ಗಣೇಶನ ಕೈಯಲ್ಲಿ ಕನಿಷ್ಠ ವೇತನದ ಬೇಡಿಕೆ; ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಹೋರಾಟದ ಪೋಸ್ಟರ್ ವೈರಲ್

ಬೆಂಗಳೂರು: ಗಣೇಶ ಚತುರ್ಥಿಯ ಸಂಭ್ರಮದ ನಡುವೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಭಿನ್ನ ಪೋಸ್ಟರ್‌ವೊಂದು ಕಾರ್ಮಿಕರ ಕನಿಷ್ಠ ವೇತನದ ಬೇಡಿಕೆಯನ್ನು ವಿಶಿಷ್ಟ ರೀತಿಯಲ್ಲಿ ಮುನ್ನೆಲೆಗೆ ತಂದಿದೆ. ರಾಜಕೀಯ ನಾಯಕರು ಗಣೇಶನ ಆಶೀರ್ವಾದ ಪಡೆಯಲು ಬರುವ ಸನ್ನಿವೇಶವನ್ನು ಕಲ್ಪಿಸಿಕೊಂಡಿರುವ ಪೋಸ್ಟರ್‌ನಲ್ಲಿ, ಗಣೇಶನೇ ನಾಯಕರಿಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿ ಎಂದು ಮನವಿ ಮಾಡುವಂತೆ ಚಿತ್ರಿಸಲಾಗಿದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಗಣೇಶ,“ಪರಿಷ್ಕೃತ ಕನಿಷ್ಠ ವೇತನ ಜಾರಿ ಮಾಡ್ತೀರಾ?” ಎಂಬ ಪ್ರಶ್ನೆ ಕೇಳುತ್ತಿರುವಂತೆ ಪೋಸ್ಟರ್‌ನಲ್ಲಿ ತೋರಿಸಲಾಗಿದೆ. ಅದಕ್ಕೆ ಅಶೋಕ್‌ ಅವರು ಹಬ್ಬದ ಸಂದರ್ಭದಲ್ಲಿ ತಮ್ಮನ್ನು ಆಶೀರ್ವದಿಸುವಂತೆ ಮನವಿ ಮಾಡುವ ರೀತಿಯಲ್ಲಿ ಸಂಭಾಷಣೆ ರೂಪಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಗಣೇಶ, ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಯಾಗಬೇಕು ಎಂಬ ವಿಚಾರವನ್ನು ಮುಂದಿಡುತ್ತಾನೆ.

ಇದೇ ರೀತಿಯಲ್ಲಿ ಬಿ.ವೈ. ವಿಜಯೇಂದ್ರ ಅವರೊಂದಿಗಿನ ಸಂಭಾಷಣೆಯಲ್ಲೂ ಗಣೇಶ ಕಾರ್ಮಿಕರ ಬೇಡಿಕೆಯನ್ನೇ ಮುಂದಿಡುತ್ತಾನೆ. ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ, ಪಾದಯಾತ್ರೆ ಸೇರಿದಂತೆ ಚಳವಳಿಗಳ ಕುರಿತು ಗಣೇಶ ಪ್ರಶ್ನೆ ಎತ್ತುವಂತೆ ಪೋಸ್ಟರ್ ರೂಪಿಸಲಾಗಿದೆ. ರಾಜಕೀಯ ನಾಯಕರಿಗೆ ಹಬ್ಬದ ಶುಭಾಶಯ ಹಾಗೂ ಆಶೀರ್ವಾದದ ಮಾತುಗಳಿಗಿಂತ ಮೊದಲು ಕಾರ್ಮಿಕರ ಬದುಕಿನ ಪ್ರಶ್ನೆಗೆ ಉತ್ತರ ನೀಡಬೇಕೆಂಬ ಸಂದೇಶವನ್ನು ಇದು ನೀಡುತ್ತದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ“ತಡವಿಲ್ಲದೆ ಪರಿಷ್ಕೃತ ಕನಿಷ್ಠ ವೇತನ ಜಾರಿ ಮಾಡಿ” ಎಂದು ಗಣೇಶ ಖಡಕ್ಕಾಗಿ ಮನವಿ ಮಾಡಿದ್ದಾನೆ. ಆಶಿರ್ವದಿಸಿ ಎಂದು ಗಣೇಶ ಬಳಿ ಡಿಕೆಶಿ ಕೇಳಿದಾಗ ಜನ ಆಶಿರ್ವಾದ ಮಾಡಬೇಕಯ್ಯ, ಅವರು ಹಬ್ಬ ಮಾಡಬೇಕು ಎಂದರೆ ಅವರಿಗೆ ಕನಿಷ್ಠ ವೇತನ ಜಾರಿ ಮಾಡಯ್ಯ ಎಂದು ಗಣೇಶ ಹೇಳುತ್ತಾನೆ.

