ಶಾಲೆ ಆರಂಭವಾಗಿ ಮೂರು ತಿಂಗಳಾದರೂ ಹೆಚ್ಚುವರಿ ಮಕ್ಕಳಿಗೆ ಪಠ್ಯಪುಸ್ತಕವಿಲ್ಲ: ಪಾಫ್ರೆ ಆಕ್ರೋಶ

ಬೆಂಗಳೂರು: ಶೈಕ್ಷಣಿಕ ವರ್ಷ ಆರಂಭವಾಗಿ ಮೂರು ತಿಂಗಳು ಕಳೆದರೂ ರಾಜ್ಯದ ಹಲವು ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿಯಾಗಿ ದಾಖಲಾಗಿರುವ ಮಕ್ಕಳಿಗೆ ಪಠ್ಯಪುಸ್ತಕಗಳು ದೊರೆಯದಿರುವುದು ಮಕ್ಕಳ ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಮಕ್ಕಳ ಹಕ್ಕುಗಳ ಪರ ಹೋರಾಟ ವೇದಿಕೆ (ಪಾಫ್ರೆ) ಆಕ್ಷೇಪ ವ್ಯಕ್ತಪಡಿಸಿದೆ. ಶಾಲೆ

ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿ 8 ಮತ್ತು 9ನೇ ತರಗತಿಗೆ ಹೊಸದಾಗಿ ದಾಖಲಾಗಿರುವ ಹಲವು ಮಕ್ಕಳಿಗೆ ಪಠ್ಯಪುಸ್ತಕಗಳು ಸಿಗುತ್ತಿಲ್ಲ. ಸರ್ಕಾರಿ ಶಾಲೆಯಿಂದ ಮತ್ತೊಂದು ಸರ್ಕಾರಿ ಶಾಲೆಗೆ ವರ್ಗಾವಣೆಯಾಗಿ ಬರುವ ಮಕ್ಕಳಿಗೆ ಹಿಂದಿನ ಶಾಲೆಯಿಂದ ಪಠ್ಯಪುಸ್ತಕಗಳು ಲಭ್ಯವಾಗುತ್ತವೆ. ಆದರೆ ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳಿಗೆ ಇಲಾಖೆಯಿಂದ ಪುಸ್ತಕಗಳು ದೊರೆಯದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಪಾಫ್ರೆ ಪ್ರಧಾನ ಸಂಚಾಲಕ ನಿರಂಜನಾರಾಧ್ಯ ವಿ.ಪಿ. ತಿಳಿಸಿದ್ದಾರೆ.

ಕಳೆದ ಸಾಲಿನ ಎಸ್‌ಎಟಿಎಸ್‌ ಅಂಕಿಅಂಶಗಳನ್ನು ಆಧರಿಸಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಪಠ್ಯಪುಸ್ತಕಗಳನ್ನು ಮುದ್ರಿಸಿ ವಿತರಿಸಲಾಗಿದೆ. ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಹೊಸದಾಗಿ ಸೇರುವ ಮಕ್ಕಳು ಹಿಂದಿನ ಅಂಕಿಅಂಶಗಳಲ್ಲಿ ಒಳಗೊಂಡಿರದ ಕಾರಣ, ಅವರಿಗಾಗಿ ಪ್ರತ್ಯೇಕವಾಗಿ ಬೇಡಿಕೆ ಪಟ್ಟಿ ಪಡೆದು ಪುಸ್ತಕಗಳನ್ನು ಮುದ್ರಿಸಬೇಕಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಆದರೆ ಈ ಪ್ರಕ್ರಿಯೆ ಪೂರ್ಣಗೊಳ್ಳುವಷ್ಟರಲ್ಲಿ ಮೊದಲನೇ ಸೆಮಿಸ್ಟರ್‌ ಮುಗಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪಠ್ಯಪುಸ್ತಕಗಳಿಲ್ಲದೆ ತರಗತಿಗಳಿಗೆ ಹಾಜರಾಗಬೇಕಾದ ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಗಣಿತ, ವಿಜ್ಞಾನ ಪುಸ್ತಕಗಳ ಕೊರತೆ

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಲಿಕೆಗೆ ಪಠ್ಯಪುಸ್ತಕವೇ ಪ್ರಮುಖ ಆಧಾರವಾಗಿದೆ. ಇಂತಹ ಸಂದರ್ಭದಲ್ಲಿ 8 ಮತ್ತು 9ನೇ ತರಗತಿಯ ಗಣಿತ ಹಾಗೂ ವಿಜ್ಞಾನ ವಿಷಯಗಳ ಪುಸ್ತಕಗಳು ಹಲವು ಶಾಲೆಗಳಿಗೆ ಇನ್ನೂ ತಲುಪಿಲ್ಲ. ಕೆಲವು ಶಾಲೆಗಳಲ್ಲಿ ಪ್ರಾಥಮಿಕ ಹಂತದ 3 ಮತ್ತು 4ನೇ ತರಗತಿಯ ಪಠ್ಯಪುಸ್ತಕಗಳ ಕೊರತೆಯೂ ಇದೆ ಎಂದು ಪಾಫ್ರೆ ತಿಳಿಸಿದೆ.

