ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕೆರೆಗಳನ್ನು ಒತ್ತುವರಿ ಮಾಡುವವರ ವಿರುದ್ಧ ಇನ್ನು ಮುಂದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಎಚ್ಚರಿಕೆ ನೀಡಿದ್ದಾರೆ. ಕೆರೆ
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಗಳಿಗೆ ಸೇರಿದ ಹಾಗೂ ಅವುಗಳ ನಿರ್ವಹಣೆಯಲ್ಲಿರುವ ಕೆರೆಗಳ ಒತ್ತುವರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈಗಾಗಲೇ ಆಗಿರುವ ಒತ್ತುವರಿಗಳನ್ನು ತೆರವುಗೊಳಿಸುವುದರ ಜೊತೆಗೆ, ಹೊಸದಾಗಿ ಕೆರೆ ಒತ್ತುವರಿ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 32,504 ಕೆರೆಗಳಿದ್ದು, ಈ ಪೈಕಿ 11,498 ಕೆರೆಗಳು ಒತ್ತುವರಿಯಾಗಿದ್ದವು. ಈಗಾಗಲೇ 6,670 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ 4,828 ಕೆರೆಗಳ ಸುಮಾರು 11,671 ಎಕರೆ ಪ್ರದೇಶದ ಒತ್ತುವರಿ ತೆರವುಗೊಳಿಸಬೇಕಿದೆ ಎಂದು ಸಚಿವರು ಮಾಹಿತಿ ನೀಡಿದರು.
ಉಳಿದ ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆರೆ, ಕಟ್ಟೆ, ಸರೋವರ ಹಾಗೂ ನದಿಗಳಂತಹ ಮೇಲ್ಮೈ ಜಲಮೂಲಗಳನ್ನು ಸಂರಕ್ಷಿಸುವುದು ಅತ್ಯಂತ ಅಗತ್ಯವಾಗಿದೆ. ಅಂತರ್ಜಲ ಮಟ್ಟ ನಿರಂತರವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಈ ಜಲಮೂಲಗಳೇ ಪ್ರಮುಖ ಆಧಾರವಾಗಲಿವೆ ಎಂದು ಖಂಡ್ರೆ ಹೇಳಿದರು.
ಕರ್ನಾಟಕದ ಹಲವು ಭಾಗಗಳಲ್ಲಿ ಭೂಮಿಯೊಳಗೆ ಕಠಿಣ ಶಿಲೆ ಮತ್ತು ಲ್ಯಾಟರೈಟ್ ಪದರಗಳಿರುವುದರಿಂದ ಮಳೆನೀರು ಸಮರ್ಪಕವಾಗಿ ಇಂಗದಿರುವುದು ಹಾಗೂ ಅತಿಯಾದ ಅಂತರ್ಜಲ ಬಳಕೆಯಿಂದ ನೀರಿನ ಮಟ್ಟ ಕುಸಿಯುತ್ತಿದೆ. ಹೀಗಾಗಿ ಲಭ್ಯವಿರುವ ಮೇಲ್ಮೈ ಜಲಮೂಲಗಳನ್ನು ರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಜಲಕ್ಷಾಮ ಎದುರಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.
ಇದನ್ನೂ ಓದಿ : ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ಬೈಕ್ ನಿಷೇಧ: 25 ಸಾವಿರ ಪ್ರಯಾಣಿಕರಿಗೆ ಹೊಡೆತ!
26,589 ಹಳ್ಳಿಗಳಿಗೆ ಕುಡಿಯುವ ನೀರು
ರಾಜ್ಯದ 26,589 ಹಳ್ಳಿಗಳಲ್ಲಿ ಸುಮಾರು 4.45 ಕೋಟಿ ಜನರು ವಾಸಿಸುತ್ತಿದ್ದಾರೆ. ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ಸರ್ಕಾರದ ಪ್ರಮುಖ ಸವಾಲಾಗಿದೆ. ಮುಂದಿನ 30 ವರ್ಷಗಳಲ್ಲಿ ಹೆಚ್ಚಾಗಬಹುದಾದ ಜನಸಂಖ್ಯೆಯನ್ನೂ ಪರಿಗಣಿಸಿ ಏಕಗ್ರಾಮ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಮೇಲ್ಮೈ ಜಲದ ಗುಣಮಟ್ಟ ಪರೀಕ್ಷೆ ನಡೆಸಲು 1.51 ಲಕ್ಷ ಮಹಿಳೆಯರಿಗೆ ತರಬೇತಿ ನೀಡಲಾಗಿದ್ದು, ಅವರಿಗೆ ಕ್ಷೇತ್ರೀಯ ಪರೀಕ್ಷಾ ಕಿಟ್‌ಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.
ದೇಶದಲ್ಲೇ ಮೊದಲ ವಾಟರ್ ಬಜೆಟಿಂಗ್
ಕರ್ನಾಟಕ ದೇಶದಲ್ಲೇ ಮೊದಲ ಬಾರಿಗೆ ವಾಟರ್ ಬಜೆಟಿಂಗ್ ಜಾರಿಗೊಳಿಸಿದ ರಾಜ್ಯವಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು. ನಿರ್ದಿಷ್ಟ ಪ್ರದೇಶದಲ್ಲಿ ಲಭ್ಯವಿರುವ ನೀರಿನ ಪ್ರಮಾಣ, ಹಾಲಿ ಬೇಡಿಕೆ ಮತ್ತು ಭವಿಷ್ಯದ ಅಗತ್ಯವನ್ನು ಲೆಕ್ಕಹಾಕಿ ನೀರಿನ ಬಳಕೆ ಹಾಗೂ ಪೂರೈಕೆಗೆ ವೈಜ್ಞಾನಿಕ ಯೋಜನೆ ರೂಪಿಸಲು ಇದು ಸಹಕಾರಿಯಾಗಲಿದೆ ಎಂದರು.
ಕೆರೆ, ಸರೋವರ ಮತ್ತು ನದಿಗಳಿಗೆ ತ್ಯಾಜ್ಯ ಸೇರ್ಪಡೆಯಾಗದಂತೆ ಹಾಗೂ ಅವುಗಳ ಒತ್ತುವರಿ ತಡೆಯಲು ರಾಷ್ಟ್ರೀಯ ಮಟ್ಟದಲ್ಲಿ ಸಮಗ್ರ ಯೋಜನೆ ರೂಪಿಸುವಂತೆ ದೆಹಲಿಯಲ್ಲಿ ನಡೆದ ಸುಸ್ಥಿರ ಜಲ ಕುರಿತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರ ಸಮ್ಮುಖದಲ್ಲಿ ಒತ್ತಾಯಿಸಿದ್ದಾಗಿ ಸಚಿವರು ಹೇಳಿದರು.
ಇದನ್ನೂ ನೋಡಿ : ನೈಸ್ ಅಕ್ರಮಕ್ಕೆ ಸರ್ಕಾರದ ‘ಸಕ್ರಮ’ ದಾರಿ? | ನೈಸ್–ಸರ್ಕಾರ–ರಿಯಲ್ ಎಸ್ಟೇಟ್ ಲಿಂಕ್! Janashakthi Media
