–ವಸಂತರಾಜ ಎನ್.ಕೆ
ಇತ್ತೀಚೆಗೆ ಎ.ಐ ಪರಿಣಿತನೊಬ್ಬ “ಎ.ಐ ನಿಯಂತ್ರಣ ತಪ್ಪಿ ಮುಂದಿನ 10 ವರ್ಷಗಳಲ್ಲಿ ಇಡೀ ಮನುಕುಲದ ಹತ್ಯೆ ಮಾಡುವ 10% ಸಾಧ್ಯತೆಯಿದೆ” ಎಂದು ಹೇಳಿದ್ದು, ಮತ್ತು ಈ ಕ್ಷೇತ್ರದ ಮುಂಚೂಣಿ ಕಂಪನಿಗಳು ಈ ಅಪಾಯವನ್ನು ದೃಡೀಕರಿಸಿ “ಎ.ಐ ಮೊಡೆಲ್ ಗಳ ವೇಗವನ್ನು ಕಡಿಮೆ ಮಾಡಬೇಕು.” ಎಂದು ಹೇಳಿದ್ದು ಜಾಗತಿಕ ಆತಂಕ, ಭೀತಿ, ಚರ್ಚೆಗೆ ಕಾರಣವಾಗಿದೆ. ಸ್ವಯಂ-ಪ್ರೇರಣೆಯಿಂದ ಪಾಲಿಸುವ ನಿಬಂಧನೆಗಳಿರುವ ಒಪ್ಪಂದಕ್ಕೆ ಅಧ್ಯಕ್ಷ ಟ್ರಂಪ್ ಅವರ ಸಮ್ಮಖದಲ್ಲಿ ಮುಂಚೂಣಿ ಕಂಪನಿಗಳು ಸಹಿ ಹಾಕಿ ಘೋಷಿಸಿದ್ದಾರೆ. ಈ ಅಪಾಯ ನಿಜವಾ? ಎ.ಐ ಸಾಮರ್ಥ್ಯದ ಅಭಿವೃದ್ಧಿಯ ವೇಗವನ್ನು ಕಡಿಮೆ ಮಾಡುವುದು ಅವರ ಕೈಯಲ್ಲೇ ಇದೆಯಲ್ಲ? ಈ ವೇಗವನ್ನು ಕಡಿಮೆ ಮಾಡುತ್ತಿದ್ದಾರಾ? ಇದು ಒಮ್ಮೆಗೆ ಈ ಅಪಾಯದ ಬಗ್ಗೆ ಜ್ಞಾನೋದಯವಾಗಿ ಕೊಡುತ್ತಿರುವ ತಪ್ಪೊಪ್ಪಿಗೆಯೇ? ಅಥವಾ ಬೇರೆ ಯಾವ ಕಾರಣಗಳಿವೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ.
ಇತ್ತೀಚೆಗೆ (ಸೆಪ್ಟೆಂಬರ್ 8) ಕೃತಕ ಬುದ್ಧಿಮತ್ತೆ (Artificial Intelligence – ಎ.ಐ) ತಂತ್ರಜ್ಞಾನ ಕ್ಷೇತ್ರದ ಮುಂಚೂಣಿಯಲ್ಲಿರುವ ಕಂಪನಿ ಅಂತ್ರೊಪಿಕ್ (Anthropic)ನ ಯುವ ಸಂಶೋಧನಾ ಪರಿಣತನಾದ ಜೇಕಬ್ ಕೊಕ್ಸೊನ್ ತನ್ನ ರಾಜೀನಾಮೆ ಕೊಟ್ಟ. ಅದನ್ನು ಎಕ್ಸ್ ನಲ್ಲಿ ಘೋಷಿಸುತ್ತಾ “ಯಾವ ಎ.ಐ ಕಂಪನಿಯೂ ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ. ಅವರೆಲ್ಲ ಸ್ವಯಂ-ಉನ್ನತೀಕರಿಸುವ ಸೂಪರ್-ಬುದ್ಧಿಮತ್ತೆಯತ್ತ ತೀವ್ರಗತಿಯಲ್ಲಿ ಧಾವಿಸುತ್ತಿದ್ದು, ನಮ್ಮ ಪ್ರಾಣದ ಜತೆ ಜೂಜಾಡುತ್ತಿದ್ದಾರೆ” ಎಂದ. ಆತ ಹಿಂದೆ ಇನ್ನೊಂದು ಎ.ಐ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿಯಲ್ಲಿರುವ ಕಂಪನಿ OpenAI ನಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದ. ಅವನ ಈ ಎಕ್ಸ್ ಪೋಸ್ಟ್ ನ್ನು 10 ಕೋಟಿ ಜನ ಓದಿದರು. ಅಂತ್ರೊಪಿಕ್ ನಲ್ಲಿ ಮುಂದುವರೆಯುತ್ತಿರುವ ಕೊಕ್ಸೊನ್ ನ ಬಾಸ್ ಇವಾನ್ ಹಬಿಂಗರ್ ಅದಕ್ಕೆ ಹೀಗೆ ಪ್ರತಿಕ್ರಿಯಿಸಿದರು “ನಾವು ಅದನ್ನು ತಡೆಯಲು ಪ್ರಯತ್ನಿಸುತ್ತಿದ್ಧೇವೆ. ಆದರೆ ಈವರೆಗೆ ಸಫಲರಾಗಿಲ್ಲ. ಎ.ಐ ನಿಯಂತ್ರಣ ತಪ್ಪಿ ಮುಂದಿನ 10 ವರ್ಷಗಳಲ್ಲಿ ಇಡೀ ಮನುಕುಲದ ಹತ್ಯೆ ಮಾಡುವ 10% ಸಾಧ್ಯತೆಯಿದೆ”
ಸ್ವಯಂ-ಪ್ರೇರಣಾ ಒಪ್ಪಂದ ಮತ್ತು ಪ್ರಶ್ನೆಗಳು
ಮರುದಿನವೇ ಅಂತ್ರೊಪಿಕ್ ಮುಖ್ಯಸ್ಥ ದರಿಯೊ ಅಮೊಡೈ “ಮುಂಚೂಣಿ ಕಂಪನಿಗಳು ಎ.ಐ ವೇಗ ನಿಧಾನಗೊಳಿಸಬೇಕು’ ಎಂಬ ಲೇಖನ ಬರೆದರು. ಅದರಲ್ಲಿ “ನಾವು ಎ.ಐ ಮೊಡೆಲ್ ಗಳ ಸಾಮರ್ಥ್ಯಗಳನ್ನು ಉನ್ನತೀಕರಿಸುತ್ತಿರುವ ವೇಗವನ್ನು ಕಡಿಮೆ ಮಾಡಬೇಕು.”, ಇಲ್ಲದಿದ್ದರೆ “ಎ.ಐ ಸಿಸ್ಟಮ್ ಗಳ ಮೇಲೆ ನಿಯಂತ್ರಣ ತಪ್ಪಿ, ಅವುಗಳ ದುರ್ಬಳಕೆಯಿಂದ ಸೈಬರ್ ದಾಳಿಗಳು, ಜೈವಿಕ ಭಯೋತ್ಪಾದನೆ, ಮತ್ತು ತೀವ್ರ ಆರ್ಥಿಕ ಬುಡಮೇಲು ಕೃತ್ಯಗಳು ಜರುಗಬಹುದು” ಎಂದು ಹೇಳಿದರು. ಕೆಲವೇ ಗಂಟೆಗಳಲ್ಲಿ ಎ.ಐ ಕ್ಷೇತ್ರದ ಮುಂಚೂಣಿಯಲ್ಲಿರುವ OpenAI ನ ಸ್ಯಾಮ್ ಅಲ್ಟಿಮನ್, ಟೆಸ್ಲಾದ ಈಲಾನ್ ಮಸ್ಕ್ ಹಾಗೂ ಗೂಗಲ್, ಮೈಕ್ರೋ ಸಾಫ್ಟ್ ಕಂಪನಿಗಳ ಮುಖ್ಯಸ್ಥರೂ ಇದಕ್ಕೆ ಸಹಮತದ ದನಿಗೂಡಿಸಿದರು. ಆದರೆ ಎನ್ವಿಡಿಯ ಮುಖ್ಯಸ್ಥ ಎ.ಐ ವೇಗವನ್ನು ಕಡಿಮೆ ಮಾಡುವುದಲ್ಲ, ಹೆಚ್ಚಿಸಲು ಪ್ರಯತ್ನಿಸಬೇಕು ಎಂದರು. ಮೇಟಾ (ಫೆಸ್ ಬುಕ್ ಒಡೆತನದ ಕಂಪನಿ) ಮುಖ್ಯಸ್ಥ ಸಹ ಈ ಅಪಾಯದ ಎಚ್ಚರಿಕೆಗೆ ಭಿನ್ನಮತ ವ್ಯಕ್ತಪಡಿಸಿದರು.
