ಬೆಂಗಳೂರು: ರಾಜ್ಯದಲ್ಲಿ ಯುವಕರಲ್ಲಿ ನಾಯಕತ್ವ ಗುಣ, ಸಾಮಾಜಿಕ ಸಾಮರಸ್ಯ ಮತ್ತು ಸೃಜನಶೀಲತೆ ಬೆಳೆಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ 10 ಸಾವಿರ ‘ಭಾರತ್ ಜೋಡೋ ಯುವ ಸಂಘ’ (BJYS) ಸ್ಥಾಪಿಸಲು ಅಧಿಕೃತ ಆದೇಶ ಹೊರಡಿಸಿದೆ. ಕರ್ನಾಟಕ
ಈ ಯೋಜನೆಯಡಿ 6 ಸಾವಿರ ಗ್ರಾಮ ಪಂಚಾಯತ್ಗಳು ಮತ್ತು 4 ಸಾವಿರ ನಗರ ವಾರ್ಡ್ಗಳಲ್ಲಿ ಯುವ ಸಂಘಗಳನ್ನು ರಚಿಸಲಾಗುತ್ತಿದ್ದು, ಪ್ರತಿಯೊಂದು ಸಂಘಕ್ಕೂ ವಾರ್ಷಿಕ ₹10 ಲಕ್ಷ ಅನುದಾನ ನೀಡಲಾಗುತ್ತದೆ. ಯೋಜನೆಗಾಗಿ ಸರ್ಕಾರ ಒಟ್ಟು ₹1,010 ಕೋಟಿ ಮೀಸಲಿಟ್ಟಿದ್ದು, ಇದರಲ್ಲಿ ₹10 ಕೋಟಿ ಆಡಳಿತ ವೆಚ್ಚಕ್ಕೆ ಬಳಸಲಾಗುತ್ತದೆ. ಕರ್ನಾಟಕ
ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾತನಾಡಿ, ‘ಭಾರತ್ ಜೋಡೋ ಯುವ ಸಂಘ’ಗಳ ಮೂಲಕ ಯುವಕರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 113 ರನ್ಗಳ ಮ್ಯಾಜಿಕ್: ಇಂಗ್ಲೆಂಡ್ ವಿರುದ್ಧ ಯಾಸ್ತಿಕಾ ಅದ್ಭುತ ಇನ್ನಿಂಗ್ಸ್
ಒಂದು ಗ್ರಾಮ ಪಂಚಾಯತ್ಗೆ ಒಂದು ಭಾರತ್ ಜೋಡೋ ಯುವ ಸಂಘ ಸ್ಥಾಪಿಸಲಾಗುತ್ತದೆ. ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿ 4 ಸಾವಿರ ಜನರಿಗೆ, ಪುರಸಭೆ ವ್ಯಾಪ್ತಿಯಲ್ಲಿ ಪ್ರತಿ 6 ಸಾವಿರ ಜನರಿಗೆ, ನಗರಸಭೆ ವ್ಯಾಪ್ತಿಯಲ್ಲಿ ಪ್ರತಿ 8 ಸಾವಿರ ಜನರಿಗೆ ಹಾಗೂ ಮಹಾನಗರ ಪಾಲಿಕೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಪ್ರತಿ 10 ಸಾವಿರ ಜನರಿಗೆ ಒಂದರಂತೆ ಸಂಘ ರಚಿಸಲಾಗುತ್ತದೆ.
ಈ ಯೋಜನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಾರಿಗೆ ತರಲಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಕಂದಾಯ ಹಾಗೂ ಶಿಕ್ಷಣ ಇಲಾಖೆಗಳು ಸಹಕಾರ ನೀಡಲಿವೆ.
ಪ್ರತಿ ಸಂಘಕ್ಕೆ ವರ್ಷಕ್ಕೆ ₹10 ಲಕ್ಷ ಅನುದಾನ ನೀಡಲಾಗುತ್ತದೆ. ಜೊತೆಗೆ ಪ್ರತಿ ಸಂಘದ ಒಬ್ಬ ತರಬೇತುದಾರರಿಗೆ ವಾರ್ಷಿಕ ₹24 ಸಾವಿರ ಗೌರವಧನ ನೀಡಲಾಗುವುದು ಎಂದು ಡಿಸಿಎಂ ತಿಳಿಸಿದ್ದಾರೆ.
