ಹಾಸನ ಸಂಸದ ಶ್ರೇಯಸ್ ಪಟೇಲ್ ಆಯ್ಕೆ ಪ್ರಶ್ನೆ: ಗೈರಾದ ಅಧಿಕಾರಿಗೆ ವಾರೆಂಟ್, ವಿಚಾರಣೆ ಜುಲೈ 8ಕ್ಕೆ

ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಚುನಾವಣಾ ತಕರಾರು ಅರ್ಜಿಯ ವಿಚಾರಣೆಯಲ್ಲಿ ಗೈರಾಗಿದ್ದ ಕಂದಾಯ ಅಧಿಕಾರಿಯೊಬ್ಬರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಸಹಿತ ವಾರೆಂಟ್ ಜಾರಿ ಮಾಡಿದೆ. ಜೊತೆಗೆ ಇನ್ನಿಬ್ಬರು ಸಾಕ್ಷಿದಾರರಿಗೆ ಸಮನ್ಸ್ ನೀಡಲಾಗಿದೆ.

ವಕೀಲ ದೇವರಾಜೇಗೌಡ ಅವರ ಪುತ್ರ ಡಿ. ಚರಣ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕಳೆದ ಲೋಕಸಭಾ ಚುನಾವಣೆಯ ವೇಳೆ ಹಾಸನ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಬೆಂಗಳೂರು ಕೆ.ಆರ್. ಪುರ ಹೋಬಳಿಯ ದೊಡ್ಡನೆಕ್ಕುಂದಿಯ ಸಹಾಯಕ ಕಂದಾಯಾಧಿಕಾರಿಗೆ ಸಾಕ್ಷ್ಯ ನೀಡಲು ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿತ್ತು.

ಇದನ್ನೂ ಓದಿ: ಎನ್‌ಕೌಂಟರ್ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ನಿರಾಕರಣೆ

ಆದರೆ, ಸಮನ್ಸ್ ಜಾರಿಯಾದರೂ ಅವರು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ, ಪೀಠವು ಜಾಮೀನು ಸಹಿತ ವಾರೆಂಟ್ ಜಾರಿಗೊಳಿಸಿ ಆದೇಶಿಸಿದೆ.

ಜುಲೈ 8ಕ್ಕೆ ಹಾಜರಾಗಲು ಆದೇಶ

ನ್ಯಾಯಾಲಯವು ಸಂಬಂಧಿತ ಅಧಿಕಾರಿಯು ಜುಲೈ 8ರಂದು ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಿದ್ದು, ₹10,000 ವೈಯಕ್ತಿಕ ಬಾಂಡ್ ಸಲ್ಲಿಸಲು ನಿರ್ದೇಶಿಸಿದೆ. ಮುಂದಿನ ವಿಚಾರಣೆಯನ್ನು ಇದೇ ದಿನಾಂಕಕ್ಕೆ ಮುಂದೂಡಲಾಗಿದೆ.

ಇತರ ಸಾಕ್ಷಿಗಳಿಗೆ ಸಮನ್ಸ್

ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರದ ಸಬ್‌ ರಿಜಿಸ್ಟ್ರಾರ್, ಪುರಸಭೆಯ ಮುಖ್ಯಾಧಿಕಾರಿ ಹಾಗೂ ಖಾಸಗಿ ಸುದ್ದಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕರಿಗೂ ಸಮನ್ಸ್ ಜಾರಿಗೊಳಿಸಲಾಗಿದೆ. ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ಅರ್ಜಿದಾರರ ಆರೋಪಗಳು

ಅರ್ಜಿದಾರರ ಪ್ರಕಾರ, ಶ್ರೇಯಸ್ ಪಟೇಲ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ನಾಮಪತ್ರದಲ್ಲಿ ಅಪೂರ್ಣ ಮಾಹಿತಿಯನ್ನು ನೀಡಿದ್ದು, ಕಳೆದ ಐದು ವರ್ಷಗಳ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸಿಲ್ಲ ಎಂದು ಆರೋಪಿಸಲಾಗಿದೆ.

ಜೊತೆಗೆ ಚುನಾವಣಾ ವೆಚ್ಚದ ವಿವರಗಳಲ್ಲಿ ತಪ್ಪು ಮಾಹಿತಿ ನೀಡಿದ್ದು, ನಿಗದಿತ ಮಿತಿಯನ್ನು ಮೀರಿ ಖರ್ಚು ಮಾಡಿದ್ದಾರೆ ಎಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಆಯ್ಕೆಯನ್ನು ರದ್ದುಪಡಿಸಲು ನ್ಯಾಯಾಲಯವನ್ನು ಕೋರಿ ಅರ್ಜಿ ಸಲ್ಲಿಸಲಾಗಿದೆ.

ಇದನ್ನೂ ನೋಡಿ: “ಇರಾನ್ – ಯು.ಎಸ್. ನಡುವಿನ MoUನಲ್ಲಿ ಏನಿದೆ?” | ಎನ್‌ ಕೆ ವಸಂತರಾಜ, ಗುರುರಾಜ ದೇಸಾಯಿ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *