ಸಾಂಸ್ಕೃತಿಕ ಸಂಸ್ಥೆಗಳು ಆದ್ಯತೆ ಮತ್ತು ಬಾಧ್ಯತೆಗಳನ್ನು ಅರಿತಿರುವುದು ಆರೋಗ್ಯಕರ
ಕನ್ನಡದ ಸಾಂಸ್ಕೃತಿಕ ಸಂಸ್ಥೆಗಳು ಸ್ವಾಯತ್ತವಾಗುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಪ್ರಯತ್ನಿಸದಿದ್ದರೆ, ಬಹುಶಃ ಇನ್ನು ಕೆಲವೇ ವರ್ಷಗಳಲ್ಲಿ ಎಲ್ಲ ಪ್ರಾಧಿಕಾರ, ಅಕಾಡೆಮಿಗಳೂ ಸರ್ಕಾರಿ ಇಲಾಖೆಗಳಾಗಿಬಿಡುತ್ತವೆ. ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳಾಗಿ ಆಳುವ ಪಕ್ಷಗಳ ಅನುದಾನದಿಂದಲೇ ನಿರ್ವಹಿಸಲ್ಪಡುವ ಯಾವುದೇ ಸಂಸ್ಥೆಯಾದರೂ ಜನರ ಕಡೆಗೆ ನೋಡುವುದಕ್ಕಿಂತಲೂ ಹೆಚ್ಚು ಅಧಿಕಾರ ಕೇಂದ್ರಗಳತ್ತ ಗಮನಹರಿಸುತ್ತವೆ. ಸಾಂಸ್ಥಿಕ ಮುಖ್ಯಸ್ಥರನ್ನು, ಸಮಿತಿಗಳ ಸದಸ್ಯರನ್ನು ನೇಮಕ ಮಾಡುವ ಪ್ರಾಥಮಿಕ ಪ್ರಕ್ರಿಯೆಯಿಂದಲೇ ಆರಂಭವಾಗುವ ಈ ಸಮಸ್ಯೆ ಕಾಲಕ್ರಮೇಣ ಕಾರ್ಯವೈಖರಿಯನ್ನೂ ಪ್ರಭಾವಿಸುವ ಮೂಲಕ ‘ಸಾಂಸ್ಕೃತಿಕ ಅಧಿಕಾರಶಾಹಿ’ ಯ (Cultural Beauracracy) ಉಗಮಕ್ಕೆ ಕಾರಣವಾಗುತ್ತದೆ. ಸಾಹಿತ್ಯ
– ನಾ ದಿವಾಕರ
ಒಂದು ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಬೇರುಗಳು ಸಡಿಲವಾಗುತ್ತಿದ್ದಂತೆಲ್ಲಾ ಈ ರೀತಿಯ ವ್ಯತ್ಯಯಗಳೂ ಕ್ಲಿಷ್ಟವಾಗುತ್ತಾ ಹೋಗುತ್ತವೆ. ಸಮಾಜದ ಅಗತ್ಯತೆಗಳಿಗೆ, ತಳಮಟ್ಟದ ಸಾಮಾಜಿಕ ಅವಶ್ಯಕತೆಗಳಿಗೆ, ಸಾಮಾನ್ಯ ಜನರ ಅಭಿವ್ಯಕ್ತಿಗಳಿಗೆ ಸ್ಪಂದಿಸಬೇಕಾದ ಸಂಸ್ಥೆಗಳು ಸಾಂಸ್ಥಿಕ ಮತ್ತು ವೈಯುಕ್ತಿಕ ಅಸ್ತಿತ್ವಗಳ ಗೋಜಲಿಗೆ ಸಿಲುಕಿ, ಆಡಳಿತಾರೂಢ ಪಕ್ಷಗಳ ಆಜ್ಞಾಪಾಲಕ ಸ್ಥಾವರಗಳಾಗಿಬಿಡುತ್ತವೆ. ಮೇಲ್ನೋಟಕ್ಕೆ ಇದು ಗೋಚರಿಸದಿದ್ದರೂ, ಆಯೋಜಿತ ಕಾರ್ಯಕ್ರಮಗಳಿಗೆ ಅನುದಾನಗಳನ್ನು ಮಂಜೂರು ಮಾಡುವ ಪ್ರಕ್ರಿಯೆಯಲ್ಲಿ ಈ ಬೌದ್ಧಿಕ ಮೂಗುದಾರಗಳನ್ನು ಗುರುತಿಸಬಹುದು. ಪ್ರಸ್ತುತ ರಾಜಕೀಯ ವಾತಾವರಣದಲ್ಲಿ (Political Ecosystem) ಜಾತಿ ಸಮೀಕರಣಗಳೂ ಸಹ ಈ ಸಾಂಸ್ಥಿಕ ಕಾರ್ಯನಿರ್ವಹಣೆ, ಆದ್ಯತೆ, ಆಯ್ಕೆಗಳಲ್ಲಿ ನುಸುಳುವುದನ್ನು ಕಾಣುತ್ತಲೇ ಬಂದಿದ್ದೇವೆ.
ಸಾಂಸ್ಥಿಕ ಸಮಸ್ಯೆ-ಸವಾಲುಗಳು
ವರ್ತಮಾನದ ಸಾಮಾಜಿಕ-ಸಾಂಸ್ಕೃತಿಕ ಜಗತ್ತಿನಲ್ಲಿ ಈ ಸ್ಥಾಪಿತ ಮಾದರಿಗಳನ್ನು ದಾಟಿ ನೋಡಬೇಕಿದೆ. ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಪುಸ್ತಕ ಪ್ರಾಧಿಕಾರ ಇತ್ಯಾದಿ ಸಂಸ್ಥೆಗಳು ತಮ್ಮ ಪಾರಂಪರಿಕ ಕವಚಗಳನ್ನು ಕಳಚಿಹಾಕಿ, ನವ ಯುಗದ ಯುವ ಪೀಳಿಗೆಗೆ ಸ್ಪಂದಿಸುವ ಹೊಸ ಆಲೋಚನೆಗಳಿಗೆ ತೆರೆದುಕೊಳ್ಳಬೇಕಿದೆ. ಇಂದು ರಾಜಕೀಯವನ್ನೂ ಸೇರಿದಂತೆ ಎಲ್ಲ ವಲಯಗಳನ್ನೂ ಕಾಡುತ್ತಿರುವುದು , ಯುವ ಜನಾಂಗವನ್ನು ತಲುಪುವುದು ಹೇಗೆ ? ಎಂಬ ಪ್ರಶ್ನೆ. ಏಕೆಂದರೆ ನವ ತಂತ್ರಜ್ಞಾನದ ಸಂವಹನ ಸಾಧನಗಳು ಓದು, ಅಧ್ಯಯನ, ಕಲಿಕೆ, ಸಂವಾದ ಮತ್ತು ಅನುಸಂಧಾನ ಈ ಎಲ್ಲ ಪ್ರಕ್ರಿಯೆಗಳನ್ನೂ ಬದಲಾಯಿಸಿಬಿಟ್ಟಿವೆ. ಸಮಾಜಕ್ಕೆ ಮುಖಾಮುಖಿಯಾಗುವ ಸಾಹಿತ್ಯ ಪ್ರಕಾರಗಳಲ್ಲೂ ಯುವ ಜನಾಂಗಕ್ಕೆ ಮುಖಾಮುಖಿಯಾಗುವುದು ಹೇಗೆ ಎಂಬ ಜಿಜ್ಞಾಸೆ ಇರುತ್ತದೆ.
