ಮಂಗಳೂರು: ಮಂಗಳೂರು ನಗರದ ಬೀದಿಬದಿ ವ್ಯಾಪಾರಿಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳು ಮತ್ತು ಬೀದಿ ವ್ಯಾಪಾರಿಗಳ ಸಭೆಯು ರಾಜಕೀಯ ಪ್ರೇರಿತ ಎಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಆರೋಪಿಸಿದೆ.
ಶಾಸಕರು ಬಹುಸಂಖ್ಯಾತ ಸದಸ್ಯರು ಇರುವ ಬೀದಿಬದಿ ವ್ಯಾಪಾರಸ್ಥರ ಸಂಘಟನೆಯ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸದೆ ಕೇವಲ ಒಂದು ವಿಭಾಗದ ಬೀದಿಬದಿ ವ್ಯಾಪಾರಿಗಳನ್ನು ಇಟ್ಟು ಸಭೆ ನಡೆಸಿರುವುದಲ್ಲದೆ ಬೀದಿ ವ್ಯಾಪಾರಿಗಳ ಹಿತಾಸಕ್ತಿಯನ್ನು ಕಡೆಗಣಿಸಿ ಬೀದಿಬದಿ ವ್ಯಾಪಾರದ ಕಾನೂನಿನ ವಿರುದ್ಧವಾಗಿ ತೀರ್ಮಾನ ಕೈಗೊಂಡಿರುವುದು ಆಶ್ಚರ್ಯ ಉಂಟು ಮಾಡಿದೆ.
ಇದನ್ನೂ ಓದಿ: ವಾಣಿಜ್ಯ ಎಲ್ಪಿಜಿ ನಿರ್ಬಂಧ ಸಂಪೂರ್ಣ ತೆರವು: ಹೋಟೆಲ್ಗಳಿಗೆ ಉಸಿರಾಟ, ಗ್ರಾಹಕರಿಗೆ ಸಮಾಧಾನ
ಪಾಲಿಕೆ ಆಯುಕ್ತರ ಆದೇಶ ಕಾನೂನಿನ ಸ್ಪಷ್ಟ ಉಲ್ಲಂಘನೆ:
ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾನೂನಾತ್ಮಕ ಅಂಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾದ ಆಯುಕ್ತರು ಶಾಸಕರ ಒತ್ತಡಕ್ಕೆ ಮಣಿದು ಬೀದಿಬದಿ ವ್ಯಾಪಾರಸ್ಥರ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾಯಿದೆ 2014ರ ಉಲ್ಲಂಘಿಸಿ ಭಾನುವಾರದ ಬೀದಿ ವ್ಯಾಪಾರವನ್ನು ನಿಷೇಧಿಸಲು ಆದೇಶ ನೀಡಿದ್ದಾರೆ.
ಭಾನುವಾರ ರಜಾದಿನದ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ಆಯುಕ್ತರು ನೀಡಿದ ನಿಷೇಧ ಆದೇಶವನ್ನು ವಾಪಾಸ್ ಪಡೆಯಬೇಕು ಈ ಬಗ್ಗೆ ಪಾಲಿಕೆ ಆಡಳಿತಧಿಕಾರಿಯಾದ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಬೇಕು ಎಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಕಾರ್ಯಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ ಮತ್ತು ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: ಭೂಮಿ ಹೋಯ್ತು, ಉದ್ಯೋಗ ಸಿಗಲಿಲ್ಲ! 13 ವರ್ಷ ಕಳೆದರೂ ಸಿಗದ ನ್ಯಾಯ! Janashakthi Media
