ಕರ್ನಾಟಕದಲ್ಲಿ 1.06 ಕೋಟಿ ಮತದಾರರ ಹೆಸರು ಡಿಲೀಟ್‌: ಎಸ್‌ಐಆರ್‌ ರದ್ದು ಕೋರಿ ‘SIR ವಿರೋಧಿ ಒಕ್ಕೂಟ’ ಆಗ್ರಹ

  • ಜ್ಞಾನೇಶ್ ಕುಮಾರ್ ರಾಜೀನಾಮೆಗೆ,  SIR ವ್ಯವಸ್ಥೆ ರದ್ಧತಿಗೆ ಆಗ್ರಹ.
  • 75 ಲಕ್ಷ ಮತದಾರರು ಎಲ್ಲಿಗೆ ಹೋದರು ಎನ್ನುವ ಪ್ರಶ್ನೆಗೆ ಉತ್ತರ ಕೊಡಿ.
  • ಎಸ್‌ಐಆರ್‌ ರದ್ಧತಿಗೆ ಇಂಡಿಯಾ ಒಕ್ಕೂಟ ನಡೆಸುತ್ತಿರುವ ಪ್ರತಿಭಟನೆ  SIR ವಿರೋಧಿ ಒಕ್ಕೂಟ ಬೆಂಬಲ.

 

​ಬೆಂಗಳೂರು:  ಕರ್ನಾಟಕದಲ್ಲಿ ಇತ್ತೀಚೆಗೆ ಆರಂಭವಾದ ಎಸ್‌ಐಆರ್‌  ಅಂತಿಮ ಮತದಾರರ ಪಟ್ಟಿಯಲ್ಲಿ 1 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು  ಕೈಬಿಡಲಾಗಿದೆ ಎಂದು ಆರೋಪಿಸಿರುವ ‘SIR ವಿರೋಧಿ ಕರ್ನಾಟಕ ಒಕ್ಕೂಟ’, ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಹಾಗೂ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ವ್ಯವಸ್ಥೆಯನ್ನು  ರದ್ದುಗೊಳಿಸಲು ಆಗ್ರಹಿಸಿದೆ. SIR ವಿರೋಧಿ

ಪ್ರಕಟಣೆಯಲ್ಲಿ ಏನಿದೆ?

ಒಕ್ಕೂಟದ ಮುಖ್ಯಸ್ಥರು ಹೊರಡಿಸಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ,   ಪ್ರಸ್ತುತ ಬಿಡುಗಡೆಯಾಗಿರುವ 2025ರ ಮತದಾರರ ಪಟ್ಟಿಯಲ್ಲಿ 6.5 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದರೆ, ಭಾರಿ ಸಂಖ್ಯೆಯ 1.06 ಕೋಟಿ ಮತದಾರರು ಡಿಲೀಟ್ ಆಗಿದ್ದಾರೆ. ಇದರಲ್ಲಿ ಮೃತಪಟ್ಟವರು ಹಾಗೂ ಡ್ಯೂಪ್ಲಿಕೇಟ್ ವೋಟರ್ ಐಡಿ ಹೊಂದಿದವರ ಸಂಖ್ಯೆ 25 ಲಕ್ಷ ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಆದರೆ, ಉಳಿದ 75 ಲಕ್ಷ ಮತದಾರರು ಎಲ್ಲಿಗೆ ಹೋದರು…? ಎಂಬ ಬಗ್ಗೆ ಆಯೋಗ  ಸೂಕ್ತ ಉತ್ತರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿನೇ ದಿನೆ ವಿಸ್ತರಿಸುತ್ತಿರುವ ಬೆಂಗಳೂರಿನಲ್ಲಿ ಶೇ.43ರಷ್ಟು ಮತದಾರರು ಪಟ್ಟಿಯಿಂದ ಕಾಣೆಯಾಗಿದ್ದಾರೆ. ‘ನಾಗರಿಕ ಮತ ಕಾವಲು ಸಮಿತಿ’ ನಡೆಸಿದ ಬೂತ್‌ ಮಟ್ಟದ ಪರಿಶೋಧನೆಯಲ್ಲಿ ವಾಸಸ್ಥಳದಲ್ಲೇ ಇದ್ದರೂ ಅನೇಕ ಅರ್ಹ ಮತದಾರರನ್ನು ‘ಶಿಫ್ಟೆಡ್’ ಎಂದು ಮತ್ತು ಜೀವಂತವಾಗಿದ್ದರೂ ‘ಮೃತಪಟ್ಟಿದ್ದಾರೆ’ಎಂದು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಲೋಪಗಳನ್ನು ಆಯೋಗದ ಗಮನಕ್ಕೆ ತಂದರೂ ಸರಿಪಡಿಸಿಲ್ಲ. ಹೀಗಾಗಿ ಈ ‘SIR ಅಂತಿಮ ಪಟ್ಟಿʼಯನ್ನು ರಾಜ್ಯದ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳು ತಿರಸ್ಕರಿಸಿವೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಕಾಂಗ್ರೆಸ್ ಸಚಿವರ ದ್ವಂದ್ವ ನಿಲುವು, ತೀವ್ರ ಕಿಡಿ

ದೇಶಾದ್ಯಂತ ಎಸ್‌ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಮತದಾರರ ಹಕ್ಕುಗಳ ಮಾರಣಹೋಮವನ್ನು ವಿರೋಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿಪಕ್ಷಗಳು ದೆಹಲಿಯಲ್ಲಿ ಬೃಹತ್ ರ‍್ಯಾಲಿ ನಡೆಸಿ ಹೋರಾಡುತ್ತಿದ್ದರೆ, ಕರ್ನಾಟಕ ಸರ್ಕಾರದ ಕೆಲ ಸಚಿವರು ಎಸ್‌ಐಆರ್ ಪ್ರಕ್ರಿಯೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಅತ್ಯಂತ ಶೋಚನೀಯ. “ಬೆಂಗಳೂರಿನಲ್ಲಿ ಮಾತ್ರ ಸಮಸ್ಯೆ”, “ನಮ್ಮ ಜಿಲ್ಲೆ ಅಥವಾ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ” ಎಂದು ಸಚಿವರು ಹೇಳಿಕೆ ನೀಡುತ್ತಿರುವುದು ದ್ವಂದ್ವ ನಿಲುವಾಗಿದೆ. ಈ ವಿಷಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ತಮ್ಮ ಸರ್ಕಾರದ ನಿಲುವನ್ನು ತಕ್ಷಣ ಸ್ಪಷ್ಟಪಡಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.

ಇದನ್ನೂ ಓದಿ: 4 ಮಹಿಳಾ ಗುತ್ತಿಗೆ ಕಾರ್ಮಿಕರ ಮರು ನೇಮಕಕ್ಕೆ ಆಗ್ರಹ; HPCL ಕಚೇರಿ ಎದುರು CITU, ನಾಗರಿಕ ಹೋರಾಟ ಸಮಿತಿಯಿಂದ ಹೋರಾಟ

​ನ.5ರ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

ಕೇಂದ್ರ ಚುನಾವಣಾಧಿಕಾರಿ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆ ಹಾಗೂ ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ‘ಇಂಡಿಯಾ’ ಒಕ್ಕೂಟವು ನವೆಂಬರ್‌ 5 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ‘‌ಎಸ್‌ಐಆರ್ ವಿರೋಧಿ ಒಕ್ಕೂಟ’ ಸಂಪೂರ್ಣ ಸಕ್ರಿಯ ಬೆಂಬಲ ಘೋಷಿಸಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ, ಪಾರದರ್ಶಕ ಚುನಾವಣೆಗಾಗಿ ಹಾಗೂ ಅರ್ಹ ಮತದಾರರ ಹಕ್ಕು ರಕ್ಷಣೆಗಾಗಿ ಸಾರ್ವಜನಿಕರು ಈ ಹೋರಾಟದಲ್ಲಿ ಭಾಗವಹಿಸಬೇಕೆಂದು ಎಸ್‌ಐಆರ್‌ ವಿರೋಧಿ ಒಕ್ಕೂಟವು ಮನವಿ ಮಾಡಿಕೊಂಡಿದೆ.

ಸ್ಥಳೀಯ ಚುನಾವಣೆಗೆ ಎಸ್‌ಐಆರ್‌ ಬೇಡ

ಮುಂಬರುವ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೂ ಕೇಂದ್ರ ಚುನಾವಣಾ ಆಯೋಗದ ಎಸ್‌ಐಆರ್ ಪಟ್ಟಿಯನ್ನು ಬಳಸಬಾರದು. ಬಿಜೆಪಿ ಆಡಳಿತವಿರುವ ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲೇ ಸ್ಥಳೀಯ ಚುನಾವಣೆಗಳಿಗೆ ಎಸ್‌ಐಆರ್ ಪಟ್ಟಿ ಬಳಸುತ್ತಿಲ್ಲ. ಆದ್ದರಿಂದ ರಾಜ್ಯ ಚುನಾವಣಾ ಆಯೋಗವೇ ಪ್ರತ್ಯೇಕವಾಗಿ ಎಲ್ಲಾ ಬೂತ್‌ಗಳಲ್ಲಿ ʻಸಾರ್ವಜನಿಕ ಪರಿಶೀಲನಾ ಸಭೆʼ ನಡೆಸಿ, 2025ರ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಸ್ಥಳೀಯ ಚುನಾವಣೆಗಳನ್ನು ನಡೆಸಬೇಕು ಎಂದು ರಾಜ್ಯ ಸರ್ಕಾರವನ್ನು ಒಕ್ಕೂಟ ಒತ್ತಾಯಿಸಿದೆ.

ಇದನ್ನು ನೋಡಿ:ಎಸ್‌ಐಆರ್‌ ಹೆಸರಿನಲ್ಲಿ ಜೀವಂತ ಮತದಾರರ ಹೆಸರು ಡಿಲೀಟ್‌: ಮೋದಿ, ಜ್ಞಾನೇಶ್‌ ಕುಮಾರ್‌ ವಿರುದ್ಧ ಪ್ರಕಾಶ್‌ ರಾಜ್‌ ಆರೋಪ

 

Donate Janashakthi Media

Leave a Reply

Your email address will not be published. Required fields are marked *