ಪ್ರಜಾಪ್ರಭುತ್ವದ ಉಳಿವಿಗಾಗಿ ಜನರ ಮೆರವಣಿಗೆ; ಎಸ್‌ಐಆರ್‌ ರದ್ದತಿಗೆ ಆಗ್ರಹ

ಟೌನ್‌ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ರಾಷ್ಟ್ರಧ್ವಜ, ಸಂವಿಧಾನದ ಪೀಠಿಕೆ ಹಿಡಿದು ಜಾಥಾ
ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ರದ್ದುಗೊಳಿಸಬೇಕು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ರಾಜೀನಾಮೆ ನೀಡಬೇಕು ಹಾಗೂ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಕ್ಟೋಬರ್‌ 23ರಂದು ಬೆಂಗಳೂರಿನಲ್ಲಿ ವಿವಿಧ ಜನಪರ ಸಂಘಟನೆಗಳು ಜಂಟಿಯಾಗಿ ಬೃಹತ್‌ ಮೆರವಣಿಗೆ ನಡೆಸಿದವು. ರಾಷ್ಟ್ರಧ್ವಜ ಮತ್ತು ಸಂವಿಧಾನದ ಪೀಠಿಕೆ ಹಿಡಿದು ಸಾಗಿದ ಪ್ರತಿಭಟನಾಕಾರರು, ಪ್ರಜಾಪ್ರಭುತ್ವ ಮತ್ತು ಮತದಾನದ ಹಕ್ಕಿನ ರಕ್ಷಣೆಗಾಗಿ ಒಗ್ಗಟ್ಟಿನ ಹೋರಾಟಕ್ಕೆ ಕರೆ ನೀಡಿದರು.

ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆಗಳಿಗೆ ನಿರ್ಬಂಧ ವಿಧಿಸಿರುವುದನ್ನು ವಿರೋಧಿಸಿ, ಬೆಂಗಳೂರಿನ ಟೌನ್‌ ಹಾಲ್‌ನಿಂದ ಆರಂಭವಾದ ಮೆರವಣಿಗೆ ಕಾರ್ಪೊರೇಷನ್‌ ಸರ್ಕಲ್‌ ಮಾರ್ಗವಾಗಿ ಮೈಸೂರು ಬ್ಯಾಂಕ್‌ ಸರ್ಕಲ್‌ ತಲುಪಿ, ಅಲ್ಲಿಂದ ಫ್ರೀಡಂ ಪಾರ್ಕ್‌ಗೆ ಸಾಗಿತು. ದಲಿತ, ರೈತ, ಕಾರ್ಮಿಕ, ವಿದ್ಯಾರ್ಥಿ, ಮಹಿಳಾ, ಅಲ್ಪಸಂಖ್ಯಾತ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಹೆಚ್ಚಿನ ಸಂಖ್ಯೆಯ ಯುವಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ‘ಇಂಕ್ವಿಲಾಬ್‌ ಜಿಂದಾಬಾದ್‌’, ‘ಜೈ ಭೀಮ್‌’, ‘ಜೈ ಸಂವಿಧಾನ’, ‘ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ’ ಎಂಬ ಘೋಷಣೆಗಳು ಮೊಳಗಿದವು. ‘ಪ್ರಜಾಪ್ರಭುತ್ವಕ್ಕೆ ಕಂಟಕವಾಗಿರುವ ಎಸ್‌ಐಆರ್‌ ರದ್ದಾಗಲಿ’, ‘ಗ್ಯಾನೇಶ್‌ ಕುಮಾರ್‌ ರಾಜೀನಾಮೆ ನೀಡಲಿ’, ‘ನಿಷ್ಪಕ್ಷಪಾತ ಚುನಾವಣಾ ಆಯೋಗ ಮರುರಚನೆಯಾಗಲಿ’ ಎಂಬ ಬೇಡಿಕೆಗಳನ್ನು ಪ್ರತಿಭಟನಾಕಾರರು ಮುಂದಿಟ್ಟರು.

ಇದನ್ನೂ ಓದಿ : ಸುರತ್ಕಲ್‌ ಎಚ್‌ಪಿಸಿಎಲ್‌ನಲ್ಲಿ 4 ಮಹಿಳಾ ಕಾರ್ಮಿಕರ ವಜಾ: 50 ದಿನಗಳಿಂದ ಧರಣಿ, ನ್ಯಾಯಕ್ಕೆ ಡಿವೈಎಫ್‌ಐ ಆಗ್ರಹ

ದೆಹಲಿಯಲ್ಲಿ ಐತಿಹಾಸಿಕ ರೈತ ಹೋರಾಟ ನಡೆಸಿದ ಸಂಯುಕ್ತ ಕಿಸಾನ್‌ ಮೋರ್ಚಾ ಸೇರಿದಂತೆ ದೇಶದ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಸಿಜೆಪಿ, ಎಐಎಸ್ಎ, ಎಸ್‌ಎಫ್‌ಐ ಸೇರಿದಂತೆ ವಿದ್ಯಾರ್ಥಿ ಸಂಘಟನೆಗಳು ಹಾಗೂ ಯುವಜನ, ಮಹಿಳಾ, ದಲಿತ ಮತ್ತು ಅಲ್ಪಸಂಖ್ಯಾತ ಸಂಘಟನೆಗಳು ಒಂದೇ ದಿನ ಹೋರಾಟಕ್ಕೆ ಧುಮುಕಿವೆ” ಎಂದರು. 1970ರ ದಶಕವನ್ನು ಹೊರತುಪಡಿಸಿದರೆ ದೇಶದಲ್ಲಿ ಇಂತಹ ವ್ಯಾಪಕ ಒಗ್ಗಟ್ಟಿನ ಹೋರಾಟ ನಡೆದಿರಲಿಲ್ಲ. ಗ್ಯಾನೇಶ್‌ ಕುಮಾರ್‌ ರಾಜೀನಾಮೆ ನೀಡುವವರೆಗೆ, 2023ರ ಚುನಾವಣಾ ಆಯೋಗದ ನೇಮಕಾತಿ ತಿದ್ದುಪಡಿ ಕಾಯ್ದೆ ರದ್ದಾಗುವವರೆಗೆ, ಆಯೋಗದ ತಪ್ಪುಗಳಿಗೆ ಪರಿಹಾರ ದೊರೆಯುವವರೆಗೆ ಹಾಗೂ ನ್ಯಾಯಯುತ ಮತ್ತು ಮುಕ್ತ ಚುನಾವಣೆ ಖಚಿತವಾಗುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಮುಖಂಡರು ಎಚ್ಚರಿಸಿದರು.

“ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಹೆಸರಿನಲ್ಲಿ ಮತದಾರರನ್ನು ಹೊರಗಿಡಲಾಗುತ್ತಿದೆ ಎಂದು ನಾವು ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದ್ದೇವೆ. ಚುನಾವಣಾ ಆಯೋಗದ ಕ್ರಮ ಸಂವಿಧಾನ ವಿರೋಧಿಯಾಗಿದೆ. ಚುನಾವಣೆಗಳನ್ನು ಅಕ್ರಮವಾಗಿ ಗೆಲ್ಲುವ ದುರುದ್ದೇಶದಿಂದ ಈ ಕುತಂತ್ರ ನಡೆಸಲಾಗುತ್ತಿದೆ ಎಂಬುದು ನಮ್ಮ ಆರೋಪ. ಆದ್ದರಿಂದ ಎಸ್‌ಐಆರ್‌ ರದ್ದುಗೊಳಿಸಿ, ಹಿಂದಿನ ಮತದಾರರ ಪಟ್ಟಿಯ ಆಧಾರದಲ್ಲೇ ಚುನಾವಣೆ ನಡೆಸಬೇಕು” ಎಂದು ಆಗ್ರಹಿಸಿದರು. “ನಾವು ಚುನಾವಣಾ ಆಯೋಗವನ್ನು ಪ್ರಶ್ನಿಸಿದಾಗ ಬಿಜೆಪಿ ಉತ್ತರ ನೀಡುತ್ತಿದೆ; ಅಮಿತ್‌ ಶಾ ಮತ್ತು ನರೇಂದ್ರ ಮೋದಿ ಪ್ರತಿಕ್ರಿಯಿಸುತ್ತಿದ್ದಾರೆ. ಎಸ್‌ಐಆರ್‌ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಭಾರತೀಯ ಸಂಸ್ಕೃತಿಯನ್ನು ನಾಶಪಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆತಂಕವೂ ಇದೆ. ಎಸ್‌ಐಆರ್‌ ರದ್ದಾಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಪ್ರತಿಭಟನೆಕಾರರು ಘೋಷಿಸಿದರು.

ಇದನ್ನೂ ನೋಡಿ : ಎಸ್‌ಐಆರ್‌ | ತಿರಂಗ ಹಿಡಿದು ರಸ್ತೆಗಿಳಿದ ಹೋರಾಟಗಾರರು: ಹತ್ತಿಕ್ಕಿದಷ್ಟೂ ಹುಟ್ಟಲಿವೆ ಸಾವಿರಾರು ಜಂತರ್ ಮಂತರ್!

Donate Janashakthi Media

Leave a Reply

Your email address will not be published. Required fields are marked *