ಬೆಂಗಳೂರು: ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಟಾಟಾ ಪವರ್ಗೆ ಪರವಾನಗಿ ನೀಡುವ ಪ್ರಸ್ತಾವನೆಯನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ವತಿಯಿಂದ ಜೂನ್ 21 ರಂದು ಬೆಂಗಳೂರಿನ ಸಚಿವಾಲಯ ಕ್ಲಬ್ನಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಯಿತು. ಟಾಟಾ
ಸಮಾವೇಶದಲ್ಲಿ ಮಾತನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್, ಕೇಂದ್ರ ಸರ್ಕಾರದ ವಿದ್ಯುತ್ ಕ್ಷೇತ್ರದ ಖಾಸಗೀಕರಣ ನೀತಿ ಮತ್ತು ವಿದ್ಯುತ್ ತಿದ್ದುಪಡಿ ಮಸೂದೆಗಳ ಮೂಲಕ ಸಾರ್ವಜನಿಕ ಸ್ವಾಮ್ಯದ ವಿದ್ಯುತ್ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
“ಖಾಸಗಿ ಕಂಪನಿಗಳ ಪ್ರವೇಶದಿಂದ ಸರ್ಕಾರಿ ಸ್ವಾಮ್ಯದ ಎಸ್ಕಾಂಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿವೆ. ಈ ಖಾಸಗೀಕರಣದ ನೀತಿಯು ಕೆಲವೇ ಕಾರ್ಪೊರೇಟ್ ಉದ್ಯಮಿಗಳಿಗೆ ಲಾಭ ಮಾಡಿಕೊಡಲಿದೆಯೇ ಹೊರತು, ಸಾಮಾನ್ಯ ಗ್ರಾಹಕರು, ರೈತರು ಮತ್ತು ವಿದ್ಯುತ್ ಇಲಾಖೆಯ ನೌಕರರ ಹಿತಾಸಕ್ತಿಗೆ ಮಾರಕವಾಗಲಿದೆ. ವಿದ್ಯುತ್ ಕ್ಷೇತ್ರವನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದಲೇ ನಿರ್ವಹಿಸಬೇಕು” ಎಂದು ಅವರು ಹೇಳಿದರು. ಟಾಟಾ
ಇದನ್ನೂ ಓದಿ: ಪರಿಸರ ಸಂರಕ್ಷಣೆಯ ಜಾಗೃತಿ ಬಲಗೊಂಡರೆ ಮಾತ್ರ ಸ್ವಚ್ಛ ಪರಿಸರ ನಿರ್ಮಾಣಗೊಳ್ಳಲು ಸಾಧ್ಯ – ಸಿ.ಅರ್ಪಿತಾ
ಅಖಿಲ ಕರ್ನಾಟಕ ವಿದ್ಯುಚ್ಛಕ್ತಿ ನೌಕರರ ಫೆಡರೇಷನ್ನ ಉಪ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸಮೀಉಲ್ಲಾ ಮಾತನಾಡಿ, ದೇಶದ ಸಾರ್ವಜನಿಕ ಆಸ್ತಿಗಳನ್ನು ಖಾಸಗೀಕರಣಗೊಳಿಸುವ ನೀತಿಯನ್ನು ತೀವ್ರವಾಗಿ ಟೀಕಿಸಿದರು. ಟಾಟಾ
“2012-13ರಲ್ಲಿ ದೂರದರ್ಶನ ವಾಹಿನಿಗಳಲ್ಲಿ ‘ಯೇ ದೇಶ್ ಬೇಚ್ ರಹಾ ಹೈ, ಮೈಂ ಕೈಸೆ ಚುಪ್ ರಹೂಂ’ ಎಂಬ ಘೋಷಣೆ ಪದೇ ಪದೇ ಕೇಳಿಬರುತ್ತಿತ್ತು. ಆದರೆ ಇಂದು ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ದೇಶದಲ್ಲಿ ಮಾರಾಟ ಮಾಡಲು ಉಳಿದಿರುವ ಸಾರ್ವಜನಿಕ ಆಸ್ತಿಗಳೇ ಕಡಿಮೆಯಾಗಿವೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ” ಎಂದು ಅವರು ಹೇಳಿದರು.
ಖಾಸಗಿ ಕಂಪನಿಗಳ ಪ್ರವೇಶದಿಂದ ಕ್ರಾಸ್ ಸಬ್ಸಿಡಿ ವ್ಯವಸ್ಥೆ ದುರ್ಬಲಗೊಂಡು ರೈತರು, ಬಡವರು, ಗೃಹ ಬಳಕೆದಾರರು ಮತ್ತು ಸಣ್ಣ ಕೈಗಾರಿಕೆಗಳ ಮೇಲೆ ಹೆಚ್ಚಿನ ವಿದ್ಯುತ್ ದರದ ಹೊರೆ ಬೀಳಲಿದೆ. ಕೃಷಿ ಪಂಪ್ಸೆಟ್ಗಳಿಗೆ ನೀಡಲಾಗುತ್ತಿರುವ ಸಬ್ಸಿಡಿ ಹಾಗೂ ಗೃಹ ಜ್ಯೋತಿ ಯೋಜನೆಗಳಂತಹ ಜನಪರ ಯೋಜನೆಗಳು ಭವಿಷ್ಯದಲ್ಲಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಸಮಾವೇಶದ ಅಧ್ಯಕ್ಷತೆಯನ್ನು ಸಿಪಿಐ(ಎಂ) ಕಾರ್ಯದರ್ಶಿ ಮಂಡಳಿ ಸದಸ್ಯ ಮೀನಾಕ್ಷಿ ಸುಂದರಂ ವಹಿಸಿದ್ದರು. ವೇದಿಕೆಯ ಮೇಲೆ, ಸಿಪಿಐ ರಾಜ್ಯ ನಾಯಕ ಬಿ. ಅಮ್ಜದ್, ಸಿಪಿಐಎಂಎಲ್ ನಾಯಕಿ ಲೇಖಾ, ಎಸ್ಯುಸಿಐ ರಾಜ್ಯ ನಾಯಕ ಜ್ಞಾನಮೂರ್ತಿ, ಎಎಪಿ ರಾಜ್ಯ ನಾಯಕ ಸೀತಾರಾಮ್ ಗುಂಡಪ್ಪ, ಕೆಆರ್ಎಸ್ ರಾಜ್ಯ ನಾಯಕ ಅಮಿತ್, ಜೆಡಿಯು ಮುಖಂಡ ಶಿವರಾಮು, ಬೆಸ್ಕಾಂ ಗುತ್ತಿಗೆದಾರರ ಸಂಘದ ಶಿವರಾಜ ಇದ್ದರು. ಸಿಪಿಐಎಂ ಬೆಂಗಳೂರು ಉತ್ತರದ ಮುಖಂಡರಾದ ಗೌರಮ್ಮ ಕಾರ್ಯಕ್ರಮ ನಿರ್ವಹಿಸಿದರೆ, ದಕ್ಷಿಣ ಜಿಲ್ಲೆಯ ಮುಖಂಡರಾದ ಕೆ.ಎಸ್ ಲಕ್ಷ್ಮಿ ವಂದಿಸಿದರು. ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಸಂಘಟನೆಗಳ ಮುಖಂಡರು ಹಾಜರಿದ್ದರು.

ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳು ಈ ರೀತಿ ಇವೆ.
1. ರಾಜ್ಯದ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸುವ ಎಲ್ಲ ಪ್ರಯತ್ನಗಳನ್ನು ತಕ್ಷಣ ಕೈಬಿಡಬೇಕು.
2. ದಿ ಟಾಟಾ ಪವರ್ ಕಂಪನಿಗೆ ಕರ್ನಾಟಕದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಗಿ ನೀಡುವ ಅರ್ಜಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ತಿರಸ್ಕರಿಸಬೇಕು.
3. ವಿದ್ಯುತ್ (ತಿದ್ದುಪಡಿ) ಮಸೂದೆ–2025 ಸೇರಿದಂತೆ ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ದಾರಿ ಮಾಡಿಕೊಡುವ ಎಲ್ಲಾ ತಿದ್ದುಪಡಿಗಳನ್ನು ಹಿಂಪಡೆಯಬೇಕು.
4. ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಗೆಸ್ಕಾಂ, ಚೆಸ್ಕಾಂ ಸೇರಿದಂತೆ ಸಾರ್ವಜನಿಕ ಸ್ವಾಮ್ಯದ ವಿದ್ಯುತ್ ವಿತರಣಾ ಸಂಸ್ಥೆಗಳನ್ನು ಬಲಪಡಿಸಬೇಕು.
