ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ದಾ ಜಿಲ್ಲೆಯ ಹರಿಶ್ಚಂದ್ರಪುರದ ಗೋಲಾ ಮೋರ್ ಪ್ರದೇಶದಲ್ಲಿ ಕ್ರೈಸ್ತರ ಪ್ರಾರ್ಥನಾ ಸಭೆಗೆ ಬಜರಂಗದಳ ಮತ್ತು ಹಿಂದೂ ಜಾಗರಣ ಮಂಚ್ಗೆ ಸೇರಿದವರು ಅಡ್ಡಿಪಡಿಸಿ, ಹಲ್ಲೆ ಮತ್ತು ದಾಂಧಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಕ್ರೈಸ್ತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಪಶ್ಚಿಮ
ಭಾನುವಾರ ಮಧ್ಯಾಹ್ನ ಮನೆಯೊಂದರಲ್ಲಿ ಕ್ರೈಸ್ತ ಮಿಷನರಿಗಳು ವಾರದ ಪ್ರಾರ್ಥನೆ ಮತ್ತು ಧಾರ್ಮಿಕ ಚರ್ಚೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಅಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಎರಡು ಸಂಘಟನೆಗಳ ಸದಸ್ಯರು ಸ್ಥಳಕ್ಕೆ ಆಗಮಿಸಿದ್ದಾರೆ. ಮನೆಯೊಳಗೆ ಪ್ರವೇಶಿಸಿದ ಗುಂಪು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದವರ ಮೇಲೆ ಹಲ್ಲೆ ನಡೆಸಿ, ಮನೆಯ ವಸ್ತುಗಳನ್ನು ಧ್ವಂಸಗೊಳಿಸಿದೆ ಎಂದು ಕ್ರೈಸ್ತ ಸಮುದಾಯದವರು ದೂರಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದ ಕ್ರೈಸ್ತ ಮಿಷನರಿಯೊಬ್ಬರು ಮತಾಂತರದ ಆರೋಪವನ್ನು ನಿರಾಕರಿಸಿದ್ದಾರೆ. ಅಲ್ಲಿ ಯಾವುದೇ ಮತಾಂತರ ನಡೆಯುತ್ತಿರಲಿಲ್ಲ. ಪ್ರಾರ್ಥನೆ ಮತ್ತು ಚರ್ಚೆ ಮಾತ್ರ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಗುಂಪು ದಾಳಿ ನಡೆಸಿತು ಎಂದು ಅವರು ತಿಳಿಸಿದ್ದಾರೆ.
ಆದರೆ, ಬಜರಂಗದಳ ಮತ್ತು ಹಿಂದೂ ಜಾಗರಣ ಮಂಚ್ ಸದಸ್ಯರು ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಮತಾಂತರ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿಯ ಮೇರೆಗೆ ತಾವು ಸ್ಥಳಕ್ಕೆ ತೆರಳಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ. ತಮ್ಮ ಸಂಘಟನೆಯ ಐವರು ಕಾರ್ಯಕರ್ತರೂ ಗಾಯಗೊಂಡಿದ್ದು, ಹರಿಶ್ಚಂದ್ರಪುರ ಗ್ರಾಮೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನ.5ರಂದು ಬೆಂಗಳೂರಿನಲ್ಲಿ ಇಂಡಿಯಾ ಒಕ್ಕೂಟದ ಬೃಹತ್ ಪ್ರತಿಭಟನೆ: ಎಸ್ಐಆರ್ ರದ್ದು, ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ
ಬಜರಂಗದಳದ ಉತ್ತರ ಮಾಲ್ದಾ ಜಿಲ್ಲಾ ಸಂಯೋಜಕ ರಿತಮ್ ದಾಸ್, ಆ ಪ್ರದೇಶದ ಪರಿಶಿಷ್ಟ ಜಾತಿಗೆ ಸೇರಿದ ಮುಸಹರ್ ಸಮುದಾಯದ 100ಕ್ಕೂ ಹೆಚ್ಚು ಕುಟುಂಬಗಳನ್ನು ವಿದೇಶಿ ಮೂಲದ ಹಣದ ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸುಮಾರು 40 ಕುಟುಂಬಗಳು ಈಗಾಗಲೇ ಮತಾಂತರಗೊಂಡಿವೆ ಎಂದೂ ಅವರು ಹೇಳಿದ್ದಾರೆ. ಈ ಆರೋಪಗಳಿಗೆ ಸ್ವತಂತ್ರ ದೃಢೀಕರಣ ಲಭ್ಯವಾಗಿಲ್ಲ.
