ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಗ್ರಾಮದ ಹಿತ್ತಿಲಪೇಲ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಅಪಾಯಕಾರಿ ನದಿಗೆ ಶಾಶ್ವತ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸೂಕ್ತ ವರದಿ ನೀಡುವಂತೆ ಬೆಳ್ತಂಗಡಿ ತಾಲೂಕು ಕಾನೂನು ಸೇವೆಗಳ ಸಮಿತಿಯ ನ್ಯಾಯಾಧೀಶರು ಮೇಲಂತಬೆಟ್ಟು ಗ್ರಾಮ ಪಂಚಾಯತ್ ಗೆ ಮೌಖಿಕ ಆದೇಶ ನೀಡಿದ್ದಾರೆ.
ಲಾಯಿಲ ಗ್ರಾಮದ ಬರಮೇಲು ನಡುಗುಡ್ಡೆ ಮರದ ಕಾಲುಸಂಕ ಪ್ರದೇಶಕ್ಕೆ ಭೇಟಿ ನೀಡಿದ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ , ಬೆಳ್ತಂಗಡಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮನು ಬಿ.ಕೆ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ , ಪ್ರಧಾನ ಸಿವಿಲ್ ನ್ಯಾಯಧೀಶ ರಾಮಲಿಂಗಪ್ಪರವರು ಬೆಳ್ತಂಗಡಿ ತಾಲೂಕಿನಲ್ಲಿ ಅಪಾಯಕಾರಿ ನದಿ , ತೊರೆ ದಾಟಲು ಸೇತುವೆ ಇಲ್ಲದಿರುವ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಲ್ಲಿ, ಅಧಿಕಾರಿಗಳಲ್ಲಿ ಕೇಳಿದರು.
ಇದನ್ನೂ ಓದಿ: ಭಯ ಕರಗುತ್ತಿದೆ – ಸಾಮೂಹಿಕ ಧೈರ್ಯ ಸ್ಫೋಟಗೊಂಡಿದೆ
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ ಮಾಹಿತಿ ನೀಡಿ ಸವಣಾಲು ಗ್ರಾಮದ ಹಿತ್ತಿಲಪೇಲ ಪ್ರದೇಶದಲ್ಲಿ ಅಪಾಯಕಾರಿ ನದಿಯನ್ನು ದಾಟಲು ಸೇತುವೆ ಇಲ್ಲದೆ ಕಳೆದ ವರ್ಷ ಯುವಕರಿಬ್ಬರು ದ್ವಿಚಕ್ರ ವಾಹನ ಸಮೇತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಪ್ರಾಣಾಪಾಯದಿಂದ ಪಾರಗಿರುವ ಬಗ್ಗೆ ಮತ್ತು ಇಂದಿಗೂ ಸೇತುವೆ ನಿರ್ಮಾಣ ಮಾಡದ ವ್ಯವಸ್ಥೆಯ ಬಗ್ಗೆ ಹಾಗೂ ರಸ್ತೆ , ವಿದ್ಯುತ್ ವಂಚಿತ ಅಲ್ಲಿನ ಮಲೆಕುಡಿಯ ಕುಟುಂಬಗಳ ಬಗ್ಗೆ ಮಾಹಿತಿ ನೀಡಿದರು.

ಇಲ್ಲಿ ಈ ವರ್ಷ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ನದಿ ಮಾಡುವುದನ್ನು ನಿರ್ಭಂಧಿಸಿ ಬ್ಯಾನರ್ ಅಳವಡಿಸಿ 9 ಆದಿವಾಸಿ ಮಲೆಕುಡಿಯ ಸಮುದಾಯದ ಕುಟುಂಬಗಳಿಗೆ ಸರ್ಕಾರಿ ದಿಗ್ಬಂಧನ ವಿಧಿಸಿರುವ ಬಗ್ಗೆ ನ್ಯಾಯಧೀಶರ ಗಮನ ಸೆಳೆದರು.
ಆಗ ಸ್ಥಳದಲ್ಲಿದ್ದ ಉಪ ತಹಶೀಲ್ದಾರ್ ಮಲ್ಲಪ್ಪ ನಡುಗಡ್ಡಿಯವರಿಗೆ ಈ ಬಗ್ಗೆ ವಿಸ್ತೃತ ವರದಿಯನ್ನು ಜುಲೈ 27ರ ಮಧ್ಯಾಹ್ನದೊಳಗೆ ನೀಡುವಂತೆ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಮತ್ತು ಗ್ರಾಮಾಡಳಿತಾಧಿಕಾರಿಗೆ ಸೂಚಿಸುವಂತೆ ತಿಳಿಸಿದರು.
ಇದನ್ನೂ ನೋಡಿ: ಧರ್ಮೇಂದ್ರ ಪ್ರಧಾನ ರಾಜೀನಾಮೆ: ವಿದ್ಯಾರ್ಥಿಗಳ ಐಕ್ಯ ಹೋರಾಟಕ್ಕೆ ಗೆಲುವು; ಸಂಘಟನೆಗಳಿಂದ ಸಂಭ್ರಮಾಚರಣೆ