ಪಠ್ಯಪುಸ್ತಕಗಳ ಕೊರತೆಯ ಬಗ್ಗೆ ಶಿಕ್ಷಕರು, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳು (ಎಸ್‌ಡಿಎಂಸಿ) ಹಾಗೂ ಪೋಷಕರು ಹಲವು ಬಾರಿ ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಸಂಘಟನೆ ಆರೋಪಿಸಿದೆ. ಶಾಲೆ 

ಇದನ್ನೂ ಓದಿ : ಎಸ್‌ಐಆರ್‌ ಕುರಿತು ಆತಂಕ: ಮುಖ್ಯಮಂತ್ರಿ ಮಧ್ಯಪ್ರವೇಶಕ್ಕೆ ಪ್ರಕಾಶ್‌ ರಾಜ್‌ ಸೇರಿ ನಾಗರಿಕ ಸಂಘಟನೆಗಳ ಒತ್ತಾಯ

‘ಮಕ್ಕಳ ಕಲಿಕೆಗೆ ನೇರ ಹೊಡೆತ’

ಶಿಕ್ಷಣ ಮಕ್ಕಳ ಮೂಲಭೂತ ಹಕ್ಕಾಗಿದ್ದು, ಶಿಕ್ಷಣ ಹಕ್ಕು ಕಾಯ್ದೆಯ ಆಶಯದಂತೆ ಮಕ್ಕಳಿಗೆ ಅಗತ್ಯವಾದ ಕಲಿಕಾ ಸಾಮಗ್ರಿಗಳು ಸಮಯಕ್ಕೆ ಸರಿಯಾಗಿ ಲಭ್ಯವಾಗಬೇಕು. ಪಠ್ಯಪುಸ್ತಕಗಳೇ ಇಲ್ಲದೆ ಗ್ರಾಮೀಣ ಪ್ರದೇಶದ ಮಕ್ಕಳು ಕಲಿಕೆಯಲ್ಲಿ ಮುಂದುವರಿಯುವುದು ಕಷ್ಟವಾಗುತ್ತದೆ. ಇದರಿಂದ ಶಿಕ್ಷಣದಲ್ಲಿ ಈಗಾಗಲೇ ಇರುವ ಅಸಮಾನತೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ನಿರಂಜನಾರಾಧ್ಯ ಹೇಳಿದ್ದಾರೆ.

ಮಕ್ಕಳ ದಾಖಲಾತಿಯಲ್ಲಿ ಉಂಟಾಗುವ ಬದಲಾವಣೆಗಳನ್ನು ಪರಿಗಣಿಸಿ ಪಠ್ಯಪುಸ್ತಕಗಳ ಬೇಡಿಕೆ ಮತ್ತು ಮುದ್ರಣಕ್ಕೆ ಮುಂಚಿತ ಯೋಜನೆ ರೂಪಿಸಬೇಕಾಗಿತ್ತು. ಆದರೆ ಯಾವುದೇ ಸಮರ್ಪಕ ಮುಂಗಾಣಿಕೆ ಇಲ್ಲದೆ ಪುಸ್ತಕ ವಿತರಣೆಯಲ್ಲಿ ವಿಳಂಬ ಮಾಡಿರುವುದು ಮಕ್ಕಳ ಶೈಕ್ಷಣಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ಟೀಕಿಸಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಬಾಕಿ ಇರುವ ಎಲ್ಲ ತರಗತಿಗಳ ಮತ್ತು ಎಲ್ಲ ವಿಷಯಗಳ ಪಠ್ಯಪುಸ್ತಕಗಳನ್ನು ಕೂಡಲೇ ಪೂರೈಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪಾಫ್ರೆ ಒತ್ತಾಯಿಸಿದೆ.

ಅಲ್ಲದೆ, ಮಕ್ಕಳ ದಾಖಲಾತಿಯಲ್ಲಿನ ಬದಲಾವಣೆಗಳನ್ನು ಸಮರ್ಪಕವಾಗಿ ಅಂದಾಜಿಸದೆ ಪಠ್ಯಪುಸ್ತಕ ವಿತರಣೆಯಲ್ಲಿ ವಿಳಂಬ ಮಾಡಿ ಮಕ್ಕಳ ಕಲಿಕೆಗೆ ಅಡ್ಡಿಯಾಗಿರುವ ಅಧಿಕಾರಿಗಳ ಜವಾಬ್ದಾರಿಯನ್ನು ನಿಗದಿಪಡಿಸಿ, ಅಗತ್ಯ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪಾಫ್ರೆ ಪ್ರಧಾನ ಸಂಚಾಲಕ ನಿರಂಜನಾರಾಧ್ಯ ವಿ.ಪಿ. ಆಗ್ರಹಿಸಿದ್ದಾರೆ.

ಇದನ್ನೂ ನೋಡಿ : SIR ಕರ್ನಾಟಕ | ಮತದಾನದ ಹಕ್ಕಿಗಾಗಿ ಭಿಕ್ಷೆ ಬೇಡುವಂತೆ ಮಾಡಬೇಡಿ: ನಟ ಪ್ರಕಾಶ್ ರಾಜ್ Janashakthi Media

Donate Janashakthi Media

Leave a Reply

Your email address will not be published. Required fields are marked *