ಅಧ್ಯಕ್ಷ ಟ್ರಂಪ್ ಮೊದಲಿಗೆ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಚೀನಾದ ಜತೆ ಎ.ಐ ಪೈಪೋಟಿಯಲ್ಲಿ ಗೆಲ್ಲಲು ಇನ್ನಷ್ಟು ವೇಗವಾಗಿ ಓಡಬೇಕು ಎಂದು ಹೇಳಿದ್ದರು. ಆದರೇ ಕೊನೆಗೂ ಈ ಕಂಪನಿಗಳ (ಭಿನ್ನಮತದ ಎನ್ವಿಡಿಯಾ, ಮೆಟಾ ಸೇರಿ) ಒತ್ತಾಯಕ್ಕೆ ಮಣಿದು. ಇವು ತಮ್ಮೊಳಗೆ ನಿರ್ಧರಿಸಿದ ನಿಬಂಧನೆಗಳನ್ನು ಸ್ವಯಂ-ಪ್ರೇರಣೆಯಿಂದ ಪಾಲಿಸುವ ಒಪ್ಪಂದಕ್ಕೆ, ಅಧ್ಯಕ್ಷ ಟ್ರಂಪ್ ಅವರ ಸಮ್ಮಖದಲ್ಲಿ ಸಹಿ ಹಾಕಿ ಘೋಷಿಸಿದ್ದಾರೆ. ಈ ಒಪ್ಪಂದದ ಷರತ್ತುಗಳು ಮುಂದೆ ಎಲ್ಲರಿಗೂ ಅನ್ವಯವಾಗುವ ಯು.ಎಸ್ ಕಾನೂನು ಆಗಬಹುದು ಎಂದೂ ಹೇಳಿದ್ದಾರೆ. ಈ ಒಪ್ಪಂದವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅದರ ಹಿನ್ನೆಲೆ ಅರ್ಥ ಮಾಡಿಕೊಳ್ಳಬೇಕು.

ಇದು ಯು.ಎಸ್ ನಲ್ಲೂ ಜಗತ್ತಿನ ಎಲ್ಲೆಡೆಯಲ್ಲೂ ಆಸಕ್ತಿಗೂ, ಆತಂಕಕ್ಕೂ ಮಾಧ್ಯಮಗಳಲ್ಲಿ ಚರ್ಚೆಗೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಪ್ರಶ್ನೆಗಳು ಎದ್ದಿವೆ. ಇದು ನಿಜವಾ? ಎ.ಐ ಇಷ್ಟೊಂದು ಅಪಾಯಕಾರಿನಾ? ಎ.ಐ ತಮ್ಮಷ್ಟಕ್ಕೆ ಸಾಮೂಹಿಕ ಹತ್ಯೆ ಹೇಗೆ ಮಾಡುತ್ತವೆ? ಇದೊಂದೆ ಅಪಾಯನಾ? ಈಗಿನ ಎ.ಐ ಸಾಮರ್ಥ್ಯದಲ್ಲಿ ಯಾವ ಅಪಾಯವಿಲ್ಲವಾ? ಎ.ಐ ಮುಂಚೂಣಿಯಲ್ಲಿರುವ ಕಂಫನಿಗಳ ಮುಖ್ಯಸ್ಥರೇ ಈ ಎಚ್ಚರಿಕೆಯನ್ನು, ಏಕೆ ಯಾರಿಗೆ ಕೊಡುತ್ತಿದ್ದಾರೆ? ಎ.ಐ ಸಾಮರ್ಥ್ಯದ ಅಭಿವೃದ್ಧಿಯ ವೇಗವನ್ನು ಕಡಿಮೆ ಮಾಡುವುದು ಅವರ ಕೈಯಲ್ಲೇ ಇದೆಯಲ್ಲ? ಈ ವೇಗವನ್ನು ಕಡಿಮೆ ಮಾಡುತ್ತಿದ್ದಾರಾ? ಇದು ಒಮ್ಮೆಗೆ ಈ ಅಫಾಯದ ಬಗ್ಗೆ ಜ್ಞಾನೋದಯವಾಗಿ ಕೊಡುತ್ತಿರುವ ತಪ್ಪೊಪ್ಪಿಗೆಯೇ? ಅಥವಾ ಬೇರೆ ಯಾವ ಕಾರಣಗಳಿವೆಯೇ? ವೇಗ ಕಡಿಮೆ ಮಾಡುವುದಲ್ಲದೆ ಬೇರೆ ಯಾವುದಾದರೂ ಪರಿಹಾರವಿದೆಯೇ? ಅವರ ಒಪ್ಪಂದ ಏನನ್ನು ಹೇಳುತ್ತದೆ? ಅಷ್ಟೊಂದು ಅಪಾಯಕಾರಿಯಾಗಿದ್ದರೆ ವೇಗ ಕಡಿಮೆ ಮಾಡುವ ಬದಲು ಅದನ್ನು ಮುಚ್ಚಿ ಬಿಡುವುದೇ ಸೂಕ್ರವಲ್ಲವೇ?
ಈಗ ಮುಂಚೂಣಿಯ ಎ.ಐ ಕಂಪನಿಗಳ ಕುರಿತ ಕೊನೆಯ ಕೆಲವು ಪ್ರಶ್ನೆಗಳನ್ನು ಮೊದಲು ನೋಡೋಣ. ಇದಕ್ಕಾಗಿ ಈ ಕಂಪನಿಗಳ ಹೇಳಿಕೆಗಳ ಹಿನ್ನೆಲೆಯನ್ನು ನೋಡೋಣ. ಉಳಿದ ಪ್ರಶ್ನೆಗಳಿಗೆ ಪ್ರತ್ಯೇಕ ಲೇಖನವೇ ಬೇಕಾಗಬಹುದು.
ಮೊದಲ ಹಂತದ ‘ಜನರೇಟಿವ್ ಎ.ಐ’ ನ ಹೈಪ್ ಮತ್ತು ವಾಸ್ತವ
ಈ ಮುಂಚೂಣಿ ಕಂಪನಿಗಳಲ್ಲಿ ಅಂತ್ರೊಪಿಕ್, OpenAI ತಮ್ಮ ವ್ಯವಹಾರಕ್ಕೆ, ಮಾರುಕಟ್ಟೆ ಮೌಲ್ಯನಿರ್ಣಯ, ಮೌಲ್ಯವರ್ಧನೆಗೆ ಪೂರ್ಣವಾಗಿ ಎ.ಐ ಮೇಲೆ ಅವಲಂಬಿಸಿರುವಂಥವು. ಗೂಗಲ್, ಮೈಕ್ರೋಸಾಫ್ಟ್, ಎನ್ವಿಡಿಯ, ಮೆಟಾ ಸಹ ಬಹುಪಾಲು ಈಗ ತಮ್ಮ ಮೌಲ್ಯವರ್ಧನೆಗೆ ಎ.ಐ ಮೇಲೆ ಅವಲಂಬಿಸಿರುವಂಥವು. ಹಾಗಾದರೆ ಈ ಭಿನ್ನಮತ ಏಕೆ? ಇದಕ್ಕೆ ಎ.ಐ ನ ಸಂಕೀರ್ಣ ವ್ಯವಸ್ಥೆಯಲ್ಲಿ ಈ ಕಂಪನಿಗಳ ನಿರ್ದಿಷ್ಟ ಪಾತ್ರ, ವ್ಯವಹಾರ ಮಾದರಿ (ಬಿಸಿನೆಸ್ ಮೊಡೆಲ್) ಕಾರಣ. ಎನ್ವಿಡಿಯ ಬಿಟ್ಟರೆ ಉಳಿದ ಕಂಪನಿಗಳು ಎ.ಐ ಸಾಫ್ಟ್ ವೇರ್ ತಯಾರಿಸುತ್ತವೆ. ಎನ್ವಿಡಿಯ ಎ.ಐ ಸಾಫ್ಟ್ ವೇರ್ ಗೆ ಬೇಕಾದ ಹಾರ್ಡ್ ವೇರ್ ಚಿಪ್ಸ್ ತಯಾರಿಸುತ್ತದೆ.
ಮೊದಲ ಹಂತದ ಎ.ಐ ಸಾಫ್ಟ್ ವೇರ್ ನ್ನು Large Language Model (LLM) Generative AI System ಎನ್ನುತ್ತಾರೆ. ಇವು ಬಳಕೆದಾರನ ಆವಶ್ಯಕತೆಗಳ ನಿರ್ದೇಶನದ ಮೇಲೆ ಪಠ್ಯ (ಪ್ರಬಂಧ, ಪೇಪರ್), ಅಡಿಯೋ, ವಿಡಿಯೊ, ಕಂಫ್ಯೂಟರ್ ಕೋಡ್ ಬರೆಯಬಲ್ಲವು, ತಯಾರಿಸಬಲ್ಲವು ಅಥವಾ ಬದಲಾಯಿಸಬಲ್ಲವು. ಇವುಗಳನ್ನು ವಿನ್ಯಾಸ ಮಾಡುವವರಿಗೆ ಸಂಶೋಧನಾ ಹಂತದಲ್ಲೂ, ಮುಂದೆ ವ್ಯಾಪಕ ಬಳಕೆಯ ಹಂತದಲ್ಲೂ ಎನ್ವಿಡಿಯ ಹಾರ್ಡ್ ವೇರ್ ಬೇಕು. ಇದಲ್ಲದೆ ಎ.ಐ ಸಾಫ್ಟ್ ವೇರ್ ಮುಂಚೂಣಿ ತಂತ್ರಜ್ಞಾನವಾದ್ದರಿಂದ ಸಂಶೋಧನೆ ಮತ್ತು ಅಭಿವೃದ್ಧಿಗೂ ಭಾರೀ ಖರ್ಚು ಮಾಡಬೇಕು. ಹಾಗಾಗಿ ಈ ಕಂಪನಿಗಳು ವೆಂಚರ್ ಕ್ಯಾಪಿಟಲ್ (ಸಾಹಸ ಬಂಡವಾಳ) ಸಂಸ್ಥೆಗಳಿಂದ ಭಾರೀ ಹಣ ಹೂಡಿಕೆಯನ್ನು ಕೋರಿವೆ. ಇದಕ್ಕಾಗಿ ಎ.ಐ ಸಿಸ್ಟಮ್ ಗಳ ಬಳಕೆಯಲ್ಲಿ ಅವು ವಿವಿಧ ಕ್ಷೇತ್ರಗಳಲ್ಲಿ ತರಬಹುದಾದ ಉತ್ಪಾದಕತೆ, ಅನುಕೂಲಗಳು ಇತ್ಯಾದಿಗಳ ಬಗ್ಗೆ ಬಹಳಷ್ಟು ‘ಹೈಪ್’ (ವಾಸ್ತವಕ್ಕಿಂತ ಬಹುಪಟ್ಟು ಅತಿಶಯೋಕ್ತಿ) ಮಾಡಿವೆ. ಅದರ ಆಧಾರದ ಮೇಲೆ ಎ.ಐ ಸಾಫ್ಟ್ ವೇರ್ ಕಂಪನಿಗಳಲ್ಲಿ ಭಾರೀ ಹೂಡಿಕೆ ಮಾಡಲಾಗಿದೆ. ಹಾಗಾಗಿ ಈ ಕಂಪನಿಗಳ ಮಾರುಕಟ್ಟೆ ಮೌಲ್ಯ ಮುಗಿಲು ಮುಟ್ಟಿದೆ. ಮುಂದೆ ಈ ಎ.ಐ ಕಂಪನಿಗಳು ಭಾರೀ ಆದಾಯ ಮತ್ತು ಲಾಭ ಗಳಿಸುತ್ತವೆ ಎಂಬ ನಿರೀಕ್ಷೆ ಇದರ ಹಿಂದಿದೆ,
ಈಗ ‘ಜನರೇಟಿವ್ ಎ.ಐ’ ವ್ಯಾಪಕ ಬಳಕೆಯ ಹಂತಕ್ಕೆ ಬಂದಿದ್ದು ಈ ಕಂಪನಿಗಳ ಆದಾಯವಾಗಲಿ, ಬಳಕೆದಾರರ ಉತ್ಪಾದಕತೆಯಾಗಲಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಖರ್ಚು ಮಾತ್ರ ನಿರೀಕ್ಷಿತ ಮಟ್ಟಕ್ಕಿಂತಲೂ ಹೆಚ್ಚಿದೆ. ಭಾರೀ ಡಾಟಾ ಸೆಂಟರ್ ಗಳನ್ನು ನಡೆಸಲು ಭಾರಿ ಪ್ರಮಾಣದಲ್ಲಿ ವಿದ್ಯುತ್ ಮತ್ತು ಅವನ್ನು ತಣಿಸಲು ಭಾರೀ ನೀರು ಬೇಕಾಗುವುದರಿಂದ ಅವುಗಳ ವೆಚ್ಚ ಮತ್ತು ಲಭ್ಯತೆಯ ತೊಡಕುಗಳು ನಿರೀಕ್ಷೆಗಿಂತಲೂ ಹೆಚ್ಚಿವೆ. ಭಾರೀ ಪೈಪೋಟಿಯೂ ಏರ್ಪಟ್ಟಿದೆ.
