ಬಂಡವಾಳಶಾಹಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಯಶಸ್ವಿಯಾಗುವ ದೇಶಗಳು, ಇತರ ದೇಶಗಳಿಗೆ ನಷ್ಟ ಉಂಟುಮಾಡುವ ಮೂಲಕ ಮಾತ್ರವೇ ಯಶಸ್ವಿಯಾಗುತ್ತವೆ; ಅಂದರೆ ಬಂಡವಾಳಶಾಹಿ ಅಭಿವೃದ್ಧಿ ಪಥವನ್ನು ಅನುಸರಿಸುವ ಮೂಲಕ, ಎಲ್ಲ ದೇಶಗಳೂ ಒಟ್ಟಾಗಿ ಬಹುಪಾಲು ಜನಗಳ ಸಂಕಷ್ಟವನ್ನು ನಿವಾರಿಸುವ ಅರ್ಥದಲ್ಲಿ “ಅಭಿವೃದ್ಧಿ”ಯತ್ತ ಪ್ರಗತಿ ಸಾಧಿಸುವುದು ಅಸಾಧ್ಯ. ನಿರುದ್ಯೋಗದ ಪ್ರಮಾಣವು ಬಡತನದ ಹಿಂದಿರುವ ಒಂದು ಪ್ರಮುಖ ಅಂಶವಾಗಿರುವುದರಿಂದ, ಬಂಡವಾಳಶಾಹಿಯನ್ನು ಇಂದು ಅನುಸರಿಸುವುದು, ಒಟ್ಟಾರೆಯಾಗಿ ವಿಶ್ವ ಅರ್ಥವ್ಯವಸ್ಥೆಯಲ್ಲಿ ಬಡತನವನ್ನು ನಿಜಕ್ಕೂ ಉಲ್ಬಣಗೊಳಿಸುತ್ತದೆ. ಆದ್ದರಿಂದ ಎಷ್ಟು ಬೇಗ ಐಎಂಫ್-ವಿಶ್ವಬ್ಯಾಂಕ್‌ನಂತವರು ಬೌದ್ಧಿಕ ಚಾಲಾಕಿತನದಿಂದ ಹುಟ್ಟಿಸಿರುವ ಭ್ರಮೆಗಳಿಂದ ಜನ ಹೊರಬರುತ್ತಾರೋ, ಮತ್ತು ದೇಶೀಯ ಮಾರುಕಟ್ಟೆಯನ್ನು ಆಧರಿಸಿದ, ಬಂಡವಾಳಗಾರರ “ಹೂಡಿಕೆ ಮುಷ್ಕರಗಳನ್ನು” ಸರಿಗಟ್ಟಲು ಸಾರ್ವಜನಿಕ ವಲಯವನ್ನು ಬಳಸಿಕೊಳ್ಳುವ ಒಂದು ಪರ್ಯಾಯ ಅಭಿವೃದ್ಧಿ ಮಾರ್ಗವನ್ನು ರೂಪಿಸುವ ಅಗತ್ಯವಿದೆ ಎಂಬ ಸಂಗತಿಗೆ ಎಷ್ಟು ಬೇಗ ಎಚ್ಚರಗೊಳ್ಳುತ್ತಾರೋ, ಅಷ್ಟು ಮಾನವಕುಲಕ್ಕೆ ಒಳ್ಳೆಯದು.
– ಪ್ರೊ. ಪ್ರಭಾತ್ ಪಟ್ನಾಯಕ್
– ಅನು: ಕೆ.ಎಂ.ನಾಗರಾಜ್
ಬ್ರಿಟನ್‌ನಲ್ಲಿ ಹದಿನೆಂಟನೇ ಶತಮಾನದ ಕೊನೆಯ ಭಾಗದಲ್ಲಿ ಮತ್ತು ಹತ್ತೊಂಬತ್ತನೇ ಶತಮಾನದ ಆದಿ ಭಾಗದಲ್ಲಿ ಕೈಗಾರಿಕಾ ಬಂಡವಾಳಶಾಹಿಯು ವಿಕಾಸ ಹೊಂದುತ್ತಿದ್ದಾಗ, ಯಂತ್ರ-ನಿರ್ಮಿತ ಹೊಸ ಸರಕುಗಳು ಅಪಾರ ಸಂಖ್ಯೆಯ ಕುಶಲಕರ್ಮಿ ಉತ್ಪಾದಕರನ್ನು ಸ್ಥಳಾಂತರಿಸಿದ ವಿದ್ಯಮಾನವು, “ಲಡ್ಡೈಟ್ ಚಳುವಳಿ” (ಲಡ್ ಎಂಬ ಒಬ್ಬ ಕಾಲ್ಪನಿಕ ನಾಯಕನ ಹೆಸರಿನಲ್ಲಿ ಈ ಯಂತ್ರಗಳ ಬಳಕೆಯನ್ನು ವಿರೋಧಿಸಲು ಅಲ್ಲಿನ ಜವಳಿ ಕಾರ್ಮಿಕರು ಆರಂಭಿಸಿದ ಒಂದು ಚಳುವಳಿ-ಅನು) ಉದಯಿಸಲು ಕಾರಣವಾಯಿತು. ನಿರುದ್ಯೋಗ ಹೆಚ್ಚುತ್ತಿದ್ದಂತೆಯೇ ಅದರೊಂದಿಗೆ ಬಡತನದ ಪ್ರಮಾಣವೂ ಏರಿಕೆಯಾಗಿದೆ ಎಂದು ಇತಿಹಾಸಕಾರ ಎರಿಕ್ ಹಾಬ್ಸ್‌ಬಾಮ್ ಅವರು ಈ ಸಂಬಂಧವಾಗಿ ನಡೆದ ಒಂದು ಚರ್ಚೆಯಲ್ಲಿ ಮತ್ತೊಬ್ಬ ಇತಿಹಾಸಕಾರ ಆರ್.ಎಂ. ಹಾರ್ಟ್‌ವೆಲ್ ಅವರೊಂದಿಗೆ ವಾದಿಸಿದ್ದರು. ಆದರೆ, ಹತ್ತೊಂಬತ್ತನೇ ಶತಮಾನದ ಅವಧಿಯಲ್ಲಿ ಪರಿಸ್ಥಿತಿ ಸುಧಾರಿಸಿತು. ಸಂಪೂರ್ಣ ಬಡತನದಿಂದ ಬಳಲುತ್ತಿದ್ದ ಜನಸಂಖ್ಯೆಯ ಪ್ರಮಾಣದ ಏರಿಕೆ ನಿಂತಿತು ಮತ್ತು ವಾಸ್ತವವಾಗಿ ಅದು ಇಳಿಕೆ ಕಂಡಿತು; ಹಾಗೆಯೇ ನಿರುದ್ಯೋಗದಿಂದ ಬಳಲುತ್ತಿದ್ದ ಶ್ರಮಿಕರ ಪ್ರಮಾಣವೂ ಇಳಿಕೆಯಾಯಿತು.