ಇದನ್ನೂ ಓದಿ: ಜಾಲಹಳ್ಳಿ ಮೌಲಾನಾ ಆಜಾದ್ ಶಾಲೆ ಸ್ಥಳಾಂತರಕ್ಕೆ ಆಗ್ರಹಿಸಿ ಶಾಲೆ ಮುಂದೆ ಎಸ್ಎಫ್ಐ ಬೃಹತ್ ಪ್ರತಿಭಟನೆ
ಭಾರತದಂತಹ ಬಹುಸಾಂಸ್ಕೃತಿಕ ಸಮಾಜಗಳಲ್ಲಿ ಸಹಜವಾಗಿ ಯುವ ಜನಾಂಗವೂ ಭಿನ್ನ ನೆಲೆಗಳಲ್ಲೇ ತನ್ನ ಅಭಿವ್ಯಕ್ತಿ ಮತ್ತು ಸ್ಪಂದನೆಯನ್ನು ಕಂಡುಕೊಳ್ಳುತ್ತವೆ. 20ನೆಯ ಶತಮಾನದ ಸೈದ್ಧಾಂತಿಕ ವಿಚಾರಧಾರೆಗಳನ್ನು ಈ ಜನಾಂಗಕ್ಕೆ ದಾಟಿಸುವಾಗ, ವಸ್ತು ವಿಷಯಗಳು ಅದೇ ಇದ್ದರೂ, ದಾಟಿಸುವ ಮಾದರಿ ಮತ್ತು ವಿಧಾನ ಭಿನ್ನವಾಗಿರುವುದು ಅಗತ್ಯ. ಯುವ ಜನಾಂಗದಲ್ಲಿ ಓದು ಕಡಿಮೆ, ಅಧ್ಯಯನಗಳು ಶೂನ್ಯ, ಗ್ರಹಿಕೆ ಕನಿಷ್ಠ, ಸ್ಪಂದನೆ ನಗಣ್ಯ ಹೀಗೆ ವಿಮರ್ಶಾತ್ಮಕ ನೋಟಗಳ ನಡುವೆಯೇ ಸಾಂಸ್ಕೃತಿಕ ಜಗತ್ತು ಗುರುತಿಸಬೇಕಿರುವುದು, ಈ ಜನಾಂಗದ ಬೇಕು ಬೇಡಗಳನ್ನು, ಆಯ್ಕೆ ಆದ್ಯತೆಗಳನ್ನು ಹಾಗೂ ಅನುಕೂಲತೆಗಳನ್ನು. ಇಡೀ ಯುವ ಜನಾಂಗವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಒಂದೇ ಸ್ತರದಲ್ಲಿಟ್ಟು ನೋಡಲಾಗುವುದಿಲ್ಲ ಎಂಬ ಎಚ್ಚರವೂ ನಮ್ಮೊಳಗಿರಬೇಕು. ತಂತ್ರಜ್ಞಾನ-ಸಂವಹನ ಸಾಧನಗಳ ಬಳಕೆಯನ್ನು ಸಮಾನ ಎಳೆಯಾಗಿ ಕಾಣಬಹುದಾದರೂ, ಇದನ್ನು ಸಾರ್ವತ್ರೀಕರಿಸಿ ನೋಡಲಾಗುವುದಿಲ್ಲ.
ಸಾಂಸ್ಥಿಕ ಕ್ರಿಯಾಶೀಲ ಲಕ್ಷಣಗಳು
ಈ ದೃಷ್ಟಿಯಿಂದ ಕರ್ನಾಟಕದ ಸಾಂಸ್ಕೃತಿಕ ವಲಯದ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಗಮನಿಸಬೇಕಾಗುತ್ತದೆ. ಪುಸ್ತಕ, ಓದು, ಅಧ್ಯಯನ ಮತ್ತು ಗ್ರಹಿಕೆ ಈ ನಾಲ್ಕೂ ಸಹ ಅಂತರ್ಸಂಬಂಧ (Inter related) ಇರುವ ವಿದ್ಯಮಾನಗಳು. ರಂಗಭೂಮಿ ಮೂಲತಃ ದೃಶ್ಯಮಾಧ್ಯವಾದರೂ ಈ ನಾಲ್ಕೂ ಲಕ್ಷಣಗಳನ್ನು ಮೇಳೈಸಿಕೊಂಡು ತನ್ನದೇ ಆದ ಅಭಿವ್ಯಕ್ತಿಯನ್ನು ರೂಪಿಸಿಕೊಳ್ಳುತ್ತದೆ. ಹಾಗಾಗಿ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ ಮತ್ತು ಪುಸ್ತಕ ಪ್ರಾಧಿಕಾರ ಈ ಮೂರೂ ಸಂಸ್ಥೆಗಳನ್ನು ಒಂದೇ ಗುರಿಯ ಮೂರು ಆಯಾಮಗಳೆಂದೇ ಪರಿಗಣಿಸಬೇಕು. ಸಾಂಸ್ಥಿಕ ಪ್ರತ್ಯೇಕತೆಯನ್ನು ಹೊರಗಿಟ್ಟು ನೋಡಿದಾಗ, ಈ ಸಂಸ್ಥೆಗಳ ನಡುವೆ ನಿರಂತರ ಸ್ಪಂದನೆ-ಸಂವಾದ ಮತ್ತು ವಿಚಾರ ವಿನಿಮಯ ಕನ್ನಡದ ಅಕ್ಷರ ಲೋಕವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ. ಈ ವಿನಿಮಯ ನಡೆಯುತ್ತಿದೆಯೋ ಇಲ್ಲವೋ ಹೇಳಲಾಗುವುದಿಲ್ಲ. ಆದರೆ ಮೂರೂ ಸಂಸ್ಥೆಗಳು ತಮ್ಮ ಆಯ್ಕೆ ಮತ್ತು ಆದ್ಯತೆಗಳನ್ನು ಮರುಸ್ಪಷ್ಟಗೊಳಿಸಿಕೊಳ್ಳಬೇಕಿದೆ.

ಸಾಹಿತ್ಯ ಅಕಾಡೆಮಿ ಅತ್ಯುತ್ತಮ ಕೃತಿಗಳನ್ನು ಹೊರತರುತ್ತಿದೆ, ಪ್ರಾಚೀನ, ಮಧ್ಯಕಾಲೀನ, ಸಮಕಾಲೀನ ಹಾಗೂ ಆಧುನಿಕ ಕನ್ನಡ ಸಾಹಿತ್ಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿದೆ. ಆದರೆ ವಿಚಾರ ಸಂಕಿರಣ/ಗೋಷ್ಠಿ, ಕಮ್ಮಟಗಳು, ಶಿಬಿರಗಳು ಅಗತ್ಯವೇ ಆದರೂ ಅದೇ ಆತ್ಯಂತಿಕ ಗುರಿ ಆಗಕೂಡದು. ಅಕಾಡೆಮಿ ವೇದಿಕೆಯಿಂದ ಕೆಳಗಿಳಿದು ಜನರ ನಡುವೆ ನಿಲ್ಲಬೇಕು. ಸಾಹಿತ್ಯ ಅಕಾಡೆಮಿ ಎಂದರೆ ಕನ್ನಡ ಸಾಹಿತ್ಯವನ್ನು ಸಮಾಜದ ನಡುವೆ ಪಸರಿಸುವ ಒಂದು ಬೌದ್ಧಿಕ ಸಂಸ್ಥೆ. ದಾರ್ಶನಿಕರ ಜನ್ಮದಿನಾಚರಣೆಗಳು, ಸೈದ್ಧಾಂತಿಕ ಚರ್ಚೆಗಳು ಮತ್ತು ವ್ಯಕ್ತಿ ಆಧಾರಿತ ಸಂವಹನ ಕ್ರಿಯೆಗಳು ಸಾಹಿತ್ಯ ಅಕಾಡೆಮಿಯನ್ನು ಬೌದ್ಧಿಕವಾಗಿ ಕುಬ್ಜವಾಗಿಸುತ್ತವೆ.
