ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆಯಲ್ಲಿ ಬೈಕ್‌ ನಿಷೇಧ: 25 ಸಾವಿರ ಪ್ರಯಾಣಿಕರಿಗೆ ಹೊಡೆತ!

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಸೆಪ್ಟೆಂಬರ್‌ 11ರಿಂದ ನಿಷೇಧ ಜಾರಿಯಾಗಲಿದ್ದು, ಪ್ರತಿದಿನ ಈ ಮಾರ್ಗ ಬಳಸುವ ಸುಮಾರು 20ರಿಂದ 25 ಸಾವಿರ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುವ ಸಾಧ್ಯತೆ ಇದೆ. ಎಲೆಕ್ಟ್ರಾನಿಕ್‌

ಬೆಂಗಳೂರಿನ ಐಟಿ ಕೇಂದ್ರವಾಗಿರುವ ಎಲೆಕ್ಟ್ರಾನಿಕ್‌ ಸಿಟಿಗೆ ತೆರಳಲು ಕಳೆದ ಹಲವು ವರ್ಷಗಳಿಂದ ಈ ಮೇಲ್ಸೇತುವೆಯನ್ನೇ ಅವಲಂಬಿಸಿರುವ ಸಾವಿರಾರು ಟೆಕ್ಕಿಗಳು ಹಾಗೂ ಇತರ ದ್ವಿಚಕ್ರ ವಾಹನ ಸವಾರರು ಇದೀಗ ಪರ್ಯಾಯ ಮಾರ್ಗ ಹಿಡಿಯಬೇಕಾಗಿದೆ. ಸುಮಾರು 16 ವರ್ಷಗಳಿಂದ ಸಿಗ್ನಲ್‌ರಹಿತವಾಗಿ ವೇಗದ ಸಂಚಾರಕ್ಕೆ ಅವಕಾಶ ನೀಡುತ್ತಿದ್ದ ಈ ಮಾರ್ಗದ ನಿರ್ಬಂಧದಿಂದ ಪ್ರಯಾಣದ ಸಮಯ ಹೆಚ್ಚಾಗುವ ಆತಂಕವೂ ವ್ಯಕ್ತವಾಗಿದೆ.

ಎಲೆಕ್ಟ್ರಾನಿಕ್‌ ಸಿಟಿ ಟೋಲ್‌ ಪ್ಲಾಜಾ ಬಳಿ ಪ್ರತಿದಿನ 30 ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಸಂಚಾರ ದಾಖಲಾಗುತ್ತಿದೆ. ಈ ಪೈಕಿ ಸುಮಾರು 15 ಸಾವಿರದಿಂದ 18 ಸಾವಿರ ಮಂದಿ ಮಾಸಿಕ ಪಾಸ್‌ ಪಡೆದು ಸಿಲ್ಕ್‌ಬೋರ್ಡ್‌ – ಎಲೆಕ್ಟ್ರಾನಿಕ್‌ ಸಿಟಿ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ ಎನ್ನಲಾಗಿದೆ.

ಮಾಸಿಕ ಪಾಸ್‌ ದರ 785 ರೂ., ದಿನದ ಪಾಸ್‌ 40 ರೂ. ಹಾಗೂ ಏಕಮುಖ ಪ್ರಯಾಣಕ್ಕೆ 25 ರೂ. ಶುಲ್ಕವಿದೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಬಳಸಲು ದ್ವಿಚಕ್ರ ವಾಹನಗಳಿಂದ ಟೋಲ್‌ ಸಂಗ್ರಹಿಸಲಾಗುತ್ತಿರುವ ಪ್ರಮುಖ ಮಾರ್ಗವೂ ಇದಾಗಿದೆ.

ಕೆಳರಸ್ತೆಯಲ್ಲಿ ಹೆಚ್ಚಲಿದೆ ದಟ್ಟಣೆ?

ಮೇಲ್ಸೇತುವೆಯಲ್ಲಿ ಬೈಕ್‌ ಸಂಚಾರ ನಿಷೇಧವಾದ ಬಳಿಕ ಎಲೆಕ್ಟ್ರಾನಿಕ್‌ ಸಿಟಿ ಕಡೆ ತೆರಳುವ ಬಹುತೇಕ ಸವಾರರು ಕೆಳರಸ್ತೆಯನ್ನು ಬಳಸಬೇಕಾಗುತ್ತದೆ. ಈ ಮಾರ್ಗದಲ್ಲಿ ಹಲವು ಸಂಚಾರ ಸಿಗ್ನಲ್‌ಗಳನ್ನು ದಾಟಬೇಕಿರುವುದರಿಂದ ಈಗಾಗಲೇ ದಟ್ಟಣೆಯಿಂದ ಬಳಲುತ್ತಿರುವ ರಸ್ತೆಗಳ ಮೇಲೆ ಮತ್ತಷ್ಟು ಒತ್ತಡ ಬೀಳುವ ಸಾಧ್ಯತೆ ಇದೆ.

ಮೇಲ್ಸೇತುವೆಯ ಪ್ರಮುಖ ಪ್ರಯೋಜನವೇ ಸಿಗ್ನಲ್‌ರಹಿತ ಮತ್ತು ವೇಗದ ಸಂಚಾರವಾಗಿತ್ತು. ಅದನ್ನೇ ಅವಲಂಬಿಸಿರುವ ದ್ವಿಚಕ್ರ ವಾಹನ ಸವಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ನಿಷೇಧ ಜಾರಿಗೊಳಿಸಿದರೆ ಪ್ರಯಾಣಿಕರ ಸಮಯ ಮತ್ತು ಇಂಧನ ವೆಚ್ಚ ಎರಡೂ ಹೆಚ್ಚಾಗಬಹುದು ಎಂಬ ಆತಂಕವೂ ಇದೆ.

ಇದನ್ನೂ ಓದಿ : ಕರಾವಳಿಯ ಜ್ವಲಂತ ಸಮಸ್ಯೆ ಬಗೆಹರಿಸಲು ಆಗ್ರಹ: ಸಚಿವ ಸಂಪುಟ ಸಭೆಗೆ ಸಿಪಿಐಎಂ ಮೆರವಣಿಗೆ

ಸುರಕ್ಷತೆ ಕಾರಣ ಎಂದಿರುವ ಸಂಚಾರ ಪೊಲೀಸರು

ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಿಷೇಧದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ವೇಗದ ವಾಹನಗಳ ಸಂಚಾರ ಹೆಚ್ಚಿರುವ ಮೇಲ್ಸೇತುವೆಗಳಲ್ಲಿ ದ್ವಿಚಕ್ರ ವಾಹನಗಳ ಸುರಕ್ಷತೆಯ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಲೇ ಬಂದಿದೆ.

ಆದರೆ, ಸುರಕ್ಷತೆಯ ಕಾರಣಕ್ಕೆ ನಿರ್ಬಂಧ ವಿಧಿಸುವುದಾದರೆ ದ್ವಿಚಕ್ರ ವಾಹನ ಸವಾರರಿಗೆ ಸಮರ್ಪಕ ಪರ್ಯಾಯ ಮಾರ್ಗ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕೆಂಬ ಪ್ರಶ್ನೆಯೂ ಎದುರಾಗಿದೆ. ಎಲೆಕ್ಟ್ರಾನಿಕ್‌

ಟೋಲ್‌ ಒಪ್ಪಂದ ಮುಗಿಯುವ ಬೆನ್ನಲ್ಲೇ ನಿಷೇಧ

ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆಯನ್ನು ನಿರ್ವಹಿಸುತ್ತಿರುವ ಬೆಂಗಳೂರು ಎಲಿವೇಟೆಡ್‌ ಟೋಲ್‌ವೇ ಖಾಸಗಿ ಸಂಸ್ಥೆಯ ಸುಮಾರು ಎರಡು ದಶಕಗಳ ರಿಯಾಯಿತಿ ಒಪ್ಪಂದ ಸೆಪ್ಟೆಂಬರ್‌ 10ರಂದು ಮುಕ್ತಾಯಗೊಳ್ಳಲಿದೆ. ಇದರ ಬೆನ್ನಲ್ಲೇ ಸೆಪ್ಟೆಂಬರ್‌ 11ರಿಂದ ದ್ವಿಚಕ್ರ ವಾಹನಗಳ ಮೇಲಿನ ನಿಷೇಧ ಜಾರಿಗೆ ಬರಲಿದೆ.

