ಕೆಎಸ್‌ಆರ್‌ಟಿಸಿ ಟಿಕೆಟ್‌ಗೆ ಹೊಸ ದಾರಿ: ವಾಟ್ಸಾಪ್‌ನಲ್ಲೇ ಬುಕ್ಕಿಂಗ್

ಬೆಂಗಳೂರು: ಕರ್ನಾಟಕದ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವವರಿಗೆ ಅನುಕೂಲವಾಗುವಂತೆ ವಾಟ್ಸಾಪ್ ಮೂಲಕವೇ ಟಿಕೆಟ್ ಬುಕ್ ಮಾಡುವ ಹೊಸ ಸೌಲಭ್ಯವನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ‘ಒನ್ ಕರ್ನಾಟಕ ಮೊಬಿಲಿಟಿ’ ಆ್ಯಪ್ ಹಾಗೂ ವಾಟ್ಸಾಪ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಗುರುವಾರ ಲೋಕಾರ್ಪಣೆ ಮಾಡಿದರು. ಕೆಎಸ್‌ಆರ್‌ಟಿಸಿ

ಹೊಸ ವ್ಯವಸ್ಥೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಬಸ್‌ಗಳಿಗೆ ವಾಟ್ಸಾಪ್ ಮೂಲಕ ಟಿಕೆಟ್ ಕಾಯ್ದಿರಿಸಬಹುದು. ಸದ್ಯ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸೇವೆಗಳಿಗೆ ಈ ವಾಟ್ಸಾಪ್ ಬುಕ್ಕಿಂಗ್ ಸೌಲಭ್ಯ ಅನ್ವಯಿಸುವುದಿಲ್ಲ.

ಪ್ರಯಾಣಿಕರು 6364940880 ಸಂಖ್ಯೆಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸುವ ಮೂಲಕ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಬಹುದು. ಬಳಿಕ ಪ್ರಯಾಣ ಆರಂಭಿಸುವ ಸ್ಥಳ, ತಲುಪಬೇಕಾದ ಸ್ಥಳ ಹಾಗೂ ಪ್ರಯಾಣದ ದಿನಾಂಕವನ್ನು ಆಯ್ಕೆ ಮಾಡಬೇಕು. ಲಭ್ಯವಿರುವ ಬಸ್‌ಗಳ ಪೈಕಿ ಅಗತ್ಯವಿರುವ ಬಸ್ ಸೇವೆಯನ್ನು ಆಯ್ಕೆ ಮಾಡಿಕೊಂಡು ಪ್ರಯಾಣಿಕರ ವಿವರಗಳನ್ನು ನಮೂದಿಸಿ ಹಣ ಪಾವತಿಸಬಹುದು. ಯುಪಿಐ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಹಾಗೂ ಡಿಜಿಟಲ್ ವಾಲೆಟ್‌ಗಳ ಮೂಲಕ ಪಾವತಿ ಮಾಡಲು ಅವಕಾಶವಿದೆ. ಕೆಎಸ್‌ಆರ್‌ಟಿಸಿ

ಇದನ್ನೂ ಓದಿ : ಸರ್ಕಾರಿ ಶಾಲಾ ಮಕ್ಕಳ ಶೂ, ಸಾಕ್ಸ್‌ ಕಳಪೆ ಆರೋಪ: ತನಿಖೆಗೆ ಶಿಕ್ಷಣ ಇಲಾಖೆ ಆದೇಶ; ಉಪಲೋಕಾಯುಕ್ತರಿಂದ ಸ್ವಯಂಪ್ರೇರಿತ ಪ್ರಕರಣ