ಚಾಟ್-ಜಿಪಿಟಿ ನಿರ್ವಹಣೆಯಲ್ಲಿ OpenAI ಗೆ 2024ರಲ್ಲಿ 500, 2025ರಲ್ಲಿ 800 ಕೋಟಿ ಡಾಲರ್ ನಷ್ಟ ಉಂಟಾಯಿತು. 2026ರಲ್ಲಿ 1400 ಕೋಟಿ ಡಾಲರ್ ನಷ್ಟವಾಗುವ ನಿರೀಕ್ಷೆಯಿದೆ. ಹೊಸ ಹೂಡಿಕೆ, ನಿಧಿ ಪಡೆಯಲು ಸಾಧ್ಯವಾಗದಿದ್ದರೆ 2027ರ ಮಧ್ಯದ ಹೊತ್ತಿಗೆ OpenAI ನ ಹಣ ಖಾಲಿಯಾಗಬಹುದು ಎಂದು ಹೇಳಲಾಗಿದೆ. ಇದಕ್ಕೆ ಕಾರಣ ಚಾಟ್-ಜಿಪಿಟಿ ಗೆ 50 ಕೋಟಿ ಬಳಕೆದಾರರಿದ್ದರೂ ಅದರಲ್ಲಿ ಶುಲ್ಕ ಕೊಡುವ ಬಳಕೆದಾರರು ಕೇವಲ 1.55 ಕೋಟಿ. ಬೇರೆ ಎ.ಐ ಕಂಪನಿಗಳದ್ದು ಇದೇ ಕತೆ. ಅಂತ್ರೊಪಿಕ್ 2025ರಲ್ಲಿ 520 ಕೋಟಿ ಡಾಲರ್ ನಷ್ಟ ಕಂಡಿದೆ.
ಕಂಪನಿ ಮತ್ತು ಉದ್ಯಮಗಳಲ್ಲಿ ಜನರೇಟಿವ್ ಎ.ಐ’ ಗಳ ಬಳಕೆಯ ಅನುಭವ ಅಷ್ಟೇನೂ ಉತ್ತೇಜನಕಾರಿಯಾಗಿರಲಿಲ್ಲ. ಸಾವಿರಕ್ಕೂ ಹೆಚ್ಚು ಉತ್ತರ ಅಮೆರಿಕ ಮತ್ತು ಯುರೋಪ್ ನ ಎ.ಐ ಬಳಕೆಯ ಪ್ರಾಜೆಕ್ಟ್ ಗಳನ್ನು ಹಾಕಿಕೊಂಡ ಕಂಪನಿಗಳಲ್ಲಿ 2024ರಲ್ಲಿ 17% ರಷ್ಟು ಮತ್ತು 2025ರಲ್ಲಿ 42% ರಷ್ಟು ಕಂಪನಿಗಳು ಆ ಪ್ರಾಜೆಕ್ಟ್ ಗಳನ್ನು ರದ್ದು ಮಾಡಿದವು ಎಂದು ಎಸ್ ಅಂಡ್ ಪಿ ಗ್ಲೋಬಲ್ ಮಾರ್ಕೆಟ್ ಇಂಟಲಿಜೆನ್ಸ್ ತಿಳಿಸಿದೆ. ಇದಕ್ಕೆ ಒಂದು ಪ್ರಮುಖ ಕಾರಣ ಕೆಲವು ಸಂದರ್ಭಗಳಲ್ಲಿ ಅವು ಮಾಡುವ ಗಂಭೀರ ತಪ್ಪುಗಳು ಮತ್ತು ಅವುಗಳನ್ನು ಗುರುತಿಸುವುದು ಮತ್ತು ಸರಿ ಪಡಿಸುವುದರಲ್ಲಿ ಇರುವ ತೊಡಕುಗಳು ಮತ್ತು ಹೆಚ್ಚುವರಿ ಕೆಲಸಗಳು, ಅವನ್ನು ಗುರುತಿಸಲು ಅಥವಾ ಸರಿಪಡಿಸಲು ಸಾಧ್ಯವಾಗದಿದ್ದಾಗ ಆಗುವ ಅನಾಹುತಗಳು.
‘ಎ.ಐ ಏಜೆಂಟ್’ : ಮತ್ತೆ ಹೈಪ್ ಮತ್ತು ವಾಸ್ವವಗಳಲ್ಲಿ ಕಂದಕ
ಇದಕ್ಕೆ ಪ್ರತಿಕ್ರಿಯೆಯಾಗಿ ಈವರೆಗೆ ವ್ಯಾಪಕವಾಗಿದ್ದ ಜನರೇಟಿವ್ ಎ.ಐ’ ಗೆ ಬದಲಿಗೆ ‘ಎ.ಐ ಏಜೆಂಟ್’ ಎಂಬ ಹೊಸ ವಿಧದ ಸಾಫ್ಟ್ ವೇರ್ ಪರಿಚಯಿಸಿದವು. ಇದು ಮುಖ್ಯವಾಗಿ ಕಂಪನಿಗಳಿಗೆ ಪ್ರಯೋಜನಕಾರಿಯಾಗಿರುತ್ತದೆ. ಹೂಡಿಕೆದಾರರು ಮತ್ತು ಕಾರ್ಪೊರೆಟ್ ಗಳನ್ನು ಆಕರ್ಷಿಸಲು ಕಂಪನಿಗಳು ಮತ್ತು ಕೆಲವು ಉದ್ಯಮ ವಿಶ್ಲೇಷಕರು ಮತ್ತೆ ಎ.ಐ ಏಜೆಂಟ್ ಗಳ ಸಾಮರ್ಥ್ಯ ಮತ್ತು ಸಾಧ್ಯತೆಗಳ ಬಗ್ಗೆ ‘ಹೈಪ್’ ಮಾಡಲು ತೊಡಗಿದವು. ಮೆಕೆನ್ಸಿ ಎಂಬ ಉದ್ಯಮ ವಿಶ್ಲೇಷಕ ಸಂಸ್ಥೆ ಯು.ಎಸ್ ನಲ್ಲಿರುವ ಕೆಲಸದ ಪ್ರಕ್ರಿಯೆಗಳಲ್ಲಿ 44% ಭಾಗವನ್ನು ಈಗಲೇ ಯಾವುದೇ ಮಾನವ ಮಧ್ಯಪ್ರವೇಶವಿಲ್ಲದೆ ‘ಎ.ಐ ಏಜೆಂಟ್’ ಗಳು ನಿರ್ವಹಿಸಬಲ್ಲದು ಎಂದಿತು. ಮೈಕ್ರೊಸಾಫ್ಟ್ ಮುಖ್ಯಸ್ಥ ಇನ್ನೆರಡು ವರ್ಷಗಳಲ್ಲಿ ಎಲ್ಲ ‘ವೈಟ್ ಕಾಲರ್’ ಉದ್ಯೋಗಗಳ ಕೆಲಸವನ್ನು ಪೂರ್ಣವಾಗಿ ಎ.ಐ ಏಜೆಂಟ್ ಗಳು ನಿಭಾಯಿಸಬಲ್ಲವು ಎಂದರು. ಆದರೆ ವಾಸ್ತವ ಅದಕ್ಕಿಂತ ಬಹಳ ಭಿನ್ನವಾಗಿತ್ತು, ಹೆಚ್ಚು ಸಂಕೀರ್ಣವಾಗಿತ್ತು. ‘404 ಮೀಡಿಯಾ’ ಎಂಬ ಸಂಸ್ಥೆಯ ಅಧ್ಯಯನದ ಪ್ರಕಾರ ಎ.ಐ ಏಜೆಂಟುಗಳು ತಮ್ಮ ಗುರಿಯನ್ನು ಸಾಧಿಸಿದ್ದು 30% ಪ್ರಕರಣಗಳಲ್ಲಿ ಮಾತ್ರ.
