ನವದೆಹಲಿ: ಗಂಗಾ ನದಿ ಹಾಗೂ ಅದರ ಉಪನದಿಗಳ ಪ್ರವಾಹ ಪ್ರದೇಶಗಳ ರಕ್ಷಣೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಸಕ್ರಿಯ ಪ್ರವಾಹ ಪ್ರದೇಶ’ದ ವ್ಯಾಖ್ಯೆಯನ್ನು ಅಧಿಕೃತವಾಗಿ ವಿಸ್ತರಿಸಿದೆ.
ಜಲಶಕ್ತಿ ಸಚಿವಾಲಯವು ಆಗಸ್ಟ್ 7ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಐದು ವರ್ಷಕ್ಕೊಮ್ಮೆ ಪ್ರವಾಹಕ್ಕೆ ಒಳಗಾಗುವ ಗಂಗಾ ಮತ್ತು ಅದರ ಉಪನದಿಗಳ ಪ್ರದೇಶಗಳನ್ನು ‘ಸಕ್ರಿಯ ಪ್ರವಾಹ ಪ್ರದೇಶ’ ಎಂದು ಪರಿಗಣಿಸಲಾಗುತ್ತದೆ. ಈ ಸಂಬಂಧ ರಿವರ್ ಗಂಗಾ (ಪುನರುಜ್ಜೀವನ, ಸಂರಕ್ಷಣೆ ಮತ್ತು ನಿರ್ವಹಣೆ) ಪ್ರಾಧಿಕಾರಗಳ (ಎರಡನೇ ತಿದ್ದುಪಡಿ) ಆದೇಶ–2026 ಹೊರಡಿಸಲಾಗಿದೆ.
‘ಸಕ್ರಿಯ ಪ್ರವಾಹ ಪ್ರದೇಶ’ ಎಂಬ ಪದವನ್ನು ಸರ್ಕಾರಿ ದಾಖಲೆಗಳಲ್ಲಿ 2016ರಿಂದ ಬಳಸಲಾಗುತ್ತಿದ್ದರೂ, ಅದರ ಸ್ಪಷ್ಟ ವ್ಯಾಖ್ಯೆ ಇದುವರೆಗೆ ಇರಲಿಲ್ಲ. ಇದೀಗ ಐದು ವರ್ಷಗಳಿಗೊಮ್ಮೆ ಸಂಭವಿಸುವ ಪ್ರವಾಹದ ವ್ಯಾಪ್ತಿಯನ್ನು ಆಧಾರವಾಗಿಟ್ಟುಕೊಂಡು ಈ ಪ್ರದೇಶಗಳನ್ನು ಗುರುತಿಸಲು ನಿರ್ಧರಿಸಲಾಗಿದೆ.
ಈ ಹಿಂದೆ ಪ್ರವಾಹದ ಆವರ್ತನೆಯ ಆಧಾರದ ಮೇಲೆ 25 ವರ್ಷಕ್ಕೊಮ್ಮೆ ಪ್ರವಾಹ ಬರುವ ಪ್ರದೇಶಗಳನ್ನು ನಿಯಂತ್ರಿತ ವಲಯ ಹಾಗೂ 100 ವರ್ಷಕ್ಕೊಮ್ಮೆ ಪ್ರವಾಹ ಬರುವ ಪ್ರದೇಶಗಳನ್ನು ತೀವ್ರ ಪ್ರವಾಹ ವಲಯ ಎಂದು ಪರಿಗಣಿಸಲಾಗುತ್ತಿತ್ತು. ಹೊಸ ವ್ಯಾಖ್ಯೆಯ ನಂತರ ಸಕ್ರಿಯ ಪ್ರವಾಹ ಪ್ರದೇಶಗಳಲ್ಲಿ ನಿರ್ಮಾಣ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಹೊಸ ನಿಯಮಗಳು ಜಾರಿಗೆ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ : “ಸ್ವಾತಂತ್ರ್ಯ ಚಳವಳಿಯಲ್ಲಿ ಕಮ್ಯುನಿಸ್ಟರ ಪಾತ್ರ” | ಎಚ್ ಆರ್ ನವೀನ್‌ಕುಮಾರ್
ಕೇಂದ್ರ ಜಲ ಆಯೋಗವು 2025ರ ಆಗಸ್ಟ್‌ನಲ್ಲಿ ಹೊರಡಿಸಿದ್ದ ಪ್ರವಾಹ ಪ್ರದೇಶ ವಲಯೀಕರಣದ ತಾಂತ್ರಿಕ ಮಾರ್ಗಸೂಚಿಗಳಲ್ಲಿಯೂ ಸಕ್ರಿಯ ಪ್ರವಾಹ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸುವ ಹಾಗೂ ಇತರ ನಿಯಂತ್ರಿತ ವಲಯಗಳಲ್ಲಿ ಭೂಬಳಕೆಯನ್ನು ನಿಯಂತ್ರಿಸುವ ಮಾನದಂಡಗಳನ್ನು ಸೂಚಿಸಿತ್ತು. ರಾಜ್ಯಗಳು ಪ್ರವಾಹ ಪ್ರದೇಶಗಳ ಸಂರಕ್ಷಣೆಗೆ ನೀತಿಗಳನ್ನು ರೂಪಿಸಲು ಈ ಮಾರ್ಗಸೂಚಿಗಳು ಕನಿಷ್ಠ ಮಾನದಂಡಗಳನ್ನು ಒದಗಿಸುತ್ತವೆ.
ಅಲ್ಲದೆ, ಗಂಗಾ ಮತ್ತು ಅದರ ಉಪನದಿಗಳ ದಡಗಳು ಹಾಗೂ ಪ್ರವಾಹ ಪ್ರದೇಶಗಳನ್ನು ಮಾಲಿನ್ಯದ ಮೂಲಗಳು ಮತ್ತು ಒತ್ತಡಗಳನ್ನು ಕಡಿಮೆ ಮಾಡುವ ರೀತಿಯಲ್ಲಿ ನಿರ್ವಹಿಸುವುದು, ಜೊತೆಗೆ ನೈಸರ್ಗಿಕ ಅಂತರ್ಜಲ ಮರುಪೂರಣ ವ್ಯವಸ್ಥೆಯನ್ನು ಸಂರಕ್ಷಿಸುವುದು ಅಗತ್ಯ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಹೊಸ ವ್ಯಾಖ್ಯೆಯಿಂದ ಗಂಗಾ ನದಿಯ ಪ್ರವಾಹ ಪ್ರದೇಶಗಳಲ್ಲಿ ಅನಿಯಂತ್ರಿತ ನಿರ್ಮಾಣ ಮತ್ತು ಭೂಬಳಕೆಯ ಮೇಲೆ ಹೆಚ್ಚಿನ ನಿಯಂತ್ರಣ ಬರಲಿದ್ದು, ನದಿ ಪರಿಸರ ವ್ಯವಸ್ಥೆ ಹಾಗೂ ಅಂತರ್ಜಲ ಮರುಪೂರಣಕ್ಕೆ ರಕ್ಷಣೆ ದೊರೆಯುವ ನಿರೀಕ್ಷೆಯಿದೆ.
ಇದನ್ನೂ ನೋಡಿ : ರೈತ–ಕಾರ್ಮಿಕರ ಜೈಲ್ ಭರೋ: ಕೇಂದ್ರದ ನೀತಿಗಳ ವಿರುದ್ಧ ದೇಶಾದ್ಯಂತ ಆಕ್ರೋಶ Janashakthi Media