ಇದನ್ನೂ ದಾಟಿ ಕನ್ನಡ ಸಾಹಿತ್ಯ ವರ್ತಮಾನದ ಡಿಜಿಟಲ್ ಯುಗದಲ್ಲಿ ಯಾವ ನೆಲೆಯಲ್ಲಿ ನಿಂತಿದೆ ಎಂದು ಯೋಚಿಸಬೇಕಾಗುತ್ತದೆ. ಗತ ಕಾಲದ ಸಾಹಿತ್ಯ ಇರಲಿ, ಡಿಜಿಟಲ್ ಯುಗದ ಸಾಹಿತ್ಯವೇ ಯುವ ಜನಾಂಗವನ್ನು ಎಷ್ಟರ ಮಟ್ಟಿಗೆ ತಲುಪುತ್ತಿದೆ ? ಈ ತಲುಪಬೇಕಾದ ಗುರಿ ಯಾವುದು ? ಆ ಗುರಿಗಳು ಸಾಮಾಜಿಕವಾಗಿ ಹೇಗೆ ಭಿನ್ನವಾಗಿಯೂ, ಚದುರಿದಂತೆಯೂ ಇದೆ ? ಗ್ರಾಮೀಣ ಮತ್ತು ನಗರ ಜನಸಂಖ್ಯೆಯನ್ನು ವಿಂಗಡಿಸಿ ನೋಡಿದಾಗ, ಸಾಹಿತ್ಯದ ಪ್ರಸರಣ ಕ್ರಿಯೆಯಲ್ಲಿ ಯಾವ ಸಮುದಾಯಗಳನ್ನು ಆದ್ಯತೆಯ ಮೇಲೆ ಒಳಗೊಳ್ಳಬೇಕು ? ಈ ಒಳಗೊಳ್ಳುವಿಕೆಗೆ ಇರುವ ಬೌದ್ಧಿಕ, ಶೈಕ್ಷಣಿಕ, ಆಡಳಿತಾತ್ಮಕ ಅಡೆತಡೆಗಳು ಏನು ? ಲಿಂಗ ಸೂಕ್ಷ್ಮತೆ, ಮಹಿಳಾ ದೌರ್ಜನ್ಯ, ಜಾತಿ ತಾರತಮ್ಯಗಳು ಹಾಗೂ ಮತೀಯ-ಧಾರ್ಮಿಕ ಅಸ್ಮಿತೆಗಳ ನೆಲೆಯಲ್ಲಿ ಕನ್ನಡ ಸಾಹಿತ್ಯ ಹೇಗೆ ತಳಮಟ್ಟದ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ ?
ವಾಸ್ತವಗಳ ನೆಲೆಯಲ್ಲಿ ಪ್ರಶ್ನೆಗಳು
ಈ ಜಟಿಲ ಪ್ರಶ್ನೆಗಳಿಗೆ ಉತ್ತರಗಳನ್ನು ಶೋಧಿಸುವಾಗ ನಮ್ಮ ನೋಟ ಕಣ್ಣೆದುರಿನ ವಾಸ್ತವಗಳ ಕಡೆಗೆ ಇರಬೇಕಲ್ಲವೇ ? ಕುವೆಂಪು-ಲಂಕೇಶ್ ಅವರಲ್ಲಿ ನಮಗೆ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯಬಹುದು. ಆದರೆ ಅದು ದಶಕಗಳ ಹಿಂದೆ ಇದ್ದಂತಹ ಸಮಾಜಕ್ಕೆ ಸ್ಪಂದಿಸಿದ ಆಲೋಚನೆಗಳು. ಡಿಜಿಟಲ್ ಯುಗದ ಯುವ ಸಮೂಹಕ್ಕೆ ಇದೇ ಆಲೋಚನೆಗಳು ನಿಲುಕುತ್ತವೆಯೇ ? ಹೌದು ಎಂದಾದರೆ, ಭೂತ-ವರ್ತಮಾನವನ್ನು ಸಂಧಿಸಿ ನೋಡುವ ಬಗೆ ಹೇಗೆ ? ಇದಕ್ಕೆ ಪೂರಕವಾದ ಸಾಹಿತ್ಯ ನಮ್ಮ ನಡುವೆ ಸೃಷ್ಟಿಯಾಗುತ್ತಿಲ್ಲ ಎಂದಾದರೆ, ವಿಷಾಧಿಸಬೇಕಿಲ್ಲ ಇದನ್ನು ಸೃಷ್ಟಿಸುವ ಬಗೆ ಹೇಗೆ ಎಂದು ಯೋಚಿಸಬೇಕಾಗುತ್ತದೆ. ಗತಕಾಲದ ಖ್ಯಾತನಾಮರ ಸಾಹಿತ್ಯವನ್ನೇ ಮತ್ತೆಮತ್ತೆ ಭಿನ್ನ ಆಯಾಮಗಳಲ್ಲಿ ಉಣಬಡಿಸುವುದರಿಂದ, ಯುವ ಮನಸ್ಸುಗಳಲ್ಲಿ ಮನ್ವಂತರದ ಕಲ್ಪನೆಯನ್ನೂ ಬಿತ್ತುವುದು ಕಷ್ಟ.
