ಎಸ್‌ಐಆರ್‌: ಗಣ್ಯರ ಮನೆ ಬಾಗಿಲಿಗೆ ಅಧಿಕಾರಿಗಳು, ಸಾಮಾನ್ಯ ಮತದಾರರಿಗೆ ಕಚೇರಿ ಅಲೆದಾಟ?

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ದಾಖಲೆ ಅಥವಾ ಹೆಸರು ಹೊಂದಾಣಿಕೆಗೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಿರುವ ಕೆಲ ಗಣ್ಯರಿಗೆ ಅಧಿಕಾರಿಗಳೇ ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿರುವುದು ಬೆಂಗಳೂರಿನಲ್ಲಿ ಚರ್ಚೆಗೆ ಕಾರಣವಾಗಿದೆ. ಎಸ್‌ಐಆರ್‌

ನಟ ಶಿವರಾಜ್‌ಕುಮಾರ್‌ ಸೇರಿದಂತೆ ನ್ಯಾಯಮೂರ್ತಿಗಳು, ಸಂಸದರು, ಶಾಸಕರು, ರಾಜಕಾರಣಿಗಳು, ಅಧಿಕಾರಿಗಳು, ಕ್ರೀಡಾಪಟುಗಳು ಹಾಗೂ ಚಿತ್ರರಂಗದ ಕೆಲ ಗಣ್ಯರಿಗೆ ಎಸ್‌ಐಆರ್‌ ಸಂಬಂಧಿತ ಸಮಸ್ಯೆಗಳನ್ನು ಅವರ ನಿವಾಸದಲ್ಲಿಯೇ ಪರಿಹರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಎಸ್‌ಐಆರ್‌ ಸಂದರ್ಭದಲ್ಲಿ ಹಳೆಯ ಮತದಾರರ ಪಟ್ಟಿಯಲ್ಲಿನ ವಿವರಗಳೊಂದಿಗೆ ಹೆಸರು ಹೊಂದಿಕೆಯಾಗದಿದ್ದರೆ, ಸಂಬಂಧಪಟ್ಟ ಮತದಾರರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗುತ್ತಿದೆ. ಶಿವರಾಜ್‌ಕುಮಾರ್‌ ಅವರ ಕುಟುಂಬದ ಹೆಸರು 2002 ರ ಮತದಾರರ ಪಟ್ಟಿಯಲ್ಲಿ ಪತ್ತೆಯಾಗದ ಹಿನ್ನೆಲೆಯಲ್ಲಿ ಮ್ಯಾಪಿಂಗ್‌ ಪೂರ್ಣಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಆದರೆ ಅಧಿಕಾರಿಗಳು ಅವರ ನಿವಾಸಕ್ಕೆ ತೆರಳಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ಬೆಂಗಳೂರು ಉತ್ತರ ವಿಭಾಗದ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಪೊಮ್ಮಲ ಸುನಿಲ್‌ ಕುಮಾರ್‌ ಅವರ ಪ್ರಕಾರ, ಗಣ್ಯರು ವಿಚಾರಣಾ ಕೇಂದ್ರಕ್ಕೆ ಖುದ್ದಾಗಿ ಬರುವ ಅಗತ್ಯವಿಲ್ಲ. ಅಗತ್ಯವಿದ್ದಲ್ಲಿ ಬೂತ್‌ ಮಟ್ಟದ ಅಧಿಕಾರಿಗಳು ಅವರ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಬಹುದು ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಎಸ್‌ಐಆರ್‌ ವೇಳೆ ಹಳೆಯ ಮತದಾರರ ಪಟ್ಟಿಯೊಂದಿಗೆ ಹೆಸರು ಹೊಂದಿಕೆಯಾಗದಿರುವುದು, ಹೆಸರು ಅಥವಾ ವಿಳಾಸದಲ್ಲಿ ವ್ಯತ್ಯಾಸ, ಕುಟುಂಬದ ಸದಸ್ಯರ ವಿವರಗಳು ಲಭ್ಯವಾಗದಿರುವುದು ಸೇರಿದಂತೆ ಹಲವು ಕಾರಣಗಳಿಂದ ಮತದಾರರಿಗೆ ಪರಿಶೀಲನೆ ಎದುರಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಮತದಾರರು ಅಗತ್ಯ ದಾಖಲೆಗಳೊಂದಿಗೆ ವಿಚಾರಣಾ ಕೇಂದ್ರಕ್ಕೆ ಹಾಜರಾಗಬೇಕಾಗುತ್ತದೆ.

ಇದು ಎಲ್ಲರಿಗೂ ಸುಲಭದ ಪ್ರಕ್ರಿಯೆಯಲ್ಲ. ದಿನಗೂಲಿ ಕಾರ್ಮಿಕರು, ಗೃಹ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ವೃದ್ಧರು, ಅಂಗವಿಕಲರು ಹಾಗೂ ಕೆಲಸಕ್ಕಾಗಿ ಪ್ರತಿದಿನ ಹೊರಗೆ ಹೋಗಬೇಕಾದವರು ಒಂದು ದಿನದ ಕೆಲಸ ಬಿಟ್ಟು ವಿಚಾರಣಾ ಕೇಂದ್ರಕ್ಕೆ ತೆರಳಬೇಕಾದ ಪರಿಸ್ಥಿತಿ ಎದುರಾಗಬಹುದು.

ಇದನ್ನೂ ಓದಿ : ಸಿಐಟಿಯು ವಿಧಾನಸೌಧ ಚಲೋ: ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ 20 ಸಾವಿರ ಕಾರ್ಮಿಕರ ಬೃಹತ್‌ ಪ್ರತಿಭಟನೆ!

ಒಂದು ದಿನದ ಕೂಲಿ ಕಳೆದುಕೊಳ್ಳಬೇಕು

ಸಾಮಾನ್ಯ ಕಾರ್ಮಿಕನಿಗೆ ದಿನದ ಕೆಲಸವೇ ಕುಟುಂಬದ ಆದಾಯದ ಪ್ರಮುಖ ಆಧಾರ. ಎಸ್‌ಐಆರ್‌ ವಿಚಾರಣೆಗೆ ಹಾಜರಾಗಲು ಒಂದು ದಿನ ಕೆಲಸಕ್ಕೆ ಹೋಗದಿದ್ದರೆ ಆ ದಿನದ ಆದಾಯ ಕಳೆದುಕೊಳ್ಳುವ ಸಾಧ್ಯತೆ ಇದೆ. ನಗರದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಲು ಸಾರಿಗೆ ವೆಚ್ಚವೂ ಬೇಕಾಗುತ್ತದೆ. ಕೆಲಸದ ಸ್ಥಳ ಮತ್ತು ವಾಸದ ಸ್ಥಳ ದೂರದಲ್ಲಿರುವ ಸಾವಿರಾರು ಕಾರ್ಮಿಕರಿಗೆ ಇದು ಮತ್ತಷ್ಟು ಕಷ್ಟಕರವಾಗಬಹುದು. ಬೆಳಗ್ಗೆಯಿಂದ ಸಂಜೆವರೆಗೆ ಕೆಲಸ ಮಾಡುವವರಿಗೆ ವಿಚಾರಣಾ ಕೇಂದ್ರದ ಸಮಯವೂ ಸವಾಲಾಗಬಹುದು.

ದಾಖಲೆಗಳೇ ದೊಡ್ಡ ಸಮಸ್ಯೆ

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮತ್ತೊಂದು ಪ್ರಮುಖ ಸಮಸ್ಯೆ ದಾಖಲೆಗಳದ್ದು. ವರ್ಷಗಳಿಂದ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದರೂ ಹಳೆಯ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳದಿರುವ ಕುಟುಂಬಗಳಿವೆ. ಬಾಡಿಗೆ ಮನೆ ಬದಲಾಯಿಸಿರುವವರು, ಗ್ರಾಮದಿಂದ ನಗರಕ್ಕೆ ವಲಸೆ ಬಂದವರು, ಹಳೆಯ ವಿಳಾಸ ಹೊಂದಿರುವ ದಾಖಲೆಗಳನ್ನು ಬಳಸುತ್ತಿರುವವರು ಕೂಡ ಇದ್ದಾರೆ.

ಹಳೆಯ ಮತದಾರರ ಪಟ್ಟಿಯಲ್ಲಿನ ವಿವರಗಳನ್ನು ಪತ್ತೆಹಚ್ಚುವುದು ಕೂಡ ಎಲ್ಲರಿಗೂ ಸುಲಭವಲ್ಲ. ವಿಶೇಷವಾಗಿ ತಂತ್ರಜ್ಞಾನ ಬಳಕೆಯಲ್ಲಿ ಪರಿಣತಿ ಇಲ್ಲದ ವಯೋವೃದ್ಧರು ಮತ್ತು ಸಾಮಾನ್ಯ ನಾಗರಿಕರಿಗೆ ಆನ್‌ಲೈನ್‌ ಮೂಲಕ ಮಾಹಿತಿ ಹುಡುಕುವುದು, ಅರ್ಜಿ ಸಲ್ಲಿಸುವುದು ಅಥವಾ ದಾಖಲೆಗಳನ್ನು ಅಪ್‌ಲೋಡ್‌ ಮಾಡುವುದು ಕಷ್ಟವಾಗಬಹುದು.

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರನ ಮತದಾನದ ಹಕ್ಕು ಯಾವುದೇ ತೊಂದರೆಯಿಲ್ಲದೆ ಉಳಿಯುವಂತೆ ಕ್ರಮ ಕೈಗೊಳ್ಳುವುದು ಚುನಾವಣಾ ವ್ಯವಸ್ಥೆಯ ಪ್ರಮುಖ ಜವಾಬ್ದಾರಿಯಾಗಿದೆ.

ಇದನ್ನೂ ನೋಡಿ : CITU ನಿಂದ ಕಾರ್ಮಿಕರ ವಿಧಾನಸೌದ ಚಲೋ | ಸೆಪ್ಟೆಂಬರ್ 08, 2026

Donate Janashakthi Media

Leave a Reply

Your email address will not be published. Required fields are marked *