2026ರ ಫಿಫಾ ವಿಶ್ವಕಪ್ನಲ್ಲಿ ನಾಕ್ಔಟ್ ಹಂತದ ಮೊದಲ ಸುತ್ತಿನ ಪಂದ್ಯಗಳು ಅಂತ್ಯಗೊಂಡಿದ್ದು, ಇದೀಗ ಪ್ರಶಸ್ತಿಯತ್ತ ಮತ್ತೊಂದು ಹೆಜ್ಜೆ ಇಡುವ ರೌಂಡ್ ಆಫ್ 16 ಕ್ಕೆ ವೇದಿಕೆ ಸಜ್ಜಾಗಿದೆ. ಒಟ್ಟು 48 ತಂಡಗಳೊಂದಿಗೆ ಆರಂಭವಾದ ಟೂರ್ನಿಯಲ್ಲಿ ಈಗ ಕೇವಲ 16 ತಂಡಗಳು ಮಾತ್ರ ಉಳಿದಿದ್ದು, ಇನ್ನು ಮುಂದೆ ಪ್ರತಿ ಪಂದ್ಯವೂ ‘ಮಾಡು ಇಲ್ಲವೇ ಮಡಿ’ ಸ್ವರೂಪದ್ದಾಗಿರಲಿದೆ. ಸೋತ ತಂಡದ ವಿಶ್ವಕಪ್ ಪಯಣ ಅಲ್ಲಿಗೇ ಅಂತ್ಯಗೊಳ್ಳಲಿದ್ದು, ಗೆದ್ದ ತಂಡ ಕ್ವಾರ್ಟರ್ಫೈನಲ್ಗೆ ಲಗ್ಗೆ ಇಡಲಿದೆ. ಫಿಫಾ
ರೌಂಡ್ ಆಫ್ 32ರಲ್ಲಿ ಹಲವು ಅಚ್ಚರಿಯ ಫಲಿತಾಂಶಗಳು ದಾಖಲಾಗಿವೆ. ಬಲಿಷ್ಠ ಜರ್ಮನಿ ಮತ್ತು ನೆದರ್ಲೆಂಡ್ಸ್ ತಂಡಗಳು ಪೆನಾಲ್ಟಿ ಶೂಟೌಟ್ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿರುವುದು ಈ ಹಂತದ ಪ್ರಮುಖ ಅಚ್ಚರಿಯಾಗಿದೆ. ಮತ್ತೊಂದೆಡೆ, ಹಾಲಿ ಚಾಂಪಿಯನ್ ಅರ್ಜೆಂಟೀನಾ, ಫ್ರಾನ್ಸ್, ಬ್ರೆಜಿಲ್, ಸ್ಪೇನ್, ಪೋರ್ಚುಗಲ್, ಇಂಗ್ಲೆಂಡ್, ಬೆಲ್ಜಿಯಂ, ಮೆಕ್ಸಿಕೊ, ಅಮೆರಿಕ, ಸ್ವಿಟ್ಜರ್ಲೆಂಡ್, ಪರಾಗ್ವೆ, ಮೊರಾಕೊ, ನಾರ್ವೆ, ಈಜಿಪ್ಟ್, ಕೆನಡಾ ಮತ್ತು ಕೊಲಂಬಿಯಾ ಕೊನೆಯ 16ರ ಹಂತ ತಲುಪಿವೆ.
ಈ ಹಂತದಲ್ಲಿ ಹಲವು ಹೈವೋಲ್ಟೇಜ್ ಮುಖಾಮುಖಿಗಳು ಅಭಿಮಾನಿಗಳ ಗಮನ ಸೆಳೆದಿವೆ. ಪೋರ್ಚುಗಲ್ ಮತ್ತು ಸ್ಪೇನ್ ನಡುವಿನ ಐಬೀರಿಯನ್ ಡರ್ಬಿ ಟೂರ್ನಿಯ ಅತ್ಯಂತ ಕುತೂಹಲಕಾರಿ ಪಂದ್ಯವೆಂದು ಪರಿಗಣಿಸಲಾಗಿದೆ. ಬ್ರೆಜಿಲ್ ವಿರುದ್ಧ ನಾರ್ವೆ, ಮೆಕ್ಸಿಕೊ ವಿರುದ್ಧ ಇಂಗ್ಲೆಂಡ್ ಹಾಗೂ ಅರ್ಜೆಂಟೀನಾ ವಿರುದ್ಧ ಈಜಿಪ್ಟ್ ನಡುವಿನ ಪಂದ್ಯಗಳ ಮೇಲೂ ಅಪಾರ ನಿರೀಕ್ಷೆ ಮೂಡಿದೆ. ಮೊಹಮದ್ ಸಲಾ ನೇತೃತ್ವದ ಈಜಿಪ್ಟ್ ತಂಡ ಹಾಲಿ ಚಾಂಪಿಯನ್ ಅರ್ಜೆಂಟೀನಾಗೆ ಎಷ್ಟು ಸವಾಲು ಒಡ್ಡಲಿದೆ ಎಂಬುದರತ್ತ ಅಭಿಮಾನಿಗಳ ಚಿತ್ತ ನೆಟ್ಟಿದೆ.
ಇದನ್ನೂ ನೋಡಿ : ಆರ್ಎಸ್ಎಸ್ ನೋಂದಣಿ ಸುತ್ತಮುತ್ತ: ಎದ್ದಿರುವ ಪ್ರಶ್ನೆಗಳೇನು?

ಭಾರತೀಯ ಕಾಲಮಾನ ಪ್ರಕಾರ ರೌಂಡ್ ಆಫ್ 16 ಪಂದ್ಯಗಳ ವೇಳಾಪಟ್ಟಿ ಹೀಗಿದೆ
- ಜುಲೈ 4 – ರಾತ್ರಿ 10.30: ಕೆನಡಾ × ಮೊರಾಕೊ
- ಜುಲೈ 5 – ಮುಂಜಾನೆ 2.30: ಪರಾಗ್ವೆ × ಫ್ರಾನ್ಸ್
- ಜುಲೈ 6 – ರಾತ್ರಿ 1.30: ಬ್ರೆಜಿಲ್ × ನಾರ್ವೆ
- ಜುಲೈ 6 – ಬೆಳಗ್ಗೆ 5.30: ಮೆಕ್ಸಿಕೊ × ಇಂಗ್ಲೆಂಡ್
- ಜುಲೈ 7 – ರಾತ್ರಿ 12.30: ಪೋರ್ಚುಗಲ್ × ಸ್ಪೇನ್
- ಜುಲೈ 7 – ಬೆಳಗ್ಗೆ 5.30: ಅಮೆರಿಕ × ಬೆಲ್ಜಿಯಂ
- ಜುಲೈ 7 – ರಾತ್ರಿ 9.30: ಅರ್ಜೆಂಟೀನಾ × ಈಜಿಪ್ಟ್
- ಜುಲೈ 8 – ಮುಂಜಾನೆ 1.30: ಸ್ವಿಟ್ಜರ್ಲೆಂಡ್ × ಕೊಲಂಬಿಯಾ.
ರೌಂಡ್ ಆಫ್ 16 ಮುಕ್ತಾಯವಾದ ಬಳಿಕ ಜುಲೈ 9ರಿಂದ ಕ್ವಾರ್ಟರ್ಫೈನಲ್ ಪಂದ್ಯಗಳು ಆರಂಭವಾಗಲಿವೆ. ಬಳಿಕ ಸೆಮಿಫೈನಲ್, ಮೂರನೇ ಸ್ಥಾನಕ್ಕಾಗಿ ಪ್ಲೇಆಫ್ ಹಾಗೂ ಜುಲೈ 19ರಂದು ಫೈನಲ್ ಪಂದ್ಯ ನಡೆಯಲಿದ್ದು, ವಿಶ್ವ ಫುಟ್ಬಾಲ್ನ ಹೊಸ ಚಾಂಪಿಯನ್ ಪಟ್ಟ ನಿರ್ಧಾರವಾಗಲಿದೆ.
ಇದನ್ನೂ ಓದಿ : ಕೇಪ್ ವರ್ಡೆ ನಮ್ಮನ್ನು ತೀವ್ರವಾಗಿ ಪರೀಕ್ಷಿಸಿತು: ಅರ್ಜೆಂಟೀನಾ ಗೆಲುವಿನ ಬಳಿಕ ಮೆಸ್ಸಿ ಪ್ರತಿಕ್ರಿಯೆ
