ಕೊಪ್ಪಳ: ಕಡು ಬಡತನ, ಕುಟುಂಬದ ಆರ್ಥಿಕ ಸಂಕಷ್ಟ ಮತ್ತು ಸೌಲಭ್ಯಗಳ ಕೊರತೆಯ ನಡುವೆಯೂ ಛಲ ಬಿಡದೆ ಓದಿದ ಕೊಪ್ಪಳ ಜಿಲ್ಲೆಯ ಯುವಕ ಪುಟ್ಟರಾಜ್ ಭೀಮನೂರ ಅವರು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG 2026)ಯಲ್ಲಿ ಎಸ್ಟಿ ವಿಭಾಗದಲ್ಲಿ ದೇಶಕ್ಕೆ 694ನೇ ರ್ಯಾಂಕ್ ಗಳಿಸಿ ರಾಜ್ಯದ ಗಮನ ಸೆಳೆದಿದ್ದಾರೆ. ಅವರ ಯಶೋಗಾಥೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ.
ಕೊಪ್ಪಳ ಜಿಲ್ಲೆಯ ಭೀಮನೂರ ಗ್ರಾಮದ ಬಡ ರೈತ ಕುಟುಂಬದ ಪುತ್ರನಾದ ಪುಟ್ಟರಾಜ್ ಅವರ ತಂದೆ-ತಾಯಿ ಕೃಷಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಓದಿನ ಜೊತೆಗೆ ಕುಟುಂಬದ ಜವಾಬ್ದಾರಿಯನ್ನೂ ಹೊತ್ತಿದ್ದ ಅವರು ರಜೆ ದಿನಗಳಲ್ಲಿ ಕುರಿ ಕಾಯುವುದು, ಹೊಲದ ಕೆಲಸ ಮಾಡುವುದು, ಸಗಣಿ ಬಳಿಯುವುದು ಸೇರಿದಂತೆ ಕೃಷಿ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಕೆಲಸದ ಮಧ್ಯೆಯೂ ಪುಸ್ತಕವನ್ನು ಕೈಬಿಡದೆ ಓದಿದ್ದೇ ಇಂದು ಅವರನ್ನು ದೇಶದ ಶ್ರೇಷ್ಠ ಸಾಧಕರ ಸಾಲಿಗೆ ತಂದು ನಿಲ್ಲಿಸಿದೆ.
ಗಂಗಾವತಿಯ ವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಪುಟ್ಟರಾಜ್, ವೈದ್ಯರಾಗುವ ಕನಸಿನೊಂದಿಗೆ ಒಂದು ವರ್ಷ ಸಂಪೂರ್ಣವಾಗಿ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸಿದರು. ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ದಿನಕ್ಕೆ ಹಲವು ಗಂಟೆಗಳ ಕಾಲ ನಿರಂತರ ಅಧ್ಯಯನ ಮಾಡಿದ ಅವರು, ಶಿಕ್ಷಕರ ಮಾರ್ಗದರ್ಶನ ಹಾಗೂ ಕುಟುಂಬದ ಪ್ರೋತ್ಸಾಹವನ್ನು ಯಶಸ್ಸಿನ ಮೂಲವೆಂದು ಹೇಳಿದ್ದಾರೆ.
ಇದನ್ನೂ ಓದಿ: ಅರ್ಜೆಂಟೀನಾವನ್ನು ಮಣಿಸಿ ವಿಶ್ವಕಪ್ ಗೆದ್ದ ಸ್ಪೇನ್
ತಮ್ಮ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಪುಟ್ಟರಾಜ್, “ನಮ್ಮಂತಹ ಬಡ ಕುಟುಂಬದ ಜನರಿಗೆ ಉತ್ತಮ ಚಿಕಿತ್ಸೆ ಸಿಗಬೇಕು. ಅದಕ್ಕಾಗಿ ವೈದ್ಯನಾಗಿ ಗ್ರಾಮೀಣ ಜನರಿಗೆ ಸೇವೆ ಸಲ್ಲಿಸುವುದು ನನ್ನ ಕನಸು” ಎಂದು ಹೇಳಿದ್ದಾರೆ. ಕುಟುಂಬದ ಕಷ್ಟಗಳನ್ನು ಹತ್ತಿರದಿಂದ ಕಂಡ ಅನುಭವವೇ ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಲು ಪ್ರೇರಣೆ ನೀಡಿದೆ ಎಂದೂ ಅವರು ತಿಳಿಸಿದ್ದಾರೆ.

ಪುಟ್ಟರಾಜ್ ಅವರ ತಂದೆ-ತಾಯಿ ಮಗನ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದು, ಆರ್ಥಿಕ ಸಂಕಷ್ಟಗಳ ನಡುವೆಯೂ ಓದಿಗೆ ಎಂದಿಗೂ ಅಡ್ಡಿಯಾಗದಂತೆ ನೋಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಶಿಕ್ಷಕರು ಮತ್ತು ಗ್ರಾಮಸ್ಥರು ಕೂಡ ಅವರ ಸಾಧನೆಯನ್ನು ಅಭಿನಂದಿಸಿದ್ದು, ಇದು ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ತುಂಬಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕುರಿ ಕಾಯುತ್ತಾ, ಹೊಲದಲ್ಲಿ ದುಡಿಯುತ್ತಾ ಓದಿದ ಯುವಕ ಇಂದು ದೇಶ ಮಟ್ಟದಲ್ಲಿ ಸಾಧನೆ ಮಾಡಿರುವುದು ಬಡತನ ಸಾಧನೆಗೆ ಅಡ್ಡಿಯಲ್ಲ; ಗುರಿ, ಪರಿಶ್ರಮ ಮತ್ತು ಛಲ ಇದ್ದರೆ ಯಾವುದೇ ಎತ್ತರ ತಲುಪಬಹುದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ.
ಇದನ್ನೂ ನೋಡಿ: ಫಿಫಾ ವಿಶ್ವಕಪ್ 2026 ಫೈನಲ್ | ಮೆಸ್ಸಿಯ ಕೊನೆಯ ಕನಸೋ? ಸ್ಪೇನ್ನ ಹೊಸ ಇತಿಹಾಸವೋ? Janashakthi Media
