ಹಾಸನ: ಖ್ಯಾತ ಪರಮಾಣು ವಿಜ್ಞಾನಿ, ಶಿಕ್ಷಣತಜ್ಞ ಹಾಗೂ ಜನವಿಜ್ಞಾನ ಚಳವಳಿಯ ಮುಂಚೂಣಿ ನಾಯಕ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದ ಡಾ. ಎಂ.ಪಿ. ಪರಮೇಶ್ವರನ್ ಅವರ ನಿಧನಕ್ಕೆ ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್) ಹಾಸನ ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಹಾಸನದ ಬಿಜಿವಿಎಸ್ ಕಚೇರಿಯಲ್ಲಿ ಮಂಗಳವಾರ ಡಾ. ಎಂ.ಪಿ. ಪರಮೇಶ್ವರನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ, ರಾಜ್ಯ ಸಮಿತಿ ಸಹಕಾರ್ಯದರ್ಶಿ ಅಹಮದ್ ಹಗರೆ, ರಾಜ್ಯ ಸಮಿತಿ ಸದಸ್ಯ ಎಚ್.ಟಿ. ಗುರುರಾಜು, ಜಿಲ್ಲಾ ಉಪಾಧ್ಯಕ್ಷ ಧರ್ಮರಾಜ್, ಶಿಕ್ಷಣ ಚಿಂತಕಿ ಲಾವಣ್ಯ, ಸಿಐಟಿಯು ಅಧ್ಯಕ್ಷ ಧರ್ಮೇಶ್, ಸಾಮಾಜಿಕ ಕಾರ್ಯಕರ್ತ ಪ್ರಕಾಶ್, ಕಾರ್ಮಿಕ ಮುಖಂಡ ಅರವಿಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜ್ಞಾನವನ್ನು ಪ್ರಯೋಗಾಲಯಗಳಿಗೆ ಸೀಮಿತಗೊಳಿಸದೆ ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯಬೇಕು ಎಂಬ ಆಶಯದೊಂದಿಗೆ ತಮ್ಮ ಬದುಕನ್ನು ಜನವಿಜ್ಞಾನ ಚಳವಳಿಗೆ ಸಮರ್ಪಿಸಿಕೊಂಡಿದ್ದ ಡಾ. ಪರಮೇಶ್ವರನ್, ದೇಶದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಬಿಜಿವಿಎಸ್ ಜಿಲ್ಲಾ ಸಮಿತಿ ಸ್ಮರಿಸಿದೆ.
ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದ ಅವರು, ಬಳಿಕ ಜನಸಾಮಾನ್ಯರಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಚಿಂತನೆ ಬೆಳೆಸುವ ಉದ್ದೇಶದಿಂದ ತಮ್ಮ ವೃತ್ತಿಜೀವನವನ್ನು ತೊರೆದು ಜನಪರ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತನ್ನು ಜನಪ್ರಿಯ ವಿಜ್ಞಾನ ಚಳವಳಿಯಾಗಿ ಬೆಳೆಸುವಲ್ಲಿಯೂ ಅವರ ಪಾತ್ರ ಮಹತ್ವದ್ದಾಗಿತ್ತು.
1987ರ ಭಾರತ ಜನ ಜ್ಞಾನ ವಿಜ್ಞಾನ ಜಾಥಾದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ದೇಶಾದ್ಯಂತ ವಿಜ್ಞಾನ ಜಾಗೃತಿ ಮತ್ತು ಸಾಕ್ಷರತಾ ಚಳವಳಿಗೆ ಹೊಸ ಆಯಾಮ ನೀಡಿದ್ದರು. ಇದರ ಮುಂದುವರಿದ ಭಾಗವಾಗಿ ರೂಪುಗೊಂಡ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಅಖಿಲ ಭಾರತ ಜನವಿಜ್ಞಾನ ಜಾಲದ ಬೆಳವಣಿಗೆಯಲ್ಲಿಯೂ ಅವರ ಕೊಡುಗೆ ಸ್ಮರಣೀಯವಾಗಿದೆ ಎಂದು ಸಮಿತಿ ತಿಳಿಸಿದೆ.
ವಿಜ್ಞಾನ, ಪರಿಸರ, ಖಗೋಳಶಾಸ್ತ್ರ ಹಾಗೂ ಸಾಮಾಜಿಕ ವಿಚಾರಗಳನ್ನು ಸರಳ ಭಾಷೆಯಲ್ಲಿ ಜನರಿಗೆ ತಲುಪಿಸುವ ಮೂಲಕ ಪ್ರಶ್ನಿಸುವ ಮನೋಭಾವ, ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಟಿಕೋನ ಬೆಳೆಸಲು ಅವರು ನಿರಂತರವಾಗಿ ಶ್ರಮಿಸಿದ್ದರು. ಅವರಂತಹ ವಿಜ್ಞಾನಿ ಹಾಗೂ ಜನವಿಜ್ಞಾನ ಚಳವಳಿಯ ಮಾರ್ಗದರ್ಶಕರ ಅಗಲಿಕೆ ದೇಶದ ಜನವಿಜ್ಞಾನ ಚಳವಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಬಿಜಿವಿಎಸ್ ಹಾಸನ ಜಿಲ್ಲಾ ಸಮಿತಿ ಹೇಳಿದೆ.
ಡಾ. ಪರಮೇಶ್ವರನ್ ಅವರ ವಿಚಾರಗಳು ಹಾಗೂ ಜನಪರ ವಿಜ್ಞಾನದ ಆಶಯಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಲಿವೆ ಎಂದು ಸಮಿತಿ ತಿಳಿಸಿದ್ದು, ಅವರ ಕುಟುಂಬ, ಸಹೋದ್ಯೋಗಿಗಳು, ಹಿತೈಷಿಗಳು ಹಾಗೂ ದೇಶದಾದ್ಯಂತದ ಜನವಿಜ್ಞಾನ ಕಾರ್ಯಕರ್ತರಿಗೆ ಆಳವಾದ ಸಂತಾಪ ವ್ಯಕ್ತಪಡಿಸಿದೆ.
