ಒಕ್ಕಲೆಬ್ಬಿಸದೆ ಆದಿವಾಸಿಗಳನ್ನು ಬದುಕಲು ಬಿಡಿ: ಆದಿವಾಸಿ ಸಂಘಟನೆ ಆಗ್ರಹ

ಬೆಳ್ತಂಗಡಿ: ಆದಿವಾಸಿ ಜನಾಂಗದವರಾದ ನಮಗೆ ಬದುಕಲೇ ಹಕ್ಕಿಲ್ಲ ಎನ್ನುವಂತೆ ವರ್ತಿಸುವ ಸರಕಾರದ ನಡೆಯನ್ನು ನಾವು ಖಂಡಸಲೇಬೇಕಾಗಿದೆ ಮತ್ತು ಆದಿವಾಸಿಗಳನ್ನು ಒಕ್ಕಲೆಬ್ಬಿಸದೆ ಬದುಕಲು ಬಿಡಿ ಎಂದು ಆಗ್ರಹಿಸಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ನಮ್ಮೆದುರಲ್ಲಿದೆ ಎಂದು ಸಿಪಿಐಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದರು. ಬದುಕಲು

ಅವರು ಇಂದು ಭೂ ಸಂತ್ರಸ್ಥರ ಹೋರಾಟ ಸಮಿತಿ ಮತ್ತು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ನಾರಾವಿ ಪಂಚಾಯತು ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತಾಡುತ್ತಿದ್ದರು.

ಮೂಲ ನಿವಾಸಿಗಳು, ಬಡವರು ಸರಕಾರಿ ಜಮೀನಲ್ಲಿ ಬದುಕಲು, ವಾಸಿಸಲು ಕುಳಿತರೆ ಅತಿಕ್ರಮಣ ಭೂ ಲೂಟಿ ಎನ್ನುತ್ತಾ ಪ್ರಕರಣ ದಾಖಲಿಸುವ ಸರಕಾರಿ ಅಧಿಕಾರಿಗಳು ಶ್ರೀಮಂತರು ಭೂಲೂಟಿ, ಭೂಮಿ ಅತಿಕ್ರಮಿಸಿದರೆ ಅವರಿಗೆ ಸೆಲ್ಯೂಟ್ ಹೊಡೆಯುತ್ತಾರೆ ಎಂಬುದು ಬಹಿರಂಗ ಸತ್ಯ ಎಂದಸು ಟೀಕಿಸಿದರು.

ಇದನ್ನೂ ಓದಿ: ನೀಟ್ ಹಗರಣ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸೋನಂ ವಾಂಗ್‌ಚುಕ್‌ಗೆ ಬೆಂಬಲ ಪ್ರತಿಭಟನೆ

ಆದಿವಾಸಿ ಬುಡಕಟ್ಟು ಸಮುದಾಯದವರಿಗೆ ನಮ್ಮ ಭೂಮಿಯಲ್ಲಿ ಬದುಕುವ ಹಕ್ಕಿಲ್ಲವೇ? ಎಂದು ಪ್ರಶ್ನಿಸಿದರು. ಒಂದೆಡೆ ಎನ್ ಕೌಂಟರ್ ಹೆಸರಲ್ಲಿ ಆದಿವಾಸಿಗಳ ನಾಶಮಾಡಿದ ಸರಕಾರ ಇನ್ನೊಂದೆಡೆ ಅವರನ್ನು ಒಕ್ಕಲೆಬ್ಬಿಸಿ ಬೀದಿಪಾಲು ಮಾಡುವುದರ ಮೂಲಕ ನಾಶ ಮಾಡುತ್ತಿರುವುದು ಕಾಣುತ್ತೇವೆ ಎಂದರು.

ಆದಿವಾಸಿ ಸಮುದಾಯ ವಾಸಿಸುವ ಪ್ರದೇಶಕ್ಕೆ ಒಂದು ಯೋಗ್ಯ ರಸ್ತೆ, ಮುರಿದ ಸೇತುವೆಯ ಮರು ನಿರ್ಮಾಣ ಇತ್ಯಾದಿಗಳನ್ನು ಮಾಡಲು ಪುರುಸೋತ್ತಿರದ ಸರಕಾರಕ್ಕೆ ಬಡವರನ್ನು ಒಕ್ಕಲೆಬ್ಬಿಸಲು ತಕ್ಷಣ ಪುರುಸೋತ್ತು ಸಿಗುತ್ತೆ ಎಂದರು.

ಬಿಸಿರೋಡಲ್ಲಿ ಯುವತಿಯ ಕೊಲೆ ಮಾಡಿದ ಆರೋಪಿಗೂ, ಇಲ್ಲಿ ಬಡ ಆದಿವಾಸಿಗಳ ಬದುಕಿನ ಕೊಲೆ ಮಾಡಿದ ಅಧಿಕಾರಿಗಳಿಗೂ ಏನು ವ್ಯತ್ಯಾಸ ಇದೆ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಪ್ರಶ್ನಿಸಿದರು. ಅದು ಜೀವದಕೊಲೆ ಇದು ಬದುಕಿನ ಕೊಲೆ ಅಲ್ಲವೇ ? ಎಂದರು.

ಅತಿ ಶ್ರೀಮಂತರು ಭೂ-ದರೋಡೆ ಮಾಡಿದರೆ ಅವರ ಪರ ಇರುವ ಸರಕಾರಗಳು, ಅಯೋದ್ಯೆಯ ರಾಮ ಮಂದಿರದಲ್ಲಿ ಕೋಟ್ಯಾಂತರ ಹಣ ಲೂಟಿ ಆದರೂ ಅವರ ರಕ್ಷಣೆಗೆ ಇರುವ ಸರಕಾರಗಳು ಬಡ ಆದಿವಾಸಿಗಳು ವಾಸಿಸಲು, ಬದುಕಲು ಭೂಮಿಯನ್ನು ಉಪಯೋಗಿಸಿದರೆ ಒಕ್ಕಲೆಬ್ಬಿಸಲು ದೊಡ್ಡ ಸೈನ್ಯªವನ್ನೇ ಕಳುಹಿಸುತ್ತದೆ ಎಂದರು.

