ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಪ್ರಕಟಗೊಂಡಿರುವ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಮರುಪರಿಶೀಲಿಸುವ ಅಥವಾ ಹಿಂಪಡೆಯುವ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಟ್ರೇಡ್ ಯೂನಿಯನ್ಗಳ ಜಂಟಿ ಸಮಿತಿ (ಜೆಸಿಟಿಯು) ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದೆ.
ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ಅವರ ನೇತೃತ್ವದ ನಿಯೋಗವು ಶನಿವಾರ ಮುಖ್ಯಮಂತ್ರಿಯನ್ನು ಅವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ, ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವಂತೆ ಒತ್ತಾಯಿಸಿತು.
ಮನವಿ ಪತ್ರದಲ್ಲಿ, ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಕನಿಷ್ಠ ವೇತನ ಪರಿಷ್ಕರಣೆಯನ್ನು ಮರುಪರಿಶೀಲಿಸುವ ಕುರಿತು ಚರ್ಚೆ ನಡೆದಿರುವುದು ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ ಎಂದು ತಿಳಿಸಲಾಗಿದೆ. ಈಗಾಗಲೇ ಪ್ರಕಟಗೊಂಡಿರುವ ಅಂತಿಮ ಅಧಿಸೂಚನೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯದೆ ಅಥವಾ ಮರುಪರಿಶೀಲಿಸದೆ ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಗಿದೆ.
ಇದನ್ನೂ ಓದಿ :ಬರ ಪರಿಸ್ಥಿತಿ ಎದುರಿಸಲು ತಕ್ಷಣ ಪರಿಹಾರ ಘೋಷಿಸಿ: ಸರ್ಕಾರಕ್ಕೆ ಆರ್. ಅಶೋಕ್ ಆಗ್ರಹ
ರಾಜ್ಯದಲ್ಲಿ 2017-18ರಿಂದಲೇ ಕನಿಷ್ಠ ವೇತನ ಪರಿಷ್ಕರಣೆ ಬಾಕಿ ಉಳಿದಿದ್ದು, ಸುಮಾರು ಎಂಟು ವರ್ಷಗಳ ಬಳಿಕ 39 ನಿಗದಿತ ಉದ್ಯೋಗಗಳಿಗೆ ವೇತನ ಪರಿಷ್ಕರಣೆ ಮಾಡಲಾಗಿದೆ. ಈ ವಿಳಂಬವು ಕನಿಷ್ಠ ವೇತನ ಕಾಯ್ದೆ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನಗಳ ಉಲ್ಲಂಘನೆಯಾಗಿದೆ ಎಂದು ಸಮಿತಿ ಹೇಳಿದೆ. ಉದ್ಯೋಗದಾತರು ಹೇಳುತ್ತಿರುವಂತೆ ವೇತನದಲ್ಲಿ ಶೇ.60ರಷ್ಟು ಹೆಚ್ಚಳವಾಗಿಲ್ಲ; ವಾಸ್ತವವಾಗಿ ಶೇ.40ರಷ್ಟು ಮಾತ್ರ ಹೆಚ್ಚಳವಾಗಿದೆ ಎಂದು ಸ್ಪಷ್ಟಪಡಿಸಿದೆ.
ವೇತನ ಪರಿಷ್ಕರಣೆ ಸಂಪೂರ್ಣ ವೈಜ್ಞಾನಿಕ ಹಾಗೂ ಕಾನೂನುಬದ್ಧ ಪ್ರಕ್ರಿಯೆಯ ಮೂಲಕ ನಡೆದಿದೆ ಎಂದು ಜೆಸಿಟಿಯು ತಿಳಿಸಿದೆ. 2025ರ ಏಪ್ರಿಲ್ನಲ್ಲಿ ಕರಡು ಅಧಿಸೂಚನೆ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. 15ನೇ ಭಾರತೀಯ ಕಾರ್ಮಿಕ ಸಮ್ಮೇಳನ (1956) ನಿಗದಿಪಡಿಸಿದ ಮಾನದಂಡಗಳ ಆಧಾರದ ಮೇಲೆ ಕನಿಷ್ಠ ವೇತನ ಲೆಕ್ಕ ಹಾಕಲಾಗಿದ್ದು, ಇದಕ್ಕೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ನ ಮಾನ್ಯತೆಯೂ ಇದೆ. ಜೊತೆಗೆ ವೇತನ ಸಂಹಿತೆ-2019ರ ಸೆಕ್ಷನ್ 69ರ ಅನ್ವಯ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ವಿವರಿಸಿದೆ.
ಈ ಪರಿಷ್ಕರಣೆಯಿಂದ ಕೆಪಿಟಿಸಿಎಲ್ ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳು, ಮಂಡಳಿಗಳು ಹಾಗೂ ಖಾಸಗಿ ಸಂಸ್ಥೆಗಳು ಈಗಾಗಲೇ ಹೊಸ ವೇತನ ದರಗಳನ್ನು ಜಾರಿಗೆ ತಂದಿವೆ. ಇದರ ಲಾಭ ರಾಜ್ಯದ ಒಂದು ಕೋಟಿಗೂ ಹೆಚ್ಚು ಕಾರ್ಮಿಕ ಕುಟುಂಬಗಳಿಗೆ ದೊರೆಯಲಿದ್ದು, ಅವರ ಖರೀದಿ ಸಾಮರ್ಥ್ಯ ಹೆಚ್ಚುವ ಮೂಲಕ ರಾಜ್ಯದ ಆರ್ಥಿಕತೆಗೆ ಸಹಕಾರಿಯಾಗಲಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಸುಮಾರು 3.8 ಲಕ್ಷ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಹೊಸ ವೇತನ ಜಾರಿಯಿಂದ ವಾರ್ಷಿಕ ಸುಮಾರು ₹3,200 ಕೋಟಿ ಹೆಚ್ಚುವರಿ ವೆಚ್ಚವಾಗಲಿದ್ದು, ಇದು ರಾಜ್ಯದ ಒಟ್ಟು ಬಜೆಟ್ಗೆ ಹೋಲಿಸಿದರೆ ಅತ್ಯಲ್ಪ ಪ್ರಮಾಣವಾಗಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಉದ್ಯೋಗದಾತರ ಒತ್ತಡಕ್ಕೆ ಸರ್ಕಾರ ಮಣಿಯದೆ, ಕಾರ್ಮಿಕರ ಹಿತದೃಷ್ಟಿಯಿಂದ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಐಎನ್ಟಿಯುಸಿ, ಎಐಟಿಯುಸಿ, ಸಿಐಟಿಯು, ಎಚ್ಎಂಎಸ್ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಜಂಟಿಯಾಗಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ..
ನಿಯೋಗದಲ್ಲಿ ಪ್ರೊ. ಬಾಬು ಮ್ಯಾಥ್ಯೂ, ವಿಜಯಭಾಸ್ಕರ್ (ಎಐಟಿಯುಸಿ), , ಶಾಮಣ್ಣ ರೆಡ್ಡಿ (ಐಎನ್ಟಿಯುಸಿ), ಕೆ. ಸೋಮಶೇಖರ್ (ಎಐಯುಟಿಯುಸಿ), ನಾಗನಾಥ್ (ಎಚ್ಎಂಎಸ್), ಜಿ.ಆರ್. ಶಿವಶಂಕರ್ (ಟಿಯುಸಿಸಿ) ಹಾಗೂ ಪಿ. ಅಪ್ಪಣ್ಣ (ಎಐಸಿಸಿಟಿಯು) ಭಾಗವಹಿಸಿದ್ದರು.
ಇದನ್ನೂ ಓದಿ : ಒಂದು ಕೋಟಿ ಕುಟುಂಬಗಳ ಬದುಕಿನ ಮೇಲೆ ಹೊಡೆತ; ಕನಿಷ್ಠ ವೇತನ ಹಿಂಪಡೆದರೆ ಬೀದಿಗಿಳಿಯುತ್ತೇವೆ: ಕಾರ್ಮಿಕ ಸಂಘಟನೆಗಳು