ಮೊದಲ ವಿಧದ ಜನರೇಟಿವ್ ಎ.ಐ’ ನಂತೆ ಎ.ಐ ಏಜೆಂಟುಗಳು ಸಹ ಗಂಭೀರ ತಪ್ಪುಗಳು ಹಾಗೂ ಅದರಿಂದುಂಟಾಗುವ ಅನಾಹುತಗಳು ಮತ್ತು ಪರಿಣಾಮಕಾರಿತನದ ಕೊರತೆಯಿಂದ ಬಳಲುತ್ತಿರುವುದು ಕಾರಣವೆಂದು ಹೇಳಲಾಗಿದೆ. ಇಂತಹ ಹಲವು ಅನಾಹುತಗಳು ಈ ಮುಂಚೂಣಿಯ ಕಂಪನಿಗಳೇ ಎದುರಿಸಿವೆ. ಇಂತಹ ಕೆಲವು ಇತ್ತೀಚಿನ ಅನಾಹುತಗಳೇ ಈ ಕಂಪನಿಗಳ ಮುಖ್ಯಸ್ಥರ ‘ನಾಟಕೀಯ ಹೇಳಿಕೆ’ ಗಳಿಗೆ ಕಾರಣವಾಗಿದ್ದು. ಇದರ ಮೂಲಕಾರಣ ಎ.ಐ ಏಜೆಂಟುಗಳು ಸಹ LLM ಗಳ ಮೇಲೆ ಆಧಾರಿತವಾಗಿರುವುದು ಮತ್ತು ಅವುಗಳ ಅಂತರ್ನಿಹಿತ ನ್ಯೂನತೆಗಳು ಎನ್ನಲಾಗಿದೆ. ಎ.ಐ ಏಜೆಂಟುಗಳ ವೆಚ್ಚ ಸಹ ಬಳಕೆದಾರರಿಗೆ ಉತ್ತೇಜನಕಾರಿಯಾಗಿ ಕಂಡಿಲ್ಲ.
ಹೀಗೆ ಮುಂಚೂಣಿಯ ಎ.ಐ ಕಂಪನಿಗಳು ಭಾರೀ ‘ಹೈಪ್’ ಮಾಡಿ ಭಾರಿ ಹೂಡಿಕೆ ಆಕರ್ಷಿಸುವಲ್ಲಿ ಯಶಸ್ವಿಯಾದವು. ಆದರೆ ಹಲವು ವರ್ಷಗಳ ನಂತರವೂ ಆದಾಯ/ಲಾಭ ತೋರುವಲ್ಲಿನ ವೈಫಲ್ಯಗಳು ಮತ್ತು ಹಲವು ಅನಾಹುತಗಳಿಂದಾಗಿ ಹೂಡಿಕೆ ನಿಂತು ಹೋಗುವ ಭಯ ಈ ಕಂಪನಿಗಳನ್ನು ಕಾಡುತ್ತಿವೆ. ಅದೇ ಸಮಯದಲ್ಲಿ ಈ ಕಂಪನಿಗಳಿಗಿಂತ ಅತ್ಯಂತ ಭಿನ್ನವಾಗಿ ಎಷ್ಟೋ ಕಡಿಮೆ ಹೂಡಿಕೆಯಲ್ಲಿ, ಕಡಿಮೆ ವೆಚ್ಚದಲ್ಲಿ ಮತ್ತು ಹೆಚ್ಚಿನ ದಕ್ಷತೆಯಿಂದ ಅದೇ ಸೇವೆ ಕೊಡುವ ಹಲವು ಸಣ್ಣ ಕಂಪನಿಗಳು ಯು.ಎಸ್ ನಲ್ಲೂ ಚೀನಾದಲ್ಲೂ ಹುಟ್ಟಿಕೊಂಡಿವೆ. ಅದರ ಪೈಪೋಟಿಯ ಭೀತಿಯೂ ಇದೆ. ಹೀಗಾಗಿ ತಮ್ಮ ಈ ವೈಫಲ್ಯಗಳನ್ನೇ ಮತ್ತು ಅನಾಹುತಗಳನ್ನೇ ತಮ್ಮ ಅಸ್ತ್ರ ಮಾಡಿಕೊಳ್ಳುವ ಪ್ರಯತ್ನ ನಡೆದಿರುವ ಹಾಗೆ ಕಾಣುತ್ತದೆ. ಈ ಕಂಪನಿಗಳು ತಮ್ಮದೇ ಎ.ಐ ಏಜೆಂಟುಗಳು ನಿಯಂತ್ರಣ ಮೀರಿದರೆ ‘ಮನುಕುಲದ ಹತ್ಯೆ’ ಆಗಬಹುದು ಎಂಬ ಭೀತಿ ಹಬ್ಬಿಸಿ ಈಗಾಗಲೇ ಆಗಿರುವ ಆಗುತ್ತಿರುವ ಎ.ಐ ದುರ್ಬಳಕೆಗಳಿಂದ, ತಾಂತ್ರಿಕ ವೈಫಲ್ಯದಿಂದ ಆಗುತ್ತಿರುವ ಅನಾಹುತಗಳೀಂದ, ತಮ್ಮ ‘ಹೈಪ್’ ಬಯಲಾಗುತ್ತಿರುವುದರಿಂದ ಗಮನವನ್ನು ಭವಿಷ್ಯದ ಭೀತಿಗೆ ತಿರುಗಿಸಿವೆ.
