ಬೆಂಗಳೂರು: ರಾಜ್ಯದಲ್ಲಿ ‘ವಂದೇ ಮಾತರಂ’ ಗೀತೆಯ ಪೂರ್ಣ ಗಾಯನದ ವಿಚಾರವಾಗಿ ನಡೆಯುತ್ತಿರುವ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದ್ದು, ಶಾಸಕ ಜನಾರ್ದನ ರೆಡ್ಡಿ ಅವರ ಟೀಕೆಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ. “ಜನಾರ್ದನ ರೆಡ್ಡಿಗೆ ವಂದೇ ಮಾತರಂ ಎರಡು ಪ್ಯಾರಾದರೂ ಹಾಡಲು ಬರುತ್ತದೆಯೇ ಕೇಳಿ” ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ. ವಂದೇ
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹರಿಪ್ರಸಾದ್, ಜನಾರ್ದನ ರೆಡ್ಡಿ ತಮ್ಮನ್ನು ‘ಹುಚ್ಚ’ ಎಂದು ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿದರು. “ಹುಚ್ಚರಿಗೆಲ್ಲ ನಾನು ಉತ್ತರ ಕೊಡಲ್ಲ” ಎಂದು ಹೇಳಿದ ಅವರು, ವಂದೇ ಮಾತರಂ ವಿಚಾರದಲ್ಲಿ ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಎರಡು ಪ್ಯಾರಾಗಳನ್ನು ಮಾತ್ರ ಹಾಡಲಾಗುತ್ತದೆ ಎಂದು ಅವರು ಹೇಳಿದರು.
“ನಾನು ಗಣಿ ಕಳ್ಳ ಸರ್ಕಾರದ ಗಣಿ ಲೂಟಿ ಮಾಡಿ ಜೈಲಲ್ಲಿದ್ದವನಲ್ಲ. ರಾಜಕೀಯ ಹೋರಾಟ ಮಾಡಿಕೊಂಡು ಬಂದಿರುವವನು” ಎಂದು ಹರಿಪ್ರಸಾದ್ ಹೇಳಿದ್ದು, ಈ ಮೂಲಕ ಜನಾರ್ದನ ರೆಡ್ಡಿ ಅವರ ಹಿಂದಿನ ಗಣಿಗಾರಿಕೆ ಪ್ರಕರಣಗಳನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದರು. ಮತ್ತೊಂದೆಡೆ, ದೇಶಭಕ್ತಿಯ ಬಗ್ಗೆ ಮಾತನಾಡುವವರು ಆರ್ಎಸ್ಎಸ್ ಶಾಖೆಯಲ್ಲಿ ರಾಷ್ಟ್ರಗೀತೆ ಹಾಡುವ ವಿಚಾರವನ್ನೂ ಅವರು ಪ್ರಸ್ತಾಪಿಸಿದರು. ವಂದೇ
ಇದನ್ನೂ ಓದಿ :ಎಸ್ಐಆರ್: 84 ಲಕ್ಷ ಮತದಾರರಲ್ಲಿ ಕೇವಲ ಶೇ.2ರಷ್ಟು ಮಂದಿ ಮರು ಸೇರ್ಪಡೆಗೆ ಅರ್ಜಿ
ವಂದೇ ಮಾತರಂ ವಿಚಾರದಲ್ಲಿ ಹರಿಪ್ರಸಾದ್ ಅವರ ಹಿಂದಿನ ನಿಲುವೂ ಇದೇ ಆಗಿದೆ. ಆಗಸ್ಟ್ನಲ್ಲಿ ಅವರು ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಪೂರ್ಣ ವಂದೇ ಮಾತರಂ ಹಾಡುವುದಿಲ್ಲ, ಎರಡು ಪ್ಯಾರಾಗಳನ್ನು ಮಾತ್ರ ಹಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದರು. ವಂದೇ ಮಾತರಂಗೆ ಕಾಂಗ್ರೆಸ್ ವಿರೋಧವಿಲ್ಲ ಎಂದಿದ್ದ ಅವರು, ಸರ್ಕಾರದ ಕಾರ್ಯಕ್ರಮಗಳಲ್ಲಿ ಪೂರ್ಣ ಗೀತೆ ಹಾಡುವ ವಿಚಾರ ಸರ್ಕಾರಕ್ಕೆ ಬಿಟ್ಟದ್ದು ಎಂದು ಹೇಳಿದ್ದರು.
ಈ ವಿವಾದಕ್ಕೆ ಹಿನ್ನೆಲೆಯಾಗಿ, ಸೆಪ್ಟೆಂಬರ್ 13ರಂದು ಕೊಪ್ಪಳದ ಗಂಗಾವತಿಯಲ್ಲಿ ನಡೆದ ‘ಪ್ರಜಾಸೇವೆ’ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಮೊದಲಿಗೆ ಎರಡು ಚರಣಗಳನ್ನು ಹಾಡಲಾಗಿತ್ತು. ಆದರೆ ಶಾಸಕ ಜನಾರ್ದನ ರೆಡ್ಡಿ ಸೂಚನೆಯ ಬಳಿಕ ಅಧಿಕಾರಿಗಳು ಪೂರ್ಣ ವಂದೇ ಮಾತರಂ ಹಾಡಿಸಿದ್ದರು ಎಂಬ ವರದಿಗಳು ಪ್ರಕಟವಾಗಿದ್ದವು. ರಾಜ್ಯ ಸರ್ಕಾರದ ಆದೇಶ ಪಾಲಿಸಬೇಕೇ ಅಥವಾ ಶಾಸಕರ ಸೂಚನೆ ಪಾಲಿಸಬೇಕೇ ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಎದುರಾಗಿತ್ತು.
ಇದಾದ ಬಳಿಕ ರಾಜ್ಯ ಸರ್ಕಾರದ ಪರವಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಎರಡು ಚರಣಗಳಿಗಿಂತ ಹೆಚ್ಚು ವಂದೇ ಮಾತರಂ ಹಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ನಾಯಕರು ಕೂಡ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದಾರೆ.
ಇದನ್ನೂ ನೋಡಿ : SIR | 14 ಕೋಟಿ ಮತದಾರರ ಹೆಸರು ಡಿಲೀಟ್? ಮತದಾನದ ಹಕ್ಕಿಗೇ ಕತ್ತರಿ! | Janashakthi Media
