ಬಾಗಲಕೋಟೆ: ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳ ವಸತಿಗೃಹದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿರುವುದು ಹಾಗೂ ಅದಕ್ಕೆ ವಿಶ್ವವಿದ್ಯಾಲಯದ ಅಧಿಕೃತ ಲೆಟರ್‌ಹೆಡ್‌ನಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಆಹ್ವಾನ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಕಾರ್ಯಕ್ರಮದ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಶ್ವವಿದ್ಯಾಲಯದ ಕಾರ್ಯವೈಖರಿ ಕುರಿತು ಆಕ್ಷೇಪಗಳು ವ್ಯಕ್ತವಾಗಿವೆ. ಬಾಗಲಕೋಟೆ
ಕುಲಪತಿ ಡಾ. ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಹೊರಡಿಸಲಾಗಿದೆ ಎನ್ನಲಾದ ಆಹ್ವಾನದಲ್ಲಿ ಆಗಸ್ಟ್ 11ರಂದು ಬೆಳಿಗ್ಗೆ 10.30ಕ್ಕೆ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ಕುಲಪತಿಗಳ ವಸತಿಗೃಹದಲ್ಲಿ ಸತ್ಯನಾರಾಯಣ ಪೂಜೆ, ನವಗ್ರಹ ಶಾಂತಿ ಹೋಮ ಹಾಗೂ ಮಹಾಗಣಪತಿ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಲಾಗಿದೆ. ವಿಶ್ವವಿದ್ಯಾಲಯದ ಅಧಿಕಾರಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ.
ಸರ್ಕಾರಿ ಅನುದಾನದಲ್ಲಿ ಕಾರ್ಯನಿರ್ವಹಿಸುವ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಅಧಿಕೃತ ಲೆಟರ್‌ಹೆಡ್ ಬಳಸಿ ಆಯೋಜಿಸಿರುವುದು ಸರಿಯೇ ಎಂಬ ಪ್ರಶ್ನೆಯನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಎತ್ತಿದ್ದಾರೆ. ವಿಶ್ವವಿದ್ಯಾಲಯಗಳು ವೈಜ್ಞಾನಿಕ ಮನೋಭಾವ, ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕಾದ ಸಂಸ್ಥೆಗಳಾಗಿರುವುದರಿಂದ ಅಧಿಕೃತವಾಗಿ ಧಾರ್ಮಿಕ ಆಚರಣೆಗಳಿಗೆ ಆಹ್ವಾನ ನೀಡಿರುವ ಕ್ರಮದ ಕುರಿತು ಆಕ್ಷೇಪ ವ್ಯಕ್ತವಾಗಿದೆ. ಬಾಗಲಕೋಟೆ
ಇದನ್ನೂ ಓದಿ : ಯುಪಿಐ ವಿಚಾರದಲ್ಲಿ ಅಮೆರಿಕದ ಒತ್ತಡ: ನಿರ್ಮಲಾ ವಿರುದ್ಧ ಬ್ರಿಟ್ಟಾಸ್ ಆರೋಪ
ವಿಶ್ವವಿದ್ಯಾಲಯದ ಅಧಿಕೃತ ಗುರುತು ಮತ್ತು ಪತ್ರವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಧಾರ್ಮಿಕ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಸಂಸ್ಥೆಯ ಜಾತ್ಯತೀತ ಸ್ವರೂಪದ ಕುರಿತು ಚರ್ಚೆಗೆ ಕಾರಣವಾಗಿದೆ. ಮತ್ತೊಂದೆಡೆ, ಕುಲಪತಿಗಳ ವೈಯಕ್ತಿಕ ಧಾರ್ಮಿಕ ಆಚರಣೆಗೆ ಆಕ್ಷೇಪವಿಲ್ಲ; ಆದರೆ ಅದನ್ನು ವಿಶ್ವವಿದ್ಯಾಲಯದ ಅಧಿಕೃತ ಕಾರ್ಯಕ್ರಮದ ರೂಪದಲ್ಲಿ ಬಿಂಬಿಸುವುದರ ಬಗ್ಗೆ ಪ್ರಶ್ನೆಗಳಿವೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.
ಈ ಕುರಿತು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಅಥವಾ ಕುಲಪತಿಗಳಿಂದ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ. ಕಾರ್ಯಕ್ರಮದ ಆಯೋಜನೆಗೆ ವಿಶ್ವವಿದ್ಯಾಲಯದ ಆಡಳಿತಾತ್ಮಕ ನಿರ್ಧಾರವೇನು, ಅಧಿಕೃತ ಲೆಟರ್‌ಹೆಡ್ ಬಳಕೆಗೆ ಅನುಮತಿ ನೀಡಲಾಗಿತ್ತೇ ಎಂಬ ಪ್ರಶ್ನೆಗಳಿಗೂ ಉತ್ತರ ಬೇಕಾಗಿದೆ.
ಇದನ್ನೂ ನೋಡಿ : ಪುರೋಹಿತಶಾಹಿ ಆರೆಸ್ಸೆಸ್ ನ ಖೆಡ್ಡಾ ಕುರಿತು ಮೈಯೆಲ್ಲಾ ಕಣ್ಣಾಗಿರಿ ಜೆನ್ ಜಿಗಳೇ… Janashakthi Media
