ಬೆಂಗಳೂರು: ನಗರದ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುವ ಪೌರಕಾರ್ಮಿಕರ ಕುರಿತು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರು ನೀಡಿರುವ ಹೇಳಿಕೆ ಖಂಡನೀಯ ಎಂದು ಸಿಐಟಿಯು ರಾಜ್ಯ ನಾಯಕ ಸೈಯದ್ ಮುಜೀಬ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೌರಕಾರ್ಮಿಕರ
ಪೌರಕಾರ್ಮಿಕರು ತಮ್ಮ ಸೇವೆಯನ್ನು ಕಾಯಂಗೊಳಿಸುವಂತೆ ಮನವಿ ಮಾಡಿದ ಸಂದರ್ಭದಲ್ಲಿ, “ನೀವು ಕೆಲಸವೇ ಮಾಡುವುದಿಲ್ಲ. ನಿಮ್ಮನ್ನು ಏಕೆ ಪರ್ಮನೆಂಟ್ ಮಾಡಬೇಕು?” ಎಂದು ಸಚಿವರು ಪ್ರಶ್ನಿಸಿರುವುದು ಪೌರಕಾರ್ಮಿಕರ ಬಗ್ಗೆ ಸರ್ಕಾರದ ನಿಲುವನ್ನು ಪ್ರಶ್ನಿಸುವಂತಿದೆ ಎಂದು ಅವರು ಹೇಳಿದ್ದಾರೆ.
ಸುಮಾರು ಶೇ.30ರಷ್ಟು ಪೌರಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂದು ಸಚಿವರು ಆರೋಪಿಸಿರುವುದಾದರೆ, ಅಂತಹವರ ವಿರುದ್ಧ ಸೇವಾ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಿ. ಪೌರಕಾರ್ಮಿಕರ ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು ಮತ್ತು ವ್ಯವಸ್ಥೆ ಏಕೆ ಇದೆ ಎಂಬುದನ್ನೂ ಸಚಿವರು ಪ್ರಶ್ನಿಸಬೇಕು ಎಂದು ಮುಜೀಬ್ ಹೇಳಿದ್ದಾರೆ.
ಕೆಲವು ನೌಕರರು ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪವನ್ನು ಇಡೀ ಪೌರಕಾರ್ಮಿಕ ಸಮುದಾಯದ ಮೇಲೆ ಹೊರಿಸುವುದು ಸರಿಯಲ್ಲ. ನಿರ್ದಿಷ್ಟ ವ್ಯಕ್ತಿಯ ವಿರುದ್ಧ ದೂರು ಅಥವಾ ಕರ್ತವ್ಯಲೋಪದ ಆರೋಪವಿದ್ದರೆ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬಹುದು. ಆದರೆ ಇಡೀ ವರ್ಗವನ್ನೇ ಕೆಲಸ ಮಾಡದವರಂತೆ ಬಿಂಬಿಸುವುದು ಅನ್ಯಾಯ ಎಂದು ಅವರು ತಿಳಿಸಿದ್ದಾರೆ.
‘ಪೌರಕಾರ್ಮಿಕರ ಸೇವೆ ನಿಂತರೆ ನಗರದ ಸ್ಥಿತಿ ಏನು?’
ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸತ್ತ ಪ್ರಾಣಿಗಳು, ಹೆಗ್ಗಣಗಳು, ಕೊಳೆತು ನಾರುವ ಘನತ್ಯಾಜ್ಯ ಸೇರಿದಂತೆ ಸಾರ್ವಜನಿಕರು ಮುಟ್ಟಲು ಹಿಂಜರಿಯುವ ತ್ಯಾಜ್ಯವನ್ನು ತೆರವುಗೊಳಿಸಿ ನಗರದ ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡುವ ಕೆಲಸವನ್ನು ಪೌರಕಾರ್ಮಿಕರು ಮಾಡುತ್ತಿದ್ದಾರೆ.
ಇಂತಹ ಕಾರ್ಮಿಕರು ಒಂದು ದಿನ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿದರೂ ನಗರದ ಪರಿಸ್ಥಿತಿ ಹೇಗಾಗಬಹುದು ಎಂಬುದನ್ನು ಸಚಿವರು ಅರಿತುಕೊಳ್ಳಬೇಕು ಎಂದು ಮುಜೀಬ್ ಹೇಳಿದ್ದಾರೆ.
ಪೌರಕಾರ್ಮಿಕರನ್ನು ದೂಷಿಸುವ ಬದಲು ಅವರ ಕೆಲಸದ ಸ್ವರೂಪ, ಸಿಬ್ಬಂದಿ ಕೊರತೆ, ಕೆಲಸದ ಒತ್ತಡ ಹಾಗೂ ಉದ್ಯೋಗ ಭದ್ರತೆಯಂತಹ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪೌರಕಾರ್ಮಿಕರ
ಇದನ್ನೂ ಓದಿ : ಬೆಂಗಳೂರಿನ ಬಸ್‌ಗಳಿಗೂ ಎಲೆಕ್ಟ್ರಿಕ್ ಟಚ್: 18 ತಿಂಗಳಲ್ಲಿ ಶೇ.50ಕ್ಕೂ ಹೆಚ್ಚು ಇ-ಬಸ್
500 ಜನರಿಗೆ ಒಬ್ಬ ಪೌರಕಾರ್ಮಿಕ
ಐ.ಡಿ. ಸಾಲಪ್ಪ ವರದಿಯ ಶಿಫಾರಸ್ಸಿನಂತೆ 500 ಜನರಿಗೆ ಒಬ್ಬ ಪೌರಕಾರ್ಮಿಕ ಎಂಬ ಅನುಪಾತದಲ್ಲಿ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನಗರದ ಸ್ವಚ್ಛತೆ ಕೇವಲ ಪೌರಕಾರ್ಮಿಕರ ಜವಾಬ್ದಾರಿಯಲ್ಲ. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ, ಮೂಲದಲ್ಲೇ ಕಸ ವಿಂಗಡಿಸಿ, ಪೌರಕಾರ್ಮಿಕರಿಗೆ ಸಹಕರಿಸುವುದು ನಾಗರಿಕರ ಕರ್ತವ್ಯವೂ ಆಗಿದೆ. ಹೀಗಾಗಿ ಸ್ವಚ್ಛ ನಗರ ನಿರ್ಮಾಣಕ್ಕೆ ನಾಗರಿಕರು ಮತ್ತು ಸರ್ಕಾರ ಒಟ್ಟಾಗಿ ಕೆಲಸ ಮಾಡಬೇಕು ಎಂದು ಮುಜೀಬ್ ಅಭಿಪ್ರಾಯಪಟ್ಟಿದ್ದಾರೆ.
‘ಕಾಯಂಗೊಳಿಸುವ ಕುರಿತು ಸ್ಪಷ್ಟನೆ ನೀಡಲಿ’
ಪೌರಕಾರ್ಮಿಕರನ್ನು ಕಾಯಂಗೊಳಿಸುವಲ್ಲಿ ಕಾನೂನುಬದ್ಧ ಅಥವಾ ಆಡಳಿತಾತ್ಮಕ ಅಡ್ಡಿಗಳಿದ್ದರೆ, ಅವುಗಳ ಬಗ್ಗೆ ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು. ಪರ್ಯಾಯ ಉದ್ಯೋಗ ಭದ್ರತಾ ಕ್ರಮಗಳೇನು ಎಂಬುದನ್ನೂ ವಿವರಿಸಬಹುದು. ಆದರೆ ಕಾರ್ಮಿಕರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡುವುದು ಪರಿಹಾರವಲ್ಲ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಈಗಾಗಲೇ 12,650ಕ್ಕೂ ಹೆಚ್ಚು ಪೌರಕಾರ್ಮಿಕರನ್ನು ಕಾಯಂಗೊಳಿಸಿ ನೇಮಕಾತಿ ಪತ್ರಗಳನ್ನು ವಿತರಿಸಿರುವುದನ್ನು ಉಲ್ಲೇಖಿಸಿದ ಮುಜೀಬ್, ಪೌರಕಾರ್ಮಿಕರ ಸೇವೆಗೆ ಗೌರವ ಮತ್ತು ಉದ್ಯೋಗ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಇನ್ನಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪೌರಕಾರ್ಮಿಕರು ನಗರದ ಆರೋಗ್ಯ ಮತ್ತು ಸ್ವಚ್ಛತೆಯ ಮುಂಚೂಣಿ ಕಾರ್ಯಕರ್ತರಾಗಿದ್ದು, ಅವರಿಗೆ ನ್ಯಾಯಯುತ ವೇತನ, ಉದ್ಯೋಗ ಭದ್ರತೆ ಮತ್ತು ಗೌರವಯುತ ಬದುಕು ಕಲ್ಪಿಸುವುದು ಸರ್ಕಾರದ ಕರ್ತವ್ಯ. ಕಾರ್ಮಿಕರನ್ನು ದೂಷಿಸುವ ಬದಲು ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಸಚಿವರು ಮುಂದಾಗಬೇಕು ಎಂದು ಸೈಯದ್ ಮುಜೀಬ್ ಆಗ್ರಹಿಸಿದ್ದಾರೆ.
ಇದನ್ನೂ ನೋಡಿ : ತೀವ್ರ ಬಲಪಂಥೀಯವಾದಿ ಸ್ವತಂತ್ರ ಭಾರದ್ವಾಜ್ ಬಹಿರಂಗಗೊಳಿಸಿದ ಘೋರ ವಾಸ್ತವಗಳೇನು? Janashakthi Media