ಗಾಜಾ ನರಮೇಧದಲ್ಲಿ ಎ.ಐ ಪಾತ್ರ
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಗಾಜಾದ ನರಮೇಧ, ಆಸ್ಪತ್ರೆ ಮತ್ತಿತರ ನಾಗರಿಕ ಸ್ಥಾವರಗಳ ವಿನಾಶ, ಪ್ರಮುಖ ನಾಯಕರನ್ನು, ಮಕ್ಕಳನ್ನು ಗುರಿಯಿಟ್ಟು ಕೊಲ್ಲುವ ಇಸ್ರೇಲಿ ಭಯೋತ್ಪಾದಕ ಕೃತ್ಯಗಳಲ್ಲಿ ಈ ಮುಂಚೂಣಿ ಕಂಪನಿಗಳ ಎ.ಐ ಸಾಫ್ಟ್ ವೇರ್ ಗಳ ದೊಡ್ಡ ಪಾತ್ರವಿದೆ ಎಂದು ತನ್ನ ವರದಿಯಲ್ಲಿ ಹೇಳಿದೆ. ‘ನಜಾ’ ಎಂಬ ಇತ್ತೀಚಿನ ಇಸ್ರೇಲಿ ಸಾಕ್ಷ್ಯಚಿತ್ರ ಸಹ ಇದನ್ನು ಇಸ್ರೇಲಿ ಸೈನಿಕರ ಸಂದರ್ಶನದ ಮೂಲಕ ತೋರಿಸಿದೆ. ಇರಾನಿನ 165 ಶಾಲಾ ಮಕ್ಕಳ ನರಮೇಧದಲ್ಲಿ ಎ.ಐ ಪಾತ್ರವಿತ್ತು. ಇವೆಲ್ಲವನ್ನು ನಿಲ್ಲಿಸುವ ಬಗ್ಗೆ ಇವು ಏನಾದರೂ ಹೇಳಿವೆಯೇ? ಯು.ಎಸ್-ಇಸ್ರೇಲಿ ಮಿಲಿಟರಿ ಎ.ಐ ಬಳಕೆಯ ದೊಡ್ಡ ಕ್ಷೇತ್ರ. ಈ ನರಮೇಧದಲ್ಲಿ ಎ.ಐ ಏಜೆಂಟುಗಳು ಭಾಗವಹಿಸಿರುವುದು ನಿಯಂತ್ರಂಣ ಮೀರಿ ಅಲ್ಲ, ಅವುಗಳ ಗುರಿಯೇ ಅದು. ಈ ದುರ್ಬಳಕೆಯಿಂದ ಹಿಂದೆ ಸರಿಯುವ ಬಗ್ಗೆ ಹೇಳಿವೆಯೆ? ಇಲ್ಲ. OpenAI-Hugging Face ಸೇರಿದಂತೆ ಇತ್ತೀಚಿನ ಈ ಕಂಪನಿಗಳ ಎ.ಐ ಏಜೆಂಟುಗಳು ಮಾಡಿದ ಅನಾಹುತಗಳು, ಅವು ನಿಯಂತ್ರಣ ತಪ್ಪಿ ತಾವೇ ಮಾಡಿದ್ದಲ್ಲ. ಅವು ಎಲ್ಲ ಸುರಕ್ಷಿತತೆಯ ನಿಯಮಗಳನ್ನು ಮೀರಿ ಆದ ‘ತಾಂತ್ರಿಕ ವೈಫಲ್ಯಗಳು’. ವೇಗ ನಿಧಾನ ಮಾಡುವುದು ಪ್ರಾಮಾಣಿಕ ನಿರ್ಧಾರವಾದರೆ ಈ ಕಂಪನಿಗಳಲ್ಲಿ ಒಂದಾದ ಅಂತ್ರೊಪಿಕ್ ಒಂದು ಟ್ರಿಲಿಯನ್ ಮಾರುಕಟ್ಟೆ ಮೌಲ್ಯ ಪಡೆಯುವ ಗುರಿಯೊಂದಿಗೆ ಐ.ಪಿ.ಒ ಗೆ (ಶೇರು ಮಾರುಕಟ್ಟೆಗೆ) ಹೋಗುವುದನ್ನು ನಿಲ್ಲಿಸಬೇಕಿತ್ತಲ್ಲ. ಮಾತ್ರವಲ್ಲ, ಅಂತ್ರೊಪಿಕ್ ಸೇರಿದಂತೆ ಯಾವ ಈ ಕಂಪನಿಯು ಯಾವುದೇ ತನ್ನ ಅಭಿವೃದ್ಧಿ ಯೋಜನೆಯನ್ನು ನಿಲ್ಲಿಸಿಲ್ಲ. ಈ ವರ್ಷ ಈ ಮುಂಚೂಣಿ ಕಂಪನಿಗಳು 690 ಶತಕೋಟಿ ಡಾಲರು ಖರ್ಚು ಮಾಡುವ ಯೋಜನೆ ಹೊಂದಿವೆ. ಇದರ ಮೂರನೇ ಒಂದು ಭಾಗಕ್ಕೆ ಸಾಲ ಮಾಡುತ್ತಿವೆ. ಈ ಕಂಪನಿಗಳು ಪರಸ್ಪರ ಮತ್ತು ಇತರ ಪ್ರಮುಖ ಕಂಪನಿಗಳೊ ಹೂಡಿಕೆ ಖರೀದಿ ಒಪ್ಪಂದಗಳನ್ನು ಮಾಡಿ “ಹುಸಿ ವರ್ತುಲ ಆರ್ಥಿಕ” ನಿರ್ಮಿಸಿವೆ. ಇದೊಂದು (2000 ದ ಡಾಟ್-ಕಾಮ್ ನಂತೆ) ಹೊಸ “ಆರ್ಥಿಕ ಗುಳ್ಳೆ”. ಈ ಕ್ಷೇತ್ರದಲ್ಲಿ ನಿಜವಾದ ಆದಾಯ-ಲಾಭ ಇಲ್ಲವೆಂದು ಹೆಚ್ಚೆಚ್ಚು ಸ್ಪಷ್ಟವಾದಂತೆ ಈ ಗುಳ್ಳೆ ಒಡೆದು ಹೋಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ನಿಬಂಧನೆಗಳಿಂದ ಮುಕ್ತ ಏಕಸ್ವಾಮ್ಯ ಕೂಟಕ್ಕೆ ಒಪ್ಪಂದ
ಒಂದು ಇಡೀ ತಂತ್ರಜ್ಞಾನದ ಕ್ಷೇತ್ರ ‘ಮನುಕುಲದ ಹತ್ಯೆ’ಯ ಅಪಾಯ ಒಡ್ಡುತ್ತಿದ್ದರೆ ಸರಕಾರದ ಅಥವಾ ಸ್ವತಂತ್ರ ಏಜೆನ್ಸಿ ಈ ಕ್ಷೇತ್ರದ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು. ನಿಬಂಧನೆ-ನಿಯಂತ್ರಣಗಳನ್ನು ಹೇರಬೇಕು. ಆದರೆ ಈ ಕಂಪನಿಗಳು ಅದಕ್ಕೆ ತದ್ವಿರುದ್ಧವಾಗಿ, ತಮ್ಮೊಳಗೆ ನಿರ್ಧರಿಸಿದ ನಿಬಂಧನೆಗಳನ್ನು ಸ್ವಯಂ-ಪ್ರೇರಣೆಯಿಂದ ಪಾಲಿಸುವ ಒಪ್ಪಂದವನ್ನು ಮಂಡಿಸಿವೆ. ಅದಕ್ಕೆ ಅಧ್ಯಕ್ಷ ಟ್ರಂಪ್ ಅವರನ್ನು ಒಪ್ಪಿಸಿವೆ. ಈ ಒಪ್ಪಂದದ ಷರತ್ತುಗಳು ಮುಂದೆ ಎಲ್ಲರಿಗೂ ಅನ್ವಯವಾಗುವ ಯು.ಎಸ್ ಕಾನೂನು ಆಗಬಹುದು ಎಂದೂ ಅಧ್ಯಕ್ಷ ಟ್ರಂಪ್ ಅವರಿಂದ ಹೇಳಿಸಿವೆ. ಈ ಒಪ್ಪಂದವನ್ನು ಜಾಗತಿಕ ಮಟ್ಟಕ್ಕೂ ಒಯ್ಯುವ ಪ್ರಯತ್ನಗಳಾಗುತ್ತಿವೆ. ಈ ಒಪ್ಪಂದದ ನಿಬಂಧನೆಗಳೂ ಏನು? ಎ.ಐ ಏಜೆಂಟುಗಳ ಮತ್ತಿತರ ಸಾಫ್ಟ್ ವೇರ್ ಗಳ ಸಾಮರ್ಥ್ಯ, ಸಾಧ್ಯತೆಗಳು ಮತ್ತು ಅದರ ಅಭಿವೃದ್ಧಿಯ ವೇಗವನ್ನು ಈ ಕ್ಷೇತ್ರದಲ್ಲಿ ಗರಿಷ್ಟ ಪರಿಣಿತಿ ಹೊಂದಿರುವ ಈ ಕಂಪನಿಗಳು ನಿರ್ಧರಿಸಬೇಕು. ಇವನ್ನು ‘ಅಪಾಯ ತಡೆಯುವ’ ಕ್ರಮವಾಗಿ ಎಲ್ಲ ಕಂಪನಿಗಳು ಪಾಲಿಸಬೇಕು. ಸುರಕ್ಷಿತತೆಗೆ ಪ್ರತಿ ಕಂಪನಿ ಆಂತರಿಕ ನಿಯಂತ್ರಣ ನಿಬಂಧನೆಗಳನ್ನು ರೂಪಿಸಬೇಕು. ಇದನ್ನು ಅನುಸರಿಸಲಾಗುತ್ತಿದೆಯೇ ಎಂಬುದನ್ನು ಬಾಹ್ಯ ಅಡಿಟ್ ಗಳು ಆಗಬೇಕು. ಈ ಕಂಪನಿಗಳ ಬೋರ್ಡ್ ಇದರ ಮೇಲುಸ್ತುವಾರಿ ಮಾಡಬೇಕು.