ಸಾಮಾನ್ಯವಾಗಿ ಪ್ರತಿಭಟನೆಗಳು, ಧರಣಿಗಳು, ಮೆರವಣಿಗೆಗಳು ಹಾಗೂ ಪಾದಯಾತ್ರೆಗಳ ಮೂಲಕ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುತ್ತದೆ. ಆದರೆ ಈ ಪೋಸ್ಟರ್‌ ಚಳವಳಿ ವಿಭಿನ್ನ ಹೋರಾಟವೆಂದು ವಿಶ್ಲೇಷಿಸಲಾಗುತ್ತದೆ. ಹಬ್ಬಗಳನ್ನು ಜನ ಖುಷಿಯಾಗಿ ಆಚರಿಸಬೇಕಾದರೆ ಅವರಿಗೆ ಸಿಗಬೇಕಾದ ಕನಿಷ್ಠ ವೇತನ ನೀಡಿದರೆ ಅವರು ಹಬ್ಬವನ್ನು ಮಾಡುತ್ತಾರೆ ಎಂಬರ್ಥದಲ್ಲಿ ಕಾರ್ಮಿಕರ ಬೇಡಿಕೆಗಳನ್ನು ಒಟ್ಟುಗೂಡಿಸಿರುವುದು ವಿಭಿನ್ನ ರೀತಿಯ ಅಭಿಯಾನವಾಗಿ ಕಾಣಿಸಿಕೊಂಡಿದೆ. ಕಾರ್ಮಿಕರ ಜೀವನಕ್ಕೆ ಸಂಬಂಧಿಸಿದ ಕನಿಷ್ಠ ವೇತನದಂತಹ ಗಂಭೀರ ವಿಚಾರವನ್ನು ಹೆಚ್ಚು ಜನರ ಗಮನಕ್ಕೆ ತರುವ ಉದ್ದೇಶದಿಂದ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಲಾಗಿದೆ ಎಂದು CITU ನ ಮಹೇಶ ಪತ್ತಾರ ತಿಳಿಸಿದ್ದಾರೆ.

CITU ಸೇರಿದಂತೆ ಅನೇಕ ಕಾರ್ಮಿಕ ಸಂಘಟನೆಗಳು ಕನಿಷ್ಠ ವೇತನ ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿವೆ. ಧರಣಿ, ಪ್ರತಿಭಟನೆ, ಪಾದಯಾತ್ರೆ ಸೇರಿದಂತೆ ಹಲವು ರೀತಿಯ ಚಳವಳಿಗಳ ಮೂಲಕ ಸರ್ಕಾರದ ಗಮನ ಸೆಳೆಯುತ್ತಿವೆ. ನಿರಂತರವಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಕಾರ್ಮಿಕ ಸಂಘಟನೆಗಳ ಮಾತುಗಳನ್ನು ಸರ್ಕಾರ ಆಲಿಸಿ, ಪರಿಷ್ಕೃತ ಕನಿಷ್ಠ ವೇತನ ಸೇರಿದಂತೆ ನ್ಯಾಯಯುತ ಬೇಡಿಕೆಗಳಿಗೆ ಶೀಘ್ರ ಪರಿಹಾರ ನೀಡುವಂತಾಗಲಿ.

Donate Janashakthi Media

Leave a Reply

Your email address will not be published. Required fields are marked *