ಯುವ ಸಂಘಗಳ ಮೂಲಕ ಗ್ರಾಮೀಣ ಕ್ರೀಡಾಕೂಟಗಳು, ಯೋಗ ಶಿಬಿರಗಳು, ಆರೋಗ್ಯ ಮತ್ತು ಸ್ವಚ್ಛತಾ ಕಾರ್ಯಕ್ರಮಗಳು, ಸಮುದಾಯ ಅಭಿವೃದ್ಧಿ ಚಟುವಟಿಕೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಭಾರತ್ ಜೋಡೋ ಯುವ ಸಂಘ ಆರಂಭಿಸಲು BJYS ಪೋರ್ಟಲ್ ಅಥವಾ ನಾಗರಿಕ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬೇಕು. ಪ್ರತಿ ಸಂಘದಲ್ಲಿ 16ರಿಂದ 35 ವರ್ಷದೊಳಗಿನ ಕನಿಷ್ಠ 100 ಸದಸ್ಯರು ಇರಬೇಕು. ಈ ಸಂಘಗಳನ್ನು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಅಡಿ ನೋಂದಣಿ ಮಾಡಲಾಗುತ್ತದೆ.
ಸಂಘಗಳ ಚಟುವಟಿಕೆಗಳಿಗೆ ಸ್ಥಳೀಯ ಶಾಲೆಗಳು, ಕಾಲೇಜುಗಳು, ಸಮುದಾಯ ಭವನಗಳು ಅಥವಾ ಇತರ ಸರ್ಕಾರಿ ಕಟ್ಟಡಗಳಲ್ಲಿ ಕೊಠಡಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಪ್ರತಿ ಯುವ ಸಂಘದಲ್ಲಿ ಸದಸ್ಯರಿಂದ ಆಯ್ಕೆಯಾದ 15 ಸದಸ್ಯರ ಕಾರ್ಯಕಾರಿ ಸಮಿತಿ ಇರಲಿದ್ದು, ಜಿಲ್ಲಾ ಮಟ್ಟದಲ್ಲಿಯೂ ಸಮಿತಿ ರಚಿಸಲಾಗುತ್ತದೆ. ಸಮಿತಿಗಳ ಅವಧಿ ಎರಡು ವರ್ಷ ಇರಲಿದೆ. ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿರುತ್ತಾರೆ.
ಯುವ ಸಂಘಗಳ ನೋಂದಣಿ, ಸಾಫ್ಟ್ವೇರ್ ಅಳವಡಿಕೆ ಮತ್ತು ಯೋಜನೆ ಮಾರ್ಗಸೂಚಿ ಅಂತಿಮಗೊಳಿಸುವ ಕಾರ್ಯವನ್ನು ಜುಲೈ 31ರೊಳಗೆ ಪೂರ್ಣಗೊಳಿಸಬೇಕು. ರಾಜ್ಯಾದ್ಯಂತ ಚಟುವಟಿಕೆಗಳ ಆರಂಭ, ತರಬೇತಿ ಮತ್ತು ಮೊದಲ ಎರಡು ಹಂತದ ಅನುದಾನ ಬಿಡುಗಡೆ ಪ್ರಕ್ರಿಯೆಯನ್ನು ಅಕ್ಟೋಬರ್ 31ರೊಳಗೆ ಪೂರ್ಣಗೊಳಿಸಲು ಸರ್ಕಾರ ಗುರಿ ನಿಗದಿಪಡಿಸಿದೆ.
ಇದನ್ನೂ ನೋಡಿ: ಉಸಿರಾಡುವ ಗಾಳಿಯೇ ವಿಷ! ಆಯುಷ್ಯ ಕಸಿಯುತ್ತಿರುವ ‘ಸೈಲೆಂಟ್ ಕಿಲ್ಲರ್’ | ಗುರುರಾಜ ದೇಸಾಯಿ Janashakthi Media