ಇದು ಈ ಕಂಪನಿಗಳು ತಮ್ಮೊಳಗಿನ ಪೈಪೋಟಿಯನ್ನು ನಿಭಾಯಿಸುವ ಮತ್ತು ಯು.ಎಸ್ ಇತರ ಸಣ್ಣ-ಮಧ್ಯಮ ಕಂಪನಿಗಳ ಮತ್ತು ಚೀನಾದ ಕಂಪನಿಗಳ ಪೈಫೋಟಿಯನ್ನು ಕೊಲ್ಲುವ ಕ್ರಮವಾಗಿ ಕಾಣುತ್ತದೆ. ಆದರೆ ಈ ಎಲ್ಲ ನಿಬಂಧನೆ-ನಿಯಂತ್ರಣಗಳನ್ನು ಸ್ವಯಂ-ಪ್ರೇರಣೆಯಿಂದ ಪಾಲಿಸುವುದರಿಂದ ಮತ್ತು ಯಾವುದೇ ಕಾನೂನುಬದ್ಧ ಬಾಧ್ಯತೆಗಳಿಲ್ಲದಿರುವುದರಿಂದ ಇದು ಪರಿಣಾಮಕಾರಿಯಾಗದೆ ಮುರಿದು ಬೀಳುವ ಸಾಧ್ಯತೆಯೇ ಹೆಚ್ಚು. ಪ್ರಮುಖವಾಗಿ ಯು.ಎಸ್ ನಲ್ಲಿ ಯಾವುದೇ ಕ್ಷೇತ್ರದ ಪ್ರಮುಖ ಕಂಪನಿಗಳು ಒಟ್ಟಾಗಿ ಇಡೀ ಕ್ಷೇತ್ರಕ್ಕೆ ಅನ್ವಯಿಸುವ (ಉತ್ಪನ್ನಗಳ ಬೆಲೆ, ಪೂರೈಕೆ ಇತ್ಯಾದಿ) ಒಪ್ಪಂದವನ್ನು ಮಾಡಿಕೊಳ್ಳುವುದನ್ನು “ಏಕಸ್ವಾಮ್ಯ ನಿಷೇಧ’ ಕಾನೂನು ನಿಷೇಧಿಸುತ್ತದೆ. “ಏಕಸ್ವಾಮ್ಯ ನಿಷೇಧ’ ಕಾನೂನಿನಿಂದ ವಿನಾಯಿತಿ ಮತ್ತು ಇಡೀ ಕ್ಷೇತ್ರದ ಏಕಸ್ವಾಮ್ಯಕ್ಕೆ ಸರಕಾರದ ಸಹಮತ ಹಾಗೂ ಯಾವುದೇ ಸ್ವತಂತ್ರ ಸಂಸ್ಥೆಯಿಂದ ತಮ್ಮ ಚಟುವಟಿಕೆಗಳ ಮೇಲೆ ನಿಬಂಧನೆ-ನಿಯಂತ್ರಣಗಳನ್ನು ಹೇರಬಾರದು ಎಂಬುದು ಎ.ಐ ಮುಂಚೂಣಿ ಕಂಪನಿಗಳ ಒಪ್ಪಂದದ ತಿರುಳು. ‘ಮನುಕುಲದ ಹತ್ಯೆ’ಯ ಅಪಾಯದ ಬಗ್ಗೆ ಬೊಬ್ಬೆ ಅದಕ್ಕಾಗಿ ‘ಬಿಲ್ಡ್ ಅಪ್’. ಎ.ಐ ಏಜೆಂಟ್ ಅಥವಾ ಜನರೇಟಿವ್ ಎ.ಐ ಮತ್ತು ಎ.ಐ ಏಜೆಂಟ್ ಗಳ ಸಾಮರ್ಥ್ಯದ ಬಗ್ಗೆ ಮಾಡಿದ್ದು ‘ಹೈಪ್’ ಅಲ್ಲ. ಸಾರ್ವಜನಿಕ ಒಳಿತಿಗಾಗಿ ನಾವು ವೇಗ ಕಡಿಮೆ ಮಾಡಬೇಕಾಗಿರುವುದರಿಂದ ಅದು ಈಗ ಸಾಧ್ಯವಾಗುತ್ತಿಲ್ಲ. ತಾಳ್ಮೆಯಿಂದ ಕಾಯಿರಿ ಅಂತ ಎ.ಐ ಬಳಕೆದಾರರಿಗೆ ಬಿಲ್ಡ್ ಅಪ್’. ಎ.ಐ ಎಷ್ಟು ಪವರ್ ಫುಲ್ ಅಂದರೆ ಅದನ್ನು ನಾವು ಮಾತ್ರ ನಿಯಂತ್ರಣ ಮಾಡಲು ಸಾಧ್ಯ ಇಲ್ಲದಿದ್ದರೆ ಮನುಕುಲಕ್ಕೆ ಅಪಾಯ. ವೇಗ ಕಡಿಮೆ ಮಾಡಿ ಸಾವಕಾಶಧಿಂದ ನಾವು ಮಾತ್ರ ಅದರ ಎಲ್ಲ ಸಾಧ್ಯತೆಗಳನ್ನು ಸಾಕಾರ ಮಾಡಲು ಸಮರ್ಥರು. ಹಾಗಾಗಿ ನಮ್ಮಲ್ಲಿ ಹೂಡಿಕೆ ಮಾಡಿ. ಅಂತ ಹೂಡಿಕೆದಾರಿಗೆ ಬಿಲ್ಡ್ ಅಪ್’. ಹೀಗೆ ಈ ಮುಂಚೂಣಿ ಕಂಪನಿಗಳ ಹಲವು ಬಿಲ್ಡ್ ಅಪ್’. ಗಳ ಮೊತ್ತ ಈ ಒಪ್ಪಂದ. ಯು.ಎಸ್ ಸರಕಾರ ಅಥವಾ ವಿಶ್ವಸಂಸ್ಥೆಯಿಂದ ಸ್ವತಂತ್ರ ನಿಬಂಧನೆ-ನಿಯಂತ್ರಣಗಳನ್ನು ತಡೆಯುವುದೇ ಇದರ ಉದ್ದೇಶ.
