17ನೇ ದಿನಕ್ಕೆ ಕಾಲಿಟ್ಟ ಸೋನಂ ವಾಂಗ್ಚುಕ್ ಉಪವಾಸ: ತೀವ್ರ ನೋವಿನ ನಡುವೆಯೂ ಮುಂದುವರಿಕೆ

ನವದೆಹಲಿ: ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರು ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದರೂ ಉಪವಾಸ ಅಂತ್ಯಗೊಳಿಸಲು ನಿರಾಕರಿಸಿದ್ದಾರೆ ಎಂದು ಕಾಕ್‌ರೋಚ್ ಜನತಾ ಪಾರ್ಟಿ (CJP) ಜುಲೈ 14ರಂದು ತಿಳಿಸಿದೆ. ಸೋನಂ

ಸರ್ಕಾರವು ಮಾತುಕತೆ ಆರಂಭಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿರುವ ವಾಂಗ್ಚುಕ್, ಸ್ನಾಯು ನಷ್ಟ ಮತ್ತು ತೀವ್ರ ನೋವಿನ ನಡುವೆಯೂ ತಮ್ಮ ಹೋರಾಟ ಮುಂದುವರಿಸಿದ್ದಾರೆ ಎಂದು ಸಂಘಟನೆ ಹೇಳಿದೆ. ಸೋನಂ

ವಾಂಗ್ಚುಕ್ ಅವರ ಉಪವಾಸ 17ನೇ ದಿನಕ್ಕೆ ಕಾಲಿಟ್ಟಿದ್ದು, CJP ಪ್ರತಿಭಟನೆ 25 ದಿನ ಪೂರೈಸಿದೆ. ಸಂಘಟನೆ ಬಿಡುಗಡೆ ಮಾಡಿರುವ ಆರೋಗ್ಯ ವರದಿ ಪ್ರಕಾರ, ಉಪವಾಸ ಆರಂಭಿಸಿದ ಬಳಿಕ ವಾಂಗ್ಚುಕ್ 8.5 ಕೆಜಿ ತೂಕ ಕಳೆದುಕೊಂಡಿದ್ದಾರೆ. ಅವರ ರಕ್ತದೊತ್ತಡ 109/70 ಎಂಎಂ ಎಚ್‌ಜಿ ದಾಖಲಾಗಿದೆ.

ಇದನ್ನೂ ಓದಿ: ಎಕ್ಕೂರು, ಪಡೀಲು ನಗರ ಆರೋಗ್ಯ ಕೇಂದ್ರಗಳಿಗೆ ಸಿಪಿಎಂ ಬಜಾಲ್ ವಿಭಾಗ ಸಮಿತಿ ನಿಯೋಗ ಭೇಟಿ

CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು, ವಾಂಗ್ಚುಕ್ ಅವರ ಸ್ನಾಯು ಪ್ರಮಾಣ ಕಡಿಮೆಯಾಗುತ್ತಿದ್ದು, ಅವರು ತೀವ್ರ ನೋವು ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

“ನಾನು ಕೂಡ ಅವರಲ್ಲಿ ಉಪವಾಸ ಅಂತ್ಯಗೊಳಿಸುವಂತೆ ಮನವಿ ಮಾಡಿದ್ದೇನೆ. ಆದರೆ ಅವರು ಶಾಂತವಾಗಿ, ‘ನನ್ನ ಉಪವಾಸ ನಿಲ್ಲಿಸುವಂತೆ ಕೇಳಬೇಡಿ. ಸರ್ಕಾರ ಏಕೆ ಮಾತುಕತೆಗೆ ಬರುತ್ತಿಲ್ಲ ಎಂದು ಕೇಳಿ’ ಎಂದು ಹೇಳಿದ್ದಾರೆ,” ಎಂದು ದೀಪ್ಕೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇದೇ ವೇಳೆ, ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ವಾಂಗ್ಚುಕ್ ಅವರ ಆರೋಗ್ಯ ವಿಚಾರಿಸಲು ದೂರವಾಣಿ ಮೂಲಕ ಸಂಪರ್ಕಿಸಿದ್ದು, ಅವರ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ದೀಪ್ಕೆ ತಿಳಿಸಿದ್ದಾರೆ.

