ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಸಾವು: ಹಲವು ಅನುಮಾನ; ಸಮಗ್ರ ತನಿಖೆಗೆ ಎಸ್ಎಫ್‌ಐ–ಡಿವೈಎಫ್ಐ ಆಗ್ರಹ

ಹಾಸನ: ನಗರದ ಹೊರವಲಯದ ಗುಡ್ಡೇನಹಳ್ಳಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಪ್ಯಾರಾಮೆಡಿಕಲ್‌ ವಿದ್ಯಾರ್ಥಿ ಮದನ್‌ ಸಾವನ್ನಪ್ಪಿರುವ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪ್ರಕರಣದ ಎಲ್ಲ ಆಯಾಮಗಳಲ್ಲೂ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಎಸ್ಎಫ್‌ಐ ಮತ್ತು ಡಿವೈಎಫ್ಐ ಹಾಸನ ಜಿಲ್ಲಾ ಸಮಿತಿಗಳು ಆಗ್ರಹಿಸಿವೆ. ಹಾಸ್ಟೆಲ್‌ನಲ್ಲಿ

ಹಾಸನದಲ್ಲಿ ದ್ವಿತೀಯ ವರ್ಷದ ಪ್ಯಾರಾಮೆಡಿಕಲ್‌ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ಮದನ್‌, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ವಾಸವಾಗಿದ್ದರು. ಸಾವಿಗೂ ಮುನ್ನ ಅವರು ಡೆತ್‌ನೋಟ್‌ ಬರೆದಿಟ್ಟಿದ್ದು, ತಮ್ಮ ಸಾವಿಗೆ ನಾಲ್ವರು ಕಾರಣ ಎಂದು ಉಲ್ಲೇಖಿಸಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ಮದನ್‌ ಅವರಿಗೆ ಹಾಸ್ಟೆಲ್‌ ಹೊರಗೆ ಪರಿಚಯವಾಗಿದ್ದ ಕೆಲವರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು. ಈ ಕುರಿತು ಅವರು ತಮ್ಮ ತಾಯಿಗೆ ಮಾಹಿತಿ ನೀಡಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಳಿಕ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮದನ್‌ ಮೇಲೆ ಹಲ್ಲೆ ನಡೆಸಿ, ಮೊಬೈಲ್‌ ಫೋನ್‌ ಹಾನಿಗೊಳಿಸಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ. ಹಾಸ್ಟೆಲ್‌ನಲ್ಲಿ

ಸಾವಿಗೂ ಮುನ್ನ ಮದನ್‌ ತಮ್ಮ ತಾಯಿಗೆ ಕರೆ ಮಾಡಿ ಘಟನೆ ಕುರಿತು ಮಾಹಿತಿ ನೀಡಿದ್ದರು ಎನ್ನಲಾಗಿದ್ದು, ನಂತರ ನಡೆದ ಬೆಳವಣಿಗೆಗಳ ಕುರಿತು ಕುಟುಂಬಸ್ಥರು ನೀಡಿರುವ ದೂರನ್ನೂ ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ. ಹಾಸ್ಟೆಲ್‌ನಲ್ಲಿ

ಡೆತ್‌ನೋಟ್‌ ಸತ್ಯಾಸತ್ಯತೆ ಪರಿಶೀಲನೆಗೆ ಆಗ್ರಹ

ಮದನ್‌ ಸಾವನ್ನು ಕೇವಲ ಆತ್ಮಹತ್ಯೆ ಎಂದು ಪರಿಗಣಿಸಿ ಪ್ರಕರಣವನ್ನು ಮುಕ್ತಾಯಗೊಳಿಸದೆ, ಡೆತ್‌ನೋಟ್‌ನ ಸತ್ಯಾಸತ್ಯತೆ, ಅದರಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳ ಪಾತ್ರ, ಹಣಕ್ಕಾಗಿ ನಡೆದಿದೆಯೆನ್ನಲಾದ ಕಿರುಕುಳ, ಹಲ್ಲೆ, ಮೊಬೈಲ್‌ ಹಾನಿ ಮತ್ತು ಬೆದರಿಕೆ ಕರೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಎಸ್ಎಫ್‌ಐ–ಡಿವೈಎಫ್ಐ ಆಗ್ರಹಿಸಿವೆ. ಹಾಸ್ಟೆಲ್‌ನಲ್ಲಿ