ಹಣ ಪಾವತಿ ಪೂರ್ಣಗೊಂಡ ಬಳಿಕ ಟಿಕೆಟ್ ಹಾಗೂ ಬುಕ್ಕಿಂಗ್ ದೃಢೀಕರಣವನ್ನು ವಾಟ್ಸಾಪ್ ಮತ್ತು ಇ-ಮೇಲ್ ಮೂಲಕ ಪ್ರಯಾಣಿಕರಿಗೆ ಕಳುಹಿಸಲಾಗುತ್ತದೆ. ಇದೇ ವ್ಯವಸ್ಥೆಯ ಮೂಲಕ ಕಾಯ್ದಿರಿಸಿದ ಟಿಕೆಟ್‌ಗಳನ್ನು ರದ್ದುಪಡಿಸುವ ಸೌಲಭ್ಯವೂ ಇದೆ. ಟಿಕೆಟ್ ರದ್ದುಪಡಿಸಲು ಪಿಎನ್‌ಆರ್ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಬುಕ್ಕಿಂಗ್ ವೇಳೆ ದೊರೆತ ವ್ಯವಹಾರ ಪಾಸ್‌ವರ್ಡ್ ಅಗತ್ಯವಾಗಿರುತ್ತದೆ.

ಇದರ ಜೊತೆಗೆ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಒಗ್ಗೂಡಿಸುವ ‘ಒನ್ ಕರ್ನಾಟಕ ಮೊಬಿಲಿಟಿ’ ಆ್ಯಪ್ ಅನ್ನು ಪರಿಚಯಿಸಲಾಗಿದೆ. ಇದರ ಮೂಲಕ ಪ್ರಯಾಣಿಕರು ಬುಕ್ಕಿಂಗ್ ವಿವರಗಳನ್ನು ನೋಡಿಕೊಳ್ಳುವುದರ ಜೊತೆಗೆ ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದ ದೂರುಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸಿ, ಅದರ ಸ್ಥಿತಿಯನ್ನು ಪರಿಶೀಲಿಸುವ ಹಾಗೂ ಅಗತ್ಯವಿದ್ದರೆ ಮೇಲ್ಮನವಿ ಸಲ್ಲಿಸುವ ಅವಕಾಶ ಪಡೆಯಲಿದ್ದಾರೆ.

ಮುಂದಿನ ಹಂತದಲ್ಲಿ ಮಾಸಿಕ ಬಸ್ ಪಾಸ್‌ಗಳನ್ನೂ ಡಿಜಿಟಲ್ ರೂಪದಲ್ಲಿ ನೀಡುವ ಯೋಜನೆ ಇದೆ. QR ಕೋಡ್ ಆಧಾರಿತ ವ್ಯವಸ್ಥೆಯ ಮೂಲಕ ಪ್ರಯಾಣಿಕರು ಆನ್‌ಲೈನ್‌ನಲ್ಲೇ ಪಾಸ್ ಪಡೆಯಲು ಮತ್ತು ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಿಕೆಟ್ ಬುಕ್ಕಿಂಗ್‌ಗೆ ಸಂಬಂಧಿಸಿದ ಸಹಾಯಕ್ಕಾಗಿ ಕೆಎಸ್‌ಆರ್‌ಟಿಸಿಯ 24 ಗಂಟೆಯ ಸಹಾಯವಾಣಿ 080-26252625 ಸಂಪರ್ಕಿಸಬಹುದು. ಬುಕ್ಕಿಂಗ್‌ಗೆ ಸಂಬಂಧಿಸಿದ ನಿರ್ದಿಷ್ಟ ವಿಚಾರಗಳಿಗೆ 7760990034 / 7760990035 ಸಂಖ್ಯೆಯನ್ನು ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ಸಂಪರ್ಕಿಸಬಹುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ. ಕೆಎಸ್‌ಆರ್‌ಟಿಸಿ

ಇದನ್ನೂ ನೋಡಿ : “ಆಪರೇಷನ್‌ ನಂತರ ಗಂಭೀರ ಸಮಸ್ಯೆ! ವೈದ್ಯರ ನಿರ್ಲಕ್ಷ್ಯವೇ?” Janashakthi Media

Donate Janashakthi Media

Leave a Reply

Your email address will not be published. Required fields are marked *