ನ.18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಗೆ ಬೃಹತ್ ಮಾರ್ಚ್; ಸಚಿವ ಸಂಪುಟಕ್ಕೆ ಆಗ್ರಹ ಪತ್ರ ಸಲ್ಲಿಕೆ
ಮಂಗಳೂರು: ಕರಾವಳಿ ಕರ್ನಾಟಕದ ಜನಸಮುದಾಯಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ, ಜನಕೇಂದ್ರಿತ ಸಮಗ್ರ ಅಭಿವೃದ್ಧಿ ನೀತಿಯನ್ನು ರೂಪಿಸಬೇಕು ಎಂದು ಆಗ್ರಹಿಸಿ ನವೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಗೆ ಬೃಹತ್ ಮೆರವಣಿಗೆ ನಡೆಸಲು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನಿರ್ಧರಿಸಿದೆ.ಕರಾವಳಿಯ
ರಾಜ್ಯ ಸರ್ಕಾರ ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಸಚಿವ ಸಂಪುಟ ಸಭೆಯು ಪ್ರವಾಸೋದ್ಯಮ ಮತ್ತು ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಕಾರ್ಪೊರೇಟ್ ಬಂಡವಾಳದ ಹಿತಾಸಕ್ತಿಗಳನ್ನು ಎತ್ತಿಹಿಡಿಯುವ ಕಾರ್ಯಕ್ರಮವಾಗಿ ಸೀಮಿತವಾಗುವ ಸಾಧ್ಯತೆ ಇದೆ. ಇದರ ಬದಲಾಗಿ ಕರಾವಳಿ ಭಾಗದ ಜನರ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಹಾಗೂ ಜನಪರ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸುವುದು ಸರ್ಕಾರದ ಆದ್ಯತೆಯಾಗಬೇಕು ಎಂದು ಸಿಪಿಐಎಂ ಒತ್ತಾಯಿಸಿದೆ.
ಕರಾವಳಿ ಕರ್ನಾಟಕದ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುವ ಪ್ರವಾಸೋದ್ಯಮ ನೀತಿಯನ್ನು ಸಾರ್ವಜನಿಕ–ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ರೂಪಿಸುವ ಮೂಲಕ ಕಾರ್ಪೊರೇಟ್ ಕಂಪನಿಗಳು ಮತ್ತು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ನಡೆಯುತ್ತಿದೆ ಎಂದು ಸಿಪಿಐಎಂ ಆರೋಪಿಸಿದೆ.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ಥಳೀಯ ಜನರು ಹಾಗೂ ವಿದ್ಯಾವಂತ ಯುವಜನರನ್ನು ಪಾಲುದಾರರನ್ನಾಗಿಸುವ ಸ್ಪಷ್ಟ ಕ್ರಮಗಳು ಪ್ರಸ್ತಾವಿತ ನೀತಿಯಲ್ಲಿ ಕಾಣಿಸುತ್ತಿಲ್ಲ. ಸ್ಥಳೀಯ ಸಮುದಾಯಗಳ ಆರ್ಥಿಕ ಸಬಲೀಕರಣಕ್ಕೆ ಆದ್ಯತೆ ನೀಡುವ ರೀತಿಯಲ್ಲಿ ಪ್ರವಾಸೋದ್ಯಮ ನೀತಿಯನ್ನು ರೂಪಿಸಬೇಕು ಎಂದು ಪಕ್ಷ ಆಗ್ರಹಿಸಿದೆ. ಕರಾವಳಿಯ
ಸ್ಥಳೀಯರಿಗೆ ಉದ್ಯೋಗ, ಆರೋಗ್ಯ ಮೂಲಸೌಕರ್ಯಕ್ಕೆ ಆದ್ಯತೆ
ಕರಾವಳಿ ಜಿಲ್ಲೆಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಹಾಗೂ ಹೊಸದಾಗಿ ಹೂಡಿಕೆ ಮಾಡಲು ಮುಂದಾಗಿರುವ ಉದ್ಯಮಗಳಲ್ಲಿ ಸ್ಥಳೀಯ ಯುವಜನತೆಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದು ಸಿಪಿಐಎಂ ಒತ್ತಾಯಿಸಿದೆ.
ಮಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ನಿಮ್ಹಾನ್ಸ್ ನರರೋಗ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಬೇಕು. ಕರಾವಳಿ ಜಿಲ್ಲೆಗಳಲ್ಲಿ ಹೊಸದಾಗಿ ರಚನೆಯಾಗಿರುವ ತಾಲೂಕುಗಳಿಗೆ ತಾಲೂಕು ಆಸ್ಪತ್ರೆಗಳನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದೆ.
ಮರಳು, ನಿವೇಶನ ಮತ್ತು ಭೂಮಿ ಸಮಸ್ಯೆ ಪರಿಹರಿಸಲು ಒತ್ತಾಯ
ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸಬೇಕು. ಕೆಂಪು ಕಲ್ಲು ಮತ್ತು ಮರಳಿನ ದರ ನಿಯಂತ್ರಣಕ್ಕೆ ನಿರ್ದಿಷ್ಟ ಕ್ರಮ ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ವಿಧಿಸುತ್ತಿರುವ ಅಧಿಕ ಶುಲ್ಕಕ್ಕೆ ನಿಯಂತ್ರಣ ತರಬೇಕು ಎಂದು ಪಕ್ಷ ಒತ್ತಾಯಿಸಿದೆ.
ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮನೆ ನಿವೇಶನ ಹಾಗೂ ವಸತಿ ಯೋಜನೆಗಳನ್ನು ಜಾರಿಗೊಳಿಸುವುದು, ಹಕ್ಕುಪತ್ರ ವಿತರಣೆ ಸೇರಿದಂತೆ ಭೂಮಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದೆ. ಕರಾವಳಿಯ
ಇದನ್ನೂ ಓದಿ : ಜನಾಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ: ಉದ್ಯಾನವನಗಳ ಮಸೂದೆ ಹಿಂಪಡೆಯಲು ಸಚಿವ ಸಂಪುಟ ತೀರ್ಮಾನ
ಟೋಲ್, ಸಂಚಾರ ದಟ್ಟಣೆಗೆ ಪರಿಹಾರ
ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಟೋಲ್ ಬೂತ್ಗಳಿಗೆ ಕಡಿವಾಣ ಹಾಕಬೇಕು. ಟೋಲ್ ಬೂತ್ಗಳ ನಡುವಿನ ಅಂತರಕ್ಕೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಸಿಪಿಐಎಂ ಆಗ್ರಹಿಸಿದೆ.
ಮಂಗಳೂರು ನಗರದಲ್ಲಿ ಗಂಭೀರ ಸ್ವರೂಪ ಪಡೆದಿರುವ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಮೇಲ್ಸೇತುವೆ, ರಿಂಗ್ ರಸ್ತೆ ಸೇರಿದಂತೆ ಪ್ರಾಯೋಗಿಕ ಮತ್ತು ದೀರ್ಘಕಾಲಿಕ ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದೆ.
ಸ್ಥಳೀಯ ಕೈಗಾರಿಕೆಗಳಿಗೆ ಉತ್ತೇಜನ
ಮೀನುಗಾರಿಕೆ, ಅಡಿಕೆ ಹಾಗೂ ರಬ್ಬರ್ ಉತ್ಪನ್ನಗಳನ್ನು ಸ್ಥಳೀಯವಾಗಿಯೇ ಸಂಸ್ಕರಿಸಿ ಮೌಲ್ಯವರ್ಧನೆ ಮಾಡುವ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಇದರಿಂದ ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿಯೊಂದಿಗೆ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ದೊರೆಯಲಿದೆ ಎಂದು ಸಿಪಿಐಎಂ ಅಭಿಪ್ರಾಯಪಟ್ಟಿದೆ.
ಕರಾವಳಿ ಜಿಲ್ಲೆಗಳ ವಿವಿಧ ಸರ್ಕಾರಿ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿದೇಶಗಳಲ್ಲಿ, ವಿಶೇಷವಾಗಿ ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಕರಾವಳಿ ಭಾಗದ ಕಾರ್ಮಿಕರ ಕಲ್ಯಾಣಕ್ಕಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಬೇಕು ಎಂದು ಪಕ್ಷ ಆಗ್ರಹಿಸಿದೆ.
ಕೊರಗ, ದಲಿತರು, ಆದಿವಾಸಿಗಳ ಸಮಸ್ಯೆಗಳಿಗೆ ವಿಶೇಷ ಯೋಜನೆ
ಕೊರಗ ಸಮುದಾಯದ ಭೂಮಿ, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಷ್ಟವಾದ ಅಭಿವೃದ್ಧಿ ಯೋಜನೆ ರೂಪಿಸಬೇಕು. ಡಿಸಿ ಮನ್ನಾ ಭೂಮಿ ಸೇರಿದಂತೆ ದಲಿತ ಸಮುದಾಯ ಎದುರಿಸುತ್ತಿರುವ ಭೂಮಿ ಹಾಗೂ ಇತರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸಿಪಿಐಎಂ ಒತ್ತಾಯಿಸಿದೆ.
ಮಲೆಕುಡಿಯರು, ಕುಡುಬಿಗಳು ಸೇರಿದಂತೆ ಆದಿವಾಸಿ ಮತ್ತು ಅತಿ ಸಣ್ಣ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಬೇಕು. ಅಲ್ಪಸಂಖ್ಯಾತರಾದ ಮುಸ್ಲಿಮರು ಮತ್ತು ಕ್ರೈಸ್ತರು ಘನತೆಯಿಂದ ಬದುಕುವ ವಾತಾವರಣವನ್ನು ಖಾತರಿಪಡಿಸಬೇಕು ಎಂದು ಪಕ್ಷ ಹೇಳಿದೆ. ಕರಾವಳಿಯ
ಕೋಮುವಾದ ನಿರ್ಮೂಲನೆಗೆ ಕ್ರಮ
ಕರಾವಳಿ ಭಾಗದಲ್ಲಿ ಕೋಮುವಾದ ಮತ್ತು ಮತೀಯ ಸಂಘರ್ಷದ ಸಮಸ್ಯೆಯನ್ನು ಬುಡಮಟ್ಟದಿಂದಲೇ ನಿರ್ಮೂಲನೆ ಮಾಡಲು ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಸೌಹಾರ್ದ ಮತ್ತು ಶಾಂತಿಯನ್ನು ಬಲಪಡಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಸಿಪಿಐಎಂ ಆಗ್ರಹಿಸಿದೆ.
ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನವೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಗೆ ಬೃಹತ್ ಮೆರವಣಿಗೆ ನಡೆಸಲಾಗುವುದು. ಮುಖ್ಯಮಂತ್ರಿ ನೇತೃತ್ವದ ಸಚಿವ ಸಂಪುಟಕ್ಕೆ ಆಗ್ರಹ ಪತ್ರ ಸಲ್ಲಿಸಲಾಗುವುದು ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ. ಕರಾವಳಿಯ
ಇದನ್ನೂ ನೋಡಿ : ನೈಸ್ ಅಕ್ರಮಕ್ಕೆ ಸರ್ಕಾರದ ‘ಸಕ್ರಮ’ ದಾರಿ? | ನೈಸ್–ಸರ್ಕಾರ–ರಿಯಲ್ ಎಸ್ಟೇಟ್ ಲಿಂಕ್! Janashakthi Media