ಏಕೆಂದರೆ ಈ ಯುವ ಜನಾಂಗ ರೂಪಾಂತರಗೊಂಡಿರುವ ಜಾತಿ-ಲಿಂಗ ತಾರತಮ್ಯಗಳ ನಡುವೆ ಬದುಕುತ್ತಿದೆ. ಹಿಂದುತ್ವ ರಾಜಕಾರಣದ ಸೈದ್ಧಾಂತಿಕ ಬಿತ್ತನೆ ಆಳವಾಗಿದ್ದು, ವಿದ್ಯೆ ಕಲಿತ ಮತ್ತು ಕಲಿಯದೆ ಇರುವ ಯುವ ಸಮೂಹಗಳನ್ನೂ ಸಮ್ಮೋಹನಗೊಳಿಸಲಾಗಿದೆ. ಈ ಮಕ್ಕಳಿಗೆ ಗತ ಸಾಹಿತ್ಯದಲ್ಲಿ ಬರುವ ಸಾಮಾಜಿಕ ಚಿತ್ರಣಗಳು, “ ನಮ್ಮ ಸಮಾಜ ಹೀಗಿತ್ತು ” ಎಂಬ ಅರಿವು ಮಾತ್ರ ಮೂಡಿಸಿದರೆ ಸಾಲದು. “ ಹೌದೇ, ಹೀಗಿತ್ತೇ, ಹೀಗಿರಬಾರದಿತ್ತು ” ಎಂಬ ಅಭಿಪ್ರಾಯ ಅವರಲ್ಲಿ ಮೂಡಬೇಕು. “ ಹೇಗಿರಬೇಕು ? ” ಎಂಬ ಪ್ರಶ್ನೆ ಈ ಜನಾಂಗವನ್ನು ಕಾಡಬೇಕು. ಇಲ್ಲಿ ನಾವು ಸಾಹಿತ್ಯಕವಾಗಿ ಮಂಡಿಸುವ ಉತ್ತರಗಳು ಸಮಕಾಲೀನವಾಗಿದ್ದಷ್ಟೂ ಭವಿಷ್ಯಕ್ಕೆ ಒಳ್ಳೆಯದು. ಈ ಕಲ್ಪನೆಯೊಂದಿಗೆ ಜನಾಂಗವನ್ನು ಸಂಧಿಸುವ ಪ್ರಯತ್ನಗಳು ಸಾಹಿತ್ಯ ಅಕಾಡೆಮಿಯಿಂದ ನಡೆದಿವೆಯೇ ?

ಇಲ್ಲ ಎಂದಾದರೆ, ಸಾಹಿತ್ಯ ಅಕಾಡೆಮಿ ಈ ಗಂಭೀರವಾಗಿ ಯೋಚಿಸಿ ತನ್ನ ಬೌದ್ಧಿಕ ಚಟುವಟಿಕೆಗಳನ್ನು ಮರುರೂಪಿಸಬೇಕಿದೆ. ಅಭಿನಂದನೆ, ಸನ್ಮಾನ, ವೇದಿಕೆ ಕಾರ್ಯಕ್ರಮಗಳಿಗಿಂತಲೂ ಈ ರೀತಿಯ ಚಟುವಟಿಕೆಗಳು ಸಮಾಜದ ಒಳಹೊಕ್ಕು ನೆಲದ ವಾಸ್ತವಗಳಿಗೆ ಸ್ಪಂದಿಸಬೇಕಿದೆ. ನಿಜ, ಸರ್ಕಾರಗಳು ರಾಜ್ಯವ್ಯಾಪಿಯಾಗಿ ಹಮ್ಮಿಕೊಳ್ಳಬಹುದಾದ ಇಂತಹ ಯೋಜನೆಗಳಿಗೆ ಪೂರಕವಾದ ಅನುದಾನ ಒದಗಿಸುವುದಿಲ್ಲ. ಸಣ್ಣ ಪುಟ್ಟ ಊರುಗಳಲ್ಲಿ, ಗ್ರಾಮಗಳಲ್ಲಿ ಸ್ಥಳೀಯರ ನೆರವಿನಿಂದಲೇ, ಶಾಲಾ ಕಾಲೇಜುಗಳ ಸಿಬ್ಬಂದಿಗಳ ಸಹಾಯದಿಂದಲೇ ಇದನ್ನು ನೆರವೇರಿಸಲು ಸಾಧ್ಯ. ಅದ್ಧೂರಿ ವೇದಿಕೆ ಕಾರ್ಯಕ್ರಮಗಳ ದುಂದುವೆಚ್ಚಗಳನ್ನು ಕಡಿಮೆ ಮಾಡಿದರೆ, ಇಂತಹ ದೂರಗಾಮಿ ನೋಟದ ಚಟುವಟಿಕೆಗಳನ್ನು ನಡೆಸಬಹುದು.
ಸಾಹಿತ್ಯ ಅಕಾಡೆಮಿ ಗಮನಹರಿಸಲೇಬೇಕಾದ ಮತ್ತೊಂದು ವಲಯ ಎಂದರೆ ವಿಮರ್ಶಾಸಾಹಿತ್ಯ. ಕನ್ನಡದಲ್ಲಿ ವಿಮರ್ಶಾಸಾಹಿತ್ಯ ಬಹುಮಟ್ಟಿಗೆ ಕಾಣೆಯಾಗಿದೆ. ಈ ಲೇಖಕನನ್ನೂ ಸೇರಿದಂತೆ ಪತ್ರಿಕೆಗಳಲ್ಲಿ ಬರೆಯುವ ʼ ವಿಮರ್ಶೆ ʼ ಹೆಸರಿನ ಅಂಕಣಗಳು , ಪುಸ್ತಕ ಪರಿಚಯಗಳಷ್ಟೇ. ವಿಮರ್ಶೆಯ ಒಳನೋಟಗಳನ್ನೊಳಗೊಂಡ ಸಾಹಿತ್ಯ ಪ್ರಕಾರ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿದೆ. ಕೆಲವೇ ವಿಮರ್ಶಕರು ನಮ್ಮ ನಡುವೆ ಇದ್ದಾರೆ, ಯುವ ಜನಾಂಗದ ಸಾಹಿತ್ಯ ವಿದ್ಯಾರ್ಥಿಗಳೂ ವಿಮರ್ಶಾಸಾಹಿತ್ಯದ ಅಧ್ಯಯನ ಮಾಡುತ್ತಿಲ್ಲ. ಮುದ್ರಣ-ವಿದ್ಯುನ್ಮಾನ ಮಾಧ್ಯಮದ ಪತ್ರಿಕೆಗಳಲ್ಲಿ ʼ ಪದಮಿತಿ ʼ ಎಂಬ ಸ್ವಯಂ ವಿಧಿತ ನಿರ್ಬಂಧ ವಿಮರ್ಶಾತ್ಮಕ ಒಳನೋಟಗಳನ್ನೂ ಸಂಕುಚಿತಗೊಳಿಸುತ್ತಿವೆ. ಸಾಹಿತ್ಯ ರಚಯಿತರಿಗೆ ಇರುವಷ್ಟೇ ಸ್ವಾತಂತ್ರ್ಯ ವಿಮರ್ಶಕರಿಗೂ ಇದ್ದಾಗ ಮಾತ್ರ ಕೃತಿ ಒಳಹೊಕ್ಕು ನೋಡುವ ನೋಟ ಬೆಳೆಯಲು ಸಾಧ್ಯ. ಈ ಸಮಸ್ಯೆಗಳನ್ನು ಬಗೆಹರಿಸುವ ಮಾರ್ಗೋಪಾಯಗಳು ಸಾಹಿತ್ಯ ಅಕಾಡೆಮಿಯ ಆದ್ಯತೆಯಾಗಬೇಕು.
ರಂಗಭೂಮಿಯ ಜಟಿಲ ಸಿಕ್ಕುಗಳು
ಸಾಂಸ್ಕೃತಿಕ ಲೋಕದ ಮತ್ತೊಂದು ಕೊಂಡಿ ನಾಟಕ ಅಕಾಡೆಮಿಯೂ ಸಹ ತನ್ನ ಚಿಂತನೆಯ ಬಾಹುಗಳನ್ನು ವಿಸ್ತರಿಸಬೇಕಿದೆ. ನಾಟಕೋತ್ಸವಗಳನ್ನು ಆಯೋಜಿಸುವುದು, ರಂಗಭೂಮಿಯ ಹಿರಿಯ ಚೇತನಗಳನ್ನು ಸ್ಮರಿಸುವುದು, ರಂಗಭೂಮಿ ಮತ್ತು ಸಮಾಜ ಇತ್ಯಾದಿ ವಿಚಾರಗಳನ್ನು ಸೆಮಿನಾರ್—ಮ್ಮಟಗಳ ಮೂಲಕ ಚರ್ಚೆಗೊಳಪಡಿಸುವುದು ಇವೆಲ್ಲವೂ ಅಕಾಡೆಮಿಯ ಒಂದು ಭಾಗ ಮಾತ್ರ. ಮತ್ತೊಂದು ಭಾಗದಲ್ಲಿ ಕನ್ನಡ ರಂಗಭೂಮಿ ಎದುರಿಸುತ್ತಿರುವ ಸವಾಲುಗಳು ಎಂತಹುದು ? ನಾಟಕ ಪ್ರದರ್ಶನಗಳಿಗೆ ಸಮರ್ಪಕ ಸಂಖ್ಯೆಯ ರಂಗಮಂದಿರಗಳೇ ರಾಜ್ಯದಲ್ಲಿ ಇಲ್ಲ. ಹವ್ಯಾಸಿ ರಂಗಭೂಮಿ ಏಕೆ ಪ್ರೇಕ್ಷಕರಿಲ್ಲದೆ ಸೊರಗುತ್ತಿದೆ ? ಸರ್ಕಾರದಿಂದ ಅನುದಾನ ಪಡೆಯುವ ಹವ್ಯಾಸಿ ರಂಗತಂಡಗಳು ಸಾಮಾಜಿಕ ತಲ್ಲಣಗಳಿಗೆ ಏಕೆ ವಿಮುಖವಾಗುತ್ತಿವೆ ? ವರ್ತಮಾನದ ಡಿಜಿಟಲ್ ಯುಗಕ್ಕೆ ತಲುಪುವಂತಹ ನಾಟಕಗಳ ರಚನೆ ಏಕೆ ಆಗುತ್ತಿಲ್ಲ ? ರಂಗಭೂಮಿಯನ್ನು ದೊಡ್ಡಪರದೆಯ (ಟಿವಿ ಸಿನಿಮಾ ಇತ್ಯಾದಿ) ಪ್ರವೇಶ ದ್ವಾರವನ್ನಾಗಿ ಭಾವಿಸುವ ಯುವ ಪೀಳಿಗೆಯವರಲ್ಲಿ, ರಂಗಭೂಮಿಯ ಸೊಗಸು ಮತ್ತು ಆದ್ಯತೆಗಳನ್ನು ಬಿತ್ತುವುದು ಹೇಗೆ ?
ಈ ಪ್ರಶ್ನೆಗಳಿಗೆ ನಾಟಕ ಅಕಾಡೆಮಿ ಉತ್ತರ ಶೋಧಿಸಬೇಕಿದೆ. ಕೆಲವು ಅಪವಾದಗಳನ್ನು ಹೊರತುಪಡಿಸಿದರೆ, ವರ್ತಮಾನದ ತಲ್ಲಣಗಳನ್ನು, ಸಮಕಾಲೀನ ಸಿಕ್ಕುಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಕಥಾವಸ್ತು ಇರುವ ನಾಟಕಗಳ ರಚನೆಯೇ ಆಗುತ್ತಿಲ್ಲ. ಹಳೆಯ ಕಥಾ ವಸ್ತುಗಳನ್ನೇ ಹೊಸ ಹೊಸ ರೂಪದಲ್ಲಿ ರಂಗದ ಮೇಲೆ ಪ್ರದರ್ಶಿಸಲಾಗುತ್ತಿದೆ. ಇದು ತಪ್ಪೇನಲ್ಲ ಆದರೆ, ಈ ಯುಗದ ಮಿಲೆನಿಯಲ್ ಮಕ್ಕಳನ್ನು ರಂಗಪ್ರೇಕ್ಷಕರನ್ನಾಗಿ ಮಾಡಲು ಇದರಿಂದ ಸಾಧ್ಯವಿಲ್ಲ. ಈ ಜನಾಂಗವನ್ನು ತಲುಪಲು ಹೊಸ ಭಾಷೆ, ಪರಿಭಾಷೆ ಮತ್ತು ನಾವೀನ್ಯತೆಗಳು ಅತ್ಯಗತ್ಯ. ರಂಗಭೂಮಿಗೆ ಇದನ್ನು ಅಳವಡಿಸಿಕೊಳ್ಳುವ ಶಕ್ತಿ ಇದೆ. ಇದನ್ನು ಆಗುಮಾಡುವ ಬದ್ಧತೆ ಇರುವ, ನುರಿತ, ಪರಿಣತ ರಂಗಕರ್ಮಿಗಳೂ ನಮ್ಮ ನಡುವೆ ಅಪಾರ ಸಂಖ್ಯೆಯಲ್ಲಿದ್ದಾರೆ.

ಆದರೆ ಈ ರಂಗಕರ್ಮಿಗಳನ್ನು ಉತ್ತೇಜಿಸುವಂತಹ ವಾತಾವರಣ (Eco system) ನಮ್ಮ ನಡುವೆ ಇಲ್ಲ. ಇದನ್ನು ಸೃಷ್ಟಿಸುವ ಜವಾಬ್ದಾರಿ ನಾಟಕ ಅಕಾಡೆಮಿಯ ಮೇಲಿರುತ್ತದೆ. ವಿಶ್ವವಿದ್ಯಾಲಯಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಯುವ ಸಮೂಹದಲ್ಲಿ ರಂಗಭೂಮಿಯ ಅರಿವು ಮೂಡಿಸಿ, ನಾಟಕ ರಚನೆಗೆ ಅಗತ್ಯವಾದ ಬೌದ್ಧಿಕ ಪರಿಕರಗಳನ್ನು ಒದಗಿಸುವುದು ನಾಟಕ ಅಕಾಡೆಮಿಯ ಆದ್ಯತೆಯಾಗಬೇಕಿದೆ. ರಂಗವೇದಿಕೆಯಿಂದ ಒಮ್ಮೆಲೆ ಟಿವಿ ಧಾರಾವಾಹಿಗೋ, ಚಲನಚಿತ್ರಕ್ಕೋ ನೆಗೆಯುವ ಆಕಾಂಕ್ಷೆ ಯುವಜನರಲ್ಲಿ ಸಹಜವಾದುದು. ಇದು ಸಾಕಾರಗೊಂಡರೂ, ರಂಗಭೂಮಿಯನ್ನು ಮರೆಯದೆ, ಮುಂದೆ ಕೊಂಡೊಯ್ಯುವ ನಿಟ್ಟಿನಲ್ಲಿ ಎಷ್ಟು ಕಲಾವಿದರು ಯೋಚನೆ ಮಾಡಿದ್ದಾರೆ ?
ಇದಕ್ಕೆ ನಾನಾ ಕಾರಣಗಳಿರಬಹುದು. ರಂಗಶಾಲೆ ಅಥವಾ ನಾಟಕ ಶಾಲೆಗಳು (Repertories) ದೊಡ್ಡಪರದೆಯ ಕಲಾವಿದರನ್ನು ತಯಾರು ಮಾಡುವ ಕಾರ್ಖಾನೆಗಳಾಗಕೂಡದು. ಬದಲಾಗಿ ರಂಗಭೂಮಿಯನ್ನು ಸಮೃದ್ಧಗೊಳಿಸಿ ಮುಂದೊಯ್ಯುವ ರಥಚಕ್ರಗಳಾಗಬೇಕು. ನಾಟಕ ಅಕಾಡೆಮಿ ಈ ಸಮಸ್ಯೆಗಳ ಗಂಭೀರ ಪರಾಮರ್ಶೆ ನಡೆಸಿ, ಭವಿಷ್ಯದ ಮಾರ್ಗಗಳನ್ನು ನಿರ್ಧರಿಸಬೇಕು. ಮೇಲ್ನೋಟಕ್ಕಂತೂ ಇದು ಕಂಡುಬರುತ್ತಿಲ್ಲ.
ಪುಸ್ತಕ ಓದು ಮತ್ತು ಸಾಂಸ್ಥಿಕ ಪ್ರಯತ್ನಗಳು
ಸಾಂಸ್ಕೃತಿಕ ಜಗತ್ತಿನ ಮತ್ತೊಂದು ಸಾಂಸ್ಥಿಕ ಸ್ತಂಭ ಕನ್ನಡ ಪುಸ್ತಕ ಪ್ರಾಧಿಕಾರ. ಇತ್ತೀಚೆಗೆ ಪ್ರಾಧಿಕಾರವು ʼಮನೆಗೊಂದು ಗ್ರಂಥಾಲಯʼ ಎಂಬ ಯೋಜನೆಯನ್ನು ಹಮ್ಮಿಕೊಂಡಿದ್ದು, ಸಾವಿರಾರು ಮನೆಗಳಲ್ಲಿ ಪ್ರಯೋಗಿಸಿದೆ. ಜನರಲ್ಲಿ ಓದುವ ಹವ್ಯಾಸ ಬೆಳೆಸುವ ಒಂದು ಉದಾತ್ತ ಧ್ಯೇಯ ಈ ಯೋಜನೆಯ ಹಿಂದೆ ಇರಬಹುದಾದರೂ, ಮೂಲತಃ ʼ ಗ್ರಂಥಾಲಯ ʼ ಎಂಬ ಸಾಂಸ್ಥಿಕ ಕಲ್ಪನೆಯ ಬಗ್ಗೆ ಯೋಚಿಸಬೇಕಿದೆ. ಸಾಮಾನ್ಯವಾಗಿ ಆಂಗ್ಲದ ಲೈಬ್ರರಿ ಪದಕ್ಕೆ ಸಂವಾದಿಯಾಗಿ ನಾವು ಗ್ರಂಥಾಲಯ ಎಂದು ಬಳಸುತ್ತೇವೆ. ಸೂಕ್ಷ್ಮವಾಗಿ ಗಮನಿಸಿದಾಗ, ಪುಸ್ತಕಗಳ ಸಂಗ್ರಹವಷ್ಟೇ ಗ್ರಂಥಾಲಯ ಆಗುವುದಿಲ್ಲ. ಇದು ಸ್ಪಷ್ಟ ಕನ್ನಡದಲ್ಲಿ ʼ ಪುಸ್ತಕ ಮನೆ ʼ ಅಥವಾ ಗ್ರಂಥ ಸಂಗ್ರಹಾಲಯ ಆಗಬಹುದು. ಅಂಕೇಗೌಡರ ಲಕ್ಷಾಂತರ ಪುಸ್ತಕಗಳ ಸಂಗ್ರಹತಾಣವನ್ನು ಹೀಗೆಯೇ ಕರೆಯುತ್ತಾರೆ.
ನಾವು ಗ್ರಂಥಾಲಯ ಪದವನ್ನು ಲೈಬ್ರರಿ ಎಂಬ ಪದಕ್ಕೆ ಸಂವಾದಿಯಾಗಿ ಬಳಸುತ್ತಿರುವುದರಿಂದ, ವೈವಿಧ್ಯಮಯ ವಿಷಯಗಳ ಪುಸ್ತಕಗಳಿರುವ, ಅಲ್ಲಿಯೇ ಕುಳಿತು ಓದುವ ಅವಕಾಶ ಇರುವ, ಮನೆಗೆ ಕೊಂಡೊಯ್ದು ಪುನಃ ಹಿಂತಿರುಗಿಸುವ ವ್ಯವಸ್ಥೆಯುಳ್ಳ, ಅಧ್ಯಯನ-ಸಂಶೋಧನಾ ಕೃತಿಗಳನ್ನು ಸ್ಥಳದಲ್ಲೇ ಕುಳಿತು ಓದಿ, ಟಿಪ್ಪಣಿ ಮಾಡಿಕೊಳ್ಳುವ ಅವಕಾಶ ಇರುವ ಒಂದು ಬೌದ್ಧಿಕ-ಅಕ್ಷರ ತಾಣವನ್ನು ಗ್ರಂಥಾಲಯ ಎಂದು ನಿರ್ವಚಿಸಬಹುದು. ನಾವು ಗ್ರಂಥಾಲಯಗಳನ್ನು ನೋಡುತ್ತಿರುವ ದೃಷ್ಟಿಕೋನವೂ ಇದೇ ಎನ್ನುವುದು ನಿರ್ವಿವಾದ. ಸಾರ್ವಜನಿಕ-ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಈ ಪ್ರಕ್ರಿಯೆಯನ್ನು ಕಾಣಬಹುದು. ಗ್ರಂಥಾಲಯದ ಮತ್ತೊಂದು ವೈಶಿಷ್ಟ್ಯ ಎಂದರೆ ಇತ್ತೀಚಿನವರೆಗೂ ಪ್ರಕಟವಾಗಿರುವ, ಸಾಹಿತ್ಯ, ಸಾಹಿತ್ಯೇತರ ಕೃತಿಗಳಿಗೆ ಅಲ್ಲಿ ಸ್ಥಾನ ಇರುತ್ತದೆ . ಹೊಸ ಕೃತಿಗಳ ಸೇರ್ಪಡೆ ನಿರಂತರವಾಗಿರುತ್ತದೆ.