ಚೀನಾದ ಬದಲಿ ಎ.ಐ
ಇದರರ್ಥ ಎ.ಐ ಹೀಗೆ ಇರುವುದು ಎಂದಲ್ಲ. ಚೀನಾದಲ್ಲೂ ವೇಗದಲ್ಲಿ ಎ.ಐ ಬೆಳವಣಿಗೆಗಳು ಆಗುತ್ತಿವೆ. ಆದರೆ ಯಾವ ಕಂಪನಿಯೂ ಈ ರೀತಿಯ ಅಪಾಯದ ಎಚ್ಚರಿಕೆ ಕೊಟ್ಟಿಲ್ಲ. ಚೀನಾ ಸರಕಾರದ ಅಧಿಕೃತ ಪ್ರತಿಕ್ರಿಯೆ ಹೀಗಿತ್ತು. “ಭೀತಿ ಸೃಷ್ಟಿಸುವುದು, ಸಂಘರ್ಷ, ದ್ವೇಷಪೂರಿತ ಕೆಟ್ಟ ಪೈಪೋಟಿ ಜಾಗತಿಕ ಎ.ಐ ಆಡಳಿತ ನಿರ್ವಹಣೆಯ ಪ್ರಕ್ರಿಯೆಯನ್ನು ಬುಡಮೇಲು ಮಾಡುತ್ತದೆ. ಇದು ಒಟ್ಟು ಕ್ಷೇತ್ರದ ಹಿತಾಸಕ್ತಿಗೆ ಮಾರಕ”. ಚೀನಾದಲ್ಲಿ ಎ.ಐ ನ ಬೆಳವಣಿಗೆ ಭೌತಿಕ ಉತ್ಪಾದನೆಯ ಉತ್ಪಾದಕತೆ ಹೆಚ್ಚಿಸುವತ್ತ ಒತ್ತು ಕೊಟ್ಟಿದೆ. ‘ಓಫನ್ ಸೋರ್ಸ್’ (ಸಾಫ್ಟ ವೇರ್ ನ್ನು ಸ್ವಂತ ಆಸ್ತಿ ಮಾಡದೆ ಬಳಕೆದಾರರ ಜತೆ ಹಂಚಿಕೊಳ್ಳುವ) ವಿಧಾನಕ್ಕೆ ಒತ್ತು ಕೊಡಲಾಗಿದೆ. ಪ್ರೊಸೆಸರ್, ವಿದ್ಯುತ್, ನೀರಿನ ಬಳಕೆಯಲ್ಲಿ ಅತ್ಯಂತ ದಕ್ಷತೆಗೆ, ಕೆಲವೇ ಕಂಪನಿಗಳ ಏಕಸ್ವಾಮ್ಯ ಆಗದಂತೆ ಮುಕ್ತ ಪೈಪೋಟಿಯಲ್ಲಿ ಸಣ್ಣ ಮಧ್ಯಮ ಕಂಪನಿಗಳು ಭಾಗವಹಿಸುವಂತೆ ಎಚ್ಚರಿಕೆ ವಹಿಸಲಾಗಿದೆ. ಚೀನಾ ಸರಕಾರ ನಿಬಂಧನೆ-ನಿಯಂತ್ರಣಗಳನ್ನು ಜಾರಿ ಮಾಡಿದೆ. ಚೀನಾದ ಎ.ಐ ಉತ್ಪನ್ನಗಳು ಈ ಮಂಚೂಣಿ ಕಂಪನಿಗಳ ವೆಚ್ಚದ ಸಣ್ಣ ಭಾಗದಲ್ಲಿ, ಹೆಚ್ಚು ಕಡಿಮೆ ಸಮಾನ ಸಾಮರ್ಥ್ಯ ಮತ್ತು ಅತ್ಯಂತ ಹೆಚ್ಚು ದಕ್ಷತೆಯನ್ನು ಹೊಂದಿವೆ.
ಎ.ಐ ಕ್ಷೇತ್ರದಲ್ಲಿ ವೇಗವಾಗಿ ಬೆಳವಣಿಗೆಗಳಾಗುತ್ತಿವೆ. ಎ.ಐ ಬಳಕೆ ಹೆಚ್ಚುತ್ತಿದೆ. ಎ.ಐ ಸಾಮರ್ಥ್ಯವೂ ವೇಗವಾಗಿ ಹೆಚ್ಚುತ್ತಿದೆ. ಅದರ ಪ್ರಯೋಜನಕಾರಿ ಸಾಧ್ಯತೆಗಳು ಹಲವು ಇವೆ. ಅದರ ಅಪಾಯಕಾರಿ ಸಾಧ್ಯತೆಯೂ ಭೀಕರವಾಗಿದೆ. ಹಾಗಾಗಿ ಎ.ಐ ಕ್ಷೇತ್ರದಲ್ಲಿ ಈಗ ಬೇಕಾಗಿರುವುದು ವೇಗವನ್ನು ಕಡಿಮೆ ಮಾಡುವುದಲ್ಲ, ಎ.ಐ ನ್ನು ಯಾವುದಕ್ಕೆ ಬಳಸಬೇಕು, ಎಷ್ಟು ಸಂಪನ್ಮೂಲ ಹೂಡಬೇಕು, ಸುರಕ್ಷಿತತೆ ಅಪಾಯ ತಡೆ ಕ್ರಮಗಳು, ಸಾಮಾಜಿಕ ಬಾಧ್ಯತೆಗಳು ಇರುವ – ಇವೆಲ್ಲವನ್ನೂ ಒಳಗೊಳ್ಳುವ ಸಾಮಾಜಿಕ-ರಾಜಕೀಯ ನಿಬಂಧನೆ-ನಿಯಂತ್ರಣದ ಅಗತ್ಯವಿದೆ. ಇದು ದೇಶ ಮತ್ತು ಜಾಗತಿಕ ಮಟ್ಟದಲ್ಲಿ ಅಗತ್ಯ. ಎ.ಐ ಕ್ಷೇತ್ರದಲ್ಲಿ ಏಕಸ್ವಾಮ್ಯ ಅಥವಾ ದುಷ್ಟಕೂಟ ರಚನೆ ಆಗದಂತೆ ಒಡೆತನದ ಮೇಲೂ ನಿರ್ಬಂಧಗಳು ಅಗತ್ಯ. ಇದನ್ನು ತಡೆಯಲು ಪ್ರಯತ್ನಿಸುತ್ತಿರುವ ಈ ಮುಂಚೂಣಿ ಕಂಪನಿಗಳ ಹತಾಶ ಪ್ರಯತ್ನದ ಸಂದರ್ಭದಲ್ಲಿ ಇದು ತುರ್ತು ಅಗತ್ಯ.
*******************