5. ಕೃಷಿ ಪಂಪ್ಸೆಟ್ಗಳಿಗೆ ನೀಡಲಾಗುತ್ತಿರುವ ಉಚಿತ ಹಾಗೂ ಸಬ್ಸಿಡಿ ವಿದ್ಯುತ್ ಯೋಜನೆಗಳನ್ನು ಮುಂದುವರಿಸಬೇಕು.
6. ಗೃಹಜ್ಯೋತಿ ಸೇರಿದಂತೆ ಜನಪರ ವಿದ್ಯುತ್ ಯೋಜನೆಗಳಿಗೆ ಯಾವುದೇ ಧಕ್ಕೆ ಉಂಟಾಗದಂತೆ ಕಾನೂನುಬದ್ಧ ರಕ್ಷಣೆ ಒದಗಿಸಬೇಕು.
7. ವಿದ್ಯುತ್ ದರ ಏರಿಕೆಯನ್ನು ತಡೆಯಬೇಕು ಹಾಗೂ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆ ಖಚಿತಪಡಿಸಬೇಕು.
8. ಸ್ಮಾರ್ಟ್ ಮೀಟರ್, ಪ್ರೀ-ಪೇಯ್ಡ್ ಮೀಟರ್ಗಳ ಹೆಸರಿನಲ್ಲಿ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹಾಕುವ ಕ್ರಮಗಳನ್ನು ಕೈಬಿಡಬೇಕು.
9. ಕೃಷಿ, ಗೃಹ ಬಳಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡಲಾಗುತ್ತಿರುವ ಕ್ರಾಸ್ ಸಬ್ಸಿಡಿ ವ್ಯವಸ್ಥೆಯನ್ನು ಮುಂದುವರಿಸಬೇಕು.
10. ವಿದ್ಯುತ್ ಕ್ಷೇತ್ರದಲ್ಲಿನ ಖಾಯಂ ಉದ್ಯೋಗಗಳನ್ನು ರಕ್ಷಿಸಬೇಕು; ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿಯನ್ನು ಕಡಿಮೆ ಮಾಡಿ ಉದ್ಯೋಗ ಭದ್ರತೆ ಕಲ್ಪಿಸಬೇಕು.
11. ಸಾರ್ವಜನಿಕ ಹಣದಿಂದ ನಿರ್ಮಿಸಲಾದ ವಿದ್ಯುತ್ ಮೂಲಸೌಕರ್ಯಗಳನ್ನು ಖಾಸಗಿ ಕಂಪನಿಗಳ ಲಾಭಕ್ಕಾಗಿ ಬಳಸಲು ಅವಕಾಶ ನೀಡಬಾರದು.
12. ವಿದ್ಯುತ್ ಕ್ಷೇತ್ರದಲ್ಲಿ ರಾಜ್ಯಗಳ ಹಕ್ಕು ಮತ್ತು ಅಧಿಕಾರಗಳನ್ನು ಕಾಪಾಡಬೇಕು; ಕೇಂದ್ರದ ಅತಿಯಾದ ಹಸ್ತಕ್ಷೇಪವನ್ನು ತಡೆಯಬೇಕು.
13. ರೈತರು, ಬಡವರು, ಮಧ್ಯಮ ವರ್ಗ ಹಾಗೂ ಸಣ್ಣ ಕೈಗಾರಿಕೆಗಳ ಹಿತಾಸಕ್ತಿಯನ್ನು ರಕ್ಷಿಸುವ ಜನಪರ ವಿದ್ಯುತ್ ನೀತಿಯನ್ನು ಜಾರಿಗೊಳಿಸಬೇಕು.
14. ವಿದ್ಯುತ್ ಕ್ಷೇತ್ರದ ಯಾವುದೇ ಮಹತ್ವದ ನೀತಿ ಬದಲಾವಣೆಗೂ ಮುನ್ನ ಜನಪ್ರತಿನಿಧಿಗಳು, ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ಗ್ರಾಹಕರೊಂದಿಗೆ ಸಮಾಲೋಚನೆ ನಡೆಸಬೇಕು.
15. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಬದಲು ಸಾರ್ವಜನಿಕ ಹೂಡಿಕೆ ಹೆಚ್ಚಿಸಿ ವಿದ್ಯುತ್ ಸೇವೆಯ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸಬೇಕು.
ಇದನ್ನೂ ನೋಡಿ: ಮಕ್ಕಳ ಕೈಯಲ್ಲಿ ಪುಸ್ತಕ ಇರಬೇಕೇ ಹೊರತು ಕೆಲಸದ ಉಪಕರಣಗಳಲ್ಲ Janashakthi Media
