VB-GRAM G ಕರಡು ನಿಯಮಗಳು ಕಾರ್ಮಿಕ ವಿರೋಧಿ; ಮನರೇಗಾದ ಹಕ್ಕು ಆಧಾರಿತ ಸ್ವರೂಪಕ್ಕೆ ಧಕ್ಕೆ: ಡಾ. ವಿಕ್ರಮ್ ಸಿಂಗ್

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ VB-GRAM G ಯೋಜೆನೆಯ ಕರಡು ನಿಯಮಗಳು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವಂತಿದ್ದು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಯ ಹಕ್ಕು ಆಧಾರಿತ ಸ್ವರೂಪವನ್ನು ಕೊನೆಗೊಳಿಸುವ ಅಪಾಯವನ್ನು ಹೊಂದಿವೆ ಎಂದು ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘ (ಎಐಎಡಬ್ಲ್ಯುಯು)ದ ರಾಷ್ಟ್ರೀಯ ಡಾ. ವಿಕ್ರಮ್ ಸಿಂಗ್ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇಶಾದ್ಯಂತ ಗ್ರಾಮೀಣ ಹಾಗೂ ಕೃಷಿ ಕಾರ್ಮಿಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೂ ಕೇಂದ್ರ ಸರ್ಕಾರ VB-GRAM G ಯೋಜನೆಯನ್ನು ಜಾರಿಗೊಳಿಸುವ ಪ್ರಕ್ರಿಯೆಯನ್ನು ಮುಂದುವರಿಸಿದೆ ಎಂದು ಹೇಳಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವಾಲಯವು ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಅದರಲ್ಲಿ ವೇತನ ಪಾವತಿ, ನಿರುದ್ಯೋಗ ಭತ್ಯೆ, ರಾಜ್ಯಗಳಿಗೆ ಅನುದಾನ ಹಂಚಿಕೆ ಹಾಗೂ ಯೋಜನೆಯ ಮೇಲ್ವಿಚಾರಣೆಗೆ ಸಂಬಂಧಿಸಿದ ನಿಯಮಗಳನ್ನು ಸೇರಿಸಲಾಗಿದೆ. ಇದೇ ವೇಳೆ ಜುಲೈ 1ರಿಂದ ಮನರೇಗಾ ಯೋಜನೆ ಸ್ಥಗಿತಗೊಂಡು ಅದರ ಎಲ್ಲ ಕಾಮಗಾರಿಗಳು VB-GRAM G ಅಡಿಯಲ್ಲಿ ನಡೆಯಲಿವೆ ಎಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: SIR ಕರ್ನಾಟಕ | ಮೂರು ದಿನದಲ್ಲಿ 1.12 ಕೋಟಿ ಗಣತಿ ನಮೂನೆ ವಿತರಣೆ

ಕರಡು ನಿಯಮಗಳನ್ನು ಪರಿಶೀಲಿಸಿದರೆ, ಇದು ಮನರೇಗಾದಂತೆ ಬೇಡಿಕೆ ಆಧಾರಿತ ಉದ್ಯೋಗ ಖಾತರಿ ಯೋಜನೆಯಲ್ಲ ಎಂಬುದು ಸ್ಪಷ್ಟವಾಗುತ್ತದೆ. ಗ್ರಾಮೀಣ ಕಾರ್ಮಿಕರು ಕೆಲಸ ಕೇಳಿದ ಪ್ರಮಾಣದಲ್ಲಿ ಅನುದಾನ ಒದಗಿಸುವ ಯಾವುದೇ ಕಾನೂನುಬದ್ಧ ಬಾಧ್ಯತೆ ಕೇಂದ್ರ ಸರ್ಕಾರದ ಮೇಲೆ ಇಲ್ಲ. ಹೀಗಾಗಿ 125 ದಿನಗಳ ಉದ್ಯೋಗ ಖಾತರಿ ನೀಡಲಾಗುತ್ತದೆ ಎಂಬ ಸರ್ಕಾರದ ಭರವಸೆ ವಾಸ್ತವಿಕವಾಗಿಲ್ಲ ಎಂದು ಅವರು ಟೀಕಿಸಿದ್ದಾರೆ.

