇರಳದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯಲ್ಲಿನ ಲೋಪಗಳೇನು? | Kerala medical waste

Please follow and like us:
Kerala medical waste: ಕೇರಳದಿಂದ ಬಂದಿರಬಹುದು ಎಂದು ಶಂಕಿಸಲಾದ ಆಸ್ಪತ್ರೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ತಮಿಳುನಾಡಿನ ತೆಂಕಾಸಿ ಜಿಲ್ಲೆಯಲ್ಲಿ ಅಕ್ರಮವಾಗಿ ಸುರಿದು ಸುಟ್ಟಿರುವ ಘಟನೆ ಮತ್ತೆ ಕೇರಳದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಮುನ್ನೆಲೆಗೆ ತಂದಿದೆ. ರಾಜ್ಯದಲ್ಲಿ ಉತ್ಪತ್ತಿಯಾಗುವ ಮರುಬಳಕೆ ಸಾಧ್ಯವಿಲ್ಲದ ಸುಮಾರು 5,000 ಟನ್ ತ್ಯಾಜ್ಯವನ್ನು ಪ್ರತಿ ತಿಂಗಳು ನೆರೆಯ ರಾಜ್ಯಗಳ ಸಿಮೆಂಟ್ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತಿದೆ.

ಇಷ್ಟಾದರೂ ತ್ಯಾಜ್ಯ ಅಕ್ರಮವಾಗಿ ವಿಲೇವಾರಿಯಾಗುತ್ತಿರುವ ಘಟನೆಗಳು ಮುಂದುವರಿದಿವೆ. ಸಂಕರನ್‌ಕೋವಿಲ್ ಸಮೀಪದ ವೇಪ್ಪಂಕುಳಂ ಗ್ರಾಮದಲ್ಲಿ ಖಾಸಗಿ ಜಾಗದಲ್ಲಿ ಹಲವು ಟನ್ ಆಸ್ಪತ್ರೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಸುರಿದು ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ. ತ್ಯಾಜ್ಯದ ಜೊತೆ ಪತ್ತೆಯಾದ ಔಷಧಿಗಳು ಮತ್ತು ಪ್ಯಾಕಿಂಗ್ ಚೀಲಗಳ ಮೇಲೆ ಮಲಯಾಳಂ ಅಕ್ಷರಗಳಿರುವುದು ಕೇರಳದಿಂದಲೇ ತ್ಯಾಜ್ಯ ಸಾಗಿಸಿರಬಹುದು ಎಂಬ ಅನುಮಾನಕ್ಕೆ ಕಾರಣವಾಗಿದೆ.

ಈ ಘಟನೆ 2024ರ ಡಿಸೆಂಬರ್‌ನಲ್ಲಿ ತಿರುನಲ್ವೇಲಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಪತ್ತೆಯಾಗಿದ್ದ ವೈದ್ಯಕೀಯ ತ್ಯಾಜ್ಯದ ಪ್ರಕರಣವನ್ನು ಮತ್ತೆ ನೆನಪಿಸಿದೆ. ಆಗ ತಿರುವನಂತಪುರಂನ ರೀಜನಲ್ ಕ್ಯಾನ್ಸರ್ ಸೆಂಟರ್ ಸೇರಿದಂತೆ ಹಲವು ಸಂಸ್ಥೆಗಳಿಗೆ ಸೇರಿದ ತ್ಯಾಜ್ಯವನ್ನು ಕೊಡಗನಲ್ಲೂರು, ಪಾಲವೂರು, ಕೊಂಡನಾಗರಂ, ಎಳಂತೈಕುಳಂ, ಶಿವನಿಯಾರ್‌ಕುಳಂ ಮತ್ತು ತಿಡಿಯೂರು ಪ್ರದೇಶಗಳಲ್ಲಿ ಸುರಿಯಲಾಗಿತ್ತು.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಸೂಚನೆಯ ಬಳಿಕ 30ಕ್ಕೂ ಹೆಚ್ಚು ಲಾರಿ ಲೋಡ್ ತ್ಯಾಜ್ಯವನ್ನು ಮತ್ತೆ ಕೇರಳಕ್ಕೆ ಸಾಗಿಸಲಾಗಿತ್ತು. ಈ ವರ್ಷದ ಜುಲೈನಲ್ಲೂ ತೆಂಕಾಸಿ ಜಿಲ್ಲೆಯ ಕೀಳಕಡಯಂನಲ್ಲಿ ಮೊಬೈಲ್ ಫೋನ್ ಬಿಡಿಭಾಗಗಳು, ವಿದ್ಯುತ್ ತಂತಿಗಳು, ಹಾಳಾದ ಕಾರಿನ ಸೀಟುಗಳು ಮತ್ತು ಥರ್ಮೋಕೋಲ್ ಸೇರಿದಂತೆ ಸುಮಾರು 10 ಟನ್ ಎಲೆಕ್ಟ್ರಾನಿಕ್, ಪ್ಲಾಸ್ಟಿಕ್ ಹಾಗೂ ಮಿಶ್ರ ತ್ಯಾಜ್ಯ ಪತ್ತೆಯಾಗಿತ್ತು.

ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹಿಸುವ ಮರುಬಳಕೆ ಸಾಧ್ಯವಿಲ್ಲದ ತ್ಯಾಜ್ಯವನ್ನು ನಿರ್ವಹಿಸುವ ಕ್ಲೀನ್ ಕೇರಳ ಕಂಪನಿ (CKCL) ನೆರೆಯ ರಾಜ್ಯಗಳ ಸಿಮೆಂಟ್ ಕಾರ್ಖಾನೆಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದೆ. ಈ ಬಗ್ಗೆ ಮಾತನಾಡಿದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಕುಮಾರ್, ಪ್ರತಿ ತಿಂಗಳು 100ರಿಂದ 120 ವಾಹನಗಳನ್ನು ಸಿಮೆಂಟ್ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತದೆ.

ಇದನ್ನೂ ಓದಿ: ನೆಲದಲ್ಲಿದ್ದ ತ್ರಿವರ್ಣದ ಮಾರ್ಕರ್ ಎತ್ತಿಕೊಂಡ ಮೋದಿ: ಇದರ ಹಿಂದಿನ ಕಥೆ ಬೇರೆಯೇ ಇದೆ! | Narendra Modi Manila

ಈ ವಾಹನಗಳಲ್ಲಿ ಇ-ವೇ ಬಿಲ್, ತ್ಯಾಜ್ಯ ಸಾಗಣೆ ದಾಖಲೆಗಳು ಮತ್ತು ಸ್ವೀಕರಿಸುವ ಘಟಕಗಳೊಂದಿಗಿನ ಅಧಿಕೃತ ಒಪ್ಪಂದ ಸೇರಿದಂತೆ ಅಗತ್ಯ ದಾಖಲೆಗಳಿರುತ್ತವೆ ಎಂದು ತಿಳಿಸಿದ್ದಾರೆ. ಆದರೆ, ನೆರೆಯ ರಾಜ್ಯಗಳಲ್ಲಿ ನಡೆದ ಅಕ್ರಮ ತ್ಯಾಜ್ಯ ಸುರಿತ ಪ್ರಕರಣಗಳ ಪರಿಣಾಮವಾಗಿ ನಿಯಮಾನುಸಾರ ಸಾಗಿಸುವ ವಾಹನಗಳನ್ನೂ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಕೇರಳದಲ್ಲಿ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ವ್ಯವಸ್ಥಿತ ಜಾಲವಿದೆ ಎಂದು ಐಎಂಎ ಗೋಸ್ ಇಕೋ ಫ್ರೆಂಡ್ಲಿ (IMAGE) ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಡಾ. ಕೃಷ್ಣಕುಮಾರ್ ಪಿ.ವಿ. ತಿಳಿಸಿದ್ದಾರೆ. ರಾಜ್ಯದ ವೈದ್ಯಕೀಯ ತ್ಯಾಜ್ಯದ ಸುಮಾರು ಶೇ.80ರಷ್ಟನ್ನು IMAGE ನಿರ್ವಹಿಸುತ್ತಿದ್ದು, ಉಳಿದ ಶೇ.20ರಷ್ಟು ತ್ಯಾಜ್ಯವನ್ನು ಕೇರಳ ಎನ್ವಿರೋ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (KEIL) ನಿರ್ವಹಿಸುತ್ತಿದೆ. ಒಂದಕ್ಕಿಂತ ಹೆಚ್ಚು ಕ್ಲಿನಿಕ್ ಅಥವಾ ಪ್ರಯೋಗಾಲಯಗಳನ್ನು ನಡೆಸುವವರು ವೆಚ್ಚ ಉಳಿಸಲು ಕೆಲವೇ ಘಟಕಗಳನ್ನು ನೋಂದಾಯಿಸಿಕೊಂಡು, ನೋಂದಣಿಯಾಗದ ಇತರ ಘಟಕಗಳ ತ್ಯಾಜ್ಯವನ್ನೂ ಅವುಗಳ ಮೂಲಕ ಅಕ್ರಮವಾಗಿ ಸಾಗಿಸುವುದು ಇಂತಹ ಅವ್ಯವಹಾರಗಳಿಗೆ ಕಾರಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ನಡುವೆ, ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಸ್ವಯಂ ಆಡಳಿತ ಇಲಾಖೆಗೆ (LSGD) ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಸ್ವಚ್ಛತಾ ಮಿಷನ್‌ನ ಕಾರ್ಯಾಚರಣೆ ವಿಭಾಗದ ನಿರ್ದೇಶಕ ಜಹಾಂಗೀರ್ ಎಸ್. ತಿಳಿಸಿದ್ದಾರೆ. ವಶಪಡಿಸಿಕೊಂಡ ವಾಹನಗಳು ಮತ್ತು ಬಂಧಿತರು ಕೇರಳದವರಲ್ಲದ ಕಾರಣ, ತ್ಯಾಜ್ಯ ಸಾಗಣೆಯ ನಿಖರ ವಿಧಾನ ಇನ್ನೂ ತಿಳಿದುಬಂದಿಲ್ಲ ಎಂದಿದ್ದಾರೆ.

ನೆರೆಯ ರಾಜ್ಯಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು 12 ರಿಫ್ಯೂಸ್ ಡಿರೈವ್ಡ್ ಫ್ಯೂಯಲ್ (RDF) ಘಟಕಗಳು ಮತ್ತು 500 ಟನ್ ಸಾಮರ್ಥ್ಯದ ವೇಸ್ಟ್ ಟು ಎನರ್ಜಿ ಘಟಕ ಸ್ಥಾಪಿಸಲು ಸರ್ಕಾರ ಯೋಜಿಸಿದೆ. ಈ ಪೈಕಿ ಕ್ಲೀನ್ ಕೇರಳ ಕಂಪನಿ ಮತ್ತು ಖಾಸಗಿ ವಲಯದ ಸಹಭಾಗಿತ್ವದಲ್ಲಿ ಆರು RDF ಘಟಕಗಳು ಈಗಾಗಲೇ ಸ್ಥಾಪನೆಯಾಗಿದ್ದು, ಉಳಿದ ಆರು ಘಟಕಗಳ ಸ್ಥಾಪನೆ ಪ್ರಗತಿಯಲ್ಲಿದೆ.

ಇದನ್ನೂ ನೋಡಿ: ಕೃಷಿಮೇಳ | ಕೃಷಿಯಲ್ಲಿ ಹೊಸ ಸಾಧ್ಯತೆಗಳ ಅನಾವರಣ: ಮೂರು ದಿನಗಳ ಕೃಷಿ ಮೇಳಕ್ಕೆ ಚಾಲನೆ Janashakthi Media

 

Please follow and like us:
Donate Janashakthi Media

Leave a Reply

Your email address will not be published. Required fields are marked *