ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಅಭಿಯಾನ ಎರಡನೇ ದಿನಕ್ಕೆ ವೇಗ ಪಡೆದುಕೊಂಡಿದ್ದು, ಒಟ್ಟು 67.16 ಲಕ್ಷಕ್ಕೂ ಅಧಿಕ ಗಣತಿ (ಎನ್ಯುಮರೇಷನ್) ನಮೂನೆಗಳನ್ನು ಮತದಾರರಿಗೆ ವಿತರಿಸಲಾಗಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ನೀಡಿರುವ ಅಂಕಿಅಂಶಗಳ ಪ್ರಕಾರ, ಮೊದಲ ದಿನ 12,48,385 ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಇದು ರಾಜ್ಯದ ಒಟ್ಟು ಮತದಾರರಲ್ಲಿ ಶೇ.2.25ರಷ್ಟಾಗಿತ್ತು. ಎರಡನೇ ದಿನ ಒಂದೇ ದಿನದಲ್ಲಿ 54,68,607 ನಮೂನೆಗಳನ್ನು ವಿತರಿಸಲಾಗಿದ್ದು, ಒಟ್ಟು ವಿತರಣೆಯ ಸಂಖ್ಯೆ 67,16,992ಕ್ಕೆ ಏರಿಕೆಯಾಗಿದೆ. ಇದು ರಾಜ್ಯದ ಒಟ್ಟು 5.54 ಕೋಟಿ ಮತದಾರರಲ್ಲಿ ಶೇ.12ಕ್ಕೂ ಹೆಚ್ಚು ಮಂದಿಯನ್ನು ತಲುಪಿದಂತಾಗಿದೆ.
ಎರಡನೇ ದಿನ ಸಂಜೆ 6 ಗಂಟೆಯ ವೇಳೆಗೆ ಕೇವಲ ಆ ದಿನದ ವಿತರಣೆಯೇ ರಾಜ್ಯದ ಒಟ್ಟು ಮತದಾರರಲ್ಲಿ ಶೇ.9.87 ರಷ್ಟನ್ನು ತಲುಪಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ-ಮನೆಗೆ ತೆರಳಿ ಮತದಾರರಿಗೆ ನಮೂನೆಗಳನ್ನು ವಿತರಿಸುತ್ತಿದ್ದು, ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತೆಯರು ಸಹ ಈ ಕಾರ್ಯದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಬೀದಿಬದಿ ವ್ಯಾಪಾರಿಗಳ ಮೇಲಿನ ಧಾಳಿ ನಿಲ್ಲದಿದ್ದಲ್ಲಿ ಹೋರಾಟ ತೀವ್ರಗೊಳ್ಳಲಿದೆ – ಸಿಐಟಿಯು
ಇಲ್ಲಿಯವರೆಗೆ 2,38,453 ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, 26,213 ಮತದಾರರು ಆನ್‌ಲೈನ್ ಮೂಲಕ ನಮೂನೆಗಳನ್ನು ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಪರಿಶೀಲನಾ ಕಾರ್ಯದ ವೇಳೆ ಕೆಲವು ಮತದಾರರ ವಿವರಗಳಲ್ಲೂ ವ್ಯತ್ಯಾಸಗಳು ಪತ್ತೆಯಾಗಿವೆ. ಎರಡನೇ ದಿನದವರೆಗೆ 1,383 ಮೃತರು, 816 ಶಾಶ್ವತವಾಗಿ ಸ್ಥಳಾಂತರಗೊಂಡವರು, 327 ಈಗಾಗಲೇ ಬೇರೆಡೆ ನೋಂದಾಯಿತರಾಗಿರುವವರು ಹಾಗೂ ಇತರ ವಿಭಾಗಗಳಲ್ಲಿ ಕೆಲ ಪ್ರಕರಣಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ.
ಜೂನ್ 30ರಂದು ಆರಂಭವಾದ ಈ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನ ಜುಲೈ 29ರವರೆಗೆ ನಡೆಯಲಿದ್ದು, ಮನೆ-ಮನೆ ಸಮೀಕ್ಷೆಯ ಮೂಲಕ ಮತದಾರರ ಮಾಹಿತಿಯನ್ನು ಪರಿಶೀಲಿಸಿ ಪರಿಷ್ಕರಿಸಲಾಗುತ್ತಿದೆ. ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 5ರಂದು ಪ್ರಕಟಿಸುವ ನಿರೀಕ್ಷೆಯಿದೆ.
ಇದನ್ನೂ ನೋಡಿ: ‘ಅರ್ಬುದನ ಡೈರಿ’ | ಕ್ಯಾನ್ಸರ್ ಪೀಡಿತರಿಗೆ ವಿಶ್ವಾಸ ತುಂಬುವ ಅನುಭವ ಕಥನ Janashakthi Media
