ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ವೆ ನಂ. 411ರಲ್ಲಿರುವ ಸುಮಾರು 200 ಎಕರೆ ಸರ್ಕಾರಿ ಜಮೀನನ್ನು ಕಬಳಿಸಿರುವ ಭಾರಿ ಹಗರಣ ಬಯಲಾಗಿದೆ. ನಕಲಿ
ಈ ಪ್ರಕರಣದಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಮೊಹಮ್ಮದ್ ಹುಸೇನ್ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರು ತಲೆಮರೆಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವ್ಯಕ್ತಿ ನಿತಿನ್ ಪ್ರೇಮಾನಂದ ಸೇರಿದಂತೆ ಒಟ್ಟು 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ
ತನಿಖೆ ವೇಳೆ, ಖಾಸಗಿ ವ್ಯಕ್ತಿಯೊಬ್ಬನು ಇಲಾಖೆಯ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಪಡೆದು, ಅಧಿಕಾರಿಗಳ ಹೆಸರಿನಲ್ಲಿ ಅನಧಿಕೃತವಾಗಿ ಸರ್ಕಾರಿ ತಂತ್ರಾಂಶದಲ್ಲಿ ದಾಖಲೆಗಳನ್ನು ತಿದ್ದುಪಡಿ ಮಾಡುತ್ತಿದ್ದುದಾಗಿ ಬೆಳಕಿಗೆ ಬಂದಿದೆ. ಲಂಚದ ಆಧಾರದ ಮೇಲೆ ಆರ್‌ಟಿಸಿ ದಾಖಲಾತಿಗಳನ್ನು ತಿದ್ದುಪಡಿ ಮಾಡಿ, ಅಕ್ರಮ ಖಾತೆಗಳು ಮತ್ತು ಕ್ರಯಪತ್ರಗಳನ್ನು ಸೃಷ್ಟಿಸಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: SIR ಕರ್ನಾಟಕ: ನಾಲ್ಕೇ ದಿನಗಳಲ್ಲಿ 2.01 ಕೋಟಿ ಮತದಾರರ ಎಣಿಕೆ ನಮೂನೆ ವಿತರಣೆ; 12.07 ಲಕ್ಷ ನಮೂನೆಗಳ ಡಿಜಿಟಲೀಕರಣ
ಸರ್ವೆ ಸೂಪರ್‌ವೈಸರ್ ಯೋಗರಾಜ್, ಭೂಮಾಪಕರು ಅರವಿಂದ್, ಜಯಬೋರೇಗೌಡ, ದಯಾನಂದ್, ಮಧು, ರಮೇಶ್, ಹರೀಶ್, ನೇಶಾ ಸಾರಿಕಾ ಮಲ್ಲಿ ಸಿ ಹಾಗೂ ನಿತಿನ್ ಪ್ರೇಮಾನಂದ ಬಂಧಿತರಾಗಿದ್ದಾರೆ. ಅಧಿಕಾರಿಗಳೇ ತಮ್ಮ ಲಾಗಿನ್ ವಿವರಗಳನ್ನು ಹಂಚಿಕೊಂಡಿದ್ದರಿಂದ ಈ ಅಕ್ರಮ ಸಾಧ್ಯವಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಆದೇಶದ ಮೇರೆಗೆ ಆರೋಪಿಗಳ ಕಚೇರಿಗಳು ಮತ್ತು ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಶೋಧದ ವೇಳೆ ₹1,40,200 ನಗದು ಹಣ ವಶಪಡಿಸಿಕೊಳ್ಳಲಾಗಿದೆ.
ಈ ಹಗರಣದ ಬಗ್ಗೆ ಮಹದೇವಪುರದ ನಾಗೇಂದ್ರ ಉಪ ಲೋಕಾಯುಕ್ತರಿಗೆ ದೂರು ನೀಡಿದ್ದು, ತಹಶೀಲ್ದಾರ್ ಕಚೇರಿ, ಎಡಿಎಲ್‌ಆರ್ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪಾತ್ರದ ಮೇಲೂ ಅನುಮಾನ ವ್ಯಕ್ತವಾಗಿದೆ.
ಉಪ ಲೋಕಾಯುಕ್ತರ ನಿರ್ದೇಶನದಂತೆ ಮಂಡ್ಯ ಲೋಕಾಯುಕ್ತ ಪೊಲೀಸರು ತಹಶೀಲ್ದಾರ್ ಚೇತನಾ ಯಾದವ್, ಪಿಡಿಒ ಜಿ.ಆರ್. ನಾಗೇಂದ್ರ, ಎಡಿಎಲ್‌ಆರ್ ಮೊಹಮ್ಮದ್ ಹುಸೇನ್ ಹಾಗೂ ಪಾಂಡವಪುರ ಉಪ ವಿಭಾಗದ ಸಹಾಯಕ ಆಯುಕ್ತ ಶ್ರೀನಿವಾಸ್ ಅವರ ಕಚೇರಿ ಮತ್ತು ಮನೆಗಳ ಮೇಲೂ ದಾಳಿ ನಡೆಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ಇದನ್ನೂ ನೋಡಿ: ಆರೋಗ್ಯ ಸೇವೆ ವ್ಯಾಪಾರವಲ್ಲ, ಜನರ ಹಕ್ಕು Janashakthi Media