ಘಟನೆಗೂ ಮುನ್ನ ಮತ್ತು ನಂತರ ನಡೆದಿರುವ ಎಲ್ಲ ಬೆಳವಣಿಗೆಗಳನ್ನು ಕಾಲಾನುಕ್ರಮದಲ್ಲಿ ಪರಿಶೀಲಿಸಿ, ಪ್ರಕರಣದ ಹಿಂದಿರುವ ಸಂಪೂರ್ಣ ಸತ್ಯವನ್ನು ಹೊರತರಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

ಇದನ್ನೂ ಓದಿ : ಕರಾವಳಿಯ ಜ್ವಲಂತ ಸಮಸ್ಯೆ ಬಗೆಹರಿಸಲು ಆಗ್ರಹ: ಸಚಿವ ಸಂಪುಟ ಸಭೆಗೆ ಸಿಪಿಐಎಂ ಮೆರವಣಿಗೆ

ಸಿಸಿಟಿವಿ, ಕರೆಗಳ ವಿವರ ಪರಿಶೀಲಿಸಲಿ

ಹಾಸ್ಟೆಲ್‌ ಹಾಗೂ ಅದರ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ಪರಿಶೀಲಿಸಬೇಕು. ಮದನ್‌ ಅವರ ಮೊಬೈಲ್‌ ಕರೆಗಳ ವಿವರ, ಸಂಬಂಧಿತ ವ್ಯಕ್ತಿಗಳೊಂದಿಗೆ ನಡೆದ ಸಂವಹನ ಹಾಗೂ ಲಭ್ಯವಿರುವ ಇತರ ಸಾಕ್ಷ್ಯಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಲಾಗಿದೆ.

ಕುಟುಂಬಸ್ಥರು ನೀಡಿರುವ ದೂರಿನ ಆಧಾರದ ಮೇಲೆ ಯಾವುದೇ ಪ್ರಭಾವಕ್ಕೆ ಒಳಗಾಗದೆ ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಹೇಳಿವೆ.

ಹಾಸ್ಟೆಲ್‌ಗಳಲ್ಲಿ ಸುರಕ್ಷತೆ ಖಚಿತಪಡಿಸಲು ಒತ್ತಾಯ

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಸರ್ಕಾರ ಖಚಿತಪಡಿಸಬೇಕು. ವಿದ್ಯಾರ್ಥಿಗಳಿಗೆ ಹೊರಗಿನಿಂದ ಕಿರುಕುಳ ಅಥವಾ ಬೆದರಿಕೆ ಎದುರಾದ ಸಂದರ್ಭದಲ್ಲಿ ತಕ್ಷಣ ದೂರು ನೀಡಲು ಪರಿಣಾಮಕಾರಿ ವ್ಯವಸ್ಥೆ ಕಲ್ಪಿಸಬೇಕು ಎಂದು ಎಸ್ಎಫ್‌ಐ ಮತ್ತು ಡಿವೈಎಫ್ಐ ಒತ್ತಾಯಿಸಿವೆ.

ಮದನ್‌ ಅವರ ಕುಟುಂಬಕ್ಕೆ ನ್ಯಾಯ ದೊರಕಬೇಕು. ಪ್ರಕರಣದ ಸಂಪೂರ್ಣ ಸತ್ಯ ಹೊರಬಂದು, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಸ್ಎಫ್‌ಐ ಮತ್ತು ಡಿವೈಎಫ್ಐ ಹಾಸನ ಜಿಲ್ಲಾ ಸಮಿತಿಗಳು ಜಂಟಿ ಮಾಧ್ಯಮ ಹೇಳಿಕೆಯಲ್ಲಿ ಆಗ್ರಹಿಸಿವೆ. ಹಾಸ್ಟೆಲ್‌ನಲ್ಲಿ

ಇದನ್ನೂ ನೋಡಿ : ನೈಸ್‌ ಅಕ್ರಮಕ್ಕೆ ಸರ್ಕಾರದ ‘ಸಕ್ರಮ’ ದಾರಿ? | ನೈಸ್‌–ಸರ್ಕಾರ–ರಿಯಲ್‌ ಎಸ್ಟೇಟ್‌ ಲಿಂಕ್‌! Janashakthi Media

Donate Janashakthi Media

Leave a Reply

Your email address will not be published. Required fields are marked *