ಈ ನಿರ್ವಚನೆಯ ಚೌಕಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ʼ ಮನೆಗೊಂದು ಗ್ರಂಥಾಲಯ ‘ಎಲ್ಲಿ ನಿಲ್ಲುತ್ತದೆ ? ಈಗಾಗಲೇ ನೂರು-ಸಾವಿರ ಪುಸ್ತಕಗಳನ್ನು ತಮ್ಮ ಸ್ವಂತ ಓದಿಗಾಗಿ ಸಂಗ್ರಹಿಸಿ, ಕಪಾಟುಗಳಲ್ಲಿ ಅಂದವಾಗಿ ಜೋಡಿಸಿಟ್ಟಿರುವ ಸಾಹಿತಿ, ಕಲಾವಿದ, ಹೋರಾಟಗಾರ, ವಿದ್ವಾಂಸ ಇವರುಗಳ ಮನೆಗಳಿಗೆ ಭೇಟಿ ನೀಡಿ, ಅಲ್ಲಿರುವ ಪುಸ್ತಕಗಳ ಸಂಗ್ರಹವನ್ನೇ ಪ್ರಾಧಿಕಾರದ ಸಮ್ಮುಖದಲ್ಲಿ (ತಪ್ಪದೆ ಬ್ಯಾನರ್ನೊಂದಿಗೆ) ‘ಗ್ರಂಥಾಲಯ’ ಎಂದು ಘೋಷಿಸಿ, ಆತಿಥ್ಯ ನೀಡಿದ ಸಹೃದಯ ಅಕ್ಷರ ಪ್ರೇಮಿಗೆ ಹಾರ-ಶಾಲು ಇತ್ಯಾದಿಗಳ ಸನ್ಮಾನ ಮಾಡುವುದು, ರಾಜ್ಯ ಸರ್ಕಾರದ ಯೋಜನೆಯ ಚಿತ್ರಣ. ಈ ಯೋಜನೆಯಂತೆ ಈಗಾಗಲೇ ಸಾವಿರಾರು ಮನೆಗಳನ್ನು ʼಗ್ರಂಥಾಲಯʼಗಳನ್ನಾಗಿ ಘೋಷಿಸಲಾಗಿದೆ. ಪರಿವರ್ತಿಸಲಾಗಿದೆಯೇ ? ಮಾಹಿತಿ ಲಭ್ಯವಿಲ್ಲ. ಈ ರೀತಿ ಆತಿಥ್ಯ ನೀಡುವ ‘ನೂತನ ಗ್ರಂಥಾಲಯ’ ದ ಮಾಲೀಕರಿಗೆ ಒಂದು ಪ್ರಶಂಸಾ ಪತ್ರವನ್ನು ನೀಡುವುದೂ ಉಂಟು. ಅಗತ್ಯ ಇದ್ದವರು ಫ್ರೇಮ್ ಹಾಕಿಸಿ ತೂಗುಹಾಕಬಹುದು.
ವಾಸ್ತವಿಕ ನೆಲೆಯಲ್ಲಿ ನೋಡಿದಾಗ ಈ ಯೋಜನೆಯ ಔಚಿತ್ಯವನ್ನೇ ಪ್ರಶ್ನಿಸಬೇಕಾಗುತ್ತದೆ. ಮೇಲೆ ನಿರ್ವಚಿಸಿರುವ ಹಾಗೆ ಒಂದು ‘ಗ್ರಂಥಾಲಯ’ ಒದಗಿಸುವಂತಹ ಸೌಕರ್ಯ-ಅನುಕೂಲ-ಅವಕಾಶಗಳನ್ನು ವೈಯುಕ್ತಿಕವಾಗಿ ಯಾರೂ ಸಹ ಒದಗಿಸುವುದಿಲ್ಲ. ದೊಡ್ಡ ಬಂಗಲೆಗಳಲ್ಲಿರುವ ವ್ಯಕ್ತಿಗಳಿಂದಲೂ ಇದನ್ನು ಅಪೇಕ್ಷಿಸಲಾಗುವುದಿಲ್ಲ. ಕೌಟುಂಬಿಕ ಪರಿಸರದಲ್ಲಿರುವ ಪುಸ್ತಕ ಸಂಗ್ರಹವನ್ನು ಬಾಹ್ಯ ಓದುಗರಿಗಾಗಿ ತೆರೆಯುವುದನ್ನು ಊಹಿಸಲೂ ಸಾಧ್ಯವಿಲ್ಲ. ಹಾಗಿರುವಾಗ ಸಂಗ್ರಹಿತ ಪುಸ್ತಕಗಳ ಒಂದು ಖಾಸಗಿ ಆವರಣವನ್ನು ʼ ಗ್ರಂಥಾಲಯ ʼ ಎಂದು ಘೋಷಿಸುವ ಅಧಿಕಾರ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಇದೆಯೇ ? ಒಂದು ವೇಳೆ ಕೆಲವರಿಗೆ ಇದು ಆಪ್ತ ಎನಿಸಿದರೂ, ಯಾರಿಗೂ ಬಳಸಲಾಗದ ಪುಸ್ತಕಗಳ ಸಂಗ್ರಹವನ್ನು ʼ ಗ್ರಂಥಾಲಯ ʼ ಎಂದು ಘೋಷಿಸುವುದರ ನೈತಿಕ ಔಚಿತ್ಯವೇನು ?
ಈ ರೀತಿಯ ಔದಾರ್ಯವನ್ನು ತೋರಿದ ಕೆಲವು ಸಹೃದಯ ಗೆಳೆಯರು ಹೇಳುವಂತೆ ತಮ್ಮ ಮನೆಗೆ ಬರುವ ಪ್ರಾಧಿಕಾರದ ಅತಿಥಿಗಳಿಗೆ ಚಹಾ, ಬಿಸ್ಕತ್ತು ಇತ್ಯಾದಿಗಳನ್ನು ನೀಡುವ ಜವಾಬ್ದಾರಿಯೂ ಇವರದ್ದೇ ಆಗಿರುತ್ತದೆ. ಪ್ರಾಧಿಕಾರದಿಂದ ಯಾವುದೇ ಪುಸ್ತಕಗಳನ್ನೂ ನೀಡಲಾಗುವುದಿಲ್ಲ. ಇತ್ತೀಚೆಗೆ ಮೈಸೂರಿನ ಕಾಲೇಜೊಂದಕ್ಕೆ ಸಾಹಿತ್ಯಪ್ರಿಯ ವ್ಯಕ್ತಿಯೊಬ್ಬರು ನೂರಾರು ಪುಸ್ತಕಗಳ ಕೊಡುಗೆ ನೀಡಿದರು. ಅದು ಅವರ ವೈಯುಕ್ತಿಕ ಹಿರಿಮೆ ಮತ್ತು ಸಾಹಿತ್ಯಿಕ ಔನ್ನತ್ಯ. ಆದರೆ ಅವರು ಪುಸ್ತಕಗಳನ್ನು ಹಸ್ತಾಂತರ ಮಾಡುವ ಸಂದರ್ಭವನ್ನು ʼ ಮನೆಗೊಂದು ಗ್ರಂಥಾಲಯ ʼ ಯೋಜನೆಗೆ ಬಳಸಿಕೊಳ್ಳಲಾಯಿತು. ಪುಸ್ತಕ ಪ್ರಾಧಿಕಾರದ ಆದ್ಯತೆ ʼಗ್ರಂಥಾಲಯಗಳನ್ನುʼ ಹೆಚ್ಚು ಮಾಡುವುದೋ ಅಥವಾ ಕನ್ನಡ ಪುಸ್ತಕಗಳ ಪ್ರಕಟಣೆಯನ್ನು ವಿಸ್ತರಿಸಿ ಜನರಲ್ಲಿ ಪುಸ್ತಕ ಓದಿನ ಹವ್ಯಾಸ ಬೆಳೆಸುವುದೋ ?
ಓದುವ ಸಂಸ್ಕೃತಿಯ ಪ್ರಸರಣ
ಈ ಪ್ರಶ್ನೆಗಳನ್ನು ಬದಿಗಿಟ್ಟು ನೋಡಿದಾಗ, ಪುಸ್ತಕ ಪ್ರಾಧಿಕಾರದ ಆದ್ಯತೆಗಳೇನಾಗಬೇಕು ? ಬಹುಮುಖ್ಯವಾಗಿ ಜನರಲ್ಲಿ, ವಿಶೇಷವಾಗಿ ಯುವ ಜನಾಂಗದಲ್ಲಿ, ಶಿಕ್ಷಣಾರ್ಥಿಗಳಲ್ಲಿ ಪುಸ್ತಕ ಓದು ಒಂದು ಸಂಸ್ಕೃತಿಯಾಗಿ ಬೆಳೆಯಬೇಕು. ಕನ್ನಡ ಸಾಹಿತ್ಯದ ಪ್ರಕಟಿತ ಕೃತಿಗಳನ್ನು ಸುಲಭ ಬೆಲೆಯಲ್ಲಿ ಒದಗಿಸುವುದು ಪ್ರಾಧಿಕಾರದ ಪ್ರಥಮ ಆದ್ಯತೆಯಾಗಬೇಕು. ವರ್ಷಕ್ಕೊಮ್ಮೆ ರಿಯಾಯಿತಿ ಮಾರಾಟ ಮಾಡುವ ಮಾರುಕಟ್ಟೆಯ ಶೈಲಿ ಒಂದು ಸಾಂಸ್ಕೃತಿಕ ಸಂಘಟನೆಗೆ ಸರಿಹೋಗುವುದಿಲ್ಲ. ಇದು ಅಗತ್ಯವೇ ಆಗಿದ್ದರೂ ಸರ್ಕಾರವು ಪ್ರಾಧಿಕಾರದ ಮುಖಾಂತರ ಸಾಹಿತ್ಯ-ಸಾಹಿತ್ಯೇತರ ಕೃತಿಗಳನ್ನು ಜನಸಾಮಾನ್ಯರ ಕೈಗೆಟುಕುವ ಬೆಲೆಗಳಲ್ಲಿ ಒದಗಿಸಬೇಕು. ವಿಚಾರ ಸಂಕಿರಣ-ಕಮ್ಮಟ ಇನ್ನಿತರ ವೇದಿಕೆ ಕಾರ್ಯಕ್ರಮಗಳಿಂಗಿಂತಲೂ ಮುಖ್ಯವಾದದ್ದು, ಯುವ ಜನಾಂಗದಲ್ಲಿ ಪುಸ್ತಕ ಓದಿನ ಸಂಸ್ಕೃತಿಯನ್ನು ಬೆಳೆಸುವ ಬಗೆ ಹೇಗೆ ಎಂಬ ಪ್ರಶ್ನೆ.
ಈ ನಿಟ್ಟಿನಲ್ಲಿ ಪ್ರಾಧಿಕಾರ ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಪುಸ್ತಕ ಓದಿನ ಬಗ್ಗೆ ಅರಿವು ಮೂಡಿಸುವ ಸಣ್ಣ ಪ್ರಮಾಣದ ಗುಂಪು ಚರ್ಚೆ, ಮುಕ್ತ ಸಂವಾದಗಳನ್ನು ಏರ್ಪಡಿಸಬೇಕು. ಇದೇ ಮಾದರಿಯನ್ನು ಸಣ್ಣ ಪುಟ್ಟ ಊರುಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಅಳವಡಿಸಬಹುದು. ಸೆಮಿನಾರ್ಗಳು ನಿಷ್ಪ್ರಯೋಜಕವಾಗುತ್ತವೆ. ಪ್ರಾಧಿಕಾರದಲ್ಲಿ ಹೊಸ ಪುಸ್ತಕಗಳನ್ನು ಪ್ರಕಟಿಸುವುದೇ ಕಷ್ಟವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕೆಲವು ಅಮೂಲ್ಯ ಕೃತಿಗಳು ಮರುಮುದ್ರಣಕ್ಕಾಗಿ ಕಾಯುತ್ತಾ ಕುಳಿತಿವೆ. ಇಷ್ಟೆಲ್ಲಾ ಸಮಸ್ಯೆಗಳಿರುವಾಗ ಅರ್ಥವಿಲ್ಲದ ‘ಮನೆಗೊಂದು ಗ್ರಂಥಾಲಯ’ ಯಾವ ಪುರುಷಾರ್ಥಕ್ಕಾಗಿ ? ಯುವ ಜನಾಂಗದಲ್ಲಿ ಪುಸ್ತಕ ಓದಿನ ಹವ್ಯಾಸ ಬೆಳೆಸಿದರೆ, ಪ್ರತಿ ಮನೆಯೂ ಸಹಜವಾಗಿ ಪುಸ್ತಕ ಮನೆಗಳಾಗುತ್ತವೆ. ಕನ್ನಡ ಪುಸ್ತಕ ಪ್ರಾಧಿಕಾರ ಈ ದೃಷ್ಟಿಯಿಂದ ಯೋಚಿಸಬೇಕಿದೆ.
ಚುನಾಯಿತ ಸರ್ಕಾರಗಳು ಈ ಗಂಭೀರ ವಿಚಾರಗಳನ್ನು ನಿರ್ಲಕ್ಷಿಸುತ್ತಲೇ ಇರುತ್ತವೆ ಆದರೆ ಸರ್ಕಾರವನ್ನು ಎಚ್ಚರಿಸುತ್ತಲೇ ಇರುವ ರಾಯಭಾರಿ ಸಂಸ್ಥೆಗಳಾಗಿ ಪ್ರಾಧಿಕಾರಗಳು, ಅಕಾಡೆಮಿಗಳು ಕಾರ್ಯನಿರ್ವಹಿಸಬೇಕಾಗುತ್ತದೆ. ಇಲ್ಲವಾದರೆ ಮತ್ತೊಂದು ʼ ಕನ್ನಡ ಸಾಹಿತ್ಯ ಪರಿಷತ್ತು ʼ ನಮ್ಮ ನಡುವೆ ಎದ್ದುನಿಲ್ಲುತ್ತದೆ. ಸಾಹಿತ್ಯ ಅಥವಾ ಸಾಹಿತ್ಯೇತರ, ಯಾವುದೇ ಪ್ರಕಾರದ ಅಕ್ಷರ ಸಂಪತ್ತು ಕನ್ನಡ ನಾಡಿನ ಜನರ ಆಸ್ತಿ. ಅದರ ಉಸ್ತುವಾರಿ ಈ ಸಂಸ್ಥೆಗಳ ಮೇಲಿರುತ್ತದೆ. ಸಾಂಸ್ಥಿಕ ಉಸ್ತುವಾರಿಗಳನ್ನು ಸಮರ್ಪಕವಾಗಿ ಪೋಷಿಸುವ ಜವಾಬ್ದಾರಿ ಚುನಾಯಿತ ಸರ್ಕಾರಗಳ ಮೇಲಿರುತ್ತದೆ. ಈ ವಾಸ್ತವವನ್ನು ಅರಿತು ಮುನ್ನಡೆಯಬೇಕಿದೆ.
ಇದನ್ನೂ ನೋಡಿ: ಪಿಚ್ಚರ್ ಪಯಣ -174| ಸಿನಿಮಾ – ವಲವಾರ, ಗ್ರಾಮೀಣ ಬದುಕಿನ ಸೊಗಡು | ವಿಶ್ಲೇಷಣೆ – ಎಂ.ನಾಗರಾಜ ಶೆಟ್ಟಿ
