ಬರ ಪರಿಸ್ಥಿತಿ ಎದುರಿಸಲು ತಕ್ಷಣ ಪರಿಹಾರ ಘೋಷಿಸಿ: ಸರ್ಕಾರಕ್ಕೆ ಆರ್‌. ಅಶೋಕ್ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಒತ್ತಾಯಿಸಿದ್ದಾರೆ. ಬರ

ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅಶೋಕ್, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಅಭಾವದಿಂದ ಕೃಷಿ ಚಟುವಟಿಕೆಗಳು ತೀವ್ರ ಹಿನ್ನಡೆ ಅನುಭವಿಸಿವೆ. ಬಿತ್ತನೆಯಾದ ಬೆಳೆಗಳು ಒಣಗುವ ಹಂತ ತಲುಪಿದ್ದು, ಜಲಾಶಯಗಳ ನೀರಿನ ಮಟ್ಟವೂ ಕುಸಿಯುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಉಲ್ಬಣಿಸುವ ಆತಂಕವಿದೆ ಎಂದು ಹೇಳಿದ್ದಾರೆ.

ಬರಪೀಡಿತ ಪ್ರದೇಶಗಳ ರೈತರ ನೆರವಿಗೆ ಕೂಡಲೇ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಎಕರೆಗೆ ₹50,000 ಪರಿಹಾರ ನೀಡಬೇಕು. ಜೊತೆಗೆ ರಾಜ್ಯಾದ್ಯಂತ ಬೆಳೆ ಹಾನಿ ಸಮೀಕ್ಷೆ ನಡೆಸಿ, ಪರಿಹಾರ ವಿತರಣೆಯನ್ನು ವಿಳಂಬವಿಲ್ಲದೆ ಆರಂಭಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಮೇಲ್ಛಾವಣಿ ಕುಸಿಯುವ ಭೀತಿಯಲ್ಲಿ ಶಾಲೆ: ಗುಡಿಸಲಿನಲ್ಲಿ ಪಾಠ ಕೇಳುತ್ತಿರುವ 21 ವಿದ್ಯಾರ್ಥಿಗಳು

ಕೇವಲ ರೈತರಷ್ಟೇ ಅಲ್ಲದೆ, ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಪ್ರದೇಶದ ಜನರ ಜೀವನೋಪಾಯಕ್ಕೂ ಬರದಿಂದ ತೀವ್ರ ಹೊಡೆತ ಬಿದ್ದಿದೆ. ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಉದ್ಯೋಗ ಸೃಷ್ಟಿಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಿಲ್ಲ ಎಂದು ಆರೋಪಿಸಿರುವ ಅವರು, ರಾಜ್ಯ ಸರ್ಕಾರ ಸಮಗ್ರ ಬರ ನಿರ್ವಹಣಾ ಕಾರ್ಯಯೋಜನೆ ರೂಪಿಸಿ, ರೈತರು ಹಾಗೂ ಗ್ರಾಮೀಣ ಜನರಿಗೆ ತ್ವರಿತ ನೆರವು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬರದ ತೀವ್ರತೆ ಹಿನ್ನೆಲೆಯಲ್ಲಿ ಕುಡಿಯುವ ನೀರು, ಪರ್ಯಾಯ ಬೆಳೆಗಳ ಕುರಿತು ಮಾರ್ಗದರ್ಶನ, ಜಾನುವಾರು ಸಂರಕ್ಷಣೆ ಹಾಗೂ ತುರ್ತು ಉದ್ಯೋಗ ಸೃಷ್ಟಿ ಸೇರಿದಂತೆ ಸಮಗ್ರ ಪರಿಹಾರ ಕ್ರಮಗಳನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೊಳಿಸಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ. ಬರ

ಇದನ್ನೂ ನೋಡಿ : ಆರ್‌ಎಸ್‌ಎಸ್‌ ನೋಂದಣಿ ಸುತ್ತಮುತ್ತ: ಎದ್ದಿರುವ ಪ್ರಶ್ನೆಗಳೇನು?

 

 

Donate Janashakthi Media

Leave a Reply

Your email address will not be published. Required fields are marked *