ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಕ್ರಮಗಳ ಕುರಿತು ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಶಾಂತಿಯುತವಾಗಿ ಪ್ರತಿಭಟಿಸುವವರನ್ನು ಕಾನೂನುಬದ್ಧ ಪ್ರಕ್ರಿಯೆ ಪಾಲಿಸದೆ ಬಂಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ದೆಹಲಿಯಲ್ಲಿ ಮೆಟ್ರೊ ಮತ್ತು ರೈಲು ಸೇವೆಗಳು ಸಾಮಾನ್ಯವಾಗಿ ಮುಂದುವರಿಯಬೇಕು, ಜನರ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಹಾಗೂ ಇಂಟರ್ನೆಟ್ ಸೇವೆಗಳಿಗೆ ಅಡ್ಡಿಪಡಿಸಬಾರದು ಎಂದು ನ್ಯಾಯಾಲಯ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠವು ಭಾನುವಾರ ವಿಶೇಷ ವಿಚಾರಣೆ ನಡೆಸಿ ಈ ನಿರ್ದೇಶನಗಳನ್ನು ನೀಡಿದೆ. ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವ ಪರಿಸ್ಥಿತಿ ಉಂಟಾದರೆ ಕಾನೂನಿನ ಪ್ರಕಾರ ಅಗತ್ಯ ನಿಯಂತ್ರಣಗಳನ್ನು ವಿಧಿಸಬಹುದು. ಆದರೆ, ಪ್ರತಿಭಟನೆಗಳನ್ನು ನಿಯಂತ್ರಿಸುವ ನೆಪದಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಪೊಲೀಸ್ ಕ್ರಮಗಳ ವಿರುದ್ಧ ಗಂಭೀರ ಆರೋಪ
ಅಕ್ಟೋಬರ್ 10ರಂದು ದೆಹಲಿಯಲ್ಲಿ ನಡೆದ ಎಸ್ಐಆರ್ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ವ್ಯಾಪಕವಾಗಿ ಜನರನ್ನು ವಶಕ್ಕೆ ಪಡೆದಿದ್ದಾರೆ, ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ನಡೆಸಿದ್ದಾರೆ ಹಾಗೂ ಸಾರ್ವಜನಿಕ ಸಾರಿಗೆ ಮತ್ತು ಇಂಟರ್ನೆಟ್ ಸೇವೆಗಳಿಗೆ ನಿರ್ಬಂಧ ವಿಧಿಸಿದ್ದಾರೆ ಎಂಬ ಆರೋಪಗಳು ಸುಪ್ರೀಂ ಕೋರ್ಟ್ನಲ್ಲಿ ಪ್ರಸ್ತಾಪವಾದವು.
ಹಿರಿಯ ವಕೀಲ ಕಪಿಲ್ ಸಿಬಲ್ ಅವರು ವಾದ ಮಂಡಿಸಿ, ಜಂತರ್ ಮಂತರ್ನಿಂದ ಸುಮಾರು ನಾಲ್ಕು ಕಿಲೋಮೀಟರ್ ವ್ಯಾಪ್ತಿಯ ಹೊರಗಿದ್ದವರನ್ನೂ ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಮೆಟ್ರೊ ನಿಲ್ದಾಣಗಳನ್ನು ಮುಚ್ಚಲಾಗಿದ್ದು, ಇಂಟರ್ನೆಟ್ ಸೇವೆಗಳಿಗೂ ತಡೆಯೊಡ್ಡಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಹಿರಿಯ ವಕೀಲ ಶದನ್ ಫರಾಸತ್ ಅವರು ಪ್ರತಿಭಟನೆಯ ಸಂದರ್ಭದಲ್ಲಿ ತಾವೂ ಪೊಲೀಸರ ಬಲಪ್ರಯೋಗಕ್ಕೆ ಒಳಗಾಗಿರುವುದಾಗಿ ಆರೋಪಿಸಿದರು. ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಮುಂದಾದ ವಕೀಲರು ಮತ್ತು ನಾಗರಿಕರನ್ನು ತಡೆದು ವಶಕ್ಕೆ ಪಡೆಯಲಾಗಿದೆ ಎಂಬ ದೂರುಗಳನ್ನೂ ನ್ಯಾಯಾಲಯದ ಮುಂದೆ ಮಂಡಿಸಲಾಯಿತು.
ಇದನ್ನೂ ಓದಿ : ದೆಹಲಿಯಲ್ಲಿ ಎಸ್ಐಆರ್ ವಿರೋಧಿ ಹೋರಾಟ ಮುಂದುವರಿಕೆ; ನಿಲ್ಲದ ಪೊಲೀಸ್ ದೌರ್ಜನ್ಯ
ಮೆಟ್ರೊ, ರೈಲು ಸೇವೆ ಸ್ಥಗಿತಗೊಳಿಸುವಂತಿಲ್ಲ
ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೊ ಮತ್ತು ರೈಲು ಸೇವೆಗಳಿಗೆ ವಿಧಿಸಲಾದ ನಿರ್ಬಂಧಗಳ ಕುರಿತು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಹಿಂದಿನ ಆದೇಶದ ಹೊರತಾಗಿಯೂ ಮೆಟ್ರೊ ಸೇವೆಗಳಿಗೆ ನಿರ್ಬಂಧ ಮುಂದುವರಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನೂ ಪೀಠ ಕೈಗೆತ್ತಿಕೊಂಡಿತು.
ಸಾರ್ವಜನಿಕ ಸಾರಿಗೆ ಸೇವೆಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಬದಲು, ಅಗತ್ಯವಿದ್ದರೆ ಕಾನೂನುಬದ್ಧವಾಗಿ ನಿಯಂತ್ರಿಸಬಹುದು ಎಂದು ನ್ಯಾಯಾಲಯ ಈ ಹಿಂದೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ, ಮೆಟ್ರೊ ಮತ್ತು ರೈಲು ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಪುನರುಚ್ಚರಿಸಿತು. ದೆಹಲಿಯ ವಿವಿಧೆಡೆ ಹಾಕಲಾಗಿರುವ ಬ್ಯಾರಿಕೇಡ್ಗಳ ಅಗತ್ಯವನ್ನು ತಕ್ಷಣ ಪರಿಶೀಲಿಸಿ, ಸಂಚಾರಕ್ಕೆ ಅನಗತ್ಯ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳುವಂತೆಯೂ ನಿರ್ದೇಶಿಸಿತು.
ಇಂಟರ್ನೆಟ್ ಸ್ಥಗಿತಕ್ಕೆ ಅವಕಾಶವಿಲ್ಲ
ದೆಹಲಿಯಲ್ಲಿ ಇಂಟರ್ನೆಟ್ ಸೇವೆಗಳು ಅಬಾಧಿತವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸಂಪರ್ಕ ವ್ಯವಸ್ಥೆಗೆ ನಿರ್ಬಂಧ ವಿಧಿಸಿರುವುದರಿಂದ ನಾಗರಿಕರ ಸಂಚಾರ, ಮಾಹಿತಿ ಪಡೆಯುವ ಹಕ್ಕು ಮತ್ತು ವಕೀಲರು ತಮ್ಮ ವೃತ್ತಿಪರ ಕರ್ತವ್ಯ ನಿರ್ವಹಿಸುವುದಕ್ಕೆ ತೊಂದರೆಯಾಗಿದೆ ಎಂಬ ವಾದಗಳು ವಿಚಾರಣೆಯಲ್ಲಿ ಕೇಳಿಬಂದವು.
ವಕೀಲರು, ಪತ್ರಕರ್ತರು ಸೇರಿದಂತೆ ತಮ್ಮ ವೃತ್ತಿಪರ ಕರ್ತವ್ಯಗಳನ್ನು ನಿರ್ವಹಿಸುವವರನ್ನು ತಡೆಯಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ನ್ಯಾಯಾಲಯದ ಆವರಣದ ಸುತ್ತಲೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ನಿರ್ಬಂಧಗಳನ್ನು ಸೂಚಿಸುವ ಫಲಕಗಳನ್ನು ಇನ್ನೂ ತೆರವುಗೊಳಿಸದಿದ್ದರೆ ಅವುಗಳನ್ನು ತೆಗೆದುಹಾಕುವಂತೆಯೂ ನಿರ್ದೇಶಿಸಿತು.
ಅಧಿಕಾರಿಗಳಿಂದ ವಿವರಣೆ ಕೇಳಿದ ನ್ಯಾಯಾಲಯ
ಮೆಟ್ರೊ ಸೇವೆಗಳ ಮೇಲಿನ ನಿರ್ಬಂಧ, ಪ್ರತಿಭಟನಾಕಾರರ ಬಂಧನ ಮತ್ತು ಪೊಲೀಸ್ ಬಲಪ್ರಯೋಗದ ಕುರಿತು ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಹಿಂದಿನ ಆದೇಶಗಳನ್ನು ಪಾಲಿಸಿರುವ ಕುರಿತು ಅನುಪಾಲನಾ ವರದಿ ಸಲ್ಲಿಸುವಂತೆಯೂ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮಂಗಳವಾರಕ್ಕೆ ನಿಗದಿಪಡಿಸಲಾಗಿದೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಗಳನ್ನು ನಿರ್ವಹಿಸುವಾಗ ಪೊಲೀಸರು ಕಾನೂನುಬದ್ಧ ಪ್ರಕ್ರಿಯೆ ಪಾಲಿಸಿದ್ದಾರೆಯೇ, ಬಲಪ್ರಯೋಗ ಅಗತ್ಯ ಮತ್ತು ಪ್ರಮಾಣಬದ್ಧವಾಗಿತ್ತೇ ಎಂಬ ಪ್ರಶ್ನೆಗಳು ಇದೀಗ ಸುಪ್ರೀಂ ಕೋರ್ಟ್ ವಿಚಾರಣೆಯ ವ್ಯಾಪ್ತಿಗೆ ಬಂದಿವೆ.
ಇದನ್ನೂ ನೋಡಿ : SIR ಹೋರಾಟ | ಪ್ರಜಾಪ್ರಭುತ್ವಕ್ಕೆ ಬೀಗ ಹಾಕಿದ ಕೇಂದ್ರ! ತಡೆಗೋಡೆ ಭೇದಿಸಿ ಬೀದಿಗಿಳಿದ Gen Z
