ಓಬಳಾಪುರಂ ಮೈನಿಂಗ್ ಪ್ರಕರಣ: ಕೇಂದ್ರ ಸೂಚನೆಯಿಂದ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ

ಗಂಗಾವತಿ: ಶಾಸಕ ಗಾಲಿ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ (OMC) ವಿರುದ್ಧದ ಅಕ್ರಮ ಗಣಿಗಾರಿಕೆ ಪ್ರಕರಣ ಮತ್ತೆ ಸಕ್ರಿಯವಾಗಿದ್ದು, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಹೊಸ ಸೂಚನೆಯಿಂದ ಪ್ರಕರಣಕ್ಕೆ ಮರುಜೀವ ಬಂದಿದೆ. ಓಬಳಾಪುರಂ

OMC ನಡೆಸಿದ ಗಣಿಗಾರಿಕೆ ಚಟುವಟಿಕೆಗಳ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಕೇಂದ್ರ ಸಚಿವಾಲಯವು ರಾಜ್ಯ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದು, ಈ ಬೆಳವಣಿಗೆಯಿಂದ ಗಣಿ ವಲಯದಲ್ಲಿ ಮತ್ತೆ ಚರ್ಚೆ ತೀವ್ರಗೊಂಡಿದೆ. ಇದರ ಪರಿಣಾಮವಾಗಿ ಜನಾರ್ದನ ರೆಡ್ಡಿ ಅವರಿಗೆ ಮತ್ತೊಮ್ಮೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಓಬಳಾಪುರಂ

ಇತ್ತೀಚೆಗೆ ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಉನ್ನತ ಮಟ್ಟದ ತಂಡವು ಆಂಧ್ರಪ್ರದೇಶದ ರಾಯದುರ್ಗ ತಾಲೂಕಿನ ಮಲಪನಗುಡಿ ಗ್ರಾಮ ಸೇರಿದಂತೆ ಗಡಿ ಭಾಗಗಳಲ್ಲಿ ಡ್ರೋನ್ ತಂತ್ರಜ್ಞಾನ ಬಳಸಿ ಸರ್ವೇ ನಡೆಸಿತ್ತು. ಈ ಪರಿಶೀಲನೆಯಲ್ಲಿ ಹಲವು ಗಣಿ ಗುತ್ತಿಗೆ ಪ್ರದೇಶಗಳ ಗಡಿ ಹೊಂದಾಣಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಪ್ರತಿಭಟನೆಗಳ ಜೋರಾಟ: ಉದ್ಯೋಗ, ಶಿಕ್ಷಣ, ಮತದಾರರ ಪಟ್ಟಿ ಪ್ರಶ್ನೆ

ವರದಿಯ ಪ್ರಕಾರ, ಒಎಂಸಿ ಸೇರಿದಂತೆ ಹಲವು ಕಂಪನಿಗಳ ಗಣಿ ಪ್ರದೇಶಗಳು ಕರ್ನಾಟಕ ಗಡಿ ಭಾಗದಲ್ಲಿ ಅತಿಕ್ರಮಣ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವಿಶೇಷವಾಗಿ OMC ಹಾಗೂ ಅಂತರಗಂಗಮ್ಮ ಹೆಸರಿನ ಗುತ್ತಿಗೆ ಪ್ರದೇಶಗಳಲ್ಲಿ ಗಡಿ ಹೊಂದಾಣಿಕೆ ಇಲ್ಲದಿರುವುದು ಬೆಳಕಿಗೆ ಬಂದಿದೆ.

ಈ ವರದಿಯನ್ನು ದೂರುದಾರ ಟಪಾಲ್ ಗಣೇಶ್ ಅವರು ಕೇಂದ್ರ ಪರಿಸರ ಸಚಿವಾಲಯಕ್ಕೆ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ. ಈ ಹಿಂದೆ ಕೂಡ ಕರ್ನಾಟಕ–ಆಂಧ್ರ ಗಡಿ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಮೀಸಲು ಅರಣ್ಯ ಪ್ರದೇಶಗಳ ಹಾನಿ ಸಂಬಂಧ OMC ವಿರುದ್ಧ ಗಂಭೀರ ಆರೋಪಗಳು ದಾಖಲಾಗಿದ್ದವು.

ವಿಠಲಾಪುರ ಮತ್ತು ತುಮಟಿ ಸೇರಿದಂತೆ ಸೂಕ್ಷ್ಮ ಅರಣ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ ಮೂಲಕ ಲಕ್ಷಾಂತರ ಟನ್ ಅದಿರು ಅಕ್ರಮವಾಗಿ ಗಣಿಗಾರಿಕೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ನ್ಯಾಯಾಲಯವು ಜನಾರ್ದನ ರೆಡ್ಡಿಗೆ ಶಿಕ್ಷೆ ವಿಧಿಸಿದ್ದುದು ಈ ಪ್ರಕರಣದ ಹಿನ್ನೆಲೆಯಾಗಿದೆ.

ಈಗ ಕೇಂದ್ರದ ಸೂಚನೆಯ ಬಳಿಕ ರಾಜ್ಯ ಅರಣ್ಯ ಇಲಾಖೆ OMC ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಲು ಮುಂದಾಗಿದೆ. ಅಂತಿಮವಾಗಿ ನಿಖರ ವರದಿ ಸಲ್ಲಿಕೆಯಾಗಿದರೆ, ಪ್ರಕರಣವು ಸುಪ್ರೀಂ ಕೋರ್ಟ್ ಮತ್ತು ಸಿಬಿಐ ನ್ಯಾಯಾಲಯದ ಮುಂದಿನ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕಾನೂನು ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಇದನ್ನೂ ನೋಡಿ: ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುತ್ತಿರುವ ಜಿಬಿಎ? ಬದುಕಿನ ಹಕ್ಕಿಗಾಗಿ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ!

Donate Janashakthi Media

Leave a Reply

Your email address will not be published. Required fields are marked *