SIR ನೆಪದಲ್ಲಿ ಜಿಬಿಎ ಚುನಾವಣೆ ಮುಂದೂಡಿಕೆ? ಡಿಸೆಂಬರ್‌ವರೆಗೆ ಕಾಲಾವಕಾಶ ಕೋರಿದ ಸರ್ಕಾರ

ನವದೆಹಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯನ್ನು ಡಿಸೆಂಬರ್ ಅಂತ್ಯದೊಳಗೆ ನಡೆಸಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ.

ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಿಂದಾಗಿ ನಿಗದಿತ ಅವಧಿಯಲ್ಲಿ, ಅಂದರೆ ಆಗಸ್ಟ್‌ನಲ್ಲಿ ಚುನಾವಣೆ ನಡೆಸುವುದು ಕಷ್ಟವಾಗಲಿದೆ ಎಂದು ಸರ್ಕಾರ ತನ್ನ ಅರ್ಜಿಯಲ್ಲಿ ತಿಳಿಸಿದೆ. ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಬೆಂಗಳೂರು ನಗರದಲ್ಲಿ ಪ್ರಸ್ತುತ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಕರಡು ಮತದಾರರ ಪಟ್ಟಿ ಪ್ರಕಟಣೆ, ಆಕ್ಷೇಪಣೆಗಳ ಸ್ವೀಕಾರ ಹಾಗೂ ವಿಚಾರಣೆ ಪ್ರಕ್ರಿಯೆಗಳು ಪೂರ್ಣಗೊಂಡಿಲ್ಲ. ಚುನಾವಣಾ ಕಾರ್ಯಕ್ಕೆ ಅಗತ್ಯವಿರುವ ಸಿಬ್ಬಂದಿಯೇ ಎಸ್‌ಐಆರ್ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ಪ್ಯಾಲೆಸ್ಟೈನ್‌ ಮಕ್ಕಳನ್ನು ಗುರಿಯಾಗಿಸಿ ಇಸ್ರೇಲಿ ಸೈನ್ಯ ನರಮೇಧ ನಡೆಸುತ್ತಿದೆ: ವಿಶ್ವಸಂಸ್ಥೆಯ ಕಮಿಶನ್

ಸುಮಾರು 8,972 ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ), 938 ಮೇಲ್ವಿಚಾರಕರು, 28 ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್‌ಒ) ಹಾಗೂ 75 ಸಹಾಯಕ ಇಆರ್‌ಒಗಳು ಸೇರಿದಂತೆ ಸಾವಿರಾರು ಸಿಬ್ಬಂದಿ ಎಸ್‌ಐಆರ್ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಜಿಬಿಎ ಚುನಾವಣೆಗೆ ಸುಮಾರು 60 ಸಾವಿರ ಸಿಬ್ಬಂದಿ ಅಗತ್ಯವಿದೆ. ಮತಗಟ್ಟೆ ಸಿಬ್ಬಂದಿ, ಚುನಾವಣಾಧಿಕಾರಿಗಳು, ಭದ್ರತಾ ಸಿಬ್ಬಂದಿ ಸೇರಿದಂತೆ ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲ ಬೇಕಾಗಿರುವುದರಿಂದ, ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಸಿಬ್ಬಂದಿ ಕೊರತೆ ಎದುರಾಗಲಿದೆ ಎಂದು ಸರ್ಕಾರ ವಾದಿಸಿದೆ.

ಬೆಂಗಳೂರಿನಲ್ಲಿ ಸುಮಾರು 1.03 ಕೋಟಿ ಮತದಾರರಿದ್ದು, ಸುಮಾರು 40 ಲಕ್ಷ ಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕಿದೆ. ಕರಡು ಪಟ್ಟಿಗೆ ಲಕ್ಷಾಂತರ ಆಕ್ಷೇಪಣೆಗಳು ಸಲ್ಲಿಕೆಯಾಗುವ ಸಾಧ್ಯತೆಯಿದ್ದು, ಅವುಗಳ ವಿಚಾರಣೆ ನಡೆಸಿ ಸೂಕ್ತ ಆದೇಶ ನೀಡುವುದು ಕಡ್ಡಾಯವಾಗಿದೆ ಎಂದು ಸರ್ಕಾರ ತಿಳಿಸಿದೆ.

ನಿಖರ ಮತ್ತು ಅಂತಿಮ ಮತದಾರರ ಪಟ್ಟಿ ಇಲ್ಲದೆ ಚುನಾವಣೆ ನಡೆಸುವುದು ಸರಿಯಲ್ಲ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಪರಿಷ್ಕೃತ ಮತದಾರರ ಪಟ್ಟಿ ಅಗತ್ಯವಾಗಿದ್ದು, ಹೀಗಾಗಿ ಡಿಸೆಂಬರ್‌ವರೆಗೆ ಸಮಯ ನೀಡಬೇಕು ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಆಗಸ್ಟ್ 31ರವರೆಗೆ ನೀಡಿದ್ದ ಗಡುವು

ಈ ಹಿಂದೆ ಜಿಬಿಎ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಕರ್ನಾಟಕ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಆಗಸ್ಟ್ 31ರವರೆಗೆ ಕಾಲಾವಕಾಶ ನೀಡಿತ್ತು. ಇದೇ ವೇಳೆ, ಮತ್ತೆ ಗಡುವು ವಿಸ್ತರಣೆ ಮಾಡುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತ್ತು.

ಜನಗಣತಿ, ಎಸ್‌ಐಆರ್, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಸರ್ಕಾರಿ ಸಿಬ್ಬಂದಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಹೆಚ್ಚುವರಿ ಸಮಯ ನೀಡುವಂತೆ ಸರ್ಕಾರ ಹಾಗೂ ಚುನಾವಣಾ ಆಯೋಗ ಈ ಹಿಂದೆ ಮನವಿ ಮಾಡಿದ್ದವು. ಅದರ ಆಧಾರದ ಮೇಲೆ ಆಗಸ್ಟ್ 31ರವರೆಗೆ ಗಡುವು ವಿಸ್ತರಿಸಲಾಗಿತ್ತು.

ಇದನ್ನೂ ನೋಡಿ: 40 ಬೇಡಿಕೆಗಳೊಂದಿಗೆ ಜುಲೈ 10ಕ್ಕೆ ಅಂಗನವಾಡಿ-ಬಿಸಿಯೂಟ ನೌಕರರ ರಾಜ್ಯವ್ಯಾಪಿ ಮುಷ್ಕರ

Donate Janashakthi Media

Leave a Reply

Your email address will not be published. Required fields are marked *