ನಮ್ಮನ್ನು ಒಕ್ಕಲೆಬ್ಬಿಸಿದ ಭೂಮಿಯನ್ನು ನಮಗೆ 3 ವಾರದ ಒಳಗೆ ಬಿಟ್ಟುಕೊಡಿ ಇಲ್ಲವಾದರೆ ಆಗಸ್ಟ್‌ 12ರಿಂದ ಎಲ್ಲಿಂದ ನಮ್ಮನ್ನು ಒಕ್ಕಲೆಬ್ಬಿಸಿದ್ದಿರೋ ಅದೇ ಸ್ಥಳದಲ್ಲಿ ಅನಿರ್ಧಿಷ್ಟ ಕಾಲ ನ್ಯಾಯ ಸಿಗುವ ತನಕ ದರಣಿ ನಡೆಸುತ್ತೇವೆ ಎಂದರು.

ನಮ್ಮನ್ನು ಒಕ್ಕಲೆಬ್ಬಿಸಿದ ನೀವು ಅಂದರೆ ಸರಕಾರದವರು ಲೂಟಿಕೋರರ ಸಂತಾನದವರಾಗಿರಬಹುದು; ಆದರೆ ನಾವು ಭಗತ್ ಸಿಂಗ್, ಚೆಗುವೇರಾ, ಕೋಟಿಚೆನ್ನಯ ಮೊದಲಾದ ಸಮಾಜದ ಹಿತಕ್ಕಾಗಿ ಜನರ ನೆಮ್ಮದಿಯ ಬದುಕಿಗಾಗಿ, ಭೂಮಿಯ ಹಕ್ಕಿಗಾಗಿ ಜೀವ ಕೊಟ್ಟವರ ಸಂತಾನದವರು ತಿಳಿದಿರಲಿ ಎಂದರು.

ದಲಿತ ಹಕ್ಕುಗಳ ಸಮಿತಿ ರಾಜ್ಯ ಸಮಿತಿ ಸದಸ್ಯೆ ಈಶ್ವರಿ ಪದ್ಮುಂಜ ಅವರು ಮಾತಾಡುತ್ತಾ ಆದಿವಾಸಿಗಳ ಭವಣೆಯನ್ನು ಅರ್ಥ ಮಾಡಿಕೊಳ್ಳದೆ ಅಧಿಕಾರ ನಡೆಸುವವರಿಗೆ ಸರಕಾರವನ್ನು ಮುನ್ನಡೆಸಲು ಯೋಗ್ಯತೆ ಇಲ್ಲ ಎಂದರು.

ಆದಿವಾಸಿಗಳನ್ನು ನಕ್ಸಲ್ ಎಂದು ಕೊಂದು ಬಿಸಾಡೋ ಸರಕಾರಕ್ಕೆ ಆದಿವಾಸಿಗಳ ಬದುಕು ಬೇಕಿಲ್ಲ ಎಂಬುದು ಈ ಒಕ್ಕಲೆಬ್ಬಿಸುವ ಪ್ರಕ್ರಿಯೆ ಮತ್ತೆ ಸಾಬೀತು ಪಡಿಸಿದೆ ಎಂದರು.

ನಾವು ಇದೇ ಭೂಮಿಯಲ್ಲಿ ಹುಟ್ಟಿದವರು ಇದೇ ಭೂಮಿಯ ಹಕ್ಕುದಾರರು ತಿಳಿದಿರಲಿ ಎಂದರು. ನಾವು ಜೀವವನ್ನಾದರೂ ಬಿಟ್ಟೇವು ಈ ಭೂಮಿಯ ಹಕ್ಕಿನಿಂದ ವಂಚಿತರಾಗಲು ಸಿದ್ದರಿಲ್ಲ ಎಂದರು.

ಮೊದಲಿಗೆ ಭೂ ಸಂತ್ರಸ್ಥರ ಹೋರಾಟ ಸಮಿತಿ ಕಾರ್ಯದರ್ಶಿ ಸುಧಾಕರ ಎಂಕೆ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾಡಿದರು. ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ತಾಲೂಕು ಅಧ್ಯಕ್ಷರಾದ ಸುಕುಮಾರ್ ದಿಡುಪೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಕೊನೆಗೆ ಡಿ.ವೈ.ಎಫ್.ಐ. ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಅಭಿಷೇಕ್ ವಂದಿಸಿದರು. ಹೋರಾಟದ ನಾಯಕತ್ವದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷರಾದ ಗೀತಾ, ಮುಖಂಡರುಗಳಾದ ಚೀಂಕ್ರ ಮಲೆಕುಡಿಯ, ಸುಜಾತ, ರಾಮಚಂದ್ರ, ಅಶ್ವಿತ, ಪುಷ್ಪ, ದಿನೇಶ್ ನಾಯ್ಕ, ಅಪ್ಸರಾಲಿಯ ಮೊದಲಾದವರು ಇದ್ದರು.

ಇದನ್ನೂ ನೋಡಿ: ಮಫ್ತಿ ಪೊಲೀಸರ ಕಾರ್ಯಾಚರಣೆ! ಸೋನಂ ವಾಂಗ್‌ಚುಕ್‌ರನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ ಕೇಂದ್ರದ ವಿರುದ್ಧ ಆಕ್ರೋಶ

Donate Janashakthi Media

Leave a Reply

Your email address will not be published. Required fields are marked *