ಮಾಲ್ದಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಸಿಂಗ್ ಮಾತನಾಡಿ, ಭಾನುವಾರ ಪ್ರಾರ್ಥನಾ ಸಭೆಯ ವೇಳೆ ಗಲಾಟೆ ನಡೆದಿರುವ ಬಗ್ಗೆ ಮಾಹಿತಿ ಬಂದಿತ್ತು. ತಕ್ಷಣ ಹರಿಶ್ಚಂದ್ರಪುರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕ್ರೈಸ್ತರ ಪ್ರಾರ್ಥನಾ ಸಭೆಗಳ ಮೇಲೆ ದಾಳಿಗಳ ಆರೋಪ
ಪಶ್ಚಿಮ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಕ್ರೈಸ್ತರ ಪ್ರಾರ್ಥನಾ ಸಭೆಗಳು, ಮನೆಗಳು ಮತ್ತು ಚರ್ಚ್ಗಳ ಮೇಲೆ ದಾಳಿ ಹಾಗೂ ಅಡ್ಡಿಪಡಿಸುವ ಘಟನೆಗಳು ಹೆಚ್ಚುತ್ತಿವೆ ಎಂಬ ಆತಂಕ ವ್ಯಕ್ತವಾಗಿದೆ.
ಇಂಡಿಯಾ ಹೇಟ್ ಲ್ಯಾಬ್ನ ದಾಖಲೆಯ ಪ್ರಕಾರ, 2026ರ ಮೇ 13ರಿಂದ ಸೆಪ್ಟೆಂಬರ್ 20ರವರೆಗೆ ರಾಜ್ಯದ 13 ಜಿಲ್ಲೆಗಳಲ್ಲಿ ಕ್ರೈಸ್ತರನ್ನು ಗುರಿಯಾಗಿಸಿಕೊಂಡ 60 ಘಟನೆಗಳು ನಡೆದಿವೆ. ಇವುಗಳಲ್ಲಿ 52 ಪ್ರಾರ್ಥನಾ ಸಭೆಗಳು, ಮನೆಗಳು, ಚರ್ಚ್ಗಳು ಮತ್ತು ಧಾರ್ಮಿಕ ಕೂಟಗಳ ಮೇಲಿನ ದಾಳಿಗಳಾಗಿದ್ದರೆ, ಎಂಟು ಘಟನೆಗಳಲ್ಲಿ ದೈಹಿಕ ಹಲ್ಲೆ, ಗುಂಪು ಹಿಂಸಾಚಾರ ಅಥವಾ ಧಾರ್ಮಿಕ ಸ್ಥಳಗಳ ಧ್ವಂಸ ಸೇರಿವೆ.
ಕ್ರೈಸ್ತ ಸಮುದಾಯವನ್ನು ಪ್ರತಿನಿಧಿಸುವ ಬಂಗೀಯ ಕ್ರಿಸ್ಟಿಯಾ ಪರಿಷತ್ ಅಕ್ಟೋಬರ್ 5ರಂದು ಈ ಘಟನೆಗಳ ಕುರಿತು ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ದೂರು ಸಲ್ಲಿಸಿತ್ತು. ಪ್ರಾರ್ಥನಾ ಸಭೆಗಳಿಗೆ ಅಡ್ಡಿಪಡಿಸುವುದು, ಹಲ್ಲೆ ನಡೆಸುವುದು ಮತ್ತು ಧಾರ್ಮಿಕ ಸ್ಥಳಗಳನ್ನು ಧ್ವಂಸಗೊಳಿಸುವ ಘಟನೆಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಸಂಘಟನೆ ಒತ್ತಾಯಿಸಿತ್ತು.
ಇದನ್ನೂ ನೋಡಿ : ಎಸ್ಐಆರ್ ಹೆಸರಿನಲ್ಲಿ ಜೀವಂತ ಮತದಾರರ ಹೆಸರು ಡಿಲೀಟ್: ಮೋದಿ, ಜ್ಞಾನೇಶ್ ಕುಮಾರ್ ವಿರುದ್ಧ ಪ್ರಕಾಶ್ ರಾಜ್ ಆರೋಪ