ಬ್ರಿಟನ್ನಿನ ಈ ಅನುಭವವನ್ನು ಅದು ಬಂಡವಾಳಶಾಹಿಯ ಒಂದು ಅಂತರ್ಗತ ಲಕ್ಷಣವೆಂದೂ ಮತ್ತು ಆರಂಭದಲ್ಲಿ ಅದು ಬಡತನ ಮತ್ತು ನಿರುದ್ಯೋಗಗಳ ಹೆಚ್ಚಳಕ್ಕೆ ಕಾರಣವಾದರೂ ಅಂತಿಮವಾಗಿ ಅವುಗಳನ್ನು ಬಂಡವಾಳಶಾಹಿಯು ಇಳಿಸುತ್ತದೆ ಮತ್ತು ಅದರ ಆರಂಭಿಕ ಪರಿಸ್ಥಿತಿಗೆ ಹೋಲಿಸಿದರೆ ವರಮಾನಗಳ ಏರಿಕೆಯಲ್ಲಿ ಅಸಮಾನತೆ ಉಂಟಾಗಿದ್ದರೂ ಸಹ, ಎಲ್ಲರ ಸ್ಥಿತಿ-ಗತಿಗಳು ಉತ್ತಮಗೊಳ್ಳಲು ಅದು ಒಂದು ಮುಖ್ಯವಾದ ಕಾರಣವಾಗುತ್ತದೆ ಎಂದು ಸಾಮಾನ್ಯೀಕರಿಸಿ ಹೇಳಲಾಗುತ್ತದೆ. ಅಂದರೆ, ಬೆಳೆಯತ್ತಾ ಹೋಗುವ ಬಂಡವಾಳಶಾಹಿಯು ಅಂತಿಮವಾಗಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವಲ್ಲಿ ಮತ್ತು ಬಡತನ ಇಳಿಯುವಲ್ಲಿ ಕಾರಣವಾಗುತ್ತದೆ ಎಂಬ ಅನಿಸಿಕೆ ಅದೆಷ್ಟು ವ್ಯಾಪಕವಾಗಿದೆ ಎಂದರೆ, ಬಂಡವಾಳಶಾಹಿಯನ್ನು ಒಂದು ದಿವ್ಯೌಷಧ ಎಂಬಂತೆ ಬಂಡವಾಳಗಾರರನ್ನು ಆಕರ್ಷಿಸುವ ಕ್ರಮವನ್ನು ಇಂದು ಭಾರೀ ನಿರುದ್ಯೋಗ ಮತ್ತು ತೀವ್ರ ಬಡತನದಿಂದ ಬಳಲುತ್ತಿರುವ ದೇಶಗಳಿಗೆ ಶಿಫಾರಸು ಮಾಡಲಾಗುತ್ತಿದೆ. ಭಾರತ ಒಕ್ಕೂಟದೊಳಗಿನ ಯಾವುದೇ ರಾಜ್ಯಕ್ಕೂ ನಿಖರವಾಗಿ ಇದೇ ಶಿಫಾರಸನ್ನು ಮಾಡಲಾಗಿದೆ. “ನೀವು ಬಡತನದಲ್ಲಿದ್ದರೆ, ಅದರಿಂದ ನಿಮ್ಮನ್ನು ಮೇಲೆತ್ತಲು ಹೂಡಿಕೆ ಮಾಡುವ ಬಂಡವಾಳವನ್ನು ಆಕರ್ಷಿಸಲು ಅದಕ್ಕೆ ಹೆಚ್ಚು ಹೆಚ್ಚು ರಿಯಾಯಿತಿಗಳನ್ನು ನೀಡಿ” ಎಂಬುದು ಬಹುಮಟ್ಟಿಗೆ ಒಂದು ಒಪ್ಪಿತ ʼಮಂತ್ರʼವೇ ಆಗಿದೆ.
ಇದನ್ನೂ ಓದಿ: ಜೀರುಂಡೆಯ ಅದ್ಭುತ ರಾಸಾಯನಿಕ ಶಕ್ತಿ
ಆದರೆ, ಈ ಅಭಿಪ್ರಾಯವು ಯಾವ ಸೈದ್ಧಾಂತಿಕ ಆಧಾರವನ್ನೂ ಹೊಂದಿಲ್ಲವಷ್ಟೇ ಅಲ್ಲ, ಇತಿಹಾಸದಲ್ಲಿ ನಿಜಕ್ಕೂ ಏನಾಗಿತ್ತು ಎಂಬುದರ ತಪ್ಪು ಗ್ರಹಿಕೆಯೂ ಆಗಿದೆ. ಒಂದು ಹೊಸ ಯಂತ್ರವನ್ನು ಕೇವಲ ಒಂದೇ ಬಾರಿ ಪರಿಚಯಿಸಿದ್ದರೆ, ಆಗ, ಬಂಡವಾಳದ ಸಂಗ್ರಹಣೆಯ ವೇಗವು ಸಾಕಷ್ಟು ಉತ್ತಮವಾಗಿದ್ದರೆ ಮತ್ತು ಅದು ಮಂದಗೊಳ್ಳದಿದ್ದರೆ, ಅಂತಹ ಪರಿಚಯದಿಂದ ಉಂಟಾದ ಆರಂಭಿಕ ನಿರುದ್ಯೋಗವನ್ನು ಅದು ತುಂಬಿ ಕೊಡುತ್ತದೆ, ಮಾತ್ರವಲ್ಲದೆ ಅದಕ್ಕಿಂತಲೂ ಹೆಚ್ಚಿನ ಉದ್ಯೋಗಗಳನ್ನೂ ನಿರ್ಮಿಸಬಹುದು. ಆದರೆ, ನಿರಂತರ ಪ್ರಕ್ರಿಯೆ ಮತ್ತು ಉತ್ಪನ್ನಗಳನ್ನು ನವೀನಗೊಳಿಸುವುದು ಕೈಗಾರಿಕಾ ಬಂಡವಾಳಶಾಹಿಯ ಚರ್ಯೆಯೇ ಆಗಿರುವುದರಿಂದ ಶ್ರಮಶಕ್ತಿಯು ಸದಾ ಸ್ಥಳಾಂತರಗೊಳ್ಳುತ್ತಲೇ ಇರುತ್ತದೆ. ಅಂತಹ ಒಂದು ಪರಿಸ್ಥಿತಿಯಲ್ಲಿ ಬಂಡವಾಳಶಾಹಿಯಿಂದ ಉಂಟಾಗುವ ನಿರುದ್ಯೋಗವು ಇಲ್ಲದಂತಾಗುತ್ತದೆ ಎನ್ನಲು ಯಾವ ಅಗತ್ಯ ಕಾರಣವೂ ಇಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಬಂಡವಾಳಶಾಹಿಯು ಅಂತಿಮವಾಗಿ ನಿರುದ್ಯೋಗವೇ ಇಲ್ಲದಂತೆ ಏಕೆ ಮಾಡಬೇಕು ಎಂಬುದಕ್ಕೆ ಯಾವ ಸೈದ್ಧಾಂತಿಕ ಕಾರಣವೂ ಇಲ್ಲ.
ಆರಂಭಿಕ ನಿರುದ್ಯೋಗ ನಿವಾರಣೆಯ ಮೂರು ಕಾರಣಗಳು
ಐತಿಹಾಸಿಕವಾಗಿಯೂ, ಹೊಸ ಯಂತ್ರಗಳನ್ನು ಪರಿಚಯಿಸಿದಾಗ ಲಡ್ಡೈಟ್‌ರನ್ನು ಸಿಡಿದೇಳಿಸುವ ಮಟ್ಟಿಗೆ ಉಂಟಾಗಿದ್ದ ಆರಂಭಿಕ ನಿರುದ್ಯೋಗವು ಅಂತಿಮವಾಗಿ ನಿವಾರಣೆಯಾದ ಕಾರಣಕ್ಕೂ ಮತ್ತು ಬಂಡವಾಳಶಾಹಿಯು ಹೊಂದಿದ ಯಾವುದೇ ಸಹಜ ಪ್ರವೃತ್ತಿಗೂ ಯಾವ ಸಂಬಂಧವೂ ಇಲ್ಲ. ಬ್ರಿಟನ್‌ನಲ್ಲಿ ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಕಂಡುಬಂದ ನಿರುದ್ಯೋಗದ ಪರಿಹಾರವು ಮೂರು ವಿಭಿನ್ನ ಕಾರಣಗಳಿಂದಾಗಿ ಸಂಭವಿಸಿತ್ತು. ಮೊದಲನೆಯದು, ಬ್ರಿಟನ್‌ನಿಂದ (ಮತ್ತು ಯುರೋಪ್ ಭೂಖಂಡದಿಂದ) ಬಿಳಿಯರು ಹೋಗಿ ನೆಲೆಸಿದ ಸಮಶೀತೋಷ್ಣ ಪ್ರದೇಶಗಳಿಗೆ ಜರುಗಿದ ಸಾಮೂಹಿಕ ವಲಸೆ.
ಕೆನಡಾ, ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಿಗೆ ಸುಮಾರು ಐದು ಕೋಟಿ ಯುರೋಪಿಯನ್ನರು “ದೀರ್ಘ ಹತ್ತೊಂಬತ್ತನೇ ಶತಮಾನ” ಎನ್ನಲಾಗುವ (ಮೊದಲ ಮಹಾಯುದ್ಧದವರೆಗಿನ) ಅವಧಿಯಲ್ಲಿ ವಲಸೆ ಹೋದ ಅಂಶದ ಬಗ್ಗೆ ನಮ್ಮ ಗಮನವನ್ನು ಅರ್ಥಶಾಸ್ತ್ರಜ್ಞ ಡಬ್ಲ್ಯೂ. ಆರ್ಥರ್ ಲೂಯಿಸ್ ಅವರು ಸೆಳೆದಿದ್ದಾರೆ; ಈ ವಲಸಿಗರು ಸ್ಥಳೀಯ ನಿವಾಸಿಗಳನ್ನು ಅವರ ಭೂಮಿಯಿಂದ ಓಡಿಸಿ, ಅವರನ್ನು ಮೀಸಲು ಪ್ರದೇಶಗಳಿಗೆ ಪ್ರಾಣಿಗಳಂತೆ ಅಟ್ಟಿ ಹಿಂಡು ಹಿಂಡಾಗಿ ಕೂಡಿಹಾಕಿದರು ಮತ್ತು ತಮ್ಮನ್ನು ತಾವು ಬಹುಮಟ್ಟಿಗೆ ಕೃಷಿಕರಾಗಿ ಸ್ಥಾಪಿಸಿಕೊಂಡರು. ಈ ವಲಸೆಯ ಪ್ರಮಾಣವು ಅದೆಷ್ಟು ದೊಡ್ಡದಾಗಿತ್ತು ಎಂದರೆ, ಬ್ರಿಟನ್ ಒಂದರಿಂದಲೇ, 1815 ಮತ್ತು 1914ರ ನಡುವಿನ ಅವಧಿಯಲ್ಲಿ ಅಲ್ಲಿ ಹುಟ್ಟಿದವರಲ್ಲಿ ಸರಿ ಸುಮಾರು ಅರ್ಧದಷ್ಟು ಮಂದಿ ಈ “ಹೊಸ ನಾಡುಗಳಿಗೆ” ವಲಸೆ ಹೋದರು. ಈ ವಿದ್ಯಮಾನವು ಬ್ರಿಟನ್‌ನಲ್ಲಿ ನಿರುದ್ಯೋಗದ ಪ್ರಮಾಣವನ್ನು ಗಣನೀಯವಾಗಿ ಇಳಿಸಿತು.
ಬ್ರಿಟನ್‌ನಲ್ಲಿ ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಕಂಡುಬಂದ ನಿರುದ್ಯೋಗದ ಪರಿಹಾರವು ಮೂರು ವಿಭಿನ್ನ ಕಾರಣಗಳಿಂದಾಗಿ ಸಂಭವಿಸಿತ್ತು. ಆದರೆ, ಈ ಮೂರೂ ಅಂಶಗಳಿಗೂ ಮತ್ತು ಬಂಡವಾಳಶಾಹಿಯ ಯಾವ ಸ್ವಾಭಾವಿಕ ಪ್ರವೃತ್ತಿಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಬಂಡವಾಳಶಾಹಿಯು ಸ್ಥಿತ್ಯಂತರದ ಸಂದರ್ಭದಲ್ಲಿ ಎಷ್ಟೇ ಸಮಸ್ಯೆಗಳನ್ನು ತರಬಹುದಾದರೂ, ಮತ್ತು ಜನರಿಗೆ ಅದರ ಪ್ರಯೋಜನಗಳನ್ನು ಎಷ್ಟೇ ಭಿನ್ನವಾಗಿ ಕೊಟ್ಟರೂ, ಅದು ಅಗತ್ಯವಾಗಿ ಮತ್ತು ಅನಿವಾರ್ಯವಾಗಿ ಪ್ರತಿಯೊಬ್ಬರ ಜೀವನದ ಭೌತಿಕ ಪರಿಸ್ಥಿತಿಗಳಲ್ಲಿ ಸುಧಾರಣೆಯನ್ನು ತರುತ್ತದೆ ಎಂಬ ಯುರೋಪಿನ ಅನುಭವದಿಂದ ಸಾಮಾನ್ಯವಾಗಿ ಬರುವ ತೀರ್ಮಾನಕ್ಕೆ ಸಿಂಧುತ್ವ ಇಲ್ಲ. ಯುರೋಪಿನಲ್ಲಿ ಏನಾಯಿತು ಎಂಬುದು ಆ ಕಾಲದ ನಿರ್ದಿಷ್ಟ ಸಂದರ್ಭದಲ್ಲಿ ಸಾಧ್ಯವಾಯಿತೇ ವಿನಃ, ಅದು ಅನಿವಾರ್ಯ ಫಲಿತಾಂಶವೇನಲ್ಲ.
ಇದಕ್ಕೆ ಎರಡನೆಯ ಕಾರಣ ಕೂಡ, ಇನ್ನೊಂದು ರೀತಿಯ ವಸಾಹತುಗಳ ಪ್ರಸಂಗವೇ – ಅಂದರೆ, ನೆಲಸಿಗ ವಸಾಹತುಗಳಿಗಿಂತ ಭಿನ್ನವಾದ ಜಯಿಸಿದ ವಸಾಹತುಗಳ ಪ್ರಸಂಗ. ಹತ್ತೊಂಬತ್ತನೇ ಶತಮಾನದುದ್ದಕ್ಕೂ, ಅದರಲ್ಲೂ ವಿಶೇಷವಾಗಿ ಅದರ ಉತ್ತರಾರ್ಧದಲ್ಲಿ, ಯಂತ್ರ-ನಿರ್ಮಿತ ಸರಕುಗಳನ್ನು ಭಾರತದಂತಹ ಬಿಳಿಯರು ಜಯಿಸಿದ ವಸಾಹತುಗಳಿಗೆ ರಫ್ತು ಮಾಡಲಾಗುತ್ತಿತ್ತು. ಈ ರಫ್ತುಗಳಿಂದಾಗಿ ಅಲ್ಲಿನ ಸ್ಥಳೀಯ ಬಂಡವಾಳಶಾಹಿ-ಪೂರ್ವ ಉತ್ಪಾದಕರು “ಅಪ-ಕೈಗಾರಿಕೀಕರಣ” ಎಂದು ಕರೆಯಲ್ಪಡುವ ಪ್ರಕ್ರಿಯೆಯ ಮೂಲಕ ಸ್ಥಳಾಂತರಿಸಲ್ಪಟ್ಟರು. ಅಂದರೆ, ಬೃಹತ್ ಉತ್ಪಾದನೆಯ ಮೂಲಕ ಯಂತ್ರ-ನಿರ್ಮಿತ ಸರಕುಗಳು ಬ್ರಿಟನ್‌ನಲ್ಲಿ (ಆ ಸಮಯದಲ್ಲಿ ಅವುಗಳನ್ನು ವಸಾಹತುಗಳಿಗೆ ರಫ್ತು ಮಾಡುತ್ತಿದ್ದುದರಿಂದ) ಮತ್ತಷ್ಟು ನಿರುದ್ಯೋಗವನ್ನು ಉಂಟುಮಾಡಲಿಲ್ಲ, ಮತ್ತು ಹೆಚ್ಚಿನ ಉತ್ಪಾದನೆಯಿಂದಾಗಿ ಕೆಲವು ಆಂತರಿಕ ನಿರುದ್ಯೋಗ ಇಳಿಯಿತು ಕೂಡ.
ಮೂರನೆಯದು, ಈ ಎರಡು ಅಂಶಗಳ ಜೊತೆಗೆ, ಆರಂಭಿಕ ಹಂತಗಳಲ್ಲಿ ಸ್ವತಃ ಆ ಯಂತ್ರಗಳ ತಯಾರಿಕೆಯೂ ಹೆಚ್ಚು ಶ್ರಮವನ್ನು ಬೇಡುತ್ತಿತ್ತು ಎಂಬ ಹೆಚ್ಚುವರಿ ಅಂಶ (ಬಂಡವಾಳದ ಸಾವಯವ ಸಂಯೋಜನೆಯು – ಸ್ಥಿರ ಬಂಡವಾಳ(C)/ಚರ ಬಂಡವಾಳ(V), ತಾಂತ್ರಿಕ ಪ್ರಗತಿಯ ಮೂಲಕ ಸದಾ ಹೆಚ್ಚುತ್ತದೆ ಎಂದು ಮಾರ್ಕ್ಸ್ ನಂಬುವಂತೆ ಮಾಡಿರಬಹುದಾದ ಅಂಶ). ಆದ್ದರಿಂದ ಯಂತ್ರ-ನಿರ್ಮಿತ ಸರಕುಗಳು ಕೆಲವು ಜೀವಿತ ಶ್ರಮವನ್ನು ಸ್ಥಳಾಂತರಿಸಿದರೂ, ಆ ಯಂತ್ರಗಳ ತಯಾರಿಕೆಯೇ ಸಾಕಷ್ಟು ಪ್ರಮಾಣದ ಶ್ರಮವನ್ನು ಹೀರಿಕೊಳ್ಳುತ್ತದೆ ಎಂಬ ಅಂಶವು ಇದನ್ನು ಭಾಗಶಃ ಸರಿದೂಗಿಸಿತು.
ಆದರೆ, ಈ ಮೂರೂ ಅಂಶಗಳಿಗೂ ಮತ್ತು ಬಂಡವಾಳಶಾಹಿಯ ಯಾವ ಸ್ವಾಭಾವಿಕ ಪ್ರವೃತ್ತಿಗೂ ಯಾವುದೇ ಸಂಬಂಧವಿಲ್ಲ. ಮೊದಲ ಎರಡು ಅಂಶಗಳು ಅದರ ವಸಾಹತುಶಾಹಿ ಲಕ್ಷಣಕ್ಕೆ ಸಂಬಂಧಪಟ್ಟವುಗಳು. ಕೊನೆಯ ಅಂಶವೂ ಸಹ, ಯಂತ್ರ ತಯಾರಿಕೆಯು ಹೆಚ್ಚು ಶ್ರಮ ಬೇಡುವ ಅಂಶಕ್ಕೆ ಸಂಬಂಧಪಟ್ಟಿದ್ದು, ಅದೊಂದು ಆಕಸ್ಮಿಕ ಘಟನೆಯೇ ವಿನಃ, ಬಂಡವಾಳಶಾಹಿಯ ಒಂದು ಅಗತ್ಯ ಲಕ್ಷಣವಲ್ಲ ಮತ್ತು ಅದು ಸದಾ ಘಟಿಸುವಂತದ್ದಲ್ಲ. ಆದ್ದರಿಂದ, ಬಂಡವಾಳಶಾಹಿಯು ಸ್ಥಿತ್ಯಂತರದ ಸಂದರ್ಭದಲ್ಲಿ ಎಷ್ಟೇ ಸಮಸ್ಯೆಗಳನ್ನು ತರಬಹುದಾದರೂ, ಮತ್ತು ಜನರಿಗೆ ಅದರ ಪ್ರಯೋಜನಗಳನ್ನು ಎಷ್ಟೇ ಭಿನ್ನವಾಗಿ ಕೊಟ್ಟರೂ, ಅದು ಅಗತ್ಯವಾಗಿ ಮತ್ತು ಅನಿವಾರ್ಯವಾಗಿ ಪ್ರತಿಯೊಬ್ಬರ ಜೀವನದ ಭೌತಿಕ ಪರಿಸ್ಥಿತಿಗಳಲ್ಲಿ ಸುಧಾರಣೆಯನ್ನು ತರುತ್ತದೆ ಎಂಬ ಯುರೋಪಿನ ಅನುಭವದಿಂದ ಸಾಮಾನ್ಯವಾಗಿ ಬರುವ ತೀರ್ಮಾನಕ್ಕೆ ಸಿಂಧುತ್ವ ಇಲ್ಲ. ಯುರೋಪಿನಲ್ಲಿ ಏನಾಯಿತು ಎಂಬುದು ಆ ಕಾಲದ ನಿರ್ದಿಷ್ಟ ಸಂದರ್ಭದಲ್ಲಿ ಸಾಧ್ಯವಾಯಿತೇ ವಿನಃ, ಅದು ಅನಿವಾರ್ಯ ಫಲಿತಾಂಶವೇನಲ್ಲ.
ಕೆಲವು ದೇಶಗಳು ಬಂಡವಾಳಶಾಹಿ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ ತಮ್ಮ ಉಳಿಕೆಯ ಬಡತನದ ನಿವಾರಣೆಯನ್ನು ಹಾಗೂ ಹೀಗೂ ನಿಭಾಯಿಸಿವೆ ಎಂದ ಮಾತ್ರಕ್ಕೇ, ಎಲ್ಲ ದೇಶಗಳೂ ಆ ರೀತಿಯಲ್ಲಿ ಬಡತನವನ್ನು ಹೋಗಲಾಡಿಸಬಹುದು ಎಂಬ ಸಲಹೆಯನ್ನು ಈ ಸಂಸ್ಥೆಗಳು ನೀಡುತ್ತವೆ. ಆದರೆ, ವಿಶ್ವ ಅರ್ಥವ್ಯವಸ್ಥೆಯ ಬಗ್ಗೆ ಲಭ್ಯವಿರುವ ಅಂಕಿಅಂಶಗಳು ಈ ಸಲಹೆಯನ್ನು ನೇರವಾಗಿ ಇಲ್ಲಗಳೆಯುತ್ತವೆ. ಮತ್ತು, ಬಡತನವನ್ನು ಹೋಗಲಾಡಿಸಿರುವ ದೇಶಗಳು ಅದನ್ನು ಇತರ ದೇಶಗಳನ್ನು ಇನ್ನಷ್ಟು ತೀವ್ರವಾದ ಬಡತನದಲ್ಲಿ ಮುಳುಗಿಸುವ ಮೂಲಕ ಮಾತ್ರವೇ ಮಾಡಿವೆ.
ಇಷ್ಟೇ ಅಲ್ಲ, ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಬಹುದು: ಬಂಡವಾಳಶಾಹಿಯು ಇಂದು “ಅಭಿವೃದ್ಧಿ” ಕಾರ್ಯಸೂಚಿಗೆ ವಿರುದ್ಧವಾಗಿ ನಿಂತಿದೆ. ಈ ಕೆಲವು ಅಂಕಿಅಂಶಗಳನ್ನು ಪರಿಗಣಿಸಿ: 2010-20ರ ದಶಕದಲ್ಲಿ ವಿಶ್ವ ಜಿಡಿಪಿಯ ವಾರ್ಷಿಕ ಬೆಳವಣಿಗೆಯ ದರವು ಶೇ.2.6ರಷ್ಟಿತ್ತು. ಇದು ಎರಡನೇ ಮಹಾಯುದ್ಧದ ನಂತರದ ಯಾವುದೇ ದಶಕದಲ್ಲೂ ಅತಿ ಕಡಿಮೆಯದು. ಇದೇ ದಶಕದ ಮೊದಲಾರ್ಧದಲ್ಲಿ ಶೇ.1.8 ರಷ್ಟಿದ್ದ ವಿಶ್ವ ಶ್ರಮ ಉತ್ಪಾದಕತೆಯ ಬೆಳವಣಿಗೆಯ ದರವು ದ್ವಿತೀಯಾರ್ಧದಲ್ಲಿ ಶೇ.1.4ಕ್ಕೆ ಇಳಿದಿತ್ತು. ಆದ್ದರಿಂದ, ಒಟ್ಟಾರೆಯಾಗಿ ಶೇ.1.6ನ್ನು ದಶಕದ ಸರಾಸರಿಯಾಗಿ ತೆಗೆದುಕೊಳ್ಳಬಹುದು.
ಇದು, ವಿಶ್ವ ಅರ್ಥವ್ಯವಸ್ಥೆಯಲ್ಲಿ ಉದ್ಯೋಗದ ಬೆಳವಣಿಗೆಯ ದರವು ಈ ಎರಡು ಅಂಶಗಳ ನಡುವಿನ ವ್ಯತ್ಯಾಸವಾಗಿರುವುದರಿಂದ, ಈ ದಶಕದ ಉದ್ಯೋಗದ ಬೆಳವಣಿಗೆಯ ದರವು ಶೇ.1 ರಷ್ಟಿತ್ತು ಎಂಬುದನ್ನು ಸೂಚಿಸುತ್ತದೆ. ಆದರೆ, ಇದೇ ಅವಧಿಯಲ್ಲಿ ಶ್ರಮ-ಶಕ್ತಿಯ ಬೆಳವಣಿಗೆಯ ದರವು ವಾರ್ಷಿಕವಾಗಿ ಶೇ.1 ರಿಂದ ಶೇ.1.5ರ ನಡುವೆ ಇತ್ತು. ಅಂದರೆ, ಒಟ್ಟು ವಿಶ್ವ ಶ್ರಮ-ಶಕ್ತಿಯಲ್ಲಿ ಶ್ರಮ ಮೀಸಲುಗಳ (ನಿರುದ್ಯೋಗದ) ಸಾಪೇಕ್ಷ ಗಾತ್ರವು ಈ ದಶಕದಲ್ಲಿ ಏರಿಕೆ ಕಂಡಿದೆ. ಒಟ್ಟಾರೆಯಾಗಿ ನಾವು ಜಾಗತಿಕ ಅರ್ಥವ್ಯವಸ್ಥೆಯನ್ನು ಪರಿಗಣಿಸಿದರೆ, ನವ-ಉದಾರವಾದಿ ಬಂಡವಾಳಶಾಹಿಯ ಸಾಂಕ್ರಾಮಿಕ–ಪೂರ್ವ ದಶಕದ ಅವಧಿಯಲ್ಲಿ ನಿರುದ್ಯೋಗ ದರದಲ್ಲಿ ಏರಿಕೆಯಾಗಿರುತ್ತದೆ ಎಂಬುದು ಈ ಮೂಲಕ ಕಂಡುಬರುತ್ತದೆ.
ನವ-ಉದಾರವಾದ ಮತ್ತು ನಿರುದ್ಯೋಗದ ನಂಟು
ಬಂಡವಾಳಶಾಹಿಯ ಇತ್ತೀಚಿನ ಹಂತವಾದ ನವ-ಉದಾರವಾದಿ ಬಂಡವಾಳಶಾಹಿಯು ಜಿಡಿಪಿ ಬೆಳವಣಿಗೆಯ ದರವನ್ನು ನಿಧಾನಗೊಳಿಸಿದೆ. ಈ ಬೆಳವಣಿಗೆಯ ದರವನ್ನು ವೃದ್ಧಿಸುವುದಕ್ಕಾಗಿ ಪ್ರಭುತ್ವದ ಹಸ್ತಕ್ಷೇಪದ ಮೂಲಕ ಕೀನ್ಸ್ ಅವರು ಸೂಚಿಸಿದ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಸಾಧ್ಯವಿಲ್ಲದ ಕಾರಣದಿಂದ ಮತ್ತು ಸಂಪತ್ತು-ವರಮಾನಗಳ ಅಸಮಾನತೆಯು ಏರುತ್ತಿರುವ ಕಾರಣದಿಂದ ಬೆಳವಣಿಗೆಯ ದರ ತಗ್ಗಿದೆ. ಆದ್ದರಿಂದ, ನವ-ಉದಾರವಾದಿ ಬಂಡವಾಳಶಾಹಿಯಡಿಯಲ್ಲಿ ಉದ್ಯೋಗ ಬೆಳವಣಿಗೆಯ ದರವು ವಿಶ್ವ ಶ್ರಮಶಕ್ತಿಯ ಬೆಳವಣಿಗೆಯ ದರಕ್ಕಿಂತಲೂ ಕೆಳಗಿನ ಮಟ್ಟಕ್ಕೆ ನಿಧಾನಗೊಳ್ಳುವುದು ಅನಿವಾರ್ಯ ಎಂಬುದು ಪರೋಕ್ಷವಾಗಿ ವ್ಯಕ್ತಗೊಳ್ಳುತ್ತದೆ. ಈ ರೀತಿಯಲ್ಲಿ ಶ್ರಮ ಮೀಸಲುಗಳ(ನಿರುದ್ಯೋಗದ-ಅನು) ಗಾತ್ರದ ಸಾಪೇಕ್ಷ ಏರಿಕೆಯು ಸಮಕಾಲೀನ ನವ-ಉದಾರವಾದಿ ಬಂಡವಾಳಶಾಹಿಯ ಒಂದು ವಾಸ್ತವ ಸಂಗತಿಯಷ್ಟೇ ಅಲ್ಲ, ಅದರೊಂದಿಗೆ ಒಂದು ಅಗತ್ಯ ಸಂಬಂಧವನ್ನೂ ಹೊಂದಿದೆ.
ಇದರರ್ಥ, ನಿರುದ್ಯೋಗ ಮತ್ತು ಬಡತನವನ್ನು ಹೋಗಲಾಡಿಸಲು ಬಂಡವಾಳಶಾಹಿಯನ್ನು ಒಂದು ದಿವ್ಯೌಷದಿಯಾಗಿ ಅಳವಡಿಸಿಕೊಳ್ಳುವ ಎಲ್ಲ ದೇಶಗಳೂ ಭಾರೀ ಸೋಲು ಅನುಭವಿಸುತ್ತವೆ ಎಂದೇನಲ್ಲ. ಅಂದರೆ, ಬಂಡವಾಳಶಾಹಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಯಶಸ್ವಿಯಾಗುವ ದೇಶಗಳು, ಇತರ ದೇಶಗಳಿಗೆ ನಷ್ಟ ಉಂಟುಮಾಡುವ ಮೂಲಕ ಮಾತ್ರ ಯಶಸ್ವಿಯಾಗುತ್ತವೆ ಮತ್ತು ಬಂಡವಾಳಶಾಹಿ ಅಭಿವೃದ್ಧಿ ಪಥವನ್ನು ಅನುಸರಿಸುವ ಮೂಲಕ, ಎಲ್ಲ ದೇಶಗಳೂ ಬಹುಪಾಲು ಜನಗಳ ಸಂಕಷ್ಟವನ್ನು ನಿವಾರಿಸುವ ಅರ್ಥದಲ್ಲಿ “ಅಭಿವೃದ್ಧಿ”ಯತ್ತ ಪ್ರಗತಿ ಸಾಧಿಸುವುದು ಅಸಾಧ್ಯ ಎಂಬುದೇ ಇದರ ಅರ್ಥ. ತದ್ವಿರುದ್ಧವಾಗಿ, ಶ್ರಮ ಮೀಸಲುಗಳ ಸಾಪೇಕ್ಷ ಗಾತ್ರವು ಬಡತನದ ಹಿಂದಿರುವ ಒಂದು ಪ್ರಮುಖ ಅಂಶವಾಗಿರುವುದರಿಂದ, ಬಂಡವಾಳಶಾಹಿಯನ್ನು ಇಂದು ಅನುಸರಿಸುವುದು, ಒಟ್ಟಾರೆಯಾಗಿ ವಿಶ್ವ ಅರ್ಥವ್ಯವಸ್ಥೆಯಲ್ಲಿ ಬಡತನವನ್ನು ನಿಜಕ್ಕೂ ಉಲ್ಬಣಗೊಳಿಸುತ್ತದೆ.
ಬೌದ್ಧಿಕ–ಚಾಲಾಕಿತನ
ವಿಶ್ವಬ್ಯಾಂಕ್‌ನಂತಹ ಸಂಸ್ಥೆಗಳ ಬೌದ್ಧಿಕ-ಕೈಚಳಕ ಇಲ್ಲಿ ಸ್ಪಷ್ಟವಾಗುತ್ತದೆ. ಕೆಲವು ದೇಶಗಳು ಬಂಡವಾಳಶಾಹಿ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ ತಮ್ಮ ಉಳಿಕೆಯ ಬಡತನದ ನಿವಾರಣೆಯನ್ನು ಹಾಗೂ ಹೀಗೂ ನಿಭಾಯಿಸಿವೆ ಎಂದ ಮಾತ್ರಕ್ಕೇ, ಎಲ್ಲ ದೇಶಗಳೂ ಆ ರೀತಿಯಲ್ಲಿ ಬಡತನವನ್ನು ಹೋಗಲಾಡಿಸಬಹುದು ಎಂಬ ಸಲಹೆಯನ್ನು ಈ ಸಂಸ್ಥೆಗಳು ನೀಡುತ್ತವೆ. ಆದರೆ, ವಿಶ್ವ ಅರ್ಥವ್ಯವಸ್ಥೆಯ ಬಗ್ಗೆ ಲಭ್ಯವಿರುವ ಅಂಕಿಅಂಶಗಳು ಈ ಸಲಹೆಯನ್ನು ನೇರವಾಗಿ ಇಲ್ಲಗಳೆಯುತ್ತವೆ. ಮತ್ತು, ಬಡತನವನ್ನು ಹೋಗಲಾಡಿಸಿರುವ ದೇಶಗಳು ಅದನ್ನು ಇತರ ದೇಶಗಳನ್ನು ಇನ್ನಷ್ಟು ತೀವ್ರವಾದ ಬಡತನದಲ್ಲಿ ಮುಳುಗಿಸುವ ಮೂಲಕ ಮಾತ್ರವೇ ಮಾಡಿವೆ.
ಗಾತ್ರದಲ್ಲಿ ಸಣ್ಣದಿರುವ, ಸಮಗ್ರ ಪರಿಭಾಷೆಯಲ್ಲಿ ಸಣ್ಣ ಪ್ರಮಾಣದ ಶ್ರಮ ಮೀಸಲುಗಳನ್ನು ಹೊಂದಿರುವ ಮತ್ತು ಮುಂದುವರೆದ ದೇಶಗಳಿಂದ ತಮ್ಮ ನೆಲದಲ್ಲಿ ಹೊಸ ಉತ್ಪಾದಕ ಹೂಡಿಕೆಯನ್ನು ಆಕರ್ಷಿಸಬಲ್ಲ ದೇಶಗಳು ಬಂಡವಾಳಶಾಹಿಯನ್ನು ಅನುಸರಿಸುವ ಮೂಲಕ “ಅಭಿವೃದ್ಧಿ”ಯನ್ನು ಯಶಸ್ವಿಯಾಗಿ ಸಾಧಿಸುತ್ತವೆ ಮತ್ತು ಬಡತನವನ್ನು ನಿವಾರಿಸುತ್ತವೆ. ಆದರೆ, ಇವು ಅಪವಾದಗಳಷ್ಟೇ. ಇದೊಂದು ಸರ್ವಸಾಮಾನ್ಯ ಪರಿಸ್ಥಿತಿಯಂತೂ ಖಂಡಿತಾ ಅಲ್ಲ, ಬದಲಾಗಿ ಅದಕ್ಕೆ ವಿರುದ್ಧವಾದುದನ್ನೇ ಇವು ರುಜುವಾತುಪಡಿಸುತ್ತವೆ.
ಒಟ್ಟಾರೆ ವಿಶ್ವ ಅರ್ಥವ್ಯವಸ್ಥೆಗೆ ಯಾವುದು ನಿಜವೋ, ಅದು ವಸಾಹತುಶಾಹಿ ಕಾಲದಿಂದ ಬಳುವಳಿಯಾಗಿ ಪಡೆದ ಅಗಾಧ ಶ್ರಮ ಮೀಸಲುಗಳನ್ನು ಹೊಂದಿರುವ, ಅದರಲ್ಲೂ ವಿಶೇಷವಾಗಿ ಕೃಷಿಯಂತಹ ವಿಶಾಲ ವಲಯಗಳಲ್ಲಿ ಸುಪ್ತ ಮೀಸಲುಗಳನ್ನು ಹೊಂದಿರುವ ಭಾರತದಂತಹ ದೇಶಗಳಿಗೂ ನಿಜ. ಅಂತಹ ಅರ್ಥವ್ಯವಸ್ಥೆಗಳು ಬಂಡವಾಳಶಾಹಿ ಮಾದರಿಯ ಅಭಿವೃದ್ಧಿಯನ್ನು ಅನುಸರಿಸುವ ಮೂಲಕ ತಮ್ಮ ಬಡತನದ ಮತ್ತು ಹಿಂದುಳಿಕೆಯ ಅವಸ್ಥೆಯನ್ನು ನಿವಾರಿಸುತ್ತವೆ ಎಂದು ನಿರೀಕ್ಷಿಸುವುದು ಅಸಂಬದ್ಧತೆಯ ಪರಾಕಾಷ್ಠೆಯಾಗುತ್ತದೆ. ಈ ಅಂಶವು ನವ-ಉದಾರವಾದಿ ದಾಳಿ ಆರಂಭವಾಗುವ ಹಿಂದಿನ ದಿನಗಳಲ್ಲೇ ಚೆನ್ನಾಗಿ ಅರ್ಥವಾಗಿತ್ತು. ಆದರೆ, ಕಳೆದ ಕೆಲವು ದಶಕಗಳಲ್ಲಿ ಬಂಡವಾಳಶಾಹಿಯನ್ನು ಅನುಸರಿಸಿ ಎನ್ನುತ್ತ ಅದನ್ನು ಸತತವಾಗಿ ಒತ್ತಾಯಪೂರ್ವಕವಾಗಿ “ಮಾರಾಟ” ಮಾಡಿದ ರೀತಿ ಈ ಸರಳ ಸತ್ಯ ಕಣ್ಮರೆಯಾಗುವಂತೆ ಮಾಡಿತು. ಅಂತಹ ಭ್ರಮೆಗಳಿಂದ ಜನ ಎಷ್ಟು ಬೇಗ ಹೊರಬರುತ್ತಾರೋ, ಮತ್ತು ದೇಶೀಯ ಮಾರುಕಟ್ಟೆಯನ್ನು ಆಧರಿಸಿದ (ಮತ್ತು ಆ ಮೂಲಕ ಕೃಷಿಯ ಅಭಿವೃದ್ಧಿಯಿಂದ ಪೋಷಿತವಾದ), ಗಡಿಯಾಚೆ-ಈಚೆಗಿನ ಬಂಡವಾಳದ ಹರಿವನ್ನು ನಿಯಂತ್ರಿಸುವ, ಮತ್ತು ಬಂಡವಾಳಗಾರರ “ಹೂಡಿಕೆ ಮುಷ್ಕರಗಳನ್ನು” ಸರಿಗಟ್ಟಲು ಸಾರ್ವಜನಿಕ ವಲಯವನ್ನು ಬಳಸಿಕೊಳ್ಳುವ ಒಂದು ಪರ್ಯಾಯ ಅಭಿವೃದ್ಧಿ ಮಾರ್ಗವನ್ನು ರೂಪಿಸುವ ಅಗತ್ಯವಿದೆ ಎಂಬ ಸಂಗತಿಗೆ ಎಚ್ಚರಗೊಳ್ಳುತ್ತಾರೋ, ಅಷ್ಟು ಮಾನವಕುಲಕ್ಕೆ ಒಳ್ಳೆಯದು.
ಇದನ್ನೂ ನೋಡಿ: 40 ಬೇಡಿಕೆಗಳೊಂದಿಗೆ ಜುಲೈ 10ಕ್ಕೆ ಅಂಗನವಾಡಿ-ಬಿಸಿಯೂಟ ನೌಕರರ ರಾಜ್ಯವ್ಯಾಪಿ ಮುಷ್ಕರ
