ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹಾಲ್ದ್ವಾನಿ ಸಮಾವೇಶ ನಡೆದ ಸ್ಥಳದಲ್ಲಿ ಬಳಿಕ ನಡೆದ ಎನ್ನಲಾದ ‘ಶುದ್ಧೀಕರಣ’ ಕಾರ್ಯಕ್ರಮವನ್ನು ಗಂಭೀರ ಘಟನೆ ಎಂದು ಬಣ್ಣಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ಕಾಂಗ್ರೆಸ್ ಅಧ್ಯಕ್ಷರಿಗೇ ಹೀಗಾದರೆ, ದೇಶದಾದ್ಯಂತ ದಲಿತರ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಲ್ದ್ವಾನಿಯಲ್ಲಿ ಖರ್ಗೆ ಅವರ ಸಮಾವೇಶದ ಬಳಿಕ ಬಲಪಂಥೀಯ ಸಂಘಟನೆಯ ಸದಸ್ಯರು ‘ಶುದ್ಧೀಕರಣ’ ವಿಧಿ ನಡೆಸಿರುವುದು ದಲಿತ ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ. ದಲಿತರು, ಹಿಂದುಳಿದ ವರ್ಗಗಳು, ಆದಿವಾಸಿಗಳು ಹಾಗೂ ಬಡವರ ವಿರುದ್ಧ ಅನ್ಯಾಯ, ದೌರ್ಜನ್ಯ ಮತ್ತು ದಮನ ಮುಂದುವರಿದಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಪ್ರಕರಣದ ಕುರಿತು ರಾಜ್ಯಸಭೆಯಲ್ಲಿ ಸದನದ ನಾಯಕ ಜೆ.ಪಿ. ನಡ್ಡಾ ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಆ ಭರವಸೆಯ ಬಳಿಕವೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಜನರಲ್ಲಿ ಅಸಮಾಧಾನ ಮೂಡಿಸಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.
“ಈ ನೋವು ದಲಿತ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ಎಲ್ಲ ನಾಗರಿಕರಲ್ಲೂ ಈ ಬಗ್ಗೆ ಆಕ್ರೋಶವಿದೆ. ಜನರ ಭಾವನೆಗಳನ್ನು ಸರ್ಕಾರ ಅರ್ಥಮಾಡಿಕೊಳ್ಳುತ್ತಿಲ್ಲ. ಸೂಕ್ತ ಸಮಯದಲ್ಲಿ ಜನರು ಅದಕ್ಕೆ ಉತ್ತರ ನೀಡಲಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಎಸ್ಐಆರ್: ಬೆಂಗಳೂರಿನ ದೀರ್ಘಕಾಲದ ನಿವಾಸಿಗಳ ಹೆಸರೇ ಕರಡು ಪಟ್ಟಿಯಿಂದ ಮಾಯ; 36.49 ಲಕ್ಷ ನೋಟಿಸ್ ವಿತರಣೆ ಬಾಕಿ
ಸೆ.7ರಂದು ಕಾಂಗ್ರೆಸ್ ಪ್ರತಿಭಟನೆ
ಹಾಲ್ದ್ವಾನಿ ‘ಶುದ್ಧೀಕರಣ’ ವಿವಾದ ಖಂಡಿಸಿ ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿ ಸೆಪ್ಟೆಂಬರ್ 7ರಂದು ಡೆಹ್ರಾಡೂನ್ನ ಪರೇಡ್ ಮೈದಾನದಿಂದ ಮುಖ್ಯಮಂತ್ರಿ ನಿವಾಸದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಿದೆ.
2027ರ ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಮುನ್ನ ಆಗಸ್ಟ್ 8ರಂದು ಹಾಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶ ನಡೆಸಿತ್ತು. ಸಮಾವೇಶದ ಬಳಿಕ ಬಲಪಂಥೀಯ ಸಂಘಟನೆಯ ಸದಸ್ಯರು ಅಲ್ಲಿ ‘ಶುದ್ಧೀಕರಣ’ ವಿಧಿ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ.
ಖರ್ಗೆ ಅವರಂತಹ ರಾಷ್ಟ್ರೀಯ ನಾಯಕರ ಸಮಾವೇಶ ನಡೆದ ಸ್ಥಳವನ್ನೇ ‘ಶುದ್ಧೀಕರಣ’ ಮಾಡಿರುವ ಘಟನೆ ಜಾತಿ ಆಧಾರಿತ ತಾರತಮ್ಯದ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ.
ಇದನ್ನೂ ನೋಡಿ : ತೀವ್ರ ಬಲಪಂಥೀಯವಾದಿ ಸ್ವತಂತ್ರ ಭಾರದ್ವಾಜ್ ಬಹಿರಂಗಗೊಳಿಸಿದ ಘೋರ ವಾಸ್ತವಗಳೇನು? Janashakthi Media
