ಬೆಂಗಳೂರು: ಪ್ರಾಣಿಹಿಂಸೆ ಆರೋಪ ಎದುರಿಸುತ್ತಿರುವ ಕೆ.ಇ. ರಮೇಶ್ ಅವರಿಗೆ ರಕ್ಷಿಸಲ್ಪಟ್ಟ ಒಂಬತ್ತು ನಾಯಿಗಳನ್ನು ಹಿಂತಿರುಗಿಸಲು ನೀಡಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಆರು ಗೋಲ್ಡನ್ ರಿಟ್ರೀವರ್ ಮತ್ತು ಮೂರು ಶಿತ್ಝು ಸೇರಿ ಒಂಬತ್ತು ನಾಯಿಗಳನ್ನು ಮೂಲ ಮಾಲೀಕನಿಗೆ ಹಿಂತಿರುಗಿಸಲು ನೀಡಿದ್ದ ಆದೇಶವನ್ನು ಎಂ. ನಾಗಪ್ರಸನ್ನ ಅವರ ನೇತೃತ್ವದ ಪೀಠ ಜೂನ್ 24ರಂದು ರದ್ದುಪಡಿಸಿದೆ. ಈ ಸಂಬಂಧ PETA ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸಿತು.
ಪೀಣ್ಯಾ ಪೊಲೀಸರು ಈ ವರ್ಷ ಮಾರ್ಚ್‌ನಲ್ಲಿ ರಮೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ಭಾರಿ ಮಳೆ, ಆಕಸ್ಮಿಕ ಪ್ರವಾಹ ಎಚ್ಚರಿಕೆ – ಅಸ್ಸಾಂ ಹೈ ಅಲರ್ಟ್
“ಮ್ಯಾಜಿಸ್ಟ್ರೇಟ್ ಆದೇಶ ನ್ಯಾಯಾಲಯದ ಮನಸ್ಸನ್ನೇ ಬೆಚ್ಚಿಬೀಳಿಸುವಂತಿದೆ,” ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು. ನ್ಯಾಯಾಲಯಕ್ಕೆ ಸಲ್ಲಿಸಲಾದ ವಿಡಿಯೋ ಹಾಗೂ ಛಾಯಾಚಿತ್ರಗಳಲ್ಲಿ ನಾಯಿಗಳನ್ನು ನಿರಂತರವಾಗಿ ಹೊಡೆದು ಹಿಂಸಿಸಿರುವುದು ಹಾಗೂ ಅವುಗಳನ್ನು ‘ಸ್ವಂತ ವಸ್ತುಗಳಂತೆ’ ವರ್ತಿಸಿಕೊಂಡಿರುವುದು ಕಾಣುತ್ತದೆ ಎಂದು ಅವರು ಹೇಳಿದರು.
ನಾಯಿಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ತನಿಖೆ ಇನ್ನೂ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಅವುಗಳನ್ನು ಮಾಲೀಕನಿಗೆ ಹಿಂತಿರುಗಿಸುವ ಆದೇಶ “ಅಸಂಬದ್ಧ” ಎಂದು ನ್ಯಾಯಾಲಯ ಕಟುವಾಗಿ ಟೀಕಿಸಿದೆ.
“ಪ್ರಾಣಿಗಳಿಗೆ ಗೌರವ, ರಕ್ಷಣೆ ಹಕ್ಕು ಇದೆ” – ಹೈಕೋರ್ಟ್
ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯ, ಪ್ರಾಣಿಗಳನ್ನು ಹಿಂಸೆಯಿಂದ ರಕ್ಷಿಸುವುದು ಕಾನೂನು ಮತ್ತು ನೈತಿಕ ಕರ್ತವ್ಯ ಎಂದು ಒತ್ತಿ ಹೇಳಿದೆ.
ಪ್ರಾಣಿಗಳು ನೋವು ಅನುಭವಿಸುವ ಜೀವಿಗಳಾಗಿದ್ದು, ಕೇವಲ ಮಾನವರ ಬಳಕೆಗೆ ಇರುವ ಆಸ್ತಿ ಎಂಬ ದೃಷ್ಟಿಕೋಣವನ್ನು ಕಾನೂನು ಈಗ ತಿರಸ್ಕರಿಸಿದೆ ಎಂದು ನ್ಯಾಯಮೂರ್ತಿಗಳು ಹೇಳಿದರು.
“ಸಂಸ್ಕೃತ ಸಮಾಜದ ಅಳತೆ ಮಾನವರೊಂದಿಗೆ ಮಾತ್ರವಲ್ಲ, ಮಾತಾಡಲಾರದ ಜೀವಿಗಳಿಗೂ ನೀಡುವ ನ್ಯಾಯ ಮತ್ತು ಕರುಣೆಯಿಂದ ನಿರ್ಧಾರವಾಗುತ್ತದೆ,” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಾಣಿಹಿಂಸೆ ಕೇವಲ ಒಂದು ಜೀವಿಗೆ ಆಗುವ ಹಾನಿಯಷ್ಟೇ ಅಲ್ಲ, ಅದು ಮಾನವ ಸಮೂಹದ ಮನಸ್ಸಿನ ಮೇಲಿನ ಕಳಂಕವೂ ಆಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
“ನ್ಯಾಯದ ವಿಸ್ತಾರವು ಸ್ವತಃ ನ್ಯಾಯಾಲಯದ ಬಾಗಿಲು ತಟ್ಟಲು ಸಾಧ್ಯವಿಲ್ಲದ ಜೀವಿಗಳಿಗೂ ತಲುಪಬೇಕು,” ಎಂದು ನ್ಯಾಯಮೂರ್ತಿಗಳು ಹೇಳಿದರು.
ಇದನ್ನೂ ನೋಡಿ: ದಲಿತ ಪ್ಯಾಂಥರ್ಸ್ ಮುಂದೆ ಆರೆಸ್ಸೆಸ್ ಮಂಡಿಯೂರಿದ್ದು ಹೇಗೆ? : ಕಾರವಾನ್ Janashakthi Media
