ಬೆಂಗಳೂರು: ಕರ್ನಾಟಕದ 19 ಕಂದಾಯ ಜಿಲ್ಲೆಗಳಲ್ಲಿ ಸಮಾನಾಂತರ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್ಸಿ) ಸಲ್ಲಿಸಿದ್ದ ಅರ್ಜಿಯನ್ನು ಟಾಟಾ ಪವರ್ ಹಿಂಪಡೆದಿರುವುದು ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿ ಹೋರಾಟಕ್ಕೆ ದೊರೆತ ಮಹತ್ವದ ಜಯವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ರಾಜ್ಯ ಸಮಿತಿ ಅಭಿಪ್ರಾಯಪಟ್ಟಿದೆ.
ಈ ಕುರಿತು ಜಂಟಿ ಪ್ರಕಟಣೆ ನೀಡಿರುವ ಕೆಪಿಆರ್ಎಸ್ ರಾಜ್ಯಾಧ್ಯಕ್ಷ ಯು. ಬಸವರಾಜ ಹಾಗೂ ಪ್ರಧಾನ ಕಾರ್ಯದರ್ಶಿ ಯಶವಂತ್ ಟಿ., ಟಾಟಾ ಪವರ್ ಅರ್ಜಿ ಹಿಂಪಡೆದಿರುವುದು ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿ ಹೋರಾಟದ ಮಹತ್ವದ ಗೆಲುವಾಗಿದೆ ಎಂದು ಹೇಳಿದ್ದಾರೆ. ಟಾಟಾ ಪವರ್ ಅರ್ಜಿ ಸಲ್ಲಿಸಿರುವ ಮಾಹಿತಿ ಬಹಿರಂಗವಾಗುತ್ತಿದ್ದಂತೆಯೇ ರೈತರು, ವಿದ್ಯುತ್ ಇಲಾಖೆ ನೌಕರರು, ವಿವಿಧ ಗ್ರಾಹಕ ಸಂಘಟನೆಗಳು ಹಾಗೂ ಸಾರ್ವಜನಿಕ ವಿದ್ಯುತ್ ವಿತರಣಾ ಸಂಸ್ಥೆಗಳು ಆಕ್ಷೇಪಣೆ ಸಲ್ಲಿಸಿದ್ದವು ಎಂದು ತಿಳಿಸಿದೆ. ಕೇವಲ ಒಂದು ತಿಂಗಳೊಳಗೆ 20 ಲಕ್ಷಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿರುವುದು ಅಭೂತಪೂರ್ವ ಬೆಳವಣಿಗೆಯಾಗಿದ್ದು, ಖಾಸಗೀಕರಣದ ವಿರುದ್ಧ ಜನರಲ್ಲಿ ಇರುವ ಅಸಮಾಧಾನಕ್ಕೆ ಇದು ಸಾಕ್ಷಿಯಾಗಿದೆ ಎಂದು ಹೇಳಿದೆ.
ರಾಜ್ಯದ ವಿವಿಧ ರೈತ ಸಂಘಟನೆಗಳು, ವಿದ್ಯುತ್ ಇಲಾಖೆ ನೌಕರರು ಹಾಗೂ ಇಂಜಿನಿಯರ್ಗಳ ಸಂಘಟನೆಗಳು ಸಾವಿರಾರು ಜಾಗೃತಿ ಸಭೆಗಳು, ಸಮಾವೇಶಗಳು ಹಾಗೂ ಪ್ರತಿಭಟನೆಗಳನ್ನು ಆಯೋಜಿಸಿ ಜನರಲ್ಲಿ ಅರಿವು ಮೂಡಿಸಿದ್ದವು. ಈ ವ್ಯಾಪಕ ಪ್ರತಿರೋಧದ ಹಿನ್ನೆಲೆಯಲ್ಲಿ ಟಾಟಾ ಪವರ್ ತನ್ನ ಅರ್ಜಿಯನ್ನು ಹಿಂಪಡೆದಿದೆ ಎಂದು ಸಂಘ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನೂ ಓದಿ :ಗ್ರೌಂಡ್ ರಿಪೋರ್ಟ್: ಒಬ್ಬ BLOಗೆ ನೂರಾರು ಮನೆಗಳು; ಮತದಾರರ ಪಟ್ಟಿ ಪರಿಷ್ಕರಣೆಯ ಸವಾಲುಗಳೇನು?
ರಾಜ್ಯ ಸರ್ಕಾರವು ಆರಂಭದಲ್ಲಿ ಖಾಸಗೀಕರಣದ ಪರ ನಿಲುವು ತಳೆದಿದ್ದರೂ, ಸಾರ್ವಜನಿಕ ವಿರೋಧದ ಹಿನ್ನೆಲೆಯಲ್ಲಿ ಅಂತಿಮವಾಗಿ ತನ್ನ ವಿದ್ಯುತ್ ವಿತರಣಾ ಕಂಪನಿಗಳಿಗೆ ಕೆಇಆರ್ಸಿ ಮುಂದೆ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿರುವುದನ್ನೂ ಸಂಘ ಉಲ್ಲೇಖಿಸಿದೆ.
ವಿದ್ಯುತ್ ಕ್ಷೇತ್ರವು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಆಯಕಟ್ಟಿನ ವಲಯವಾಗಿದ್ದು, ಅದರ ಯಾವುದೇ ಹಂತದಲ್ಲಿ ಖಾಸಗೀಕರಣವನ್ನು ಒಪ್ಪಲಾಗದು ಎಂದು ಕೆಪಿಆರ್ಎಸ್ ತಿಳಿಸಿದೆ. ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ವಿದ್ಯುತ್ ತಿದ್ದುಪಡಿ ಕಾಯ್ದೆ–2025 ಅನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿರುವ ಸಂಘ, ಈ ಕುರಿತು ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ಹೇರಬೇಕು ಹಾಗೂ ರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದೆ.
ಇದೇ ವೇಳೆ, ರೈತರು ಸೇರಿದಂತೆ ವಿದ್ಯುತ್ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸುವ ಕ್ರಮವನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಸಂಘ ಸರ್ಕಾರವನ್ನು ಆಗ್ರಹಿಸಿದೆ.
ಇದನ್ನೂ ನೋಡಿ :ನವ ಉದಾರವಾದಿ ಆರ್ಥಿಕತೆಯಲ್ಲಿ ನಿರುದ್ಯೋಗದ ಬಿಕ್ಕಟ್ಟು -ನಾಗರಾಜ ಶಾನಭೋಗ Janashakthi Media