ರಾಜ್ಯಗಳಿಗೆ ಅನುದಾನ ಹಂಚಿಕೆಯನ್ನು 16ನೇ ಹಣಕಾಸು ಆಯೋಗದ ಮಾನದಂಡಗಳ ಆಧಾರದಲ್ಲಿ ನಿರ್ಧರಿಸುವ ಪ್ರಸ್ತಾವವೂ ಉದ್ಯೋಗ ಖಾತರಿ ಯೋಜನೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಉದ್ಯೋಗದ ಬೇಡಿಕೆಯನ್ನು ಆಧಾರವಾಗಿಸಿಕೊಳ್ಳುವ ಬದಲು ಜನಸಂಖ್ಯೆ, ತಲಾ ಆದಾಯ ಸೇರಿದಂತೆ ಇತರೆ ಮಾನದಂಡಗಳನ್ನು ಬಳಸುವುದರಿಂದ ಹೆಚ್ಚು ಕೆಲಸ ನೀಡುತ್ತಿರುವ ರಾಜ್ಯಗಳಿಗೆ ಅನ್ಯಾಯವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಇದಲ್ಲದೆ, ರಾಜ್ಯಗಳಿಗೆ ನೀಡುವ ಅನುದಾನದ ಒಂದು ಭಾಗವನ್ನು ಕಾರ್ಯಕ್ಷಮತೆಯ ಆಧಾರದ ಮೇಲೆ ನೀಡುವ ಪ್ರಸ್ತಾವವೂ ಕಾರ್ಮಿಕರ ಹಕ್ಕುಗಳಿಗಿಂತ ಆಡಳಿತಾತ್ಮಕ ಮಾನದಂಡಗಳಿಗೆ ಆದ್ಯತೆ ನೀಡುವಂತಿದೆ ಎಂದು ಅವರು ಹೇಳಿದ್ದಾರೆ.

ಕರಡು ನಿಯಮಗಳಲ್ಲಿ ರಾಷ್ಟ್ರೀಯ ಮಟ್ಟದ ನಿರ್ವಹಣಾ ಸಮಿತಿಯನ್ನು ರಚಿಸುವ ಪ್ರಸ್ತಾವವಿದ್ದು, ಇದರಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಹೆಚ್ಚಿನ ಪ್ರಾಬಲ್ಯ ನೀಡಲಾಗಿದೆ. ಯೋಜನೆಯ ವೆಚ್ಚದಲ್ಲಿ ರಾಜ್ಯಗಳು ಶೇ.40ರಷ್ಟು ಪಾಲುದಾರರಾಗಿದ್ದರೂ, ಅವರಿಗೆ ಸಮರ್ಪಕ ಪ್ರತಿನಿಧಿತ್ವ ನೀಡಿಲ್ಲ. ಕಾರ್ಮಿಕರು, ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಫಲಾನುಭವಿಗಳ ಪ್ರತಿನಿಧಿಗಳಿಗೂ ಸಮಿತಿಯಲ್ಲಿ ಅವಕಾಶ ಕಲ್ಪಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

VB-GRAM G ಅಡಿಯಲ್ಲಿ ಇ-ಕೆವೈಸಿ ಕಡ್ಡಾಯಗೊಳಿಸಿರುವುದರಿಂದ ಲಕ್ಷಾಂತರ ಕಾರ್ಮಿಕರು ಉದ್ಯೋಗದ ಹಕ್ಕಿನಿಂದ ವಂಚಿತರಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ. ತಾಂತ್ರಿಕ ಸಮಸ್ಯೆಗಳು ಮತ್ತು ಆಧಾರ್ ದೃಢೀಕರಣದ ತೊಂದರೆಗಳಿಂದ ಈಗಾಗಲೇ ಅನೇಕ ಉದ್ಯೋಗ ಚೀಟಿಗಳು ರದ್ದಾಗಿದ್ದು, ಹೊಸ ನಿಯಮಗಳು ಈ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಲಿವೆ ಎಂದು ಹೇಳಿದ್ದಾರೆ.

ಒಟ್ಟಾರೆ, VB-GRAM G ಹಕ್ಕು ಆಧಾರಿತ ಉದ್ಯೋಗ ಖಾತರಿ ಕಾನೂನಲ್ಲ; ಇದು ಕೇಂದ್ರ ಸರ್ಕಾರದ ನಿಯಂತ್ರಣ, ನಿಗದಿತ ಅನುದಾನ ಮತ್ತು ಆಡಳಿತಾತ್ಮಕ ವ್ಯವಸ್ಥೆಗೆ ಆದ್ಯತೆ ನೀಡುವ ಯೋಜನೆಯಾಗಿದೆ. ಗ್ರಾಮೀಣ ಉದ್ಯೋಗದ ಕಾನೂನುಬದ್ಧ ಹಕ್ಕು, ರಾಜ್ಯಗಳ ಸ್ವಾಯತ್ತತೆ ಹಾಗೂ ಸಾಮಾಜಿಕ ನ್ಯಾಯದ ತತ್ವಗಳಿಗೆ ಇದು ಧಕ್ಕೆ ತರುವ ಸಾಧ್ಯತೆಯಿರುವುದರಿಂದ ಈ ನಿಯಮಗಳನ್ನು ಮರುಪರಿಶೀಲಿಸಬೇಕು ಎಂದು ಡಾ. ವಿಕ್ರಮ್ ಸಿಂಗ್ ಆಗ್ರಹಿಸಿದ್ದಾರೆ.

ಇದನ್ನೂ ನೋಡಿ: “ಇರಾನ್ – ಯು.ಎಸ್. ನಡುವಿನ MoUನಲ್ಲಿ ಏನಿದೆ?” | ಎನ್‌ ಕೆ ವಸಂತರಾಜ, ಗುರುರಾಜ ದೇಸಾಯಿ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *