ಉಡುಪಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಗೈರುಹಾಜರಾತಿಯನ್ನು ತಡೆಗಟ್ಟಲು ಹಾಗೂ ಅವರ ಪೌಷ್ಟಿಕಾಂಶ ಮತ್ತು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಆರಂಭಿಸಲಾದ ಅಕ್ಷರ ದಾಸೋಹ ಯೋಜನೆಗೆ 25 ವರ್ಷಗಳು ಪೂರ್ಣಗೊಂಡಿದ್ದರೂ, ಬೆಲೆ ಏರಿಕೆಗೆ ಅನುಗುಣವಾಗಿ ಅನುದಾನ ಹೆಚ್ಚಿಸದೇ, ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ಸರ್ಕಾರದ ನೀತಿಯನ್ನು ವಿರೋಧಿಸಿ ಸ್ಕೀಂ ನೌಕರರು ಜುಲೈ 10 ರಂದು ದೇಶದಾದ್ಯಂತ ಕರಾಳ ದಿನ ಆಚರಿಸುತ್ತಿದ್ದಾರೆ. ಬಿಸಿಯೂಟ
ಉಡುಪಿ ಜಿಲ್ಲಾ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ರಾಜ್ಯವ್ಯಾಪಿ ಹೋರಾಟದ ಭಾಗವಾಗಿ ಜುಲೈ 13 ರಂದು ಬಿಸಿಯೂಟ ಬಂದ್ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಿದೆ. ಬಿಸಿಯೂಟ
ಹೋರಾಟದಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಅಕ್ಷರ ದಾಸೋಹ ನೌಕರರ ಸಂಘದ ಗೌರವಾಧ್ಯಕ್ಷೆ ಎಸ್. ವರಲಕ್ಷ್ಮಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಜ್ವಲಂತ ಸಮಸ್ಯೆಗಳ ವಿರುದ್ಧ ಜುಲೈ 12ಕ್ಕೆ ಬೃಹತ್ ‘ಜನಾಕ್ರೋಶ ಸಮಾವೇಶ’
2008ರಿಂದ ಕೇಂದ್ರ ಸರ್ಕಾರ ಅಡುಗೆ ಸಿಬ್ಬಂದಿಗಳ ಗೌರವಧನವನ್ನು ಹೆಚ್ಚಿಸದೇ ನಿರ್ಲಕ್ಷ್ಯ ವಹಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಅಡುಗೆ ಸಿಬ್ಬಂದಿಗಳ ವೇತನವನ್ನು ರೂ,7,000 ಹೆಚ್ಚಳ ಮಾಡಬೇಕು ಎಂದು ಸಂಘ ಒತ್ತಾಯಿಸಿದೆ. ಕಾಂಗ್ರೆಸ್
ಪ್ರಮುಖ ಬೇಡಿಕೆಗಳು
1. ಚುನಾವಣಾ ಭರವಸೆಯಂತೆ ವೇತನವನ್ನು ರೂ 7,000 ಹೆಚ್ಚಳ ಮಾಡಬೇಕು.
2. ಆರು ಗಂಟೆಗಳ ಕೆಲಸಕ್ಕೆ ಸಂಬಂಧಿಸಿದ ಸುತ್ತೋಲೆ ತಕ್ಷಣ ಹೊರಡಿಸಬೇಕು.
3. ಆರೋಗ್ಯ ವಿಮೆ ಜಾರಿಗೊಳಿಸಬೇಕು.
4. ಸಾಧಿಲ್ವಾರು ಜಂಟಿ ಖಾತೆಯನ್ನು ಮುಖ್ಯ ಅಡುಗೆಯವರಿಗೆ ನೀಡಬೇಕು.
5. ಕೆಪಿಎಸ್ ಶಾಲೆಗಳು, ಇಸ್ಕಾನ್, ಮಠ ಹಾಗೂ ಇತರ ಖಾಸಗಿ ಸಂಸ್ಥೆಗಳಿಗೆ ಯೋಜನೆ ವಹಿಸಿ ನೌಕರರನ್ನು ಕೆಲಸದಿಂದ ತೆಗೆಯುವ ನೀತಿಯನ್ನು ಕೈಬಿಡಬೇಕು ಹಾಗೂ ಎಂಡಿಎಂ ಯೋಜನೆಗೆ ಸಮರ್ಪಕ ಅನುದಾನ ನೀಡಬೇಕು.
6. ನಿವೃತ್ತ ನೌಕರರಿಗೆ ಮಾಸಿಕ ರೂ 10,000 ಪಿಂಚಣಿ ನೀಡಬೇಕು.
7. ನಿವೃತ್ತರಾದ ಎಲ್ಲ ನೌಕರರಿಗೆ ಬಾಕಿ ಇರುವ ಇಡುಗಂಟು ಸೌಲಭ್ಯವನ್ನು ತಕ್ಷಣ ಜಾರಿಗೊಳಿಸಬೇಕು.
8. ಸಮರ್ಪಕ ಅಡುಗೆ ಕೇಂದ್ರಗಳಿಲ್ಲದ ಶಾಲೆಗಳಲ್ಲಿ ಸುಸಜ್ಜಿತ ಅಡುಗೆ ಕೇಂದ್ರಗಳನ್ನು ನಿರ್ಮಿಸಿ, ಸ್ವಚ್ಛ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸಬೇಕು.
9. ಉತ್ತರ ಪ್ರದೇಶ ಮತ್ತು ಪಂಜಾಬ್ ಹೈಕೋರ್ಟ್ ತೀರ್ಪಿನಂತೆ ವರ್ಷಪೂರ್ತಿ 12 ತಿಂಗಳ ಕೆಲಸ ಹಾಗೂ ಕನಿಷ್ಠ ಕೂಲಿ ಜಾರಿಗೊಳಿಸಬೇಕು.
10. ಅಕ್ಷರ ದಾಸೋಹ ಯೋಜನೆಯನ್ನು ಶಿಕ್ಷಣ ಇಲಾಖೆಯ ಅಧೀನದಲ್ಲಿಯೇ ಮುಂದುವರಿಸಬೇಕು; ಖಾಸಗೀಕರಣ ಮಾಡಬಾರದು.
11. ಬೇಸಿಗೆ, ದಸರಾ ರಜೆ ಹಾಗೂ ಚುನಾವಣಾ ಅವಧಿಯಲ್ಲಿಯೂ ಕಡ್ಡಾಯವಾಗಿ ವೇತನ ನೀಡಬೇಕು.
12. ಶಾಲೆಗಳಲ್ಲಿ ಡಿ-ಗ್ರೂಪ್ ಸಿಬ್ಬಂದಿ ಕೊರತೆಯನ್ನು ಗಮನಿಸಿ, ಅಕ್ಷರ ದಾಸೋಹ ನೌಕರರನ್ನು ಖಾಯಂ ಸಿಬ್ಬಂದಿಯಾಗಿ ನೇಮಕ ಮಾಡಬೇಕು.
13. ಅಪಘಾತದಲ್ಲಿ ಮೃತಪಟ್ಟ ಅಡುಗೆ ಸಿಬ್ಬಂದಿಗಳ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಿ, ಮೃತರ ಕುಟುಂಬಕ್ಕೆ ರೂ 25 ಲಕ್ಷ ಪರಿಹಾರ ನೀಡಬೇಕು.
ಈ ಹಕ್ಕುಗಳಿಗಾಗಿ ರಾಜ್ಯದಾದ್ಯಂತ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಹೋರಾಟ ನಡೆಯಲಿದ್ದು, ಅದರ ಅಂಗವಾಗಿ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ಇಂದು ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಂದ, ಜಿಲ್ಲಾ ಕಾರ್ಯದರ್ಶಿಗಳಾದ ರತ್ನ ಮತ್ತು ಮಂಜುಳ, ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಕವಿರಾಜ್ ಎಸ್. ಕಾಂಚನ್ ಉಪಸ್ಥಿತರಿದ್ದರು. ಬಿಸಿಯೂಟ
ಇದನ್ನೂ ನೋಡಿ: ‘ಜನತಾ ಪ್ರಜಾಪ್ರಭುತ್ವಕ್ಕಾಗಿ ಬದುಕು’: ಕಾರ್ಮಿಕ ಚಳುವಳಿಯ ಹೆಜ್ಜೆಗುರುತು Janashakthi Media
