ನವದೆಹಲಿ: ಕೇವಲ ಮೂರು ತಿಂಗಳ ಹಿಂದೆ ಉದ್ಘಾಟಿಸಲಾದ ದೆಹಲಿ – ಡೆಹ್ರಾಡೂನ್ ಆರು ಲೇನ್ ಎಕ್ಸ್ಪ್ರೆಸ್ವೇಯಲ್ಲಿ ಈಗಲೇ ದೊಡ್ಡ ಗುಂಡಿಗಳು ಕಾಣಿಸಿಕೊಂಡಿದ್ದು, ರಸ್ತೆ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
ಸುಮಾರು ₹12,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಎಕ್ಸ್ಪ್ರೆಸ್ವೇಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14ರಂದು ಉದ್ಘಾಟಿಸಿದ್ದರು. ಈ ರಸ್ತೆ ದೆಹಲಿ ಮತ್ತು ಡೆಹ್ರಾಡೂನ್ ನಡುವಿನ ಪ್ರಯಾಣದ ಸಮಯವನ್ನು 5–6 ಗಂಟೆಗಳಿಂದ ಸುಮಾರು 2 ರಿಂದ 2.5 ಗಂಟೆಗೆ ಇಳಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಆದರೆ ಸಾಮಾಜಿಕ ಜಾಲತಾಣ X ನಲ್ಲಿ ಒಬ್ಬ ಬಳಕೆದಾರ ಹಂಚಿಕೊಂಡ ವಿಡಿಯೋದಲ್ಲಿ, ರಸ್ತೆಯ ಹಲವು ಭಾಗಗಳಲ್ಲಿ ದೊಡ್ಡ ಗುಂಡಿಗಳು ಕಾಣಿಸಿಕೊಂಡಿದ್ದು, ಅವುಗಳಿಂದಾಗಿ ತನ್ನ ಮುಂದೆ 5–6 ಅಪಘಾತಗಳು ಸಂಭವಿಸಿರುವುದನ್ನು ಕಂಡಿದ್ದೇನೆ ಎಂದು ಆರೋಪಿಸಿದ್ದಾರೆ. ಡೆಹ್ರಾಡೂನ್
ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ: ಎರಡು ದಿನಗಳಲ್ಲಿ 67.16 ಲಕ್ಷ ಗಣತಿ ನಮೂನೆಗಳ ವಿತರಣೆ
ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ, “ಈ ರಸ್ತೆ ಕೇವಲ ಕೆಲ ತಿಂಗಳ ಹಿಂದೆ ಉದ್ಘಾಟಿಸಲಾಯಿತು. ಐದು ವರ್ಷಗಳ ಕಾಲ ನಿರ್ಮಿಸಿದರೂ ಮೊದಲ ಮಳೆಗೂ ಮುನ್ನವೇ ಈ ಸ್ಥಿತಿ ಬಂದಿದೆ. ಜನರು ವೇಗವಾಗಿ ಬರುತ್ತಿರುವ ವಾಹನಗಳಿಗೆ ಎಚ್ಚರಿಕೆ ನೀಡಲು ರಸ್ತೆಯ ಮಧ್ಯದಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಇಷ್ಟು ಟೋಲ್ ಸಂಗ್ರಹಿಸುತ್ತಿದ್ದರೂ ಇಂತಹ ರಸ್ತೆಗಳನ್ನು ಗುತ್ತಿಗೆದಾರರು ಹೇಗೆ ನಿರ್ಮಿಸುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
ಭೀಕರ ಅಪಘಾತವೂ ಸಂಭವಿಸಿದೆ
ಇದೇ ಎಕ್ಸ್ಪ್ರೆಸ್ವೇಯಲ್ಲಿ ಕಳೆದ ಶುಕ್ರವಾರ ಉತ್ತರ ಪ್ರದೇಶದ ಸಹಾರನ್ಪುರ ಬಳಿ ಭೀಕರ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಎಸ್ಯುವಿ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಹಾಗೂ ಮೂವರು ಗಾಯಗೊಂಡಿದ್ದಾರೆ.
ಪ್ರಾಥಮಿಕ ತನಿಖೆ ಮತ್ತು ಸಿಸಿಟಿವಿ ದೃಶ್ಯಗಳ ಪ್ರಕಾರ, ಕಾರು ಹೊರಬರುವ ಮಾರ್ಗ ತಪ್ಪಿಸಿಕೊಂಡು ಹಿಂದಕ್ಕೆ ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಎಸ್ಯುವಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಯಿಂದ ಕಾರು ಹಲವು ಮೀಟರ್ಗಳಷ್ಟು ಎಳೆಯಲ್ಪಟ್ಟು ಬಳಿಕ ಎಸ್ಯುವಿ ಕೂಡ ಪಲ್ಟಿಯಾಗಿದೆ.
ಈ 213 ಕಿ.ಮೀ ಉದ್ದದ ನಿಯಂತ್ರಿತ ಪ್ರವೇಶದ ಈ ಎಕ್ಸ್ಪ್ರೆಸ್ವೇ ಉತ್ತರ ಪ್ರದೇಶದ ಬಾಗ್ಪತ್, ಬಾರೌಟ್, ಶಾಮ್ಲಿ ಮತ್ತು ಸಹಾರನ್ಪುರ ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ಇದು ದೆಹಲಿ–ಮುಂಬೈ, ದೆಹಲಿ–ಕಟ್ರಾ ಮತ್ತು ದೆಹಲಿ–ಮೀರತ್ ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಸಹ ಸಂಯೋಜಿತವಾಗಿದೆ.
ಇದನ್ನೂ ನೋಡಿ: ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ‘ವಿಐಪಿ’! ಪಾಸ್ಪೋರ್ಟ್ ಕಥೆ ಏನು? ಎಸ್ಐಆರ್ ಸುತ್ತ ಪ್ರಶ್ನೆಗಳ ಹುತ್ತ |