ಮೊದಲಿಗೆ ಸೆಪ್ಟೆಂಬರ್‌ 4ರಿಂದಲೇ ನಿಷೇಧ ಜಾರಿಗೆ ತರಲು ನಿರ್ಧರಿಸಲಾಗಿತ್ತು. ಆದರೆ ಒಪ್ಪಂದ ಮುಗಿಯುವ ಮುನ್ನ ಬೈಕ್‌ ಸಂಚಾರ ನಿಷೇಧಿಸಿದರೆ ಆರ್ಥಿಕ ನಷ್ಟವಾಗಲಿದೆ ಎಂದು ನಿರ್ವಹಣಾ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದಿನಾಂಕವನ್ನು ಸೆಪ್ಟೆಂಬರ್‌ 11ಕ್ಕೆ ಮುಂದೂಡಲಾಗಿದೆ ಎಂದು ವರದಿಯಾಗಿದೆ.

ಈ ನಡುವೆ ಟೋಲ್‌ ಸಂಗ್ರಹ ಅವಧಿಯನ್ನು ಇನ್ನೂ ಕನಿಷ್ಠ 100 ದಿನಗಳ ಕಾಲ ವಿಸ್ತರಿಸುವಂತೆ ನಿರ್ವಹಣಾ ಸಂಸ್ಥೆ ಮನವಿ ಮಾಡಿದೆ. ಕೋವಿಡ್‌ ಅವಧಿಯಲ್ಲಿ ಉಂಟಾದ ನಷ್ಟವನ್ನು ಉಲ್ಲೇಖಿಸಿರುವ ಸಂಸ್ಥೆಯ ಮನವಿ ಸದ್ಯ ಸಂಬಂಧಿತ ಸಮಿತಿಯ ಪರಿಶೀಲನೆಯಲ್ಲಿದೆ. ಹೊಸ ಟೋಲ್‌ ನಿರ್ವಹಣಾ ಸಂಸ್ಥೆ ಆಯ್ಕೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಟೆಂಡರ್‌ ಕರೆದಿದೆ.

ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆ ನಿಷೇಧದಿಂದ ಒಂದೆಡೆ ದ್ವಿಚಕ್ರ ವಾಹನ ಸವಾರರ ಸುರಕ್ಷತೆ ಪ್ರಶ್ನೆ ಮುಂದಿಟ್ಟಿದ್ದರೆ, ಮತ್ತೊಂದೆಡೆ ಸಾವಿರಾರು ಪ್ರಯಾಣಿಕರು ಅನಿವಾರ್ಯವಾಗಿ ಕೆಳರಸ್ತೆಗೆ ಇಳಿಯುವುದರಿಂದ ನಗರ ಸಂಚಾರದ ಮೇಲೆ ಬೀರುವ ಪರಿಣಾಮದ ಬಗ್ಗೆಯೂ ಚರ್ಚೆ ಆರಂಭವಾಗಿದೆ. 

ಇದನ್ನೂ ನೋಡಿ : ನೈಸ್‌ ಅಕ್ರಮಕ್ಕೆ ಸರ್ಕಾರದ ‘ಸಕ್ರಮ’ ದಾರಿ? | ನೈಸ್‌–ಸರ್ಕಾರ–ರಿಯಲ್‌ ಎಸ್ಟೇಟ್‌ ಲಿಂಕ್‌! Janashakthi Media

Donate Janashakthi Media

Leave a Reply

Your email address will not be published. Required fields are marked *