“ಇಂತಹ ಸಮಯದಲ್ಲಿ ಸಂವಾದ ಮತ್ತು ಪ್ರಜಾಪ್ರಭುತ್ವದ ಪರ ನಿಲ್ಲುವ ಪ್ರತಿಯೊಂದು ಧ್ವನಿಗೂ ಮಹತ್ವವಿದೆ. CJP ಹೋರಾಟ ಮತ್ತು ಜುಲೈ 20ರ ಸಂಸತ್ ಮೆರವಣಿಗೆಗೆ ಬೆಂಬಲ ನೀಡಿದ್ದಕ್ಕಾಗಿ ಕೇಜ್ರಿವಾಲ್ ಅವರಿಗೆ ಧನ್ಯವಾದಗಳು,” ಎಂದು ಅವರು ಹೇಳಿದ್ದಾರೆ.

ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕೂಡ ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಉಪವಾಸ ಅಂತ್ಯಗೊಳಿಸುವಂತೆ ಮನವಿ ಮಾಡಿದ್ದಾರೆ ಎಂದು ದೀಪ್ಕೆ ತಿಳಿಸಿದ್ದಾರೆ. ಜತೆಗೆ ಜುಲೈ 20ರಂದು ನಡೆಯಲಿರುವ CJP ‘ಚಲೋ ಸಂಸತ್’ ಮೆರವಣಿಗೆಗೆ ಬೆಂಬಲ ಸೂಚಿಸಿದ್ದಾರೆ.

ಇದೇ ಪ್ರತಿಭಟನೆಯಲ್ಲಿ ಉಪವಾಸ ನಡೆಸುತ್ತಿದ್ದ AISA ಕಾರ್ಯಕರ್ತ ದೀಪಕ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಸೋಮವಾರ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

AISA ಮಾಹಿತಿ ಪ್ರಕಾರ, ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದ ವೇಳೆ ದೀಪಕ್ ಅವರ ಹೃದಯ ಬಡಿತದಲ್ಲಿ ಏರುಪೇರು ಕಂಡುಬಂದಿತ್ತು. ವೈದ್ಯರು ನಡೆಸಿದ ಪರೀಕ್ಷೆಯಲ್ಲಿ ಇಸಿಜಿ ಸಾಮಾನ್ಯವಾಗಿದ್ದು, ಬಳಿಕ ನಾಡಿ ಬಡಿತ ಸ್ಥಿರಗೊಂಡ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ.

ಪ್ರತಿಭಟನಾ ಸ್ಥಳದಲ್ಲಿ ಉಳಿದಿರುವ ಕಾರ್ಯಕರ್ತರಾದ ನೇಹಾ, ಮನೀಶ್ ಮತ್ತು ಅಮೀನ್ ತಮ್ಮ ಅನಿರ್ದಿಷ್ಟಾವಧಿ ಉಪವಾಸ ಮುಂದುವರಿಸಿದ್ದಾರೆ ಎಂದು ಸಂಘಟನೆ ತಿಳಿಸಿದೆ.

CJP, ಪರೀಕ್ಷಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಹಾಗೂ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ₹1 ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸುತ್ತಿದೆ.

ಜುಲೈ 20ರಂದು ಮುಂಗಾರು ಅಧಿವೇಶನ ಆರಂಭದ ದಿನ ನಡೆಯಲಿರುವ ‘ಚಲೋ ಸಂಸತ್’ ಮೆರವಣಿಗೆಗೆ ಸಂಘಟನೆ ಸಿದ್ಧತೆ ಹೆಚ್ಚಿಸಿದ್ದು, ಬೆಂಬಲಿಗರು ಮಿಸ್ಡ್ ಕಾಲ್ ಅಭಿಯಾನದ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಿದೆ.

CJP ಪ್ರತಿಭಟನೆ ಜೂನ್ 20ರಂದು ಆರಂಭವಾಗಿದ್ದು, ಸೋನಂ ವಾಂಗ್ಚುಕ್ ಜೂನ್ 28ರಂದು ಹೋರಾಟಕ್ಕೆ ಸೇರಿ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದರು.

ಇದನ್ನೂ ನೋಡಿ: ಬಿಎಲ್‌ಒ ಕಾರ್ಯದಿಂದ ಮುಕ್ತಗೊಳಿಸಿ: ಜಿಲ್ಲಾಧಿಕಾರಿ ಕಚೇರಿಗೆ ಅಂಗನವಾಡಿ ನೌಕರರ ಮುತ್ತಿಗೆ Janashakthi Media

Donate Janashakthi Media

Leave a Reply

Your email address will not be published. Required